
ಬೀದಿನಾಯಿಗಳ ಸಮಸ್ಯೆ ವ್ಯವಸ್ಥೆಯ ವೈಫಲ್ಯದ ಸಂಕೇತ. ನಮಗೆ ಅನುಕೂಲವಾಗುವಂತೆ ಪಳಗಿಸಿದ ಪ್ರಾಣಿಪ್ರಭೇದದಿಂದ ಈಗ ಅಂತರ ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಿರುವುದು ಕ್ರೌರ್ಯದ ನಡವಳಿಕೆ. ಒಂದೆಡೆ, ವಿದೇಶಿ ತಳಿಗಳ ನಾಯಿಗಳು ಬಂಗಲೆಗಳಲ್ಲಿ ಸುರಕ್ಷಿತವಾಗಿದ್ದರೆ, ದೇಸಿ ನಾಯಿಗಳು ಬೀದಿಗಳಲ್ಲಿ ಬದುಕಿಗಾಗಿ ಹೋರಾಟ ನಡೆಸುತ್ತಿವೆ.
ಅಮೆರಿಕದಲ್ಲಿ ‘ಅಲೋಕ’ ಹೆಸರಿನ ಭಾರತೀಯ ‘ಬೀದಿ’ನಾಯಿ ವಿಶ್ವದ ಗಮನ ಸೆಳೆಯುತ್ತಿದೆ. ಬೌದ್ಧ ಭಿಕ್ಷುಗಳೊಂದಿಗೆ ಬಿಸಿಲು, ಮಳೆ ಮತ್ತು ಚಳಿ ಲೆಕ್ಕಿಸದೆ ಹೆಜ್ಜೆ ಹಾಕುತ್ತಿರುವ ಅದನ್ನು, ಶಾಂತಿ, ಶಿಸ್ತು, ಸಹಾನುಭೂತಿ ಮತ್ತು ಸಹಬಾಳ್ವೆಯ ಸಂಕೇತವಾಗಿ ಗುರ್ತಿಸಲಾಗುತ್ತಿದೆ. ಇದಕ್ಕೆ ತದ್ವಿರುದ್ಧ ವಾಗಿ ಭಾರತದಲ್ಲಿ ಬೀದಿನಾಯಿಗಳ ಪಾಡು ದಿನದಿಂದ ದಿನಕ್ಕೆ ಶೋಚನೀಯವಾಗುತ್ತಿದೆ. ಮನುಷ್ಯ ಲೋಕದಿಂದ ಅದನ್ನು ಬೇರ್ಪಡಿಸುವ ಎಲ್ಲಾ ಪ್ರಭಾವಿ ಕೇಂದ್ರ ಗಳು ಈ ನಿಟ್ಟಿನಲ್ಲಿ ತ್ವರಿತವಾಗಿ ಕೆಲಸ ಮಾಡುತ್ತಿವೆ. ಇಂದಿನ ಮನುಷ್ಯಕೇಂದ್ರಿತ ಜಗತ್ತಿನಲ್ಲಿ ಉಳಿದೆಲ್ಲ ಜೀವಿಗಳು ಅನಗತ್ಯವೆಂದು ಕಾಣಿಸುತ್ತಿರುವುದು ಆಶ್ಚರ್ಯವೇನಲ್ಲ. ಆದರೆ, ಈ ವಿರೋಧಾಭಾಸವು ನಮ್ಮ ಸಾಂಸ್ಕೃತಿಕ ಸ್ಮೃತಿ ಕಳೆದುಹೋಗಿರುವ ಸಂಕೇತವಾಗಿ ನಮಗೆ ಎದುರಾಗಿದೆ.
