ADVERTISEMENT

ವಿಶ್ಲೇಷಣೆ | ಬೀದಿ ನಾಯಿ: ಹಕ್ಕು ಮತ್ತು ಸಿಕ್ಕು

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 20:31 IST
Last Updated 24 ಆಗಸ್ಟ್ 2025, 20:31 IST
<div class="paragraphs"><p>ವಿಶ್ಲೇಷಣೆ</p></div>

ವಿಶ್ಲೇಷಣೆ

   

ದೆಹಲಿಯ ಎಲ್ಲಾ ಬೀದಿ ನಾಯಿಗಳನ್ನು ಕಡ್ಡಾಯವಾಗಿ ಶಾಶ್ವತ ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನೀಡಿದ್ದ ಆದೇಶ ದೇಶದಾದ್ಯಂತ ಪರ, ವಿರೋಧದ ಚರ್ಚೆಗೆ ಕಾರಣವಾಗಿತ್ತು. ಮುಕ್ತವಾಗಿ ಓಡಾಡಿಕೊಂಡಿರುವ ಪ್ರಾಣಿಗಳನ್ನು ಇಕ್ಕಟ್ಟಾದ ಜಾಗದಲ್ಲಿ ಬಂಧಿಸುವುದು ಇಲ್ಲವೇ ಅವುಗಳ ವಾಸಸ್ಥಳದಿಂದ ಎತ್ತಂಗಡಿ ಮಾಡಿ ಬೇರೆಡೆ ಕೂಡಿಹಾಕುವುದು ‘ಪ್ರಾಣಿ ಜನನ ನಿಯಂತ್ರಣ ನಿಯಮ–2023’ರ ಸ್ಪಷ್ಟ ಉಲ್ಲಂಘನೆ ಎಂದು ಕೆಲವರು ವಾದಿಸಿದ್ದರು. ಮಕ್ಕಳು, ವೃದ್ಧರನ್ನು ನಾಯಿಗಳು ಕಚ್ಚಿ ಸಾಯಿಸುತ್ತಿರುವ, ಗಂಭೀರವಾಗಿ ಗಾಯಗೊಳಿಸುತ್ತಿರುವ ಹೃದಯವಿದ್ರಾವಕ ದೃಶ್ಯಗಳು ಜಾಲತಾಣಗಳಲ್ಲಿ ಹರಿದಾಡುತ್ತಾ, ‘ಇನ್ನೆಷ್ಟು ದಿನ ಈ ಕ್ರೌರ್ಯ ಸಹಿಸುವುದು?’ ಎಂಬ ಧ್ವನಿಯೂ ಜೋರಾಗಿ ಕೇಳಿಬಂದಿತ್ತು.

ಸಾರ್ವಜನಿಕ ಚರ್ಚೆಗಳ ತರುವಾಯ, ಸುಪ್ರೀಂ ಕೋರ್ಟ್‌ ತನ್ನ ಆದೇಶವನ್ನು ಪರಿಷ್ಕರಿಸಿದೆ. ದೆಹಲಿಯಲ್ಲಿ ಈಗಾಗಲೇ ಹಿಡಿಯಲಾಗಿರುವ ಬೀದಿ ನಾಯಿಗಳಿಗೆ ಲಸಿಕೆ ಹಾಕಿ, ಅವುಗಳನ್ನು ಈ ಮುಂಚೆ ಇದ್ದ ಸ್ಥಳಗಳಿಗೇ ಬಿಡಲು ಹಾಗೂ ಅವುಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಬೇಕೆಂದು ಹೇಳಿದೆ. ರೇಬಿಸ್‌ ಸೋಂಕು ಇರುವ ಅಥವಾ ಸೋಂಕಿನ ಶಂಕೆ ಇರುವ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಬೇಕು ಹಾಗೂ ಯಾವುದೇ ಕಾರಣಕ್ಕೂ ಅವುಗಳನ್ನು ಮತ್ತೆ ಬೀದಿಗಳಿಗೆ ಬಿಡಬಾರದು ಎಂದೂ ಹೇಳಿದೆ. ಬೀದಿ ನಾಯಿಗಳ ಉಪದ್ರವಕ್ಕೆ ಕಡಿವಾಣ ಹಾಕುವುದಕ್ಕಾಗಿ ರಾಷ್ಟ್ರವ್ಯಾಪಿ ಅನ್ವಯವಾಗುವ ನೀತಿಯೊಂದನ್ನು ರೂಪಿಸುವ ಇಂಗಿತವನ್ನೂ ವ್ಯಕ್ತಪಡಿಸಿದೆ.

