ADVERTISEMENT

ಹದಿವಯಸ್ಸು: ಹೊಸಿಲ ಮೇಲಿನ ಬೆಕ್ಕು

ಕಟ್ಟಿಟ್ಟಷ್ಟೂ ಕಿತ್ತು ಕಳಚಿಕೊಳ್ಳುವ ಹಂಬಲ ಮಕ್ಕಳಲ್ಲಿ ಹೆಚ್ಚು

ಎಚ್.ಎಸ್.ಅನುಪಮಾ
Published 5 ಡಿಸೆಂಬರ್ 2022, 4:09 IST
Last Updated 5 ಡಿಸೆಂಬರ್ 2022, 4:09 IST
anupama
anupama   

ನೆನಪು ಮಾಡಿಕೊಳ್ಳಿ. ಇದೇ ಜುಲೈನಲ್ಲಿ ಕೇರಳದ 13 ವರ್ಷದ ಬಾಲೆಯು ಬಾಲಕನಾದ ತನ್ನ ಅಣ್ಣನಿಂದಲೇ ಗರ್ಭಿಣಿಯಾದಳು. ಗರ್ಭಪಾತ ಮಾಡಿಸಲು ಅವಳ ಅಮ್ಮ ಆಸ್ಪತ್ರೆಗೆ ಅಲೆದಲೆದು, ಅದು ಪೋಕ್ಸೊ ಆಗಿದ್ದರಿಂದ ಪೊಲೀಸ್ ಪ್ರಕರಣವಾಗಿ, ಗರ್ಭಪಾತಕ್ಕೆ ಅನುಮತಿ ಪಡೆಯಲು ವಿಳಂಬವಾಗಿ ಕೊನೆಗೆ ಹೈಕೋರ್ಟ್‌ಗೆ ಹೋಗಬೇಕಾಯಿತು. ನ್ಯಾಯಾಲಯವು ಪ್ರಕರಣವನ್ನು
ಗಂಭೀರವಾಗಿ ಪರಿಗಣಿಸಿ, ತಕ್ಷಣ ಗರ್ಭಪಾತಕ್ಕೆ ಅನುಮತಿ ನೀಡಿತು. ಅಷ್ಟರಲ್ಲಿ ಅವಳು ಏಳೂವರೆ ತಿಂಗಳ ಗರ್ಭಿಣಿಯಾಗಿದ್ದಳು!

ಕೇರಳವೇಕೆ? ಗರ್ಭ ಧರಿಸಿದ ಎಷ್ಟೋ ಎಳೆಯ ಹುಡುಗಿಯರು, ಸಣ್ಣ ಹಳ್ಳಿಯಲ್ಲಿ ವೈದ್ಯ ವೃತ್ತಿ ನಡೆಸುವ ನನ್ನಂತಹವರ ಬಳಿಯೂ ಬರುತ್ತಾರೆ. ‘ಮನ್ಲಿ ಯಾರ್‍ಗೂ ತಿಳಿಸ್ಬೇಡಿ ಪ್ಲೀಸ್’ ಎಂಬ ಒಂದೇ ಕಾಳಜಿ ಅವರಿಗೆ. ಹಿರಿಯರಾದ ನಾವು ಹೇಳುವುದು ಒಂದು ಮಾಡುವುದು ಇನ್ನೊಂದು ಆಗಿ ಹೊಸ ಪೀಳಿಗೆಯನ್ನು ಈ ದಿಕ್ಕಿಗೆ ಒಯ್ಯುತ್ತಿದ್ದೇವೆ.

ಹೀಗಿರುತ್ತ ಒಂಬತ್ತನೆಯ ತರಗತಿ ಹುಡುಗರ ಪಾಟಿಚೀಲದೊಳಗೆ ಕಾಂಡೋಮ್, ಹುಡುಗಿಯ ಚೀಲದಲ್ಲಿ ಗರ್ಭನಿರೋಧಕ ಗುಳಿಗೆಗಳು ಇರುವ ಸುದ್ದಿ ಓದಿದಾಗ, ಗರ್ಭ ಕಟ್ಟದಂತೆ ಯೋಜಿತವಾಗಿ ಕ್ರಮ ತೆಗೆದು
ಕೊಂಡಿದ್ದಾರೆ ಎಂಬುದು ಗಮನಕ್ಕೆ ಬರುತ್ತದೆ. ಈ ಪ್ರಸಂಗವು ಹದಿಹರೆಯದವರ ಬಗೆಗೆ, ಅವರನ್ನು ನಾವೆತ್ತ ಒಯ್ಯುತ್ತಿದ್ದೇವೆ ಎಂಬುದರ ಬಗೆಗೆ ಕನಿಷ್ಠ ಚರ್ಚೆಯನ್ನಾದರೂ ಹುಟ್ಟುಹಾಕೀತೇ ಎಂಬ ನಿರೀಕ್ಷೆ ಮೂಡಿಸಿತು.

