ADVERTISEMENT

ವಿಶ್ಲೇಷಣೆ: ಹವಾಗುಣ ಮತ್ತು ಅನುದಾನದ ಮಹತ್ವ

ಅರಣ್ಯ, ವನ್ಯಜೀವಿ ಸಂರಕ್ಷಣಾ ಕಾರ್ಯ ಅನುದಾನದ ಕೊರತೆಯಿಂದ ಸೊರಗುವ ಆತಂಕವಿದೆ

ಅಖಿಲೇಶ್ ಚಿಪ್ಪಳಿ
Published 25 ಫೆಬ್ರುವರಿ 2021, 21:00 IST
Last Updated 25 ಫೆಬ್ರುವರಿ 2021, 21:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಸ್ವಾತಂತ್ರ್ಯೋತ್ತರ ಭಾರತವು ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಬ್ರಿಟಿಷರ ಆಳ್ವಿಕೆ ಕೊನೆಗೊಂಡ ಮೇಲೆ ದೇಶ ಹಲವು ಸ್ತರದ ಅಭಿವೃದ್ಧಿಗಳನ್ನು ಕಂಡಿದೆ. ಆಹಾರಭದ್ರತೆಯ ವಿಷಯ
ದಲ್ಲಿ ಸ್ವಾವಲಂಬನೆ ಹೊಂದಿದೆ. ದೇಶದ ಉದ್ದಗಲಕ್ಕೂ ರೈಲು ಹಳಿಗಳು ಚಾಚಿಕೊಂಡಿವೆ. ರಸ್ತೆಗಳು, ಹೆದ್ದಾರಿಗಳು ಸುಗಮ ಸಂಚಾರಕ್ಕೆ ನಾಂದಿ ಹಾಡಿವೆ. ಶಿಕ್ಷಣ ಕ್ಷೇತ್ರ ಬಲವೃದ್ಧಿಗೊಂಡಿದೆ. ನೆಲ-ಜಲ-ಆಕಾಶ ಮಾರ್ಗಗಳು, ದೇಶದ ಭದ್ರತೆ ಹೀಗೆ ಪ್ರತಿಯೊಂದು ಕ್ಷೇತ್ರವೂ ಉತ್ತಮಗೊಳ್ಳುತ್ತಾ ಸಾಗಿದೆ. ಜನಸಂಖ್ಯಾ ಸ್ಫೋಟ ಮತ್ತು ಮಾನವಕೇಂದ್ರಿತ ಅಭಿವೃದ್ಧಿಯೆಂಬ ಮಹಾ ಕತ್ತರಿಗಳು ಬಾಳೆದಿಂಡಿನಷ್ಟು ನಾಜೂಕಾದ ‘ಪರಿಸರ’ವನ್ನು ನಿರ್ದಯವಾಗಿ ಕತ್ತರಿಸುತ್ತಿವೆ.

ಆಯಾ ಕಾಲಕ್ಕೆ ಆಳಿದ ಸರ್ಕಾರಗಳು ದೇಶದ ಒಳಿತಿಗಾಗಿ ‘ಪರಿಸರ, ವನ್ಯಜೀವಿ, ಜೀವಿವೈವಿಧ್ಯ’ಗಳನ್ನು ರಕ್ಷಿಸುವಲ್ಲಿ ತಮ್ಮದೇ ಕೊಡುಗೆ ನೀಡಿವೆ. ರಾಷ್ಟ್ರೀಯ ಅರಣ್ಯ ನೀತಿ– 1988ರ ಪ್ರಕಾರ, ದೇಶದ ಗುಡ್ಡಗಾಡು
ಗಳಲ್ಲಿ ಶೇ 66 ಮತ್ತು ಸಮತಟ್ಟಾದ ಪ್ರದೇಶದಲ್ಲಿ ಶೇ 33ರಷ್ಟು ಅರಣ್ಯ ಪ್ರದೇಶವಿರಬೇಕು. ಇಷ್ಟು ಪ್ರಮಾಣದ ಅರಣ್ಯ ಪ್ರದೇಶಗಳು ವಾಸ್ತವಿಕವಾಗಿ ಇಲ್ಲವೆಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ದೇಶದ ಒಟ್ಟೂ ಭೌಗೋಳಿಕ ವಿಸ್ತೀರ್ಣದ ಬರೀ ಶೇ 4ರಷ್ಟು ಪ್ರದೇಶ ಈಗ ರಾಷ್ಟ್ರೀಯ ವನ್ಯಜೀವಿಧಾಮ, ಅಭಯಾರಣ್ಯಗಳ ಹೆಸರಿನಲ್ಲಿ ಉಳಿದಿದೆ.

ಪರಿಸರಕ್ಕೆ ಸಂಬಂಧಿಸಿದ ಬಿಗಿ ಕಾನೂನುಗಳನ್ನು ಇತ್ತೀಚಿನ ವರ್ಷಗಳಲ್ಲಿ ಕೇಂದ್ರ ಸರ್ಕಾರ ಸಡಿಲಗೊಳಿಸುತ್ತಾ ಬಂದಿದೆ. ಖುದ್ದು ಪ್ರಧಾನಿಯೇ ಅಧ್ಯಕ್ಷರಾಗಿರುವ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ. ವನ್ಯಜೀವಿ ಸಂರಕ್ಷಣಾ ಪ್ರದೇಶಗಳ ಸೂಕ್ಷ್ಮ ಪ್ರದೇಶಗಳಲ್ಲೂ ರೈಲು ಮಾರ್ಗಗಳಿಗೆ ಪರವಾನಗಿ ನೀಡಲಾಗುತ್ತಿದೆ. ಕಲ್ಲಿದ್ದಲು ಗಣಿಗಾರಿಕೆಗೆ ವಿಶೇಷ ಒತ್ತು ನೀಡಿ, ವನ್ಯಜೀವಿಗಳ ಆವಾಸಸ್ಥಾನವನ್ನು ಛಿದ್ರಗೊಳಿಸಲಾಗುತ್ತಿದೆ.

ADVERTISEMENT

ಇಪ್ಪತ್ತು ವರ್ಷಗಳಿಂದ ಅಂತರರಾಷ್ಟ್ರೀಯವಾಗಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ವಿಷಯ ‘ಹವಾಗುಣ ಬದಲಾವಣೆ’ ಮತ್ತು ಅದರಿಂದ ಆಗುವ ಜಾಗತಿಕ ದುಷ್ಪರಿಣಾಮಗಳು. ವಾತಾವರಣದಲ್ಲಿ ಇಂಗಾಲಾಮ್ಲದ ಪ್ರಮಾಣ ಏರಿಕೆಯಾಗುತ್ತಿದ್ದಂತೆ, ನೈಸರ್ಗಿಕ ವಿಕೋಪಗಳ ಸಂಖ್ಯೆಯೂ ವೃದ್ಧಿಯಾಗುತ್ತದೆ. ಅಕಾಲಿಕವಾದ ಮಳೆಯು ನೆರೆಯನ್ನು ತಂದು ಬದುಕನ್ನು ನಾಶ ಮಾಡಿದರೆ, ಬರದ ವಿಕೋಪವು ಜಾಗತಿಕ ಜನಸಂಖ್ಯೆಗೇ ಮಾರಕವಾಗಿ ಪರಿಣಮಿಸು
ತ್ತದೆ. ಹಿಮಕವಚಗಳು ಬಿಸಿಯೇರಿಕೆಯಿಂದ ಕಳಚಿ ನದಿಗೆ ಬೀಳುತ್ತವೆ. ಜಲಭದ್ರತೆ, ಆಹಾರಭದ್ರತೆ, ಆರೋಗ್ಯ
ಭದ್ರತೆ... ಹೀಗೆ ಎಲ್ಲಾ ಕ್ಷೇತ್ರಗಳು ಸೊರಗಿ ಹೋಗುತ್ತವೆ.