ADVERTISEMENT

ರೇಬಿಸ್‌ ಸೋಂಕು ಹೊಂದಿದ ನಾಯಿಗಳು ರಸ್ತೆಯಲ್ಲಿ ಇರಬಾರದು ಎಂದು ಸುಪ್ರೀಂ ಕೋರ್ಟ್‌ ಹೇಳಿದ್ದರೂ, ಅದರ ಅನುಷ್ಠಾನ ಅಷ್ಟು ಸುಲಭವಲ್ಲ. ನಾಯಿಯೊಂದು ಕಂಡ ಕಂಡ ಮನುಷ್ಯ, ಪ್ರಾಣಿಗಳಿಗೆ ಕಚ್ಚುತ್ತಾ ಹೋದಾಗಲಷ್ಟೇ ಅದಕ್ಕೆ ಹುಚ್ಚೆಂದು ಗೊತ್ತಾಗುವುದು. ಸೋಂಕಿತ ನಾಯಿಯಿಂದ ಕಚ್ಚಿಸಿಕೊಂಡವರು ಲಸಿಕೆ ತೆಗೆದುಕೊಳ್ಳದಿದ್ದರೆ ಅಪಾಯ ನಿಶ್ಚಿತ. ಹಾಗೆಯೇ ಆ ನಾಯಿಗಳಿಂದ ಕಚ್ಚಿಸಿಕೊಂಡ ಬೀದಿ ನಾಯಿಗಳಿಗೂ ಲಸಿಕೆ ಹಾಕಬೇಕು. ಇಲ್ಲದಿದ್ದರೆ ಅವುಗಳಿಗೂ ರೋಗ ತಗುಲಿ ಮತ್ತಷ್ಟು ಕಡೆ ಸೋಂಕು ಹರಡಿಸುತ್ತವೆ.

ಬೀದಿ ನಾಯಿಗಳಿಗೆ ಎಂದೋ ನೀಡಿದ್ದ ಒಂದು ಲಸಿಕೆ ಈಗ ಪ್ರಯೋಜನಕ್ಕೆ ಬಾರದು. ರೋಗ ಪ್ರತಿರೋಧ ಶಕ್ತಿ ಸುಸ್ಥಿತಿಯಲ್ಲಿ ಇರಬೇಕಿದ್ದರೆ ಪ್ರತಿ ವರ್ಷವೂ ಬೀದಿ ನಾಯಿಗಳನ್ನು ಹಿಡಿದು ಲಸಿಕೆ ಹಾಕಬೇಕು. ಇದು ವ್ಯಾವಹಾರಿಕವಾಗಿ ಸಾಧ್ಯವೇ? ಪ್ರತಿನಿತ್ಯ ನಾಯಿಗಳ ಮೇಲೆ ನಿಗಾ ಇರಿಸುವ ವ್ಯವಸ್ಥೆಯಾದರೂ ಎಲ್ಲಿದೆ? ಹಾಗಾಗಿ ನಾಯಿ ಕಡಿತದ ಪ್ರತಿ ಪ್ರಕರಣವನ್ನು ರೇಬಿಸ್‌ ದೃಷ್ಟಿಯಿಂದಲೇ ನೋಡಬೇಕಾದುದು ಅನಿವಾರ್ಯ. ನಮ್ಮ ರಾಜ್ಯವೊಂದರಲ್ಲೇ ಈ ವರ್ಷದ ಜನವರಿಯಿಂದ ಇಲ್ಲಿಯವರೆಗೆ ಸುಮಾರು ಮೂರು ಲಕ್ಷದಷ್ಟು ನಾಯಿ ಕಡಿತದ ಪ್ರಕರಣಗಳು ದಾಖಲಾಗಿರುವುದನ್ನು ಗಮನಿಸಿದರೆ, ಪರಿಸ್ಥಿತಿ ಎಷ್ಟು ಗಂಭೀರವಾದುದು ಎನ್ನುವುದು ಅರಿವಾಗುತ್ತದೆ!

