ADVERTISEMENT

ವಿಶ್ಲೇಷಣೆ | ಜನರ ಸಹಭಾಗಿತ್ವದಿಂದ ‘ಕಲ್ಯಾಣ’

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 0:30 IST
Last Updated 23 ಸೆಪ್ಟೆಂಬರ್ 2025, 0:30 IST
   
ಉದ್ಯೋಗ ಖಾತರಿ ಯೋಜನೆಯ ಯಶಸ್ಸಿಗೆ ತಂತ್ರಾಂಶಗಳಷ್ಟೇ ಸಾಲದು, ಜನರ ಸಹಭಾಗಿತ್ವವೂ ಅಗತ್ಯ. ಜನರ ಸಹಭಾಗಿತ್ವ ಹಾಗೂ ಸಾಮಾಜಿಕ ಲೆಕ್ಕ ಪರಿಶೋಧನೆಗಳ ಪರಿಣಾಮಕಾರಿ ಅನುಷ್ಠಾನದಿಂದ ಕಲ್ಯಾಣ ಯೋಜನೆಗಳು ಯಶಸ್ವಿಯಾಗುತ್ತವೆ ಹಾಗೂ ಪ್ರಜಾಪ್ರಭುತ್ವ ಬೇರು ಮಟ್ಟದಲ್ಲಿ ಬಲಗೊಳ್ಳುತ್ತದೆ.

ಗ್ರಾಮೀಣ ಕುಟುಂಬಗಳಿಗೆ ನೂರು ದಿನಗಳ ಉದ್ಯೋಗವನ್ನು ಖಾತರಿಪಡಿಸುವ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ ಜಾರಿಯಾಗಿ ಇಪ್ಪತ್ತು ವರ್ಷಗಳಾಗುತ್ತಿದೆ. ಇದು ವಿಶ್ವದ ಅತಿದೊಡ್ಡ ಉದ್ಯೋಗ ಯೋಜನೆ. ಈ ಯೋಜನೆಯು ಕೋಟ್ಯಂತರ ಬಡ ಕುಟುಂಬಗಳಿಗೆ ಸಂವಿಧಾನದ 41ನೇ ವಿಧಿಯ ಆರ್ಥಿಕ ನ್ಯಾಯದ ಆಶ್ವಾಸನೆಯನ್ನು ಭಾಗಶಃ ಆದರೂ ಈಡೇರಿಸಿದೆ. ಆದರೆ, ಇಂತಹ ಮಹತ್ವದ ಯೋಜನೆಯಲ್ಲಿ ಬೆಳಕಿಗೆ ಬರುವ ಭ್ರಷ್ಟಾಚಾರದ ಹಗರಣಗಳು ಅದರ ಅಗಾಧ ಭರವಸೆಯನ್ನು ಹುಸಿಗೊಳಿಸುತ್ತಿವೆ. 