ಹವಾಮಾನ ವಿಜ್ಞಾನಿಗಳು, ಪರಿಸರ ತಜ್ಞರು, ಜಾಗತಿಕ ಮಟ್ಟದ ಆರ್ಥಿಕ ವಿಶ್ಲೇಷಕರು ಒಳಗೊಂಡಂತೆ ವಿವಿಧ ಕ್ಷೇತ್ರಗಳ ಚಿಂತಕರು ಹೇಳುವಂತೆ, ಹವಾಗುಣ ಬದಲಾವಣೆಗೆ ಕಡಿವಾಣ ಹಾಕಲು ಅತ್ಯಂತ ಸುಲಭದ ಮಾರ್ಗವೆಂದರೆ, ಈಗಿರುವ ಅರಣ್ಯ ಪ್ರದೇಶವನ್ನು ಉಳಿಸಿಕೊಳ್ಳುವುದು ಹಾಗೂ ಅರಣ್ಯ ವ್ಯಾಪ್ತಿಯನ್ನು ಹೆಚ್ಚು ಮಾಡುವುದು. ಇದೇ ಅತ್ಯಂತ ಅಗ್ಗದ, ಸುಲಭದ ಮತ್ತು ಎಲ್ಲರ ಕೈಗೆಟಕುವ ತಂತ್ರಜ್ಞಾನ. ವನ್ಯಜೀವಿಗಳ ಆವಾಸಸ್ಥಾನವನ್ನು ಹೆಚ್ಚು ಮಾಡುವುದರಿಂದ ವಾತಾವರಣದ ಇಂಗಾಲಾಮ್ಲದ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಬಹುದಾಗಿದೆ.

ಭಾರತವನ್ನು ಕೇಂದ್ರವಾಗಿಟ್ಟುಕೊಂಡು ಹವಾಗುಣ ಬದಲಾವಣೆಯಂತಹ ಗಂಭೀರ ವಿಷಯವನ್ನು ಚರ್ಚೆ ಮಾಡುವುದಾದಲ್ಲಿ, ನಮ್ಮ ಒಟ್ಟೂ ಭೌಗೋಳಿಕ ವ್ಯಾಪ್ತಿಯ ಶೇ 96ರಷ್ಟು ಪ್ರದೇಶವನ್ನು ಮಾನವಕೇಂದ್ರಿತ ಚಟುವಟಿಕೆಗಳಿಗಾಗಿಯೇ ಮೀಸಲಾಗಿಟ್ಟುಕೊಂಡಿದ್ದೇವೆ. ಇನ್ನುಳಿದ ಶೇ 4ರಷ್ಟು ಪ್ರದೇಶವನ್ನಾದರೂ ಅಭಿವೃದ್ಧಿ ಚಟುವಟಿಕೆಗಳಿಂದ ಹೊರತಾಗಿಡಬೇಕು ಹಾಗೂ ಮುಂದಿನ ದಿನಗಳಲ್ಲಿ ಸಂರಕ್ಷಿತ ಪ್ರದೇಶಗಳನ್ನು
ಶೇ 10-20ರವರೆಗೆ ಹೆಚ್ಚು ಮಾಡಬೇಕು.

ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ‘ಕಾಗದರಹಿತ ಬಜೆಟ್’ ಮಂಡನೆ ಮಾಡುವುದರ ಮೂಲಕ ಅಷ್ಟು ಕಾಗದವನ್ನೇನೋ ಉಳಿಕೆ ಮಾಡಿದರು. ಆದರೆ, ಪರಿಸರ, ಅರಣ್ಯ ಮತ್ತು ಹವಾಗುಣ ಬದಲಾವಣೆ ಸಚಿವಾಲಯಕ್ಕೆ ಸಂದ ಅನುದಾನ ಬರೀ ₹ 2869.93 ಕೋಟಿ, ಇದು ಕಳೆದ ವರ್ಷ ನೀಡಿದ ಹಣಕ್ಕಿಂತ ಶೇ 7.4ರಷ್ಟು ಕಡಿಮೆ. ಹಿಂದಿನ ಬಜೆಟ್ಟಿನಲ್ಲಿ ಇದರ ಮೊತ್ತ ₹ 3,100 ಕೋಟಿ ಇತ್ತು. ಇಷ್ಟು ಮಟ್ಟದ ಹಣಕಾಸು ಕಡಿತದಿಂದ, ಅರಣ್ಯ, ವನ್ಯಜೀವಿ, ಜೀವಿವೈವಿಧ್ಯ ಸಂರಕ್ಷಣೆ ಮಾಡುವ ಇಲಾಖೆಗಳು ನಿಶ್ಚಿತವಾಗಿ ಸೊರಗಿ ಹೋಗಲಿವೆ.

ಪ್ಯಾರಿಸ್ ಹವಾಗುಣ ಬದಲಾವಣೆ ಒಪ್ಪಂದದ ಭಾಗವಾಗಿ ಉತ್ತರದಾಯಿತ್ವ ತೋರುವ ದಿಸೆಯಲ್ಲಿ ದೇಶದ ಹಸಿರು ಕವಚವನ್ನು ಹೆಚ್ಚು ಮಾಡುವ ಉದ್ದೇಶ ಹೊಂದಿದ ಹಸಿರು ಭಾರತ ಯೋಜನೆಯ ಹಣಕಾಸಿನ ನೆರವನ್ನೂ ಕಡಿಮೆ ಮಾಡಲಾಗಿದೆ. ಇದರಿಂದ, ಪ್ಯಾರಿಸ್ ಒಪ್ಪಂದಕ್ಕೆ ನೀಡಿದ ವಾಗ್ದಾನಕ್ಕೆ ಅಪಚಾರವಾದಂತಾಗಿದೆ. 2019ರಲ್ಲಿ ಹೆಚ್ಚೂ ಕಡಿಮೆ ದಿನಕ್ಕೆ ನೂರು ಎಕರೆಯಂತೆ ಅರಣ್ಯ ಪ್ರದೇಶವನ್ನು ಅರಣ್ಯೇತರ ಉದ್ದೇಶಕ್ಕೆ ಪರಿವರ್ತನೆ ಮಾಡಿರುವುದು ಅಂತರರಾಷ್ಟ್ರೀಯ ಒಪ್ಪಂದಕ್ಕೆ ಬಗೆದ ದ್ರೋಹವೆಂದು ಹೇಳಬಹುದು.

