ADVERTISEMENT

ಬಿ.ಎಸ್. ಅರುಣ್ ಅವರ ವಿಶ್ಲೇಷಣೆ | ಕಿರುಸಮರ: ನಾಲ್ಕೂ ನಿಟ್ಟಿನಿಂದ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 0:54 IST
Last Updated 17 ಜನವರಿ 2026, 0:54 IST
_
_   

ಕಳೆದ 2024ರ ಲೋಕಸಭೆ ಚುನಾವಣೆಯ ನಂತರದಲ್ಲಿ ಬಹುದೊಡ್ಡ ಚುನಾವಣಾ ಪ್ರಕ್ರಿಯೆ ಏಪ್ರಿಲ್–ಮೇ ತಿಂಗಳಲ್ಲಿ ನಡೆಯಲಿದ್ದು, ಆ ಮಿನಿ ಮಹಾ ಸಮರಕ್ಕೆ ವೇದಿಕೆ ಸಜ್ಜಾಗುತ್ತಿದೆ. ದೇಶದ ಸುಮಾರು ಶೇ 17ರಷ್ಟು ಜನಸಂಖ್ಯೆ ಪ್ರತಿನಿಧಿಸುವ ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಈ ಕದನ ನಡೆಯಲಿದೆ.

ನಾಲ್ಕು ದೊಡ್ಡ ರಾಜ್ಯಗಳ ಪೈಕಿ ಮೂರರಲ್ಲಿ ಬಿಜೆಪಿ ವಿರೋಧಿ ‘ಇಂಡಿಯಾ’ ಗುಂಪಿನ ಪಕ್ಷಗಳು ಅಧಿಕಾರದಲ್ಲಿವೆ. ಈಶಾನ್ಯ ರಾಜ್ಯವಾದ ಅಸ್ಸಾಂನಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ತವಕದಲ್ಲಿದೆ. ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಮಣಿಸಲು ಶತಾಯಗತಾಯ ಪ್ರಯತ್ನಕ್ಕೆ ಬಿಜೆಪಿ ಮುಂದಾಗಿದೆ. ಸದ್ಯದ ಚುನಾವಣೆಗಳ ಮುಖ್ಯ ಹೋರಾಟ ಬಂಗಾಳವೇ ಆಗಿದೆ. ಕೇರಳದಲ್ಲಿ ವಿರೋಧಿ ಮೈತ್ರಿಕೂಟವನ್ನು ಮುನ್ನಡೆಸುತ್ತಿರುವ ಕಾಂಗ್ರೆಸ್‌ ಅಲ್ಲಿ ಮತ್ತು ಅಸ್ಸಾಂನಲ್ಲಿ ತನ್ನ ಆಳ್ವಿಕೆಯನ್ನು ಎದುರು ನೋಡುತ್ತಿದೆ. ತಮಿಳುನಾಡಿನಲ್ಲಿ ಡಿಎಂಕೆ ಮತ್ತು ಕಾಂಗ್ರೆಸ್‌ ಆಧಿಪತ್ಯ ಮುಂದುವರಿಸಲು ಕಾತರದಲ್ಲಿದೆ.

ಈ ನಾಲ್ಕು ರಾಜ್ಯಗಳು ಹಾಗೂ 2027ರಲ್ಲಿ ಉತ್ತರ ಪ್ರದೇಶದಲ್ಲಿ ನಡೆಯುವ ಚುನಾವಣೆಗಳು, 2029ರ ಲೋಕಸಭೆ ಚುನಾವಣೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಹೆಚ್ಚು. ವಿರೋಧಿ ಬಣಕ್ಕೆ ಈ ಹಣಾಹಣಿ ಮಹತ್ವದ್ದಾಗಿದೆ. ಈ ರಾಜ್ಯಗಳಲ್ಲಿ ಜಯಗಳಿಸುವುದರ ಮೂಲಕ ‘ಇಂಡಿಯಾ’ ಕೂಟದ ಪಕ್ಷಗಳೆಲ್ಲಾ ಒಗಟ್ಟಾಗಿದ್ದೇವೆಂದು ಸಾರಲು ಮತ್ತು ಬಿಜೆಪಿಗೆ ತಾವು ವಿಶ್ವಾಸಾರ್ಹ ವಿರೋಧಿ ಬಣವೆಂದು ಮತದಾರರಿಗೆ ಮನವರಿಕೆ ಮಾಡಲು ಇದು ಮುಖ್ಯ.