ADVERTISEMENT

ಹದಿವಯಸ್ಸಿನಲ್ಲಿ ಮಕ್ಕಳನ್ನು ಕಾಡುವ ಬಹುಮುಖ್ಯ ಸಂಗತಿ ಕಾಮ. ಹಾಗೇನಿಲ್ಲ ಎಂಬ ಸುಳ್ಳನ್ನು ನಮಗೆ ನಾವೇ ಪದೇಪದೇ ಹೇಳಿಕೊಂಡಿದ್ದೇವೆ. ಅವರಿಗೂ ಪದೇಪದೇ ಹೇಳಿದ್ದೇವೆ. ಆದರೆ ಮಗುವಿನ ‘ಸ್ವ’ ಅರಿವಿನ ಬೆಳವಣಿಗೆಯಲ್ಲಿ ದೇಹದ ಅಂಗಾಂಗಗಳು ಮತ್ತು ಅವು ನೀಡುವ ಅನುಭವಗಳು ಮುಖ್ಯ ಪಾತ್ರ ವಹಿಸುತ್ತವೆ. ಅದರಲ್ಲೂ ಹದಿಹರೆಯದ ಕಾಯದ ತಳಮಳವೆಂದರೆ ಸಾಮಾನ್ಯವಲ್ಲ. ಆಸ್ಫೋಟಿಸಲು ಸಿದ್ಧವಾದ ಜ್ವಾಲಾಮುಖಿ ಅದು. ಸಾಧಕಬಾಧಕಗಳ ಯೋಚಿಸದೆ ನೋಡಿಯೇ ಬಿಡುವ ಹುಚ್ಚುಹುಮ್ಮಸ್ಸು ಇರುತ್ತದೆ. ಅದಕ್ಕೆ ಸರಿಯಾಗಿ ಕೋವಿಡ್ ಕಾಲದಲ್ಲಿ ಶಾಲೆಗಳು ನಡೆಯದೇ ಮಕ್ಕಳು ವರ್ಷಗಟ್ಟಲೆ ಮನೆಯಲ್ಲಿ ಕುಳಿತರು. ಅವರನ್ನು ರಕ್ಷಿಸಲು ತಾನೇನೋ ದೊಡ್ಡ ಸಾಧನೆ ಮಾಡುತ್ತಿರುವೆನೆಂದು ಶಿಕ್ಷಣ ಇಲಾಖೆಯು ಆನ್‍ಲೈನ್ ಪಾಠದ ವ್ಯವಸ್ಥೆ ಮಾಡಿತು. ಯಾವ ಮೊಬೈಲನ್ನು ಮಕ್ಕಳ ಕೈಗೆ ಕೊಡಬೇಡಿ ಎನ್ನುತ್ತಿ
ದ್ದೆವೋ ಅದು ಅನಿವಾರ್ಯವಾಗಿ, ಅನಾಯಾಸವಾಗಿ ಅವರ ಕೈ ಸೇರಿತು. ಏನನ್ನು ಬೇಕಾದರೂ ಎಷ್ಟು ಹೊತ್ತಾದರೂ ನೋಡಬಹುದಾದ ಉಚಿತ ಇಂಟರ್‌ನೆಟ್. ಅಲ್ಲಿ ಅವರೆದುರು ತೆರೆದುಕೊಳ್ಳುವ ಲೋಕವಾದರೂ ಎಂಥದು? ಉಚಿತ ನೀಲಿಚಿತ್ರಗಳ ವಿಡಿಯೊ, ನಗ್ನಚಿತ್ರಗಳ ಸಂತೆ. ಸುದ್ದಿಯಲ್ಲಿ ಕಾಮುಕ ಸ್ವಾಮಿಗಳು, ಕಾಮುಕ ರಾಜಕಾರಣಿಗಳು, ಅತ್ಯಾಚಾರ ಪ್ರಕರಣಗಳು, ಬೆಲ್ಲಿ ಡ್ಯಾನ್ಸು, ಐಟಂ ಸಾಂಗುಗಳು. ಸಿನಿಮಾ- ಧಾರಾವಾಹಿಗಳಲ್ಲೂ ಪ್ರೇಮ, ಸಲ್ಲಾಪ.

