ADVERTISEMENT

ಮಂಡ್ಯ ರಮೇಶ್ ಅವರ ವಿಶ್ಲೇಷಣೆ | ಯುವ‘ರಂಗ’: ಯಾವಾಗ ಸಂಕ್ರಮಣ?

ಮಂಡ್ಯ ರಮೇಶ್‌
Published 11 ಜುಲೈ 2025, 0:09 IST
Last Updated 11 ಜುಲೈ 2025, 0:09 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಎ.ಐ ಚಿತ್ರ

ಎಲ್ಲ ಸಾಮಾಜಿಕ ವ್ಯವಸ್ಥೆಗಳು ಪಲ್ಲಟಗೊಂಡು ಗೊಂದಲಗಳ ಗೊಂಚಲಿನಂತಿರುವ ಪ್ರಸಕ್ತ ಸಾಮಾಜಿಕ ಸಂದರ್ಭದಲ್ಲಿ ರಂಗಭೂಮಿ ಎದುರಿಸು ತ್ತಿರುವ ಸವಾಲುಗಳು ಮತ್ತು ಆ ಸವಾಲುಗಳ ಕೇಂದ್ರ ದಲ್ಲಿರುವ ಯುವಕರ ಮನೋಧರ್ಮ ಕುರಿತು ಯೋಚಿಸುವುದು ಅವಶ್ಯಕ. ರಂಗಭೂಮಿ ಮೂಲತಃ ಶ್ರಮಿಕ ಪರಂಪರೆಗೆ ಸೇರಿದ ವ್ಯವಸಾಯೀ ಕ್ಷೇತ್ರ. ಭೂಮಿಯಲ್ಲಿ ಉತ್ತು, ಬಿತ್ತು, ಕಳೆ ತೆಗೆದು, ಗೊಬ್ಬರ ಹಾಕಿ, ಮಳೆಯನ್ನು ನಿರೀಕ್ಷಿಸುತ್ತ ಆಕಾಶದತ್ತ ಮುಖ ಮಾಡಿ ನಿಲ್ಲುವ ರೈತನಷ್ಟೇ ಶ್ರಮದಾಯಕ ಕೆಲಸ ರಂಗಕರ್ಮಿಯದು. ಆದರೆ, ಬಹುತೇಕ ಯುವಜನರು ಹೊಂದಿರುವ ‘ಕಡಿಮೆ ದುಡಿಮೆ, ಹೆಚ್ಚು ಹಣ’ ಎನ್ನುವ ಮನೋಭಾವ ರಂಗಭೂಮಿಯಲ್ಲೂ ಕಾಣಿಸುತ್ತಿದೆ. ನಟ, ನಿರ್ದೇಶಕ, ತಂತ್ರಜ್ಞ, ಸಂಘಟಕ ಸೇರಿದಂತೆ ರಂಗಭೂಮಿಯ ಎಲ್ಲರೂ ಸುಲಭ ಮಾರ್ಗಗಳನ್ನು ಹುಡುಕಿಕೊಳ್ಳುವ ಆತುರದಲ್ಲಿದ್ದಾರೆ. ವಿದ್ಯುನ್ಮಾನ ಮಾಧ್ಯಮದ ಆಕ್ರಮಣವೂ, ಪ್ರತಿ ಕ್ಷಣಕ್ಕೂ ಉಸಿರಾಡುವ ಪ್ರಯೋಗಶೀಲ ರಂಗಭೂಮಿಯ ಮೇಲೆ ಕೊಂಚ ಪರಿಣಾಮ ಮಾಡಿದ್ದರೂ, ಅದೇನೂ ಶಾಶ್ವತವಲ್ಲ.