ADVERTISEMENT

ಅಸ್ಸಾಂನಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಬಿಟ್ಟರೆ, ಬಿಜೆಪಿಗೆ ಉಳಿದ ಮೂರೂ ರಾಜ್ಯಗಳಲ್ಲಿ ಮತ ಸೆಳೆಯಬಲ್ಲ ಪ್ರಮುಖ ರಾಜ್ಯ ನಾಯಕರಿಲ್ಲ. ಹಾಗಾಗಿ, ಕೇಸರಿ ಪಕ್ಷ ಪ್ರಧಾನಿ ನರೇಂದ್ರ ಮೋದಿ ವರ್ಚಸ್ಸನ್ನು ಹೆಚ್ಚು ಅವಲಂಬಿಸಬೇಕಾಗುತ್ತದೆ. ಈ ಎಲ್ಲಾ ರಾಜ್ಯಗಳಲ್ಲಿ ಸದ್ಯದಲ್ಲೇ ಮಹಿಳೆಯರೂ ಸೇರಿದಂತೆ ಮತದಾರರ ಓಲೈಕೆ ಗುರಿಯಾಗಿಸಿ ತರಹೇವಾರಿ ಘೋಷಣೆಗಳನ್ನು ಎಲ್ಲ ಪಕ್ಷಗಳೂ ಮಾಡಲಿವೆ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಗೊಂದಲಗಳೂ ಚುನಾವಣೆಯ ಕಾವು ಏರಿಸುವುದರಲ್ಲಿ ಸಂಶಯವಿಲ್ಲ. ಈ ನಾಲ್ಕೂ ರಾಜ್ಯಗಳಲ್ಲಿ ಸದ್ಯದ ಚುನಾವಣಾ ವಾತಾವರಣ ಹೇಗಿದೆಯೆಂದು ನೋಡೋಣ.

ಪಶ್ಚಿಮ ಬಂಗಾಳ: ಪ್ರಕ್ಷುಬ್ಧ ಪರಿಸ್ಥಿತಿಯಿರುವ ಬಾಂಗ್ಲಾದೇಶದ ಜೊತೆ ಗಡಿ ಅಷ್ಟೇ ಅಲ್ಲದೆ ನಿಕಟ ಸಂಬಂಧ ಹೊಂದಿರುವ ಪೂರ್ವ ಭಾರತದ ಈ ರಾಜ್ಯದ ಚುನಾವಣೆ ಕುತೂಹಲ ಕೆರಳಿಸಿದೆ. 2021ರ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಲು ಭಾರೀ ಪ್ರಯತ್ನ ನಡೆಸಿತಾದರೂ, ಕೊನೆಯಲ್ಲಿ 77 ಸ್ಥಾನ (ಒಟ್ಟು ಅಸೆಂಬ್ಲಿ ಸ್ಥಾನ 294) ಮತ್ತು ಶೇ 38.15ರಷ್ಟು ಮತಗಳಿಸಿ ಸೋಲು ಅನುಭವಿಸಿತು. ಭರ್ಜರಿ ಜಯಗಳಿಸಿದ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್‌ 215 ಸ್ಥಾನ ಗಳಿಸಿ, ಶೇ 48.02ರಷ್ಟು ಮತ ಗಳಿಸಿತು. ಕಾಂಗ್ರೆಸ್‌–ಕಮ್ಯುನಿಸ್ಟ್‌ ಪಾರ್ಟಿಗಳ ಕೂಟ ಹೀನಾಯ ಪ್ರದರ್ಶನ ನೀಡಿ ಕೇವಲ 1 ಸ್ಥಾನ ಗಳಿಸಿತು. ಲೋಕಸಭಾ ಚುನಾವಣೆಯಲ್ಲೂ ಟಿಎಂಸಿ ಒಟ್ಟು 42 ಸ್ಥಾನಗಳಲ್ಲಿ 29 ಗೆದ್ದರೆ, ಬಿಜೆಪಿ 12 ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