ಅವರ ಕಣ್ಣೆದುರಿಗೆ ಮೈನವಿರೇಳಿಸುವ, ಕಿವಿ ಬೆಚ್ಚಗಾಗಿಸುವ ಇಂಥವನ್ನೇ ಗುಡ್ಡೆ ಹಾಕಿ, ‘ಇಲ್ಲ ಇಲ್ಲ, ಆ ಕಡೆ ಮಕ ತಿರುಗಿಸ್ಬೇಡ ಮಗಾ, ಅದು ಒಳ್ಳೇದಲ್ಲ, ಈ ಕಡೆ ನೋಡು’ ಎಂದರೆ ಅವರು ಮುದ್ದಾಂ ಆ ಕಡೆಗೇ ನೋಡುತ್ತಾರೆ. ಉಲ್ಲಂಘನೆಯ ಸೆಳೆತ ಸಾಮಾನ್ಯ
ವಾದದ್ದಲ್ಲ. ತಪ್ಪುತಪ್ಪು ಅಭಿಪ್ರಾಯ, ಕಲ್ಪನೆ, ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. ಅಂತಹ ಪ್ರಚೋದನೆ ಗಳ ಗೀಳಿಗೆ ಒಳಗಾಗದಂತೆ ನಾವೇನು ಮಾಡಿದ್ದೇವೆ? ಅವರೆದುರು ನೀತಿಕಥೆಗಳ ಸರಿತಪ್ಪು ಜಾಲ ಹೆಣೆದಿದ್ದೇವೆ. ಅತಿನಿರೀಕ್ಷೆಯ ಬೆಟ್ಟವನ್ನು ನಿಲ್ಲಿಸಿದ್ದೇವೆ. ಏರಲಾಗದ ಎತ್ತರಗಳ ಕಡೆಗೆ ದಬ್ಬುತ್ತಿದ್ದೇವೆ. ರಾಜಕಾರಣದ ಹಗೆಯ ಹೊಗೆಯನ್ನು ಪಠ್ಯದ ಮೂಲಕ ತುಂಬಿಸಲು
ಉತ್ಸುಕರಾಗಿದ್ದೇವೆ.

ಇದರ ನಡುವೆ ಅವರ ಲೈಂಗಿಕತೆ, ಸಹಜ- ಅಸಹಜ ಕಾಮನೆಗಳು, ನಿರಪಾಯಕಾರಿ ಪರಿಹಾರಗಳನ್ನು ಹೇಳುವ ಲೈಂಗಿಕ ಶಿಕ್ಷಣದ ಬಗೆಗೆ ಯೋಚನೆಗಳೇ ಇಲ್ಲ. ಯೋಚಿಸಿದರೂ ಹುಶ್‌ಶ್!

ತತ್ಪರಿಣಾಮವಾಗಿ, ‘ದೊಡ್ಡವರು’ ಎನಿಸಿಕೊಂಡ ನಮ್ಮ ಅಜ್ಞಾನ, ಅಹಮು, ದರ್ಪವು ಮಕ್ಕಳನ್ನು ನಮ್ಮಿಂದ ದೂರ ಮಾಡಿವೆ.

