ADVERTISEMENT

ಪ್ರತಿದಿನವೂ ಭೂಮಿಗಪ್ಪಳಿಸುವ ಬಾಹ್ಯಾಕಾಶ ತ್ಯಾಜ್ಯಗಳು: ಭಯ - ಆತಂಕ ಬೇಕೇ?

ಗಿರೀಶ್ ಲಿಂಗಣ್ಣ
Published 3 ಏಪ್ರಿಲ್ 2025, 11:01 IST
Last Updated 3 ಏಪ್ರಿಲ್ 2025, 11:01 IST
   

ಬಾಹ್ಯಾಕಾಶದಲ್ಲಿರುವ ಒಂದು ಉಪಗ್ರಹ ಇದ್ದಕ್ಕಿದ್ದಂತೆ ಒಂದು ದಿನ ಕಳಚಿ, ಭೂಮಿಯ ಮೇಲಿರುವ ನಮ್ಮ ಮೇಲೆ ಬೀಳುವ ಸಾಧ್ಯತೆ ಇದೆಯೇ? ಅಪಾಯವಾಗಬಹುದೇ? ಎಂಬುದು ಹೆಚ್ಚಿನವರನ್ನು ಕಾಡುವ ಆತಂಕ. ಆದರೆ, ಇಂತಹ ಘಟನೆ ನಡೆಯುವ ಸಾಧ್ಯತೆ ಬಹುತೇಕ ಶೂನ್ಯ. ಆದ್ದರಿಂದ, ಬಾಹ್ಯಾಕಾಶದಲ್ಲಿರುವ ಉಪಗ್ರಹ ನಮ್ಮ ಮೇಲೆ ಬೀಳಬಹುದೇ ಎಂಬ ಬಗ್ಗೆ ನಾವು ಗಾಬರಿಯಾಗುವ ಅವಶ್ಯಕತೆಯೇ ಇಲ್ಲ.

ಇತ್ತೀಚಿನ ವರ್ಷಗಳಲ್ಲಿ ಬಾಹ್ಯಾಕಾಶದಲ್ಲಿರುವ ಉಪಗ್ರಹಗಳ ಸಂಖ್ಯೆ ಬಹಳಷ್ಟು ಹೆಚ್ಚಳ ಕಂಡಿದೆ. ಆದರೆ, ಇಂದಿನ ಉಪಗ್ರಹಗಳು ಬಾಹ್ಯಾಕಾಶದಿಂದ ಭೂಮಿಗೆ ಮರಳುವಾಗ ಯಾವುದೇ ಅಪಾಯ ಉಂಟಾಗದ ರೀತಿಯಲ್ಲಿ ವಿನ್ಯಾಸಗೊಂಡಿವೆ. ಬಹಳಷ್ಟು ಉಪಗ್ರಹಗಳನ್ನು ಹಗುರವಾದ ವಸ್ತುಗಳನ್ನು ಬಳಸಿ ‌ನಿರ್ಮಿಸಿರುವುದರಿಂದ, ಅವುಗಳು ಬಾಹ್ಯಾಕಾಶದಿಂದ ಭೂಮಿಯ ವಾತಾವರಣವನ್ನು ಮರಳಿ ಪ್ರವೇಶಿಸುತ್ತಿದ್ದಂತೆಯೇ ಉರಿದುಹೋಗುತ್ತವೆ. ಅದರೊಡನೆ, ಅವುಗಳು ತಮ್ಮ ಕಕ್ಷೆಯಿಂದ ನಿಯಂತ್ರಿತ ರೀತಿಯಲ್ಲಿ ಕೆಳಗಿಳಿಯುವಂತೆ ಯೋಜನೆ ರೂಪಿಸಲಾಗಿದ್ದು, ಅವುಗಳ ಖಾಲಿ ಭಾಗಗಳು ಸಮುದ್ರದ ಮೇಲೆ ಅಥವಾ ನಿರ್ಜನ ಭೂಭಾಗದಲ್ಲಿ ಬೀಳುವಂತೆ ಮಾಡಲಾಗುತ್ತದೆ.

ಇಷ್ಟೆಲ್ಲ ಕ್ರಮಗಳನ್ನು ಕೈಗೊಂಡರೂ, ಸಣ್ಣ ಪ್ರಮಾಣದ ಬಾಹ್ಯಾಕಾಶ ತ್ಯಾಜ್ಯಗಳು ಭೂಮಿಯನ್ನು ತಲುಪುತ್ತವೆ. ಉದಾಹರಣೆಗೆ, ಇತ್ತೀಚೆಗೆ ಚೀನಾದ ಲಾಂಗ್ ಮಾರ್ಚ್ ರಾಕೆಟ್‌ಗಳ ಅಳಿದುಳಿದ ಬಿಡಿಭಾಗಗಳು ಭೂಮಿಗೆ ಬಿದ್ದಿದ್ದವು. ಹಾಗೆಂದು ಇಂತಹ ಘಟನೆಗಳು ಅಪರೂಪದಲ್ಲಿ ಅಪರೂಪದ ವಿದ್ಯಮಾನಗಳಾಗಿವೆ.