ರಾಯಚೂರಿನಲ್ಲಿ 2023–24ರಲ್ಲಿ ನಕಲಿ ಹಾಜರಾತಿ ಮತ್ತು ಸರಬರಾಜು ಬಿಲ್‌ಗಳ ಮೂಲಕ ಕೋಟಿಗಟ್ಟಲೆ ಹಣವನ್ನು ಅಧಿಕಾರಿಗಳು ಲಪಟಾಯಿಸಿದ್ದು, ಯಾದಗಿರಿ– ಬಾಗಲಕೋಟೆ ಜಿಲ್ಲೆಗಳಲ್ಲಿ ಪುರುಷರು ಸೀರೆ ಉಟ್ಟು ‘ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಮ್’ (ಎನ್‌ಎಂಎಂಎಸ್) ಆ್ಯಪ್‌ ಅನ್ನು ವಂಚಿಸಿದ್ದು, ಮತ್ತಿತರ ಹಗರಣಗಳನ್ನು ಗಮನಿಸಿದರೆ, ಭ್ರಷ್ಟಾಚಾರವು ಈ ಯೋಜನೆಯಲ್ಲಿ ಹಾಸುಹೊಕ್ಕಾಗಿರುವುದು ತಿಳಿಯುತ್ತದೆ. ಬಯೊಮೆಟ್ರಿಕ್ ದೃಢೀಕರಣ, ಜಿಯೋ–ಟ್ಯಾಗ್ ಮುಂತಾದ ತಂತ್ರಾಂಶಗಳು ಇದ್ದಾಗ್ಯೂ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಅವರಿಗೆ ಸಹಕರಿಸುವ ಒಂದಷ್ಟು ಕಾರ್ಮಿಕರು ಶಾಮೀಲಾದಾಗ, ತಾಂತ್ರಿಕ ವ್ಯವಸ್ಥೆಗಳು ವಿಫಲಗೊಂಡು ಭ್ರಷ್ಟಾಚಾರವನ್ನು ನಿಗ್ರಹಿಸಲು ಸೋತಿರುವುದು ಸ್ಪಷ್ಟವಾಗಿದೆ. 

ಉದ್ಯೋಗ ಖಾತರಿ ಯೋಜನೆಯಲ್ಲಿ ಪ್ರಾರಂಭದಿಂದಲೂ ಇರುವ, ಆದರೆ ಬಹುತೇಕ ಜನರಿಗೆ ಗೊತ್ತಿರದ ಒಂದು ಪ್ರಮುಖ ಪ್ರಕ್ರಿಯೆ, ಸಾಮಾಜಿಕ ಲೆಕ್ಕ ಪರಿಶೋಧನೆ (ಸೋಷಿಯಲ್ ಆಡಿಟ್). ಸಮುದಾಯಗಳು ಸ್ವತಃ ಯೋಜನೆಯ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸುವ, ಸರಿತಪ್ಪುಗಳನ್ನು ಪಟ್ಟಿ ಮಾಡುವ ಪ್ರಕ್ರಿಯೆಯಿದು. ಇದರಿಂದಾಗಿ ಆಂಧ್ರಪ್ರದೇಶ, ತೆಲಂಗಾಣ, ಜಾರ್ಖಂಡ್ ಮುಂತಾದ ರಾಜ್ಯಗಳ ಹಲವೆಡೆ, ಕಾರ್ಮಿಕರು ತಮ್ಮ ಉದ್ಯೋಗದ ಹಕ್ಕುಗಳನ್ನು ಪಡೆದುಕೊಂಡು ಸ್ಥಳೀಯವಾಗಿ ಭ್ರಷ್ಟಾಚಾರ ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಸಾಮಾಜಿಕ ಲೆಕ್ಕ ಪರಿಶೋಧನೆಗಳ ಶಕ್ತಿಯ ಅರಿವಿದ್ದೂ ಹಲವು ರಾಜ್ಯಗಳು ಇದನ್ನು ನಾನಾ ಕಾರಣಗಳಿಂದ ಕಡೆಗಣಿಸಿವೆ. ತಳಹಂತದ ಕಾರ್ಮಿಕರ ಸಹಭಾಗಿತ್ವವಿಲ್ಲದೆ, ಡಿಜಿಟಲ್ ಪರಿಕರಗಳ ಮೂಲಕ ಯೋಜನೆಯ ಅನುಷ್ಠಾನವನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಯತ್ನಿಸುತ್ತಿವೆ. 