ಇಂದು ಭಾರತದ ಬೀದಿಗಳಲ್ಲಿ ಅನಾಥರಂತೆ ನಿಸ್ತೇಜವಾಗಿ ಕಾಣಿಸುವ ನಾಯಿಗಳಾಗಲಿ, ಬೆಕ್ಕುಗಳಾಗಲಿ, ಕತ್ತೆ–ಹಂದಿಗಳಾಗಲಿ, ಅಥವಾ ಇನ್ನಾವುದೇ ಪ್ರಾಣಿ–ಪಕ್ಷಿಯಾಗಿರಲಿ, ವ್ಯಾವಹಾರಿಕ ಮನುಷ್ಯ ಜಗತ್ತಿನಲ್ಲಿ ಅನಗತ್ಯವೆನ್ನುವಂತೆ, ಮನುಷ್ಯನ ಸುಸೂತ್ರ ಚಲನೆಗೆ ದಾರಿಗಡ್ಡವಾಗಿರುವಂತೆ ಕಾಣಿಸುತ್ತಿವೆ. ಅವುಗಳು ಮಾನವನ ಇತಿಹಾಸದ ಸಂಗಾತಿಗಳು ಎನ್ನುವುದನ್ನು ನಾವು ಮರೆಯ ಬಾರದು. ಸಾವಿರಾರು ವರ್ಷಗಳ ಹಿಂದೆ ಮನುಷ್ಯ ತನ್ನ ರಕ್ಷಣೆಗೆ, ಸಾಂಗತ್ಯಕ್ಕೆ, ಸಹಜೀವನಕ್ಕೆ ನಾಯಿಗಳನ್ನು ತನ್ನೊಂದಿಗೆ ಸೇರಿಸಿಕೊಂಡ; ಅವುಗಳ ಬದುಕನ್ನು ತನ್ನ ಅಗತ್ಯಕ್ಕೆ ತಕ್ಕಂತೆ ಪಳಗಿಸಿದ; ಮನುಷ್ಯನ ವಾಸಸ್ಥಳಗಳಿಗೆ, ಅಲೆದಾಟಕ್ಕೆ ಹೊಂದುವಂತೆ ಅವುಗಳನ್ನು ರೂಪಿಸಿದ. ನಿಯತ್ತಿಗೆ ಹೆಸರಾದ ಇಂತಹ ಪ್ರಾಣಿಗಳನ್ನು ಈಗ ‘ಮಾನವ ಜಗತ್ತಿಗೆ ಸೇರುವುದಿಲ್ಲ’ ಎಂದು ಬೀದಿಪಾಲು ಮಾಡಿರುವುದು ಅಮಾನವೀಯತೆ ಮತ್ತು ಮನುಷ್ಯನ ನೈತಿಕ ಅಧಃಪತನವೆನ್ನಬಹುದು.
ಭಾರತೀಯ ನಾಯಿ ತಳಿಗಳು ಬೀದಿಯಲ್ಲಿ ಶೋಷಣೆಗೆ ಒಳಗಾಗುತ್ತಿದ್ದರೆ, ವಿದೇಶಿ ನಾಯಿ ತಳಿಗಳು ಶ್ರೀಮಂತಿಕೆ, ಪ್ರತಿಷ್ಠೆಯ ಸಂಕೇತವಾಗಿ ಬಂಗಲೆಗಳಲ್ಲಿ ಸುರಕ್ಷಿತವಾಗಿವೆ. ದೇಸಿ ತಳಿಗಳಿಗೆ ಇಂದು ರಕ್ಷಕರಾಗಿರುವವರು ಹಳ್ಳಿಯವರು ಮತ್ತು ಬಡವರು ಮಾತ್ರ. ಇಂದು ಭಾರತದ ನಗರಗಳಲ್ಲಿ ಕಾಣುತ್ತಿರುವ ದೇಸಿ ನಾಯಿಗಳ ಕುರಿತಾದ ಈ ನಿರ್ಲಕ್ಷ್ಯಕ್ಕೆ ಒಂದು ಆಳವಾದ ಐತಿಹಾಸಿಕ ಕಾರಣವಿದೆ. ಅದು ವಸಾಹತು ಮನೋಭಾವ. ಬ್ರಿಟಿಷರ ಕಾಲದಲ್ಲಿ ವಿದೇಶಿ ನಾಯಿ ತಳಿಗಳನ್ನು ಉನ್ನತ ಸಂಸ್ಕೃತಿ, ಶಿಸ್ತು, ಮೇಲುಸ್ತರದ ಸಂಕೇತ ವಾಗಿ ಕಾಣಲಾಯಿತು. ಅದೇವೇಳೆ, ದೇಸಿ ತಳಿಗಳು ‘ಕಂತ್ರಿ’ ನಾಯಿಗಳೆನಿಸಿಕೊಂಡು ಬೀದಿಗೆ ಬಂದವು ಮತ್ತು ಬಡತನದ ಸಂತೇಕವಾದವು. ಈ ವಿಭಜನೆ ಜೈವಿಕವೇನಲ್ಲ, ಅಧಿಕಾರ ಮತ್ತು ಮೌಲ್ಯದ ರಾಜಕೀಯವೆನ್ನಬಹುದು. ಸ್ವಾತಂತ್ರ್ಯಾನಂತರವೂ ನಾವು ಈ ಅಸ್ವಸ್ಥ ಮನೋಭಾವವನ್ನು ಮುಂದು ವರಿಸಿದ್ದೇವೆ. ಇಂದು ನಮ್ಮ ದೇಸಿ ನಾಯಿಗಳು ಅಪರಾಧಿ ಸ್ಥಾನದಲ್ಲಿವೆ. ನಾವು ಹೆಮ್ಮೆಯಿಂದ ಹೇಳಿಕೊಳ್ಳುವ ‘ಸ್ವದೇಶಿ ಚಿಂತನೆ’ ದೇಸಿ ಜೀವಿಗಳಿಗೆ ಅನ್ವಯಿಸದಿರುವುದಕ್ಕೆ ಏನು ಹೇಳುವುದು?
ನಮ್ಮ ಧಾರ್ಮಿಕ–ಸಾಂಸ್ಕೃತಿಕ ಪರಂಪರೆ ವರ್ತಮಾನದ ಈ ಮನೋಭಾವಕ್ಕೆ ವಿರುದ್ಧ ವಾಗಿದೆ. ಇಂದು ‘ಅಲೋಕ’ ಬೌದ್ಧ ಭಿಕ್ಷುಗಳನ್ನು ಅನುಸರಿಸಿದಂತೆ, ಮಹಾಭಾರತದಲ್ಲಿ ಯುಧಿಷ್ಠಿರನು ಸ್ವರ್ಗಾರೋಹಣ ಮಾಡುವಾಗ ಅವನೊಂದಿಗೆ ಕೊನೆಯವರೆಗೆ ಪಯಣಿಸಿದ್ದು ಒಂದು ನಾಯಿ. ಇಂದ್ರ, ‘ನಾಯಿಯನ್ನು ಬಿಟ್ಟು ಸ್ವರ್ಗದೊಳಗೆ ಬಾ’ ಎಂದಾಗ ಯುಧಿಷ್ಠಿರ ಸ್ವರ್ಗದ ಪ್ರವೇಶವನ್ನೇ ನಿರಾಕರಿಸುತ್ತಾನೆ. ಆಶ್ರಿತಜೀವಿಯನ್ನು ಬಿಟ್ಟು ತನ್ನ ಸುಖಕ್ಕಾಗಿ ಮುಂದೆ ಹೋಗುವುದು ಅಧರ್ಮ ಎನ್ನುತ್ತಾನೆ. ಈ ಮೂಲಕ ವ್ಯಾಸರು ನಮಗೆ ಒಂದು ಉನ್ನತ ಸಂದೇಶ ನೀಡಿದ್ದಾರೆ. ಆದರೆ, ನಾವಿಂದು ಸಾವಿರಾರು ವರ್ಷಗಳಿಂದ ಮನುಷ್ಯನ ಸಂಗಾತಿಯಾಗಿದ್ದ ನಾಯಿಗಳನ್ನು ದೂರ ತಳ್ಳುತ್ತಿದ್ದೇವೆ. ಮಹಾಭಾರತದ ಕಥೆ ಬರೀ ಪುರಾಣವಲ್ಲ, ಅದು ಮನುಷ್ಯನ ನೈತಿಕ ಪರೀಕ್ಷೆ. ಧರ್ಮ ಎನ್ನುವುದು, ದುರ್ಬಲ ಜೀವಿಗಳೊಂದಿಗೆ ನಾವು ಹೇಗೆ ವರ್ತಿಸುತ್ತೇವೆ ಎನ್ನುವುದರಲ್ಲಿ ವ್ಯಕ್ತವಾಗುತ್ತದೆ.