ADVERTISEMENT

ನಾಸಾ ಕಳೆದ ಐವತ್ತು ವರ್ಷಗಳಲ್ಲಿ ಬಾಹ್ಯಾಕಾಶ ತ್ಯಾಜ್ಯಗಳ ಪತನದ ಸರಾಸರಿಯನ್ನು ಲೆಕ್ಕಾಚಾರ ಮಾಡಿ, ಪ್ರತಿದಿನವೂ ಬಾಹ್ಯಾಕಾಶ ತ್ಯಾಜ್ಯದ ಕೇವಲ ಒಂದು ತುಂಡು ಭೂಮಿಯನ್ನು ತಲುಪುತ್ತದೆ ಎಂದಿದೆ. ಇಲ್ಲಿಯ ತನಕ ಬಾಹ್ಯಾಕಾಶ ತ್ಯಾಜ್ಯ ಅಪ್ಪಳಿಸಿ ಯಾವ ವ್ಯಕ್ತಿಗೂ ಗಂಭೀರ ಗಾಯಗಳಾಗಿಲ್ಲ ಮತ್ತು ಯಾರೂ ಪ್ರಾಣ ಕಳೆದುಕೊಂಡ ಉದಾಹರಣೆಗಳಿಲ್ಲ.

ನಾಸಾದ ವರದಿಯನ್ನು ಗಮನಿಸಿದಾಗ, ಪ್ರತಿದಿನವೂ ಒಂದು ಬಾಹ್ಯಾಕಾಶ ತ್ಯಾಜ್ಯ ಭೂಮಿಗೆ ಬೀಳುತ್ತದೆ ಎನ್ನುವುದು ಆತಂಕಕಾರಿ ವಿಚಾರದಂತೆ ಕಂಡುಬರಬಹುದು. ಆದರೆ ಇಲ್ಲಿ ಗಮನಿಸಬೇಕಾದ ಅಂಶವೊಂದಿದೆ: ಬಿಬಿಸಿ ವರದಿಯೊಂದರ ಪ್ರಕಾರ, ಜಗತ್ತಿನಲ್ಲಿ ಪ್ರತಿದಿನವೂ ಕನಿಷ್ಠ ಮೂರು ವಾಣಿಜ್ಯೇತರ, ಸಣ್ಣ ವಿಮಾನಗಳ ಅಪಘಾತ ಸಂಭವಿಸುತ್ತದೆ. ಆದರೆ, ಯಾವುದಾದರೂ ವ್ಯಕ್ತಿ ಬೀಳುತ್ತಿರುವ ವಿಮಾನದ ಕೆಳಗೆ ಸಿಲುಕಿ ಗಾಯಗೊಂಡದ್ದೋ, ಸಾವನ್ನಪ್ಪಿದ್ದೋ ಇಲ್ಲವೇ ಇಲ್ಲ ಎನ್ನಬಹುದು.

ವಿಮಾನಗಳು ಪತನ ಹೊಂದುವ ಸಂದರ್ಭದಲ್ಲಿ ಬಹುತೇಕ ತಮ್ಮ ಮೂಲ ಸ್ವರೂಪವನ್ನು ಹಾಗೆಯೇ ಉಳಿಸಿಕೊಂಡು, ತಮ್ಮೊಳಗೆ ಇಂಧನವನ್ನೂ ಹೊಂದಿರುವುದರಿಂದ, ಅವು ಬಿದ್ದಾಗ ಹೆಚ್ಚಿನ ಅನಾಹುತ ಉಂಟಾಗುವ ಸಾಧ್ಯತೆಗಳಿವೆ. ಆದ್ದರಿಂದ ಅವುಗಳನ್ನು ಹೆಚ್ಚು ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ ಇನ್ನೊಂದೆಡೆ, ಬಹಳಷ್ಟು ಬಾಹ್ಯಾಕಾಶ ತ್ಯಾಜ್ಯಗಳು ಅತ್ಯಂತ ಸಣ್ಣದಾದ, ಕೇವಲ ಲೋಹ ಅಥವಾ ಕಾರ್ಬನ್ ಫೈಬರ್ ತುಣುಕುಗಳಾಗಿದ್ದು, ಸಾಮಾನ್ಯವಾಗಿ ನೆಲವನ್ನು ತಲುಪುವ ಮುನ್ನವೇ, ವಾತಾವರಣದಲ್ಲಿಯೇ ಉರಿದು ಹೋಗುತ್ತವೆ.