ADVERTISEMENT

‘ಪ್ಯಾಚಿಂಗ್ ಡೆವಲಪ್‌ಮೆಂಟ್’ ಕೃತಿಯಲ್ಲಿ ಪ್ರೊ. ರಾಜೇಶ್ ವೀರರಾಘವನ್, ಆಂಧ್ರಪ್ರದೇಶ ಮತ್ತು ಬಿಹಾರದಲ್ಲಿ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನವನ್ನು ವಿಶ್ಲೇಷಿಸಿದ್ದಾರೆ. ಅವರು ಹೇಳುವಂತೆ, ಸಮುದಾಯಚಾಲಿತ ಹೊಣೆಗಾರಿಕೆ ಪ್ರಕ್ರಿಯೆಗಳು ಇಲ್ಲದಿದ್ದಲ್ಲಿ, ಅಧಿಕಾರಿಗಳು, ಸ್ಥಳೀಯ ರಾಜಕಾರಣಿಗಳು ಮತ್ತು ಪ್ರಬಲ ಜಾತಿಗಳ ಪಿತೂರಿಯಿಂದ ತಂತ್ರಜ್ಞಾನವು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಬದಲು, ಅದಕ್ಕೆ ಪೂರಕ ಸಾಧನವಾಗಿ ಬಳಕೆಯಾಗುತ್ತದೆ. ತಂತ್ರಜ್ಞಾನದ ದುರುಪಯೋಗದ ನಿದರ್ಶನ ಕರ್ನಾಟಕದಲ್ಲೂ ಸಿಗುತ್ತದೆ. ಉತ್ತರ ಕರ್ನಾಟಕದ ಒಂದು ಹಳ್ಳಿಯಲ್ಲಿ, ಉದ್ಯೋಗ ಖಾತರಿ ಯೋಜನೆಯ ಹತ್ತು ‘ಮೇಟ್‌’ಗಳು (ಸ್ಥಳೀಯ ಕಾರ್ಮಿಕರಲ್ಲೇ ಒಬ್ಬರಾದ, ಕಾಮಗಾರಿ ಮಟ್ಟದಲ್ಲಿ ಹಾಜರಾತಿ ಮತ್ತಿತರ ಕೆಲಸಗಳನ್ನು ನಿರ್ವಹಿಸುವ ಮೇಲ್ವಿಚಾರಕರು) 200 ಕಾರ್ಮಿಕರ ಹಾಜರಾತಿಯನ್ನು ‘ಎನ್‌ಎಂಎಂಎಸ್’ ಆ್ಯಪ್ ಬಳಸಿ ನಿರ್ವಹಿಸುತ್ತಿದ್ದರು. ಇದ್ದಕ್ಕಿದ್ದಂತೆ ಅವರ ಆ್ಯಪ್ ಲಾಗಿನ್ ನಿರ್ಬಂಧಿಸಲಾಯಿತು. ಲಿಖಿತ ಹಾಜರಾತಿ ದಾಖಲೆಗಳನ್ನು ಬಳಸಿ ಗ್ರಾಮ ಪಂಚಾಯಿತಿ ಕೆಲಸ ಮುಂದುವರಿಸಿತು. ಆ್ಯಪ್ ಬಳಸದೇ ನಿಯಮ ಉಲ್ಲಂಘಿಸಿದ ಕಾರಣಕ್ಕೆ ತಾಲ್ಲೂಕು ಪಂಚಾಯಿತಿ ಅಧಿಕಾರಿಯು ಕಾಮಗಾರಿಗಳನ್ನು ನಿಲ್ಲಿಸಿದರು. ಸ್ಥಳೀಯ ವಾರ್ಡ್ ಸದಸ್ಯರೊಬ್ಬರು ಕೆಲಸದಲ್ಲಿ ಇತರ ಉಲ್ಲಂಘನೆಗಳೂ ನಡೆದಿವೆ ಎಂದು ವಾದಿಸಿದರು. ಈ ಆಪಾದನೆಗಳನ್ನು ವಿರೋಧಿಸಿದ ಮೇಟ್‌ಗಳಿಗೆ ಬೆದರಿಕೆ ಹಾಕಲಾಯಿತು. ಕೆಲಸವನ್ನು ಪುನರಾರಂಭಿಸಲು ಮೇಟ್‌ಗಳು ಅಧಿಕಾರಿಯನ್ನು ಕೋರಿದಾಗ, ಆ್ಯಪ್ ಬಳಕೆಯನ್ನು ಮತ್ತೆ ಸ್ಥಾಪಿಸಲು ಪ್ರತಿ ಮೇಟ್‌ಗೆ ₹30,000 ಲಂಚ ಕೇಳಿದರು. ಲಂಚ ಕೊಡಲು ನಿರಾಕರಿಸಿದ ಮೇಟ್‌ಗಳ ಲಾಗಿನ್‌ಗಳು ನಿರ್ಬಂಧಕ್ಕೊಳಗಾದವು. ಕಾರ್ಮಿಕರಿಗೆ ಸಮಯಕ್ಕೆ ಸರಿಯಾಗಿ ಕೆಲಸ ಮತ್ತು ವೇತನ ನೀಡಲು ಸಹಕಾರಿ ಆಗಬೇಕಾಗಿದ್ದ ತಂತ್ರಾಂಶವು, ಅದಕ್ಕೆ ವಿರುದ್ಧವಾಗಿ ಕಾರ್ಮಿಕರಿಗೆ ತೊಡರಾಗಿ ಬಳಕೆಯಾಯಿತು.