ADVERTISEMENT

ರೈತನಾಗು, ಕಮ್ಮಾರನಾಗು, ಗಾರೆ ಕೆಲಸ ಚಂದ, ಮರಗೆಲಸ ಅದ್ಭುತ ಎಂದೆಲ್ಲಾ ಮಕ್ಕಳಿಗೆ ಹೇಳುವ ಪೋಷಕರು, ಗುರುಗಳು ಹಾಗೂ ಗೆಳೆಯರು ಈಗ ಹುಡುಕಿದರೂ ಸಿಗಲಾರರು. ಟಿ.ವಿ, ಸಿನಿಮಾ ಸೇರಿ ಚೆನ್ನಾಗಿ ದುಡ್ಡು ಮಾಡು ಎಂದು ಹೇಳುವವರು ಎಲ್ಲೆಡೆ ಸಿಗುತ್ತಾರೆ. ಹತ್ತಾರು ವರ್ಷಗಳ ಕಾಲ ಶಾಸ್ತ್ರೋಕ್ತ ವಾಗಿ ಕಲಿತು ಅನುಭವ ಗಳಿಸಿ, ಧ್ಯಾನಸ್ಥನಾಗಿ ರಂಗಭೂಮಿ ಕಲಾವಿದನಾಗು ಎಂದು ಹೇಳುವವರು ಸಿಗುವುದಂತೂ ತೀರಾ ದುರ್ಲಭ.

ರಂಗಭೂಮಿಯಲ್ಲಿ ತೊಡಗಿಕೊಂಡು ನಿರಂತರ ವಾಗಿ ಕೆಲಸ ಮಾಡು, ಆ ದುಡಿಮೆಯಲ್ಲಿ ಸಂತಸ ಇದೆ ಎಂದು ಹೇಳುವವರು ಇಲ್ಲವೆನ್ನುವಷ್ಟು ಕಡಿಮೆ. ಬಾಹ್ಯ ಪ್ರೇರಣೆಗಳಿಗೆ ಯುವಜನ ಸುಲಭವಾಗಿ ಆಕರ್ಷಣೆಗೊಳ್ಳುವುದರಿಂದ, ಸಲೀಸಾಗಿ ಹಣ ಮಾಡುವ ಉದ್ದೇಶದಿಂದ ಸಿನಿಮಾ– ಕಿರುತೆರೆ ಯತ್ತ ಎಲ್ಲರ ಕಣ್ಣುಗಳು ಹೊರಳಿವೆ. ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕೆ ರಂಗಭೂಮಿಯಲ್ಲಿನ ಕಲಿಕೆ ಶ್ರೇಷ್ಠ ವೇದಿಕೆ ಎನ್ನುವ ಗ್ರಹಿಕೆ ಯುವಜನರಲ್ಲಿ ಕಡಿಮೆಯಾಗಿದೆ. ‘ರಿಯಾಲಿಟಿ ಶೋ’ಗಳಲ್ಲಿ ಮುಖ ತೋರಿಸುವುದೇ ಜೀವನದ ಉದ್ದೇಶ ಎನ್ನುವ ಅಲ್ಪತೃಪ್ತಿಯ ಮನೋಭಾವ ಮುನ್ನೆಲೆಗೆ ಬಂದಿದೆ. ಇಚ್ಛಾಶಕ್ತಿ ಮತ್ತು ಸಿದ್ಧತೆಯ ಕೊರತೆಯಿಂದಾಗಿ ಸಾಧನೆಯ ಮಹತ್ವಾಕಾಂಕ್ಷೆಯಿಂದ ತರುಣ, ತರುಣಿಯರು ದೂರವಾಗುವಂತಾಗಿದೆ.