ನಾಯಿಗಳ ಬಗ್ಗೆ ಮಾತನಾಡುವುದು ಒಂದು ರಮ್ಯ ಕಥನವೇನಲ್ಲ. ಅವುಗಳು ಬೀದಿಯಲ್ಲಿ ಓಡಾಡುವ ಅಮಾಯಕರ ಮೇಲೆ ಎರಗುತ್ತಿರುವುದು ವಾಸ್ತವ ಸಂಗತಿ. ಆದರೆ, ನಮ್ಮ ಬೀದಿನಾಯಿಗಳು ಯಾವ ಸಂದರ್ಭಗಳಲ್ಲಿ ಮನುಷ್ಯರ ಮೇಲೆ ದಾಳಿ ಮಾಡುತ್ತವೆ ಎನ್ನುವುದನ್ನು ಗಮನಿಸಬೇಕು. ಅಧ್ಯಯನಗಳು ಸ್ಪಷ್ಟವಾಗಿ ಹೇಳುವಂತೆ, ನಾಯಿಗಳೂ ಸೇರಿದಂತೆ ಪ್ರಾಣಿ–ಪಕ್ಷಿಗಳು ವಿನಾಕಾರಣ ಮನುಷ್ಯನ ಮೇಲೆ ದಾಳಿ ಮಾಡುವುದಿಲ್ಲ. ಹಸಿವಿನಿಂದ ತಹತಹಿಸುತ್ತಿರುವಾಗ ಮನುಷ್ಯನ ಕೈಯಲ್ಲಿ ಆಹಾರ ಕಂಡರೆ, ನೀರಿಗಾಗಿ ಹುಡುಕಾಡುತ್ತಿರುವಾಗ, ಮನುಷ್ಯರಿಂದ ಅಪಾಯದ ಸೂಚನೆ ಕಂಡುಬಂದಾಗ, ಮನುಷ್ಯನ ನಿರಂತರ ಹಿಂಸೆಗೆ ಪ್ರತಿಕ್ರಿಯೆಯಾಗಿ ಅಥವಾ ತಮ್ಮ ಮರಿಗಳನ್ನು ರಕ್ಷಿಸಲು, ಅವು ಮನುಷ್ಯಲೋಕದೊಂದಿಗೆ ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸುತ್ತವೆ. ನಾವು ಅದನ್ನು ‘ವಿನಾಕಾರಣ ಆಕ್ರಮಣ’ ಎಂದು ಬಿಂಬಿಸುತ್ತೇವೆ. ಅದೇ ವೇಳೆ ಅವುಗಳ ಮೇಲೆ ಮನುಷ್ಯ ವಿನಾಕಾರಣ ಮಾಡುವ ಕ್ರೌರ್ಯವನ್ನು ವರದಿ ಮಾಡುವುದಿಲ್ಲ. ಪ್ರಸ್ತುತ ಬಹುತೇಕ ಭಾರತೀಯ ಬೀದಿನಾಯಿಗಳು ಪ್ಲಾಸ್ಟಿಕ್ ಮಿಶ್ರಿತ ತ್ಯಾಜ್ಯ ಆಹಾರದ ತುಣುಕುಗಳನ್ನು ನೆಚ್ಚಿಕೊಂಡಿವೆ ಅಥವಾ ದಿನಗಟ್ಟಲೆ ನೀರು ಮತ್ತು ಆಹಾರ ಸಿಗದೇ ಹೈರಾಣಾಗಿ ಬದುಕುತ್ತಿವೆ. ಹಾಗಾಗಿ, ಅವುಗಳ ಆಕ್ರಮಣವನ್ನು ಸ್ವಲ್ಪ ಮಾನವೀಯತೆಯಿಂದ ನೋಡಬೇಕಾದ ಅನಿವಾರ್ಯತೆಯಿದೆ. ಇಂದು, ಜಗತ್ತನ್ನು ಆಳುತ್ತಿರುವ ಮನುಷ್ಯನು ನಾಯಿಗಳ ಆಕ್ರಮಣಕ್ಕೆ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಬೇಕಾದ ಜವಾಬ್ದಾರಿಯ ಸ್ಥಾನದಲ್ಲಿದ್ದಾನೆ.