ಅದರೊಡನೆ, ಬಾಹ್ಯಾಕಾಶ ತ್ಯಾಜ್ಯ ಎಷ್ಟು ಎತ್ತರದಿಂದ ಭೂಮಿಗೆ ಬೀಳುತ್ತದೆ ಎನ್ನುವುದು ಅದು ಭೂಮಿಗೆ ಅಪ್ಪಳಿಸುವ ವೇಗವನ್ನು ಖಂಡಿತಾ ನಿರ್ಧರಿಸುವುದಿಲ್ಲ. ಯಾಕೆಂದರೆ, ಅದು ತನ್ನ ಗರಿಷ್ಠ ಬೀಳುವ ವೇಗವನ್ನು (ಇದನ್ನು ಟರ್ಮಿನಲ್ ವೆಲಾಸಿಟಿ ಎಂದು ಕರೆಯಲಾಗುತ್ತದೆ) ಭೂಮಿಗೆ ಅಪ್ಪಳಿಸುವ ಮುನ್ನವೇ ತಲುಪುತ್ತದೆ. ಅಂದರೆ, ಒಂದು ವಸ್ತು ಭೂಮಿಯಿಂದ 300 ಕಿಲೋಮೀಟರ್ (ಅಂದಾಜು 186 ಮೈಲಿ) ಎತ್ತರದಿಂದ ಬಿದ್ದರೂ, ಅಥವಾ ಕೇವಲ 10 ಕಿಲೋಮೀಟರ್ (ಅಂದಾಜು 6 ಮೈಲಿ) ಎತ್ತರದಿಂದ ಬಿದ್ದರೂ, ಅದು ಭೂಮಿಯನ್ನು ಬಹುತೇಕ ಒಂದೇ ವೇಗದಲ್ಲಿ ಅಪ್ಪಳಿಸುತ್ತದೆ.

ಟರ್ಮಿನಲ್ ವೆಲಾಸಿಟಿ ಎಂದರೇನು?

ಯಾವುದಾದರೂ ವಸ್ತು ಗಾಳಿಯ ಮೂಲಕ ಬೀಳುವಾಗ ಅದು ತಲುಪಬಲ್ಲ ಗರಿಷ್ಠ ವೇಗವನ್ನು ಟರ್ಮಿನಲ್ ವೆಲಾಸಿಟಿ ಎಂದು ಕರೆಯಲಾಗುತ್ತದೆ. ಆರಂಭದಲ್ಲಿ, ಬೀಳುತ್ತಿರುವ ವಸ್ತುವನ್ನು ಗುರುತ್ವಾಕರ್ಷಣಾ ಶಕ್ತಿ ಭೂಮಿಯತ್ತ ಎಳೆಯುವುದರಿಂದ ಅದು ಹೆಚ್ಚು ವೇಗ ಪಡೆಯುತ್ತದೆ. ಆದರೆ, ಕೆಲ ಸಮಯದಲ್ಲೇ ಗಾಳಿ ಅದನ್ನು ಹಿಂದಕ್ಕೆ ತಳ್ಳತೊಡಗುತ್ತದೆ. ಒಂದು ಹಂತದಲ್ಲಿ, ವಸ್ತುವನ್ನು ಭೂಮಿಗೆ ಸೆಳೆಯುವ ಗುರುತ್ವಾಕರ್ಷಣೆ ಮತ್ತು ಮೇಲಕ್ಕೆ ತಳ್ಳುವ ಗಾಳಿಯ ಪ್ರತಿರೋಧಗಳು ಸಮವಾದಾಗ, ಬೀಳುವ ವಸ್ತು ತನ್ನ ವೇಗ ಹೆಚ್ಚಿಸುವುದನ್ನು ನಿಲ್ಲಿಸಿ, ಒಂದು ಸ್ಥಿರವಾದ ವೇಗದಲ್ಲಿ ಬೀಳತೊಡಗುತ್ತದೆ. ಈ ಸ್ಥಿರವಾದ ವೇಗವನ್ನು 'ಟರ್ಮಿನಲ್ ವೆಲಾಸಿಟಿ' ಎಂದು ಕರೆಯಲಾಗುತ್ತದೆ.