ನಾಯಿಗಳ ಮೇಲಿನ ಅತಿಯೆನಿಸುವಷ್ಟು ಸಾರ್ವಜನಿಕ ಅನುಕಂಪ, ಆಡಳಿತದ ನಿರ್ಲಕ್ಷ್ಯ, ಇಚ್ಛಾಶಕ್ತಿಯ ಕೊರತೆ, ಹೀಗೆ ಬೇರೆ ಬೇರೆ ಕಾರಣಗಳಿಂದ, ಹಲವು ದಶಕಗಳಿಂದ ಜೀವಂತವಾಗಿರುವ ಸಮಸ್ಯೆಯೊಂದು ಅಪಾಯಕಾರಿಯಾಗಿ ಬೆಳೆದಿದೆ ಹಾಗೂ ದಿನದಿಂದ ದಿನಕ್ಕೆ ಕಗ್ಗಂಟಾಗುತ್ತಲೇ ಸಾಗುತ್ತಿದೆ.

ಕರ್ನಾಟಕ ಸರ್ಕಾರ 2022ರ ಡಿಸೆಂಬರ್‌ನಲ್ಲಿ ರೇಬಿಸ್‌ ರೋಗವನ್ನು ಅಧಿಸೂಚಿತ ಕಾಯಿಲೆಯೆಂದು ಘೋಷಿಸಿದೆ. ಅದರನ್ವಯ, ಸರ್ಕಾರಿ ಮತ್ತು ಖಾಸಗಿ ಸೇರಿದಂತೆ ಎಲ್ಲಾ ವೈದ್ಯಕೀಯ ಸಂಸ್ಥೆಗಳು ನಾಯಿ ಕಡಿತ, ರೇಬಿಸ್‌ ಸೋಂಕಿನ ಪ್ರಕರಣಗಳನ್ನು ಸರ್ಕಾರಕ್ಕೆ ವರದಿ ಮಾಡುವುದು ಕಡ್ಡಾಯ. ಹಾಗಾಗಿ, ಕಳೆದ ಎರಡು ಮೂರು ವರ್ಷಗಳಿಂದ ನಿಖರವಾದ ಅಂಕಿಅಂಶಗಳು ದೊರಕುತ್ತಿವೆ. ಇದಕ್ಕಿಂತ ಹಿಂದೆಯೂ ನಾಯಿಗಳ ದಾಳಿಯಿಂದ ದೊಡ್ಡ ಪ್ರಮಾಣದಲ್ಲೇ ಸಾವು–ನೋವು ಸಂಭವಿಸುತ್ತಿದ್ದರೂ ಅವು ಹೆಚ್ಚಾಗಿ ವರದಿಯಾಗುತ್ತಿರಲಿಲ್ಲ. ಈಗ ಸಾಮಾಜಿಕ ಮಾಧ್ಯಮಗಳು ಹೆಚ್ಚು ಕ್ರಿಯಾಶೀಲವಾಗಿವೆ, ಇಂತಹ ಘಟನೆಗಳಿಗೆ ವ್ಯಾಪಕ ಪ್ರಚಾರ ಸಿಗುತ್ತಿರುವುದರಿಂದ ಬೇಗನೆ ಎಲ್ಲರ ಗಮನಕ್ಕೆ ಬರುತ್ತಿದೆ. ಜನರಲ್ಲೂ ನಾಯಿ ಕಡಿತ ಹಾಗೂ ರೇಬಿಸ್‌ ಕುರಿತಾಗಿ ಜಾಗೃತಿ ಮೂಡಿದೆ. ಹಾಗಾಗಿ, ವೈದ್ಯಕೀಯ ಸಲಹೆ, ಚಿಕಿತ್ಸೆಗೆ ಧಾವಿಸುತ್ತಿರುವವರ ಸಂಖ್ಯೆಯಲ್ಲಿ ಗಾಬರಿಯಾಗುವಷ್ಟು ಏರಿಕೆಯಾಗುತ್ತಿದೆ.