ಇಂದು ನಾವು ಎದುರಿಸುತ್ತಿರುವುದು ನಾಯಿಗಳ ಸಮಸ್ಯೆ ಅಥವಾ ಮಾಧ್ಯಮಗಳು ಒಟ್ಟಾರೆಯಾಗಿ ಬಿಂಬಿಸುತ್ತಿರುವ ‘ಮಾನವ–ಉಳಿದ ಜೀವಿಗಳ ಸಂಘರ್ಷ’ ಎನ್ನುವುದು ನಾವು ವಿವೇಕವಿಲ್ಲದೆ ಪೋಷಿಸುತ್ತಿರುವ ಆಡಳಿತದ ವೈಫಲ್ಯವಷ್ಟೇ. ಕಾಡಿನ ಪ್ರಾಣಿಗಳು ಅಲ್ಲಿ ಬದುಕಲಾರದಂತೆ ಕಾಡುಗಳು ಬೋಳಾಗಿವೆ. ನಾಡನ್ನು ಆಶ್ರಯಿಸಿರುವ ನಾಯಿ ಮತ್ತು ಇತರ ಮಾನವ ಅವಲಂಬಿತ ಪ್ರಾಣಿಗಳು ನಮ್ಮ ‘ಪ್ರಗತಿ ಪಥ’ಕ್ಕೆ ಅಡ್ಡಿಯಾಗಿವೆ. ಈ ನಿಟ್ಟಿನಲ್ಲಿ, ಜಗತ್ತೆಂದರೆ ಕೇವಲ ಮನುಷ್ಯನ ಐಷಾರಾಮಕ್ಕೆ ಮಾತ್ರವಲ್ಲ, ಉಳಿದ ಜೀವಿಗಳಿಗೂ ಸಮಾನ ಹಕ್ಕಿದೆ ಎನ್ನುವುದು ನಮಗೆ ಅರಿವಾಗಬೇಕಾಗಿದೆ. ತನ್ನ ಸಂತತಿಯ ಅಭಿವೃದ್ಧಿಯತ್ತ ಮಾತ್ರ ಗಮನ ಹರಿಸುವ ಮನುಷ್ಯ, ಉಳಿದ ಜೀವಿಗಳ ಬದುಕನ್ನು ಕಿತ್ತುಕೊಂಡಿರುವ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ನಮ್ಮ ನಾಯಿ ಗಳಿಗೆ ಇಂದು ಬೇಕಾಗಿರುವುದು ಸರಿಯಾದ ಲಸಿಕೆ, ಮತ್ತು ಜನನ ನಿಯಂತ್ರಣ ಶಸ್ತ್ರಚಿಕಿತ್ಸೆ. ಇದರೊಂದಿಗೆ ಪ್ರಾಣಿಪ್ರಿಯರು ದೇಸಿ ನಾಯಿಗಳನ್ನು ದತ್ತು ಪಡೆ ಯಲು ಮುಂದೆ ಬರಬೇಕಾಗಿದೆ. ಅವುಗಳಿಗೆ ಬೇಕಾಗಿ ರುವುದು ಒಂದಿಷ್ಟು ಆಹಾರ ಮತ್ತು ಪ್ರೀತಿ ಅಷ್ಟೇ.