ಅವಿಭಜಿತ ಕುಟುಂಬಗಳು ಕಡಿಮೆಯಾಗಿ ಸಂಸಾರ ಸಣ್ಣದಾಗಿರುವ ಈ ಕಾಲದಲ್ಲೂ ಭಾರತೀಯ ಕುಟುಂಬ ಶ್ರೇಣೀಕೃತ ವ್ಯವಸ್ಥೆಯಾಗಿದೆ. ಅಲ್ಲಿ ಮಕ್ಕಳು, ಮಹಿಳೆಯರು ಅಧಿಕಾರಹೀನರಾಗಿ ಮುಂದುವರಿದಿದ್ದಾರೆ. ಅದರಲ್ಲೂ
ಮಕ್ಕಳೆಂದರೆ ಮಾತು ಕೇಳಬೇಕಾದವರು, ವಿಧೇಯರಾಗಿ ಹ್ಞೂಂ ಎನ್ನಬೇಕಾದವರು. ಅವರ ಅಭಿಪ್ರಾಯವನ್ನೂ
ಕೇಳುವ, ಅದಕ್ಕೆ ಬೆಲೆ ಕೊಡುವ ಡೆಮಾಕ್ರೆಟಿಕ್ ಮೌಲ್ಯ ಇಲ್ಲವೇ ಇಲ್ಲ ಎನ್ನಬಹುದು. ಸಣ್ಣವರಿದ್ದಾಗ ಎತ್ತಿ ಮುದ್ದಾಡಿ ಬೆಳೆಸಿದ ಮಕ್ಕಳು ಹದಿಹರೆಯದವರಾದದ್ದೇ ಅವರನ್ನು ನಿಯಂತ್ರಿಸುವ ಹುಕಿ ನಮ್ಮಲ್ಲಿ ಜೋರಾಗುತ್ತದೆ, ಅವರಿಗೆ ಕಟ್ಟು ಕಿತ್ತುಕೊಳ್ಳುವ ಹುಮ್ಮಸ್ಸು ಉಕ್ಕುತ್ತದೆ. ಇದರ ನಡುವೆ ಮಕ್ಕಳನ್ನು ಪ್ರೀತಿ ಹಾಗೂ ವಾತ್ಸಲ್ಯದಿಂದ ಅಪ್ಪುವ, ಮುಟ್ಟುವ ಸ್ಪರ್ಶದ ರೂಢಿಯನ್ನು
ಬಿಡುತ್ತೇವೆ.

ನಗರದ ವೇಗದ ಜೀವನದಲ್ಲಿರಲಿ, ಡೆಡ್‍ಲೈನುಗಳ ಸಿರಿವಂತ ಪಾಲಕರಲ್ಲಿರಲಿ, ಹೊಟ್ಟೆ ತುಂಬಿಸಲು ಕಷ್ಟ ಪಡಬೇಕಾದ ಗ್ರಾಮೀಣ- ಕೆಳವರ್ಗಗಳಲ್ಲಿರಲಿ- ಮಕ್ಕಳ ಮಾತನ್ನು ಆಪ್ತವಾಗಿ, ಪ್ರೀತಿಯಿಂದ, ತಾಳ್ಮೆಯಿಂದ ಕೇಳುವ ವಾತಾವರಣವೇ ಇಲ್ಲವಾಗಿದೆ. ಪಾಲಕರ ನಿರೀಕ್ಷೆಗಳ ಭಾರಕ್ಕೆ ಕುಸಿಯುವ ಮಕ್ಕಳು ಬೆಳೆಯುತ್ತ ಹೋದಂತೆ ಏಕಾಂಗಿಗಳಾಗುತ್ತಿದ್ದಾರೆ. ಅವರ ಕಾಯದ, ವಯಸ್ಸಿನ, ವಾಸ್ತವದ ಸಂಕಟಗಳನ್ನು ತೋಡಿಕೊಳ್ಳುವ ಅವಕಾಶ ಮನೆಯಲ್ಲಿ ಇರುವುದಿಲ್ಲ. ಎಂದೇ ನಮ್ಮ, ಅವರ ನಡುವಿನ ತಲೆಮಾರಿನ ಕಂದಕ ದೊಡ್ಡದಾಗಿದೆ.

ಮನೆಯ ಕತೆ ಹೀಗಾಯಿತು. ಇನ್ನು ಅವರ ತಿಳಿವು ಹೆಚ್ಚಿಸಬೇಕಾದ ಶಾಲೆಯಲ್ಲಿ ಗುರುವೃಂದದ ಬಳಿ ಸ್ನೇಹದ ವಾತಾವರಣವಿದೆಯೆ? ಅಲ್ಲೂ ಯಶಸ್ಸನ್ನು ಅಂಕಗಳಲ್ಲಿ ಅಳೆಯುವ ವಾತಾವರಣ. ಹೀಗಿರುತ್ತ ಹದಿವಯಸ್ಸಿನ ಹುಡುಗಿ, ಹುಡುಗ ತಮ್ಮ ಕಾಯದ ತಳಮಳ, ಕುತೂಹಲ, ಸಾಹಸ, ಸಂಶಯಗಳನ್ನು ಯಾರ ಬಳಿ ಹೇಳುವುದು? ಕದ್ದುಮುಚ್ಚಿ ಅವರೋದುವ ನೀಲಿ ಸಾಹಿತ್ಯ, ನೋಡುವ ನೀಲಿಚಿತ್ರಗಳು ಮತ್ತು ಅವರಷ್ಟೇ ಜ್ಞಾನಿಗಳೂ ಅಜ್ಞಾನಿಗಳೂ ಆಗಿರುವ ಸಹಪಾಠಿಗಳೇ ಅವರ ಜ್ಞಾನಮೂಲಗಳು.