ನಾಯಿಗಳ ಆಕ್ರಮಣಶೀಲತೆಗೆ ಅವುಗಳಿಗೆ ಆಹಾರ ಕೊರತೆಯಾಗಿರುವುದೇ ಪ್ರಮುಖ ಕಾರಣವೆಂದು ಬಿಂಬಿಸಲಾಗುತ್ತಿದೆ. ಇದೊಂದು ಬಿಡುಬೀಸಾದ ಹೇಳಿಕೆಯೇ ಹೊರತು ಅದಕ್ಕೆ ಯಾವುದೇ ಆಧಾರವಿಲ್ಲ. ನಾಯಿಗಳು ಜನ, ಜಾನುವಾರು ಮೇಲೆ ಆಕ್ರಮಣ ಮಾಡಲು ಹತ್ತಾರು ಕಾರಣಗಳುಂಟು. ತನಗೆ ಅಪಾಯವೆದುರಾದ ಸಂದರ್ಭದಲ್ಲಿ ನಾಯಿ ಆಕ್ರಮಣ ಮಾಡುತ್ತದೆ. ಭಯಗೊಂಡಾಗ, ಭಾರೀ ಸದ್ದುಗದ್ದಲಗಳಿಂದ ಮಾನಸಿಕವಾಗಿ ಗಲಿಬಿಲಿಗೊಂಡಾಗ, ಸುಮ್ಮನಿದ್ದರೂ ಕೆಣಕಿದಾಗ, ಅದು ಮಲಗಿರುವಾಗ ಇಲ್ಲವೇ ಆಹಾರ ತಿನ್ನುವಾಗ ತೊಂದರೆ ಮಾಡಿದರೆ ಕೆರಳಿ ಕಚ್ಚುವುದುಂಟು. ಮರಿ ಹಾಕಿರುವಾಗ ಅವುಗಳ ರಕ್ಷಣೆಗಾಗಿ ತಾಯಿನಾಯಿ ಆಕ್ರಮಣ ಪ್ರವೃತ್ತಿ ತೋರುತ್ತದೆ. ನೋವು, ಕಾಯಿಲೆಯಿಂದ ಬಳಲುತ್ತಿರುವ ನಾಯಿಯನ್ನು ಮುಟ್ಟಲು ಹೋದಾಗ, ಅವು ಬೆದೆಗೆ ಬಂದಾಗ, ಹಸಿದಿರುವಾಗ, ವಿಚಿತ್ರ ವೇಷದವರು ಎದುರಾದಾಗಲೂ ದಾಳಿ ಮಾಡುವುದುಂಟು. ಇನ್ನು ಚಿಕ್ಕ ಮಕ್ಕಳು ನಾಯಿಗಳಿಗೆ ಅವುಗಳ ಮೂಲ ಸ್ವಭಾವದ ಕಾರಣ ಬೇಟೆ ಪ್ರಾಣಿಯಂತೆ ಕಾಣುವುದರಿಂದ ಅವರ ಮೇಲೆ ಹಠಾತ್‌ ಎರಗುತ್ತವೆ.

ಕೆಲವು ತಳಿಯ ಶ್ವಾನಗಳಲ್ಲಿ ವಂಶವಾಹಿಯ ಕಾರಣ ಸಿಟ್ಟು ಹಾಗೂ ಕಚ್ಚುವ ಪ್ರವೃತ್ತಿ ಹೆಚ್ಚು. ನಾಯಿಗಳು ಗುಂಪಿನಲ್ಲಿರುವಾಗ ಒಂದು ನಾಯಿ ಅಟ್ಟಿಸಿಕೊಂಡು ಬಂದರೆ, ಉಳಿದ ನಾಯಿಗಳು ಅದನ್ನು ಅನುಕರಿಸಿ ದಾಳಿಗೆ ಮುಂದಾಗುತ್ತವೆ. ಹಾಗಾಗಿ, ನಾಯಿ ಕಡಿತದ ಪ್ರಕರಣಗಳು ಹೆಚ್ಚಾಗಲು ಅವುಗಳಿಗೆ ಸರಿಯಾಗಿ ಆಹಾರ ಸಿಗದಿರುವುದೇ ಕಾರಣವೆಂದು ಹೇಳುವುದು ಕೇವಲ ಮಿಥ್ಯಾರೋಪವಷ್ಟೆ.

ನಾಯಿಗಳನ್ನು ಶಾಂತವಾಗಿ ಇರಿಸಲು ಪ್ರತಿಯೊಬ್ಬರೂ ಬೀದಿ ನಾಯಿಗಳಿಗೆ ನಿತ್ಯ ಊಟ ಹಾಕಿ ಎನ್ನುವುದು ಹಾಸ್ಯಾಸ್ಪದ. ಇಂತಹದ್ದೇ ಕಾರಣಕ್ಕಾಗಿ ನಮ್ಮ ಬಿಬಿಎಂಪಿ ನಾಯಿಗಳಿಗೆ ಒಂದು ಹೊತ್ತು ಊಟ ಹಾಕುವ ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಿರುವುದು ಸಮರ್ಥನೀಯವಲ್ಲ. ನಾಯಿಗಳಿಗೆ ಚೆನ್ನಾಗಿ ಆಹಾರ ಸಿಕ್ಕಾಗ ಅವುಗಳ ವಂಶಾಭಿವೃದ್ಧಿ ಸಾಮರ್ಥ್ಯವೂ ಸಹಜವಾಗಿಯೇ ವೃದ್ಧಿಸುತ್ತದೆ. ಸುಲಭವಾಗಿ ಆಹಾರ ದೊರಕುವ ಕಡೆ ಅವುಗಳ ಗುಂಪೂ ದೊಡ್ಡದಾಗುತ್ತದೆ. ವಾಹನಗಳಿಗೆ ಅಡ್ಡ ಬಂದು ಅಪಘಾತಗಳಿಗೆ ಕಾರಣವಾಗುವ ಜೊತೆಗೆ ಸಮೂಹ ಸನ್ನಿಯಿಂದಾಗಿ ಮಕ್ಕಳು, ದುರ್ಬಲರ ಮೇಲೆ ಎರಗುವ ಸಂಭವವೂ ಹೆಚ್ಚು.