ಸರಳ ಪರಿಹಾರ ಮಾರ್ಗಗಳ ಬದಲಾಗಿ ನಾವಿಂದು ಕ್ರೌರ್ಯದ ಮೂಲಕ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಶಿಕ್ಷಣ ಸಂಸ್ಥೆಗಳೂ ಜವಾಬ್ದಾರಿ ವಹಿಸಬೇಕಾದ ಸ್ಥಾನದಲ್ಲಿವೆ. ಶಾಲಾ–ಕಾಲೇಜುಗಳು ಶುಷ್ಕ ಪಠ್ಯವನ್ನು ಪಠಿಸುವ ಕಟ್ಟಡಗಳಲ್ಲ. ಅವು ಮೌಲ್ಯಗಳನ್ನು ಕಲಿಸುವ ಆಲಯಗಳು. ಪ್ರಾಣಿಗಳನ್ನು ಶಾಲಾ–ಕಾಲೇಜುಗಳ ಆವರಣಗಳಿಂದ ಹೊರದಬ್ಬುವ ಮೂಲಕ ನಾವು ಮಕ್ಕಳಿಗೆ ಹೇಳಿಕೊಡುವ ಪಾಠವೇನು? ಇಂದಿನ ಮಕ್ಕಳು, ಉಸಿರಾಡುತ್ತಿರುವ ಜೀವಿಗಳಿಗಿಂತ ಹೆಚ್ಚಾಗಿ, ನಿರ್ಜೀವ ಯಂತ್ರಗಳಿಗೆ ಹತ್ತಿರವಾಗುತ್ತಿದ್ದಾರೆ. ಯಂತ್ರಗಳು ಸಹಾನುಭೂತಿ ಕಲಿಸುವುದಿಲ್ಲ. ಜೀವವಿರುವ ಪ್ರಾಣಿ–ಪಕ್ಷಿಗಳು ಪ್ರೀತಿಯನ್ನು ಕಲಿಸುತ್ತವೆ. ನಾಯಿಗಳಂತೂ ಪ್ರತಿಫಲ ಬೇಡದೆ ನಮ್ಮ ಜೊತೆಗಿರುತ್ತವೆ. ಇಂತಹ ಸಂಬಂಧಗಳಿಂದ ಮಕ್ಕಳನ್ನು ದೂರಮಾಡುವುದು ಅವರನ್ನು ಹೆಚ್ಚು ಯಾಂತ್ರಿಕವಾಗಿ, ಕಡಿಮೆ ಮನುಷ್ಯರನ್ನಾಗಿ ಮಾಡುತ್ತದೆ.
ಗಾಂಧಿ ಹೇಳಿದಂತೆ, ಒಂದು ರಾಷ್ಟ್ರದ ನೈತಿಕ ಪ್ರಗತಿ, ಅದು ಪ್ರಾಣಿಗಳೊಂದಿಗೆ ಹೇಗೆ ವರ್ತಿಸುತ್ತದೆ ಎನ್ನುವುದರಿಂದ ಅಳೆಯಬಹುದು. ಅಂಬೇಡ್ಕರ್ ಕೂಡ ಒಂದು ಸಮಾಜದ ಶ್ರೇಷ್ಠತೆಯನ್ನು ದುರ್ಬಲರ ಮೇಲಿನ ವರ್ತನೆಯಿಂದಲೇ ಅಳೆಯಬೇಕು ಎಂದು ಹೇಳಿದ್ದರು. ಇಂದು ಬೀದಿನಾಯಿಗಳ ಮೇಲೆ ದಯೆ ತೋರಿಸುವುದು ಭಾವನಾತ್ಮಕ ರಮ್ಯತೆಯಲ್ಲ; ಅದು ನಮ್ಮ ಐತಿಹಾಸಿಕ ಜವಾಬ್ದಾರಿ. ನಾವು ಅವುಗಳನ್ನು ನಮ್ಮ ಸಹಾಯಕ್ಕಾಗಿ, ರಕ್ಷಣೆಗಾಗಿ, ಸಾಂಗತ್ಯಕ್ಕಾಗಿ ಮನುಷ್ಯ ಜಗತ್ತಿಗೆ ಕರೆ ತಂದಿದ್ದೇವೆ ಎನ್ನುವುದನ್ನು ಮರೆಯಬಾರದು. ಅವುಗಳನ್ನು ನಿರ್ದಾಕ್ಷಿಣ್ಯವಾಗಿ ತಳ್ಳಿಹಾಕುವ ಹಕ್ಕು ನಮಗಿಲ್ಲ. ಅಂದು ಯುಧಿಷ್ಠಿರನೊಂದಿಗೆ ಹೆಜ್ಜೆಹಾಕಿದ ದೇಸಿ ನಾಯಿ ಇಂದು ಅಮೆರಿಕದಲ್ಲಿ ಬೌದ್ಧ ಭಿಕ್ಕುಗಳೊಂದಿಗೆ ಶಾಂತಿ ಮತ್ತು ಸಹಬಾಳ್ವೆಯ ಸಂದೇಶದೊಂದಿಗೆ ನಡೆಯುತ್ತಿದೆ.