ಭ್ರಷ್ಟಾಚಾರ ಪ್ರಕರಣಗಳಲ್ಲಿ ತೃಣಮೂಲ ನಾಯಕರ ಮೇಲೆ ಕೇಂದ್ರ ತನಿಖಾ ತಂಡಗಳಿಂದ ನಡೆದ ವಿಚಾರಣೆ ಮತ್ತು ಸೆರೆ, ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರ, ಕೆಲವೆಡೆ ನಡೆದ ಹಿಂಸಾಚಾರದ ಘಟನೆಗಳು ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿದರೂ, ಈ ವಿದ್ಯಮಾನಗಳು ಬಿಜೆಪಿಗೆ ಮತಗಳಾಗಿ ಪರಿವರ್ತನೆಯಾಗುವುದು ಕಷ್ಟ ಎನ್ನಲಾಗಿದೆ. ಅಲ್ಪಸಂಖ್ಯಾತರ (ಶೇ 27ರಷ್ಟು ಜನಸಂಖ್ಯೆ) ಜೊತೆ ಮಹಿಳೆಯರ ಮತಗಳು ಈ ಚುನಾವಣೆಯಲ್ಲೂ ಟಿಎಂಸಿಯ ಜೊತೆಯಲ್ಲಿಯೇ ಉಳಿಯುತ್ತವೆ ಎಂದು ಹೇಳಲಾಗುತ್ತಿದೆ. 

ಅಸ್ಸಾಂ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಬಿಟ್ಟರೆ ಬಿಜೆಪಿ ಮುಖ್ಯಮಂತ್ರಿಗಳಲ್ಲಿ ಹೆಚ್ಚು ವಿವಾದಾಸ್ಪದ ನಾಯಕ ಅಸ್ಸಾಂನ ಹಿಮಂತ ಬಿಸ್ವ ಶರ್ಮ. ಕಾಂಗ್ರೆಸ್‌ ತ್ಯಜಿಸಿ ಬಿಜೆಪಿ ಸೇರಿದ ಶರ್ಮ, ಈ ಬಾರಿಯೂ ಅಸ್ಸಾಂ ಫಲಿತಾಂಶದಲ್ಲಿ ಬದಲಾವಣೆಯಿಲ್ಲದಿದ್ದರೆ, ಪಕ್ಷದ ಮೊದಲ ಸಾಲಿನ ನಾಯಕರಲ್ಲಿ ಒಬ್ಬರಾಗುವುದರಲ್ಲಿ ಸಂಶಯವಿಲ್ಲ.