ಎಂಐಎಸ್ ಆಧಾರಿತ ಪಾವತಿಗಳು, ನೇರ ನಗದು ವರ್ಗಾವಣೆ, ಜಿಯೋ–ಟ್ಯಾಗಿಂಗ್, ಬಯೊಮೆಟ್ರಿಕ್ಸ್, ಎನ್‌ಎಂಎಂಎಸ್ ಹಾಜರಾತಿ ಅಪ್ಲಿಕೇಷನ್ ಬಳಸಿ ಅನುಷ್ಠಾನದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಸಾಧಿಸುವ ಗುರಿ ಕೇಂದ್ರ ಸರ್ಕಾರದ್ದು. ಇಷ್ಟೆಲ್ಲಾ ಇದ್ದರೂ ಆಡಳಿತ ವ್ಯವಸ್ಥೆಯ ಮೇಲೆ ತಂತ್ರಜ್ಞಾನದ ಪರಿಣಾಮ ಅಷ್ಟಕ್ಕಷ್ಟೆ. ಕರ್ನಾಟಕದಲ್ಲಿ ನಕಲಿ ಹಾಜರಾತಿಗಳು ಮುಂದುವರಿದಿವೆ. ಯಂತ್ರಗಳ ಬಳಕೆಯನ್ನು ಮಾನವ ಶ್ರಮದ ಲೆಕ್ಕದಲ್ಲಿ ತೋರಿಸಲಾಗುತ್ತಿದೆ; ಕಾರ್ಮಿಕರಿಗೆ ಕಡಿಮೆ ಕೆಲಸ, ಕಡಿಮೆ ವೇತನ ನೀಡಲಾಗುತ್ತಿದೆ. ತಕ್ಷಣದ ಜೀವನೋಪಾಯಕ್ಕಾಗಿ ಕಾರ್ಮಿಕರು ಇಂತಹ ವ್ಯವಸ್ಥೆಗೆ ಪರೋಕ್ಷವಾಗಿ ಒಪ್ಪಿಯೂ ಇದ್ದಾರೆ. ಲಿಬ್‌ಟೆಕ್ ಇಂಡಿಯಾ ಸಂಸ್ಥೆಯ 2023ರ ಅಧ್ಯಯನದ ಪ್ರಕಾರ, ಉದ್ಯೋಗ ಖಾತರಿ ಯೋಜನೆಯಲ್ಲಿ ಕರ್ನಾಟಕದ ಶೇ 34ರಷ್ಟು ಕಾರ್ಮಿಕರಿಗೆ ವೇತನದಲ್ಲಿ 60 ದಿನಗಳಿಗಿಂತ ಹೆಚ್ಚು ವಿಳಂಬವಾಗಿತ್ತು.