ನಮ್ಮ ಬೀದಿನಾಯಿಗಳು ಹಸಿದಿವೆ, ಆದರೂ ನಿಷ್ಠಾವಂತವಾಗಿವೆ. ಒಂದು ಕಾಲದಲ್ಲಿ ನಮಗೆ ಅವುಗಳ ಅಗತ್ಯವಿದ್ದಂತೆ, ಈಗ ಅವುಗಳಿಗೆ ನಮ್ಮ ಅಗತ್ಯ ಹೆಚ್ಚಾಗಿದೆ. ನಾವು ಯಾರನ್ನು ರಕ್ಷಿಸುತ್ತಿದ್ದೇವೆ, ಯಾರನ್ನು ಹೊರಹಾಕುತ್ತೇವೆ ಎನ್ನುವುದು ಸಮಾಜದ ಮೌಲ್ಯಗಳನ್ನು ನಿರ್ಧರಿಸುತ್ತದೆ. ಬೀದಿನಾಯಿಗಳು ನಮ್ಮ ಆಡಳಿತ ವೈಫಲ್ಯದ ಜೀವಂತ ಸಾಕ್ಷಿಗಳು. ಅವುಗಳ ಅಸ್ತಿತ್ವವನ್ನು ಅಳಿಸಿಹಾಕುವ ಮೂಲಕ ನಾವು ನಮ್ಮ ತಪ್ಪುಗಳನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದೇವೆ. ಮಾನವ ಕೇಂದ್ರಿತ ಅಭಿವೃದ್ಧಿಯ ಈ ಕಾಲಘಟ್ಟದಲ್ಲಿ, ಎಲ್ಲವೂ ಮಾನವನ ಅನುಕೂಲಕ್ಕಾಗಿ ಮಾತ್ರ ಎನ್ನುವ ಮನೋಭಾವ ಬೇರೂರಿದೆ. ನಾಗರಿಕತೆ ಎನ್ನುವುದು ಇತರ ಜೀವಿಗಳಿಗೆ ಸ್ಥಳವಿಲ್ಲದ ವ್ಯವಸ್ಥೆಯಲ್ಲ; ಅದು ಸ್ಥಳ ಹಂಚಿಕೊಳ್ಳುವ ವಿವೇಕ. ಇಂದಿನ ಮಕ್ಕಳಿಗೆ ನಾವು ಕಲಿಸಬೇಕಾದ ಪಾಠ ಇದಾಗಿದೆ: ಭಯಕ್ಕಿಂತ ಅರಿವು ಶ್ರೇಷ್ಠ, ಅಧಿಕಾರಕ್ಕಿಂತ ಜವಾಬ್ದಾರಿ ಶ್ರೇಷ್ಠ, ಸೌಕರ್ಯಕ್ಕಿಂತ ಸಹಾನುಭೂತಿ ಶ್ರೇಷ್ಠ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.