ಹಿಂದೆಲ್ಲಾ ನಾಯಿಗಳಲ್ಲಿ ಗರ್ಭಧಾರಣೆ ತಡೆಯುವ ಮಾತ್ರೆಗಳು ಪಶು ವೈದ್ಯಕೀಯ ಸಂಸ್ಥೆಗಳಲ್ಲಿ ಸಿಗುತ್ತಿದ್ದವು. ತಮ್ಮ ಮನೆಯ ಹೆಣ್ಣು ನಾಯಿ ಬೆದೆಗೆ ಬಂದಾಗ ಗುಳಿಗೆಗಳನ್ನು ಹಾಕುತ್ತಿದ್ದ ಮಾಲೀಕರು, ಅವು ಮರಿ ಹಾಕದಂತೆ ತಡೆಯುತ್ತಿದ್ದರು. ಇದು ಅವುಗಳ ಸಂಖ್ಯೆ ನಿಯಂತ್ರಣಕ್ಕೆ ಸುಲಭ ಮಾರ್ಗವಾಗಿತ್ತು. ಆದರೆ, ಈ ಔಷಧಗಳ ವ್ಯಾಪಕ ದುರುಪಯೋಗ, ದುಷ್ಪರಿಣಾಮದಂತಹ ಕಾರಣಗಳಿಂದ ಪೂರೈಕೆ ನಿಂತು ಹೋಗಿ ಹಲವು ವರ್ಷಗಳೇ ಆಗಿಹೋಗಿವೆ. ಈಗ ಗರ್ಭ ನಿರೋಧಕ ಅಥವಾ ಗರ್ಭಪಾತ ಮಾಡಿಸುವಂತಹ ಮಾತ್ರೆಗಳು ದೊರೆಯದ ಕಾರಣ ತಮ್ಮ ಮನೆಯ ನಾಯಿಗಳು ಮರಿ ಹಾಕಿದಾಗ ಸಾಕಲಾಗದೆ ಬೀದಿಗೆ ಬಿಡುವವರು ಹೆಚ್ಚಾಗಿದ್ದಾರೆ. ಗರ್ಭ ಧರಿಸುವುದನ್ನು ತಡೆಯುವ ಸುಧಾರಿತ ಔಷಧಗಳು ಪಶು ವೈದ್ಯಕೀಯ ಸಂಸ್ಥೆಗಳಲ್ಲಿ ಸುಲಭವಾಗಿ ಮತ್ತು ಉಚಿತವಾಗಿ ದೊರೆಯುವಂತಾದಾಗ, ನಾಯಿಗಳ ಸಂಖ್ಯೆಗೆ ಕಡಿವಾಣ ಹಾಕಲು ಸಾಧ್ಯವಿದೆ.