ಕಳೆದ ಐದು ವರ್ಷಗಳಲ್ಲಿ ಅಸ್ಸಾಂ ಸರ್ಕಾರ ಅನೇಕ ಜನಹಿತ ಕಾರ್ಯಕ್ರಮ ಕೈಗೊಂಡಿದೆಯೆನ್ನಲಾಗಿದೆ. ಮುಸ್ಲಿಂ ಬಾಹುಳ್ಯವಿರುವ (ಶೇ 38) ಈ ರಾಜ್ಯದಲ್ಲಿ ಶರ್ಮ ಅನೇಕ ಬಾರಿ ಧ್ರುವೀಕರಣದ ಮಾತನಾಡಿ ವಿವಾದ ಸೃಷ್ಟಿಸಿದ್ದಾರೆ. ‘2041ರ ವೇಳೆಗೆ ಅಸ್ಸಾಂನಲ್ಲಿ ಹಿಂದೂಗಳೇ ಅಲ್ಪಸಂಖ್ಯಾತರಾಗುತ್ತಾರೆ’ ಎಂಬ ಅವರ ಈಚಿನ ಹೇಳಿಕೆಗೆ ಪ್ರತಿಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಅಸ್ಸಾಂ ಕಳೆದ 10 ವರ್ಷಗಳಿಂದ ಬಿಜೆಪಿ ನೇತೃತ್ವದ ಎನ್‌ಡಿಎ ಬಿಗಿಮುಷ್ಠಿಯಲ್ಲಿದೆ. 2021ರಲ್ಲಿ ಒಟ್ಟು 126 ಸ್ಥಾನಗಳಲ್ಲಿ ಎನ್‌ಡಿಎ 75 ಕ್ಷೇತ್ರಗಳಲ್ಲಿ (ಶೇ 59.5ರಷ್ಟು ಮತಗಳಿಕೆ) ಹಾಗೂ ಕಾಂಗ್ರೆಸ್‌ ಮುಂದಾಳತ್ವದ ಮಹಾಜೋಟ್‌ 50 (ಶೇ 39.7) ಸ್ಥಾನಗಳಿಸಿದವು. 2024ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 11 ಹಾಗೂ ‘ಇಂಡಿಯಾ’ ಗುಂಪು 3 ಸ್ಥಾನ ಗಳಿಸಿದ್ದವು.

ತಮಿಳುನಾಡು: ಬಿಜೆಪಿ ತನ್ನ ನೆಲೆ ಸ್ಥಾಪಿಸಲು ಹರಸಾಹಸಪಡುತ್ತಿರುವ ಈ ದಕ್ಷಿಣ ರಾಜ್ಯದಲ್ಲಿ ಎಲ್ಲರ ಕಣ್ಣು ಇರುವುದು ಸಿನಿಮಾ ಹೀರೊ ವಿಜಯ್‌ ಮೇಲೆ. ತಮಿಳಗ ವೆಟ್ರಿ ಕಳಗಂ ಪಕ್ಷ ಸ್ಥಾಪಿಸಿದ ವಿಜಯ್‌ ಸಭೆಗಳಿಗೆ ಭಾರೀ ಜನಸ್ತೋಮ ಸೇರುತ್ತಿದೆ. ಆದರೆ, ಇದು ವಿಜಯ್‌ ಪರ ಮತವಾಗಿ ಪರಿವರ್ತನೆಯಾಗುತ್ತದೆಯೇ ಎನ್ನುವುದು ಮುಖ್ಯ ಪ್ರಶ್ನೆ. ಇದುವರೆಗೂ ಆಡಳಿತಾರೂಢ ಡಿಎಂಕೆ ಹಾಗೂ ಬಿಜೆಪಿ ಸಮಾನ ವಿರೋಧಿಗಳು ಎನ್ನುತ್ತಿದ್ದ ಟಿವಿಕೆ ಪಕ್ಷ ಈಗ ವಿಜಯ್‌ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಯಾವ ಪಕ್ಷ ಒಪ್ಪುತ್ತದೆಯೋ ಆ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ತಯಾರಿದೆ ಎನ್ನುವ ಸಂದೇಶ ರವಾನೆ ಮಾಡಿದೆ. ಕಾಂಗ್ರೆಸ್‌ ಅಥವಾ ಬಿಜೆಪಿ, ಟಿವಿಕೆ ಜೊತೆ ಸಖ್ಯ ಬೆಳೆಸುವ ಸಂದರ್ಭ ಕಡಿಮೆ. ಈ ನಡುವೆ, ಡಾ. ಅನ್ಬುಮಣಿ ರಾಮದಾಸ್‌ ಬಣದ ಪಿಎಂಕೆ, ಎನ್‌ಡಿಎ ಸೇರಿದೆ. ದಿವಂಗತ ವಿಜಯಕಾಂತ್‌ ಅವರ ಡಿಎಂಡಿಕೆ, ಮತ್ತು ಎಐಎಡಿಎಂಕೆ ತೊರೆದಿರುವ ಪನ್ನೀರ್‌ ಸೆಲ್ವಂ ಹಾಗೂ ಟಿಟಿವಿ ದಿನಕರನ್‌ ಅವರನ್ನು ಎನ್‌ಡಿಎಗೆ ಸೇರಿಸಿಕೊಳ್ಳಲು ಬಿಜೆಪಿ ಉತ್ಸುಕವಾಗಿದೆ. ತಮಿಳುನಾಡಿನ ಸಿ.ಪಿ. ರಾಧಾಕೃಷ್ಣನ್ ಅವರನ್ನು ಬಿಜೆಪಿ ಉಪರಾಷ್ಟ್ರಪತಿಯನ್ನಾಗಿ ಮಾಡಿದ್ದು, ಇದು ಚುನಾವಣೆಯಲ್ಲಿ ಎಷ್ಟರಮಟ್ಟಿಗೆ ಆ ಪಕ್ಷಕ್ಕೆ ಸಹಾಯವಾಗಲಿದೆಯೋ ನೋಡಬೇಕು. 2016ರಲ್ಲಿ ಜಯಲಲಿತಾ ನಿಧನರಾದ ಬಳಿಕ ಅವರ ಎಐಎಡಿಎಂಕೆ ಯಾವುದೇ ಚುನಾವಣೆ ಗೆದ್ದಿಲ್ಲ.