ಉದಾಹರಣೆಗೆ, ಸ್ಕೈ ಡೈವರ್ (ಆಗಸದಿಂದ ಜಿಗಿಯುವಾತ) ಒಬ್ಬನನ್ನು ಊಹಿಸಿಕೊಳ್ಳಿ. ಆತ ಜಿಗಿಯುವ ಆರಂಭದಲ್ಲಿ, ಹೆಚ್ಚು ಹೆಚ್ಚು ವೇಗವಾಗಿ ಭೂಮಿಯತ್ತ ಬೀಳತೊಡಗುತ್ತಾನೆ. ಆದರೆ, ಕೆಲ ಸಮಯದ ಬಳಿಕ, ಗಾಳಿ ಒಡ್ಡುವ ಪ್ರತಿರೋಧ ಆತನನ್ನು ಭೂಮಿಯತ್ತ ಸೆಳೆಯುವ ಗುರುತ್ವಾಕರ್ಷಣಾ ಬಲಕ್ಕೆ ಸಮನಾಗುತ್ತದೆ. ಆ ಬಳಿಕ ಅವನು ಒಂದು ಸ್ಥಿರವಾದ ವೇಗದಲ್ಲಿ ಬೀಳತೊಡಗುತ್ತಾನೆ. ಅದುವೇ ಟರ್ಮಿನಲ್ ವೆಲಾಸಿಟಿ. ಈ ಕಾರಣದಿಂದಲೇ ಸ್ಕೈ ಡೈವರ್‌ಗಳು ಬೀಳುವಾಗ ಅವರ ವೇಗ ನಿರಂತರವಾಗಿ ಹೆಚ್ಚುತ್ತಲೇ ಇರುವುದಿಲ್ಲ.

ಈಗ, ನಾವು ಮತ್ತೆ ಬೀಳುತ್ತಿರುವ ಬಾಹ್ಯಾಕಾಶ ತ್ಯಾಜ್ಯದತ್ತ ಗಮನ ಹರಿಸೋಣ. ವಿಮಾನಗಳು ಕಡಿಮೆ ಎತ್ತರದಲ್ಲಿ, ಜನಭರಿತವಾದ ನಗರ ಪ್ರದೇಶಗಳು, ಪಟ್ಟಣಗಳ ಮೇಲ್ಭಾಗದಲ್ಲಿ ಹಾರಿದರೆ, ಬಾಹ್ಯಾಕಾಶ ನೌಕೆಗಳು ಭೂಮಿಯ ಬಹಳಷ್ಟು ವಿಶಾಲವಾದ ಪ್ರದೇಶದ ಮೇಲೆ ಸಂಚರಿಸುತ್ತವೆ. ಜನರು ಸಾಮಾನ್ಯವಾಗಿ ಎಷ್ಟು ಕಡಿಮೆ ಸ್ಥಳವನ್ನು ಬಳಸುತ್ತಾರೆ ಎಂದು ತಿಳಿಯಬೇಕಾದರೆ, ಭೂಮಿಯಲ್ಲಿರುವ ಎಲ್ಲ ಜನರೂ ಬಯಲು ಪ್ರದೇಶದಲ್ಲಿ ಒಬ್ಬರಿಂದೊಬ್ಬರು ದೂರಾಗಿ (ಬಾಹ್ಯಾಕಾಶದಲ್ಲಿ ಉಪಗ್ರಹಗಳು ಹರಡಿರುವ ರೀತಿಯಲ್ಲಿ) ಇದ್ದಾರೆ ಎಂದುಕೊಂಡರೂ, ಅವರು ಭೂಮಿಯ ಮೇಲ್ಮೈಯ ಕೇವಲ 0.0002% ಪ್ರದೇಶವನ್ನು ಮಾತ್ರವೇ ವ್ಯಾಪಿಸಿರುತ್ತಾರೆ!

ಆದ್ದರಿಂದ, ಬಾಹ್ಯಾಕಾಶದಿಂದ ಬೀಳುವ ತ್ಯಾಜ್ಯಗಳು ಅತ್ಯಂತ ಅಪಾಯಕಾರಿಯಾಗಿರುತ್ತವೆ ಎಂದುಕೊಂಡರೂ, ಅವುಗಳು 99.9998% ಸಂದರ್ಭಗಳಲ್ಲಿ ಜನರ ಮೇಲೆ ಬೀಳುವುದು ತಪ್ಪಿರುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ ಹೇಳುವುದಾದರೆ, ಬಾಹ್ಯಾಕಾಶ ತ್ಯಾಜ್ಯ ಪತನದಿಂದ 1,300 ವರ್ಷಗಳಲ್ಲಿ ಒಂದು ಸಾವು ಸಂಭವಿಸಬಹುದೇನೋ!

ಇನ್ನೂ ಸರಳವಾಗಿ ಹೇಳುವುದಾದರೆ, ಬಾಹ್ಯಾಕಾಶ ತ್ಯಾಜ್ಯ ಬಂದು ಅಪ್ಪಳಿಸಿ ನಮಗೆ ಏಟಾಗುವ ಸಾಧ್ಯತೆಗಳು ಎಷ್ಟೊಂದು ಕಡಿಮೆ ಎಂದರೆ, ಅದಕ್ಕಿಂತ ನಾವು ನಡೆದಾಡುವಾಗ ಎಡವಿ ಏಟು ಮಾಡಿಕೊಳ್ಳುವ ಸಾಧ್ಯತೆಗಳೇ ಹೆಚ್ಚಿವೆ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.