ಹೆಣ್ಣುನಾಯಿಗಳಲ್ಲಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ತುಸು ಕ್ಲಿಷ್ಟ ಮತ್ತು ದುಬಾರಿ. ಗರ್ಭಕೋಶವು ಶರೀರದ ಒಳಭಾಗದಲ್ಲಿ ಇರುವುದರಿಂದ ನಾಯಿಗೆ ಪ್ರಜ್ಞೆ ತಪ್ಪಿಸಿ, ಹೊಟ್ಟೆಯ ಮಾಂಸ ಪದರಗಳನ್ನು ಛೇದಿಸಿ, ಗರ್ಭಚೀಲವನ್ನು ತೆಗೆದು ಹಾಕಬೇಕಾಗುತ್ತದೆ. ಪ್ರಕ್ರಿಯೆಯ ನಂತರದ ತೊಡಕುಗಳ ಕಾರಣ ಐದಾರು ದಿನಗಳ ಕಾಲ ನಿಗಾ ವಹಿಸಬೇಕಾಗುತ್ತದೆ. ಅದೇ ಗಂಡು ನಾಯಿಗಳಲ್ಲಿ ವೃಷಣ ಚೀಲವು ಶರೀರದ ಹೊರಭಾಗದಲ್ಲಿ ಇರುವುದರಿಂದ ಈ ಪ್ರಕ್ರಿಯೆ ಸರಳ. ನಂತರದಲ್ಲಿ ತೊಂದರೆಗಳೂ ಕಡಿಮೆ. ಹೌದು, ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಆರ್ಥಿಕ ಸಂಪನ್ಮೂಲವಷ್ಟೇ ಅಲ್ಲ, ಕುಶಲ ಮಾನವ ಸಂಪನ್ಮೂಲದ ಕೊರತೆಯೂ ಇದೆ. ಸಿಬ್ಬಂದಿ ವರ್ಗದವರಿಗೆ ಸೂಕ್ತ ತರಬೇತಿ ನೀಡಿ ಗಂಡು ನಾಯಿಗಳಿಗೆ ಶಸ್ತ್ರಕ್ರಿಯೆ ಮಾಡಿಸಬಹುದು, ಪರಿಣತರ ಅಗತ್ಯವೂ ಇಲ್ಲ. ಹಾಗಾಗಿ, ಗಂಡುನಾಯಿಗಳನ್ನೇ ಕೇಂದ್ರೀಕರಿಸಿ ಜನನ ನಿಯಂತ್ರಣ ಕಾರ್ಯಕ್ರಮ ಹಮ್ಮಿಕೊಂಡಾಗ ವೆಚ್ಚವನ್ನು ತಗ್ಗಿಸಬಹುದಲ್ಲದೆ, ಪ್ರಕ್ರಿಯೆಗೂ ವೇಗ ತುಂಬಬಹುದು.

ಈ ಭೂಮಿಯಲ್ಲಿ ಮನುಷ್ಯ ಸೇರಿದಂತೆ ಎಲ್ಲಾ ಪಶು–ಪಕ್ಷಿಗಳಿಗೂ ಬದುಕುವ ಹಕ್ಕಿದ್ದರೂ, ಕೆಲವು ಪ್ರಾಣಿಗಳಿಗೆ ಹೆಚ್ಚಿನ ಹಕ್ಕುಗಳನ್ನು ಒತ್ತಾಯಿಸುವುದು ಅಪಾಯಕಾರಿ ಆಗಬಲ್ಲದು ಎಂಬುದಕ್ಕೆ ಬೀದಿನಾಯಿಗಳ ಸಂಖ್ಯೆಯಲ್ಲಿ ಆಗಿರುವ ಹೆಚ್ಚಳ ಮತ್ತು ತತ್ಸಂಬಂಧದ ಮಾನವ–ನಾಯಿ ಸಂಘರ್ಷವೇ ಸಾಕ್ಷಿ.

ಜನ–ಜಾನುವಾರು ಸುರಕ್ಷತೆಯ ದೃಷ್ಟಿಯಿಂದ ನಾಯಿಗಳಿಗೆ ಕನಿಷ್ಠ ಸೌಲಭ್ಯವುಳ್ಳ ಪಾಲನಾ ಕೇಂದ್ರಗಳನ್ನು ತೆರೆದು, ಅವುಗಳು ಬೀದಿಯ ಮೇಲೆ ಅಲೆಯದಂತೆ ನೋಡಿಕೊಳ್ಳುುದು ಕಷ್ಟವಾದರೂ ಅಸಾಧ್ಯವಲ್ಲ. ಸಂಖ್ಯೆ ಮಿತಿ ಮೀರಿ ಅನಾಹುತಗಳಾಗುತ್ತಿರುವ ಈ ಹೊತ್ತಿನಲ್ಲಿ ನಾಯಿಗಳ ಹಕ್ಕಿನ ವಿಚಾರದಲ್ಲಿ ಇರುವ ಸೂಕ್ಷ್ಮಗಳ ಬಗ್ಗೆ ಚರ್ಚಿಸುವುದು ಹಾಗೂ ಸೂಕ್ತ ಪರಿಹಾರ ಕಂಡುಕೊಳ್ಳುವುದು ಇಂದಿನ ತುರ್ತು.

ಲೇಖಕ: ಮುಖ್ಯ ಪಶು ವೈದ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.