ರಾಜ್ಯ ವಿಧಾನಸಭೆಯ 234 ಸ್ಥಾನಗಳ ಪೈಕಿ ಡಿಎಂಕೆ ನಾಯಕತ್ವದ ಮೈತ್ರಿಕೂಟ 133 ಸ್ಥಾನಗಳನ್ನೂ (ಶೇ 37.7ರಷ್ಟು ಮತಗಳಿಕೆ), ಎಐಎಡಿಎಂಕೆ ಮುನ್ನಡೆಸಿದ ತಂಡ 66 ಸ್ಥಾನಗಳನ್ನೂ (ಶೇ 33.29ರಷ್ಟು ಮತಗಳಿಕೆ) ಪಡೆಯಿತು. ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 39 ಸ್ಥಾನಗಳಲ್ಲೂ ಅಭೂತಪೂರ್ವ ಜಯಗಳಿಸಿದ ಡಿಎಂಕೆ ಕೂಟ, ತನ್ನ ಪ್ರತಿಸ್ಪರ್ಧಿಗಳಿಗೆ ಭಾರೀ ಸವಾಲಾಗಿ ನಿಂತಿದೆ.

ಕೇರಳ: 2024ರ ಲೋಕಸಭೆ ಚುನಾವಣೆಯಲ್ಲಿ ತ್ರಿಶ್ಶೂರ್‌ನಲ್ಲಿನ ಗೆಲುವು, ಕಳೆದ ತಿಂಗಳು ತಿರುವನಂತಪುರಂ ನಗರಸಭೆಯ ಜಯದ ಹೊರತಾಗಿಯೂ ರಾಜ್ಯದಲ್ಲಿ ಬಿಜೆಪಿ ಉತ್ಸಾಹದಲ್ಲಿಲ್ಲ. ತೀವ್ರ ಪ್ರಯತ್ನದ ನಂತರವೂ ಕೇರಳದಲ್ಲಿ ಬಿಜೆಪಿ ವರ್ಚಸ್ಸು ಹೆಚ್ಚಾದಂತಿಲ್ಲ. ಶೇ 18ರಷ್ಟಿರುವ ಕ್ರಿಶ್ಚಿಯನ್ನರು ನಿರೀಕ್ಷೆಯಂತೆ ಪಕ್ಷದ ಪರ ಒಲವು ತೋರದಿರುವುದು, ದೇಶದ ಅನೇಕ ಕಡೆ ಕಳೆದ ಕೆಲವು ವಾರಗಳಲ್ಲಿ ಕ್ರಿಶ್ಚಿಯನ್ನರ ಮೇಲೆ ಮತಾಂಧರಿಂದ ನಡೆದ ದಾಳಿ ಹಾಗೂ ಅದನ್ನು ಪ್ರಶ್ನಿಸದ ಬಿಜೆಪಿ– ಈ ಎಲ್ಲ ಕಾರಣಗಳಿಂದ ಕೇಸರಿ ಬಣ ಈ ಬಾರಿಯೂ ಅಸೆಂಬ್ಲಿ ಕಣದಲ್ಲಿ ದುರ್ಬಲ ಆಟಗಾರನಾಗಿಯೇ ಉಳಿಯುವ ಸಾಧ್ಯತೆ ಹೆಚ್ಚಾಗಿದೆ.