ಕಾರ್ಮಿಕರು ಯೋಜನೆಯ ದಸ್ತಾವೇಜುಗಳನ್ನು ಪರಿಶೀಲಿಸಿ, ಅಧಿಕಾರಿಗಳನ್ನು ತಮ್ಮ ಜವಾಬ್ದಾರಿಗಳಿಗೆ ಹೊಣೆಗಾರರನ್ನಾಗಿ ಮಾಡಲು ಸಾಮಾಜಿಕ ಲೆಕ್ಕಪರಿಶೋಧನೆ ಒಂದು ಸಾರ್ವಜನಿಕ ವೇದಿಕೆಯನ್ನು ಕಟ್ಟಿಕೊಡುತ್ತದೆ. ಇದರಿಂದಾಗಿ ಹಲವು ರಾಜ್ಯಗಳಲ್ಲಿ ಬಡಕಾರ್ಮಿಕರು ಯೋಜನೆಯ ಪ್ರಮುಖ ಭಾಗೀದಾರರಾಗಿದ್ದಾರೆ. ಅವಿಭಜಿತ ಆಂಧ್ರಪ್ರದೇಶದ ಸಾಮಾಜಿಕ ಲೆಕ್ಕ ಪರಿಶೋಧನಾ ಪ್ರಕ್ರಿಯೆಗಳು ದೇಶಕ್ಕೇ ಮಾದರಿ ಎನ್ನಲಾಗಿದೆ.

ರಾಜ್ಯದ ಹಳ್ಳಿಯೊಂದರಲ್ಲಿ, ಸ್ಥಳೀಯ ಎನ್‌ಜಿಒ ಸಹಯೋಗದಲ್ಲಿ ನಡೆದ ತಳಮಟ್ಟದ ಲೆಕ್ಕ ಪರಿಶೋಧನೆಯು ಕಾರ್ಮಿಕರಿಗೆ, ತಮ್ಮ ಹಳ್ಳಿಯಲ್ಲಿ ನಡೆದ ಅಕ್ರಮಗಳನ್ನು ಹುಡುಕಿ ದಾಖಲಿಸಲು ಸಹಕರಿಸಿತು. ಇದರಿಂದ ವಿಳಂಬವಾಗಿದ್ದ ₹10 ಲಕ್ಷ ವೇತನವನ್ನು ವಸೂಲಿ ಮಾಡಲಾಯಿತು ಮತ್ತು ಅಕ್ರಮ ಯಂತ್ರಗಳ ಬಳಕೆ ನಿಷೇಧಿಸಲಾಯಿತು. ನಿಧಾನವಾದರೂ, ಸಾಮಾಜಿಕ ಲೆಕ್ಕ ಪರಿಶೋಧನೆ
ಗಳು ಪ್ರಜಾಪ್ರಭುತ್ವದ ಸ್ಥಳೀಯ ಪ್ರಕ್ರಿಯೆಗಳನ್ನು ಬಲಿಷ್ಠಗೊಳಿಸಿ ಉದ್ಯೋಗ ಖಾತರಿಯಂತಹ ಯೋಜನೆಗಳನ್ನು ಪರಿಣಾಮಕಾರಿ ಆಗಿಸುತ್ತವೆ. 