ಇಷ್ಟು ಹೇಳಿದ್ದೇ ಕೆಲವರು ಅತಿ ಸಂಪ್ರದಾಯವಾದಿ ನಿಲುವು ತಳೆದು ಹುಡುಗಿಯರನ್ನು ಹುಡುಗಿಯರ ಶಾಲೆಕಾಲೇಜಿಗೇ ಕಳಿಸುವ ನಿರ್ಧಾರ ತಳೆಯುತ್ತಾರೆ. ಆರೋಪದ ಮುಳ್ಳು ತಾಯಿಯೆಡೆಗೆ ಬಂದು ನಿಲ್ಲುತ್ತದೆ. ಮಕ್ಕಳನ್ನು ಇನ್ನಷ್ಟು ಕಟ್ಟುನಿಟ್ಟು ಬಂಧಕ್ಕೆ ಒಡ್ಡುತ್ತಾರೆ. ಆದರೆ ಕಟ್ಟಿಟ್ಟಷ್ಟೂ ಕಿತ್ತು ಕಳಚಿಕೊಳ್ಳುವ ಹಂಬಲ ಹೆಚ್ಚುತ್ತದೆ. ಬಂಧಿತ ಅನುಭವದ ನಡುವೆ ಬೇರಾರೋ ಒಬ್ಬರು ಮೈಸವರಿ, ಎರಡು ಒಳ್ಳೆಯ ಮಾತಾಡಿಬಿಟ್ಟರೆ ಬಹು ಸುಲಭವಾಗಿ ಅವರ ಪ್ರಭಾವಕ್ಕೆ
ಒಳಗಾಗಿಬಿಡುತ್ತಾರೆ.

ನಮ್ಮ ಮಕ್ಕಳನ್ನು ಹೇಗೆ ಮಕ್ಕಳಾಗಿ ಉಳಿಸಿಕೊಳ್ಳುವುದು? ದಾರಿ ಸುಲಭ. ಅವರನ್ನು ನಮ್ಮ ಅಹಮಿನ ವಿಸ್ತಾರದಂತೆ ನೋಡದೆ ಲೋಕದ ನಾಳೆಯಂತೆ ನೋಡಬೇಕು. ಅತಿಸಹಜವಾಗಿ, ಪ್ರಾಮಾಣಿಕವಾಗಿ ಅವರೊಡನೆ ವರ್ತಿಸಬೇಕು. ಮುಕ್ತವಾಗಿ ಮಾತನಾಡಲು ಬಿಟ್ಟು ಅವರ ಮನಸ್ಸು ಅರಿಯಬೇಕು. ಅವರೆದುರಿಗೆ ಮಾದರಿಯಾಗಿ ಬದುಕು ನಡೆಸಬೇಕು. ಸ್ವಾತಂತ್ರ್ಯ- ಸಮಾನತೆ- ಭ್ರಾತೃತ್ವ (ಆಪ್ತತೆ) ಎಂಬ ಸಾಂವಿಧಾನಿಕ ಮೌಲ್ಯಗಳನ್ನು ನಮ್ಮ ಮನೆಯಲ್ಲೂ ಮಕ್ಕಳ ವಿಷಯದಲ್ಲೂ ಜಾರಿಗೆ ತರಬೇಕು.

ಇಷ್ಟಾದಮೇಲೂ ಅನಪೇಕ್ಷಿತವಾದದ್ದು ಸಂಭವಿಸಿದರೆ, ಬದಲಾವಣೆ ಸಂಭವಿಸುವ ಸಂಕ್ರಮಣ ಕಾಲಘಟ್ಟದ ಅನಿವಾರ್ಯ ದರ್ದು ಎಂದೇ ತಿಳಿಯಬೇಕು.

ಎಷ್ಟು ಸುಲಭ! ಎಷ್ಟು ಕಷ್ಟ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.