ಡಿಸೆಂಬರ್‌ನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌, ಕಮ್ಯುನಿಸ್ಟ್‌ ಪಕ್ಷಗಳ ಕೂಟವಾದ ಎಲ್‌ಡಿಎಫ್ ಮೇಲೆ ಜಯಗಳಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಈ ಹಣಾಹಣಿಯಲ್ಲಿ ಯುಡಿಎಫ್‌ ಒಟ್ಟು 649 ಸಂಸ್ಥೆಗಳಲ್ಲಿ ವಿಜಯಿಯಾದರೆ, ಎಲ್‌ಡಿಎಫ್‌ 439 ಹಾಗೂ ಬಿಜೆಪಿ 29ರಲ್ಲಿ ಗೆಲುವು ಸಾಧಿಸಿತು.

ಕೇರಳದಲ್ಲಿ ಯಾವುದೇ ಕೂಟ ಸತತ ಎರಡನೇ ಬಾರಿಗೆ ಗೆಲ್ಲುವುದು ಅಪರೂಪ. ಆದಾಗ್ಯೂ ಎಲ್‌ಡಿಎಫ್‌ 2021ರಲ್ಲಿ ಎರಡನೇ ಬಾರಿಗೆ ಗೆಲುವು ಸಾಧಿಸಿ ಅಚ್ಚರಿ ಮೂಡಿಸಿತ್ತು. ಈ ಬಾರಿ ಈ ಕೂಟ ಸೋತರೆ, ದೇಶದ ಯಾವುದೇ ರಾಜ್ಯದಲ್ಲಿ ಕಮ್ಯುನಿಸ್ಟ್‌ ಸರ್ಕಾರ ಇರುವುದಿಲ್ಲ. ಕಾಂಗ್ರೆಸ್ ಗೆದ್ದರೆ ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶ ಸೇರಿದಂತೆ 4 ರಾಜ್ಯಗಳಲ್ಲಿ ಪಕ್ಷದ ಸರ್ಕಾರವಿರುತ್ತದೆ. ಇಂಡಿಯಾ ಕೂಟದಲ್ಲಿಯೂ ಪಕ್ಷದ ಪ್ರಾಮುಖ್ಯತೆ ಹೆಚ್ಚುತ್ತದೆ.

2021ರ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 140 ಸ್ಥಾನಗಳ ಪೈಕಿ 99 ಸ್ಥಾನಗಳಲ್ಲಿ (ಶೇ. 43.38ರಷ್ಟು ಮತಗಳಿಕೆ) ಎಲ್‌ಡಿಎಫ್‌ ಜಯಗಳಿಸಿದರೆ, 41 ಸ್ಥಾನಗಳು (ಶೇ. 38.81) ಯುಡಿಎಫ್‌ ಪಾಲಾದವು. 2024ರ ಲೋಕಸಭೆ ಚುನಾವಣೆಯಲ್ಲಿ ಯುಡಿಎಫ್‌ 18, ಎಲ್‌ ಡಿಎಫ್‌ 1 ಹಾಗೂ ಬಿಜೆಪಿ 1 ಕ್ಷೇತ್ರದಲ್ಲಿ ಗೆದ್ದಿದ್ದವು.

ಲೇಖಕರು: ಹಿರಿಯ ಪತ್ರಕರ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.