ಸಾಮಾಜಿಕ ಲೆಕ್ಕ ಪರಿಶೋಧನೆಗೆ ಮಿತಿಗಳು ಇಲ್ಲವೆಂದಲ್ಲ. ಇವು ಸ್ಥಳೀಯ ಪ್ರಭಾವಿಗಳಿಂದಾಗಿ ಸಾಂಕೇತಿಕವಾಗಿ ನಡೆಯುತ್ತವೆ. ದೊಡ್ಡ ಅಕ್ರಮಗಳನ್ನು ಬದಿಗಿರಿಸಿ ಸಣ್ಣ ತಪ್ಪುಗಳನ್ನು ಶೋಧಿಸಿ ಜನರನ್ನು ದಾರಿ ತಪ್ಪಿಸುವ ಕೆಲಸವೂ ನಡೆಯುತ್ತದೆ. ಕಾರ್ಮಿಕರು ಸಭೆಗಳಲ್ಲಿ ಮಾತನಾಡಲು ಹಿಂಜರಿಯುವುದರಿಂದ, ಬಹುಪಾಲು ಸಾಮಾಜಿಕ ಲೆಕ್ಕ ಪರಿಶೋಧನೆಗಳು ಕಾರ್ಮಿಕರ ಉದ್ಯೋಗದ ಹಕ್ಕನ್ನು ಖಾತರಿಪಡಿಸುವ ವೇದಿಕೆಗಳಾಗದೇ ಉಳಿದಿವೆ. ಆದರೂ, ನಾಗರಿಕ ಸಮಾಜದ ಬೆಂಬಲ ಸಿಕ್ಕಾಗ, ಸಾಮಾಜಿಕ ಲೆಕ್ಕ ಪರಿಶೋಧನೆಗಳು ವ್ಯವಸ್ಥೆಯನ್ನು ಪರಿವರ್ತಿಸಬಹುದು.

ಇತರ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕದ ಗ್ರಾಮ ಪಂಚಾಯಿತಿಗಳು ಹೆಚ್ಚು ಸಂಪನ್ಮೂಲಗಳನ್ನು ಹೊಂದಿವೆ, ಹೆಚ್ಚು ಸೇವೆಗಳನ್ನು ಒದಗಿಸುತ್ತವೆ ಮತ್ತು ತಂತ್ರಾಂಶಗಳ ಮೇಲೆ ಹೆಚ್ಚು ಅವಲಂಬಿತವಾಗಿವೆ. ಆರ್ಥಿಕ ಸಂಪನ್ಮೂಲಗಳು ಹೆಚ್ಚಿದ್ದು, ಸಾಮಾಜಿಕ– ಆರ್ಥಿಕ ಅಸಮಾನತೆಗಳೂ ಇದ್ದಲ್ಲಿ, ಸಂಪನ್ಮೂಲಗಳು ಮತ್ತು ಯೋಜನೆಗಳ ಪ್ರಯೋಜನ ಪಡೆಯುವವರಲ್ಲಿ ಅಸಮತೋಲನದ ಸಂಭವವೂ ಹೆಚ್ಚು. ಗ್ರಾಮ ಪಂಚಾಯಿತಿಗಳ ಕಾರ್ಯಕ್ಷಮತೆ ಮೇಲೆ ಕಣ್ಣಿಡುವ ತಾಂತ್ರಿಕ ಮಾನಿಟರಿಂಗ್ ವ್ಯವಸ್ಥೆಯ ಜೊತೆ ಜೊತೆಗೆ, ಸ್ಥಳೀಯ ಸಮುದಾಯಗಳ ಸಹಭಾಗಿತ್ವದಲ್ಲಿ ಗ್ರಾಮ ಪಂಚಾಯಿತಿಗಳ ಕೆಲಸ ಕಾರ್ಯಕ್ರಮಗಳನ್ನು ಪರಿಶೀಲಿಸುವ ವ್ಯವಸ್ಥೆಯೂ ಗಟ್ಟಿಯಾಗಿದ್ದರೆ, ಸಮತೋಲನವನ್ನು ಕಾಪಾಡುವುದರ ಜೊತೆಗೆ, ಮೇಲ್ವಿಚಾರಣೆಯೂ ಪರಿಣಾಮಕಾರಿ ಆಗಬಲ್ಲದು. ರಾಯಚೂರಿನ ಹಗರಣದಿಂದ ಹಿಡಿದು ದುಡ್ಡಿಗಾಗಿ ಆ್ಯಪ್‌ಗಳ ನಿರ್ಬಂಧದವರೆಗೆ, ಉದ್ಯೋಗ ಖಾತರಿ ಯೋಜನೆಯ ವೈಫಲ್ಯಗಳು, ಡಿಜಿಟಲ್ ಪರಿಹಾರಗಳ ಮಿತಿಗಳನ್ನು ಬಹಿರಂಗಪಡಿಸುತ್ತವೆ.