ಪರಿಸರ ಪಠ್ಯ, ಜಾಗೃತಿ ಮತ್ತು ತರಬೇತಿ ಉದ್ದೇಶಗಳಿಗೆ 2021-22ರ ಬಜೆಟ್ಟಿನಲ್ಲಿ ಶೇ 32.5ರಷ್ಟು ಕಡಿಮೆ ಹಣವನ್ನು ಮೀಸಲಿಡಲಾಗಿದೆ. 2020-21ರಲ್ಲಿ ನೀಡಿದ ₹ 114.35 ಕೋಟಿ ಅನುದಾನದ ಮೊತ್ತವನ್ನು ಕಡಿಮೆ ಮಾಡಿ ಈ ಸಾಲಿನಲ್ಲಿ ಬರೀ ₹ 77.13 ಕೋಟಿಯನ್ನು ಮೀಸಲಿಡಲಾಗಿದೆ. ಹಾಗೆಯೇ ಸಂಶೋಧನೆ ಮತ್ತು ಅಭಿವೃದ್ಧಿ ಬಾಬತ್ತನ್ನು ₹ 7 ಕೋಟಿಯಿಂದ ₹ 5 ಕೋಟಿಗೆ ಇಳಿಸಲಾಗಿದೆ. ವನ್ಯಜೀವಿ ಆವಾಸಸ್ಥಾನಗಳ ಸಮಗ್ರ ಅಭಿವೃದ್ಧಿಯ ಅನುದಾನವನ್ನು ₹ 532 ಕೋಟಿಯಿಂದ ₹ 414 ಕೋಟಿಗೆ ಇಳಿಸಲಾಗಿದೆ. ಈ ಮೊತ್ತವನ್ನು ಹುಲಿ ಮತ್ತು ಆನೆ ಯೋಜನೆಗಳ ಅಡಿಯಲ್ಲಿ ವನ್ಯಜೀವಿಗಳ ಸಮಗ್ರ ಅಭಿವೃದ್ಧಿಗಾಗಿ ಬಳಸಲಾಗುತ್ತದೆ. ಜೊತೆಗೆ ಹುಲಿ ಯೋಜನೆಗಾಗಿ ಮೀಸಲಾಗಿಡುತ್ತಿದ್ದ ಅನುದಾನವನ್ನು ₹ 350 ಕೋಟಿಯಿಂದ ₹ 250 ಕೋಟಿಗೆ ಇಳಿಸಲಾಗಿದೆ. ರಾಷ್ಟ್ರೀಯ ಸಂರಕ್ಷಣೆ ನಿಗಮದ ಅಡಿಯಲ್ಲಿ ಬರುವ 73,000 ಚ.ಕಿ.ಮೀ. ವ್ಯಾಪ್ತಿಯ 51 ಹುಲಿ ಸಂರಕ್ಷಿತ ಪ್ರದೇಶಗಳ ರಕ್ಷಣೆ ಮತ್ತು ಉಸ್ತುವಾರಿಗಾಗಿ ನೀಡಿದ ಅನುದಾನ ಬರೀ ₹ 10 ಕೋಟಿ!

ಆನೆ ಯೋಜನೆ ಅನುದಾನದಲ್ಲಿ ₹ 2 ಕೋಟಿಯಷ್ಟು ಕಡಿಮೆ ಮಾಡಿ ₹ 33 ಕೋಟಿಯನ್ನು ನಿಗದಿ ಮಾಡಲಾಗಿದೆ. ಭಾರತೀಯ ವನ್ಯಜೀವಿ ಸಂಸ್ಥೆ ಹಾಗೂ ಭಾರತೀಯ ಅರಣ್ಯ ನಿರ್ವಹಣೆ ಸಂಸ್ಥೆಯಂತಹ ಅತಿ ಪ್ರಮುಖ ಸಂಸ್ಥೆಗಳಿಗೆ ನೀಡುವ ಅನುದಾನದಲ್ಲೂ ಗಮನಾರ್ಹವಾಗಿ ಕಡಿತ ಮಾಡಲಾಗಿದೆ. ₹ 34 ಕೋಟಿಯಿಂದ ₹ 25 ಕೋಟಿಗೆ ಅನುದಾನದ ಪ್ರಮಾಣವನ್ನು ಇಳಿಸಲಾಗಿದೆ. ವಿಪರ್ಯಾಸವೆಂದರೆ, ಇದೇ ಬಜೆಟ್ಟಿನಲ್ಲಿ ಕೇಂದ್ರ ರೇಷ್ಮೆ ಅಭಿವೃದ್ಧಿ ಮಂಡಳಿಗೆ ನೀಡುವ ಅನುದಾನವನ್ನು ₹ 75 ಕೋಟಿಯಿಂದ ₹ 875 ಕೋಟಿಗೆ ಹೆಚ್ಚಿಸಲಾಗಿದೆ. ಹುಲಿ ಯೋಜನೆ, ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ಆನೆ ಸಂರಕ್ಷಣಾ ಯೋಜನೆಗಾಗಿ ನೀಡುವ ಮೊತ್ತಕ್ಕಿಂತ ಈ ಮೊತ್ತ ಸುಮಾರು ಮೂರು ಪಟ್ಟು ಹೆಚ್ಚು. ವಿಶ್ವದಲ್ಲೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದಲ್ಲಿ ಜೀವಿವೈವಿಧ್ಯದ ಮೇರು ಸ್ಥಾನದಲ್ಲಿರುವ ಹುಲಿಗಳಿಗಿಂತ ರೇಶಿಮೆ ಎಳೆಗಳಿಗೆ ತೂಕ ಹೆಚ್ಚು!

ಈಗಿರುವ ಪ್ರಮುಖ ಪ್ರಶ್ನೆಯೆಂದರೆ, ಭಾರತದಲ್ಲಿ ಬಹಳಷ್ಟು ವನ್ಯಜೀವಿ ಆವಾಸಸ್ಥಾನಗಳನ್ನು ಸಂರಕ್ಷಿಸ
ಲಾಗಿದ್ದು, ಈ ಪ್ರಮಾಣ ಸಂತೃಪ್ತಿದಾಯಕ ಎನಿಸಿ ಅನುದಾನದಲ್ಲಿ ಕಡಿತ ಮಾಡಲಾಗಿದೆಯೇ? ಪರಿಸರ, ವನ್ಯಜೀವಿ, ಜೀವಿವೈವಿಧ್ಯಕ್ಕೆ ಸಂಬಂಧಿಸಿದಂತೆ ಇವುಗಳ ರಕ್ಷಣೆಯಾಗಲೀ ಅಭಿವೃದ್ಧಿಯಾಗಲೀ ಆಗಿರುವುದಿಲ್ಲ. ಜೀವಿವೈವಿಧ್ಯ ಸಂರಕ್ಷಣೆಯಂತಹ ಮೇರು ಸಂಗತಿಗೆ ಒಂದು ನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಗೆ ಇಡುವಷ್ಟು ಅನುದಾನ, ಅಂದರೆ ಬರೀ ₹ 12 ಕೋಟಿಯಷ್ಟನ್ನು ಮೀಸಲಿಡಲಾಗಿದೆ ಎಂದರೆ, ನಮ್ಮ ದೇಶದಲ್ಲಿ ಪರಿಸರ ಸಂರಕ್ಷಣೆಗೆ ತೋರುತ್ತಿರುವ ಕಾಳಜಿ ಎಷ್ಟೆಂಬುದನ್ನು ಬೇರೆ ದೃಷ್ಟಿಕೋನದಿಂದ ಅಳೆಯುವ ಅಗತ್ಯವೇ ಇಲ್ಲ.

ಹೀಗೆ ಪ್ರಥಮಾದ್ಯತೆಗೆ ಮಾನ್ಯವಾಗಬೇಕಾಗಿದ್ದ ಪರಿಸರ, ವನ್ಯಜೀವಿ, ಜೀವಿವೈವಿಧ್ಯ ರಕ್ಷಣೆ ವಿಷಯವೂ ಕನಿಷ್ಠ ಮಟ್ಟದ ಆದ್ಯತೆಯನ್ನು ಈ ಬಜೆಟ್ಟಿನಲ್ಲಿ ಗಳಿಸಲಿಲ್ಲ ಹಾಗೂ ಈ ವಿಷಯವು ಮುಂದಿನ ಪೀಳಿಗೆಯ ಹಿತದೃಷ್ಟಿಯಿಂದ ಅತ್ಯಂತ ಅಪಾಯಕಾರಿ.ಜಾಗತಿಕ ಮಟ್ಟದಲ್ಲಿ ಅತ್ಯಂತ ಪ್ರಮುಖವಾಗಿ ಗಮನ ಸೆಳೆಯಬೇಕಾದ ಮಹತ್ತರ ಜವಾಬ್ದಾರಿ ಮತ್ತು ಉತ್ತರದಾಯಿತ್ವ ಹೊಂದಿದ ಭಾರತದಂತಹ ದೇಶದ ಪರಿಸರ ವಿರೋಧಿ ಧೋರಣೆಯನ್ನು ಯಾರೂ ಸ್ವಾಗತಿಸಲಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.