ಜನ ಸಹಭಾಗಿತ್ವದ ವ್ಯವಸ್ಥೆಗಳನ್ನು ಗಟ್ಟಿಗೊಳಿಸದೇ ಹೋದರೆ, ಕಲ್ಯಾಣ ಯೋಜನೆಗಳ ಕೋಟಿಗಟ್ಟಲೆ ವೆಚ್ಚಗಳು ಆರ್ಥಿಕ ಮತ್ತು ಸಾಮಾಜಿಕ ನ್ಯಾಯವನ್ನು ಜನತೆಗೆ ನೀಡಲು ಸಾಧ್ಯ ಆಗದಿರಬಹುದು. ಇಂದು ಹಲವು ಸರ್ಕಾರಿ ಯೋಜನೆಗಳಲ್ಲಿ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಡಿಜಿಟಲ್ ಡ್ಯಾಶ್–ಬೋರ್ಡ್‌ಗಳಲ್ಲಿ ಬಿಂಬಿಸಲಾಗುತ್ತಿದೆ. ಪರ್ಯಾಯವಾಗಿ, ಅಧಿಕಾರಿಗಳು ತಾವು ಸೇವೆ ಸಲ್ಲಿಸುತ್ತಿರುವ ಸಮುದಾಯಗಳಿಗೆ ಉತ್ತರ ಹೇಳಬೇಕಾದ ಹೊಸ ಕರ್ನಾಟಕವನ್ನು ನಾವು ಗಟ್ಟಿಗೊಳಿಸಬೇಕಾಗಿದೆ. ಇದನ್ನು ಸಾಧಿಸಲು ತಮ್ಮ ಹಕ್ಕುಗಳನ್ನು ಆಗ್ರಹಿಸುವ ಜಾಗೃತ ಮತ್ತು ಸಂಘಟಿತ ಕಾರ್ಮಿಕರು  ಬೇಕಾಗಿದ್ದಾರೆ. ತಂತ್ರಜ್ಞಾನವು ಅವರ ಶಕ್ತಿಯನ್ನು ವರ್ಧಿಸುವ ಕೆಲಸ ಮಾಡಬೇಕಾಗಿದೆ. ಸಾಮಾಜಿಕ ಲೆಕ್ಕ ಪರಿಶೋಧನೆಗಳನ್ನು ಪ್ರಜಾಸತ್ತಾತ್ಮಕವಾಗಿ ಬಲಿಷ್ಠಗೊಳಿಸಿ ಉದ್ಯೋಗ ಖಾತರಿಯ ಸಮಾನತೆಯ ಆಶಯವನ್ನು ನಿಜವಾಗಿಸಬೇಕಾಗಿದೆ. ಇವೆಲ್ಲ ಸಾಧ್ಯವಾದಾಗ ಮಾತ್ರ, ಮೈಮುರಿದು ದುಡಿಯುವ ಕಾರ್ಮಿಕರಿಗೆ ನ್ಯಾಯಯುತ ವೇತನ ಮತ್ತು ಘನತೆಯ ಜೀವನದ ಕನಸು ನನಸಾದೀತು. ಇವರ ಕನಸುಗಳಸಾಕಾರಕ್ಕೆ ಕರ್ನಾಟಕ ತಯಾರಾಗಿದೆಯೇ?

(ಶ್ಯಾಮ್‌ ಎನ್‌. ಕಶ್ಯಪ್‌ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕ. ಚಕ್ರಧರ್‌ ಬುದ್ಧ ‘ಲಿಬ್‌ಟೆಕ್‌ ಇಂಡಿಯಾ’ ಸಂಸ್ಥಾಪಕ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.