ರಂಗಭೂಮಿ ಸಮಷ್ಟಿ ಕಲೆ. ಅದು ಏಕವ್ಯಕ್ತಿ ಕಲೆಯಲ್ಲ. ನಟ– ನಟಿಯರನ್ನು ತಿಂಗಳುಗಟ್ಟಲೆ ಒಗ್ಗೂಡಿಸಿಕೊಂಡು, ಅವರಲ್ಲಿ ಉತ್ಸಾಹ ಗರಿ ಗೆದರುವಂತೆ ಮಾಡಿ, ರಂಗ ಚಟುವಟಿಕೆಗಳಲ್ಲಿ ತೊಡಗಿಸಿ, ಬದುಕಿನ ಅನುಭವಗಳನ್ನು ಕ್ರೋಡೀಕರಿಸಿಕೊಳ್ಳುವ ತಂತ್ರಗಳನ್ನು ಕಲಿಸಬೇಕಾ ಗುತ್ತದೆ. ತಂಡದೊಂದಿಗೆ ಹೊಂದಾಣಿಕೆ, ಪಾತ್ರ ಅರ್ಥಮಾಡಿಕೊಳ್ಳುವಿಕೆ, ಸಂಭಾಷಣೆಯ ಕಂಠಪಾಠ, ಲಯಜ್ಞಾನ, ಪ್ರಸಾಧನ –ಹೀಗೆ ಹಲವು ಸಂಗತಿಗಳು ರಂಗಭೂಮಿಯ ಕಲಿಕೆಯಲ್ಲಿ ಸೇರಿರುತ್ತವೆ. ರಂಗಸಜ್ಜಿಕೆ ಹಾಗೂ ರಂಗಪರಿಕರಗಳ ಅರಿವಿನೊಂದಿಗೆ ಜನರನ್ನು ಸೇರಿಸುವ ಕಲೆಯೂ ರಂಗಕರ್ಮಿಗೆ ಬೇಕಾಗುತ್ತದೆ. ಇದೆಲ್ಲದರ ಸಮೀಕರಣ ಸಾಧ್ಯವಾದಾಗಲೇ ರಂಗದ ಮೇಲೆ ನಾಟಕವೊಂದು ಜೀವಗೊಳ್ಳುತ್ತದೆ.

ಆದರೆ, ಇಂದಿನ ಸ್ಥಿತಿ ಭಿನ್ನವಾದುದು. ಕ್ಯಾಮೆರಾಗಳಿಗೆ ಮುಖ ತೋರಿಸುವುದೇ ನಟನೆ ಎನ್ನುವಂತಾಗಿದೆ. ಈಗಂತೂ ಎಲ್ಲರ ಕೈಯಲ್ಲಿ ಮೊಬೈಲ್ ಇದೆ. ಸಾಮಾಜಿಕ ಜಾಲತಾಣಗಳು ಬೆರಳಿಗೆ ಎಟಕುವಂತಿವೆ. ಜನ ಗುರ್ತಿಸುವಿಕೆಗೂ ಹೆಚ್ಚು ಶ್ರಮ ಪಡಬೇಕಿಲ್ಲ. ವಾಸ್ತವ ಹೀಗಿರುವಾಗ, ಬದ್ಧತೆ ಹಾಗೂ ಶ್ರಮ ಎರಡನ್ನೂ ಬಯಸುವ ರಂಗಭೂಮಿಯ ತ್ರಾಸದಾಯಕ ಬದುಕು ಯಾರಿಗೆ ಬೇಕು? ಆದರೆ, ಕೃಷಿಯಂತೆ ಶ್ರಮದಾಯಕವಾದರೂ ಪುಷ್ಟಿದಾಯಕ ವಾದುದು ರಂಗಭೂಮಿ. ಸಿನಿಮಾ– ಕಿರುತೆರೆಯ ಆಕರ್ಷಣೆಯನ್ನೂ ಮೀರಿ ಯುವಕ, ಯುವತಿಯರು ರಂಗಭೂಮಿಗೆ ಬರುತ್ತಿಲ್ಲವೇ? ಇಲ್ಲ ಎನ್ನಲಾಗದು. ಹಾಗೆ ನೋಡಿದರೆ, ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯ ಯುವಜನ ರಂಗಭೂಮಿಗೆ ಬರುತ್ತಿದ್ದಾರೆ. ಕೊರತೆ ಇರುವುದು ಸಂಖ್ಯೆಯಲ್ಲಲ್ಲ; ಬದ್ಧತೆಯಲ್ಲಿ. ನಾಟಕ ಕ್ಷೇತ್ರಕ್ಕೆ ಬರುತ್ತಿರುವ ಬಹುತೇಕರಿಗೆ ರಂಗಭೂಮಿ ಚಿಮ್ಮುಹಲಗೆಯಂತೆ ಕಾಣಿಸುತ್ತದೆ; ರಂಗಭೂಮಿಯಿಂದ ಸಿನಿಮಾ– ಕಿರುತೆರೆಯಲ್ಲಿ ಸುಲಭವಾಗಿ ಅವಕಾಶ ದೊರೆಯುತ್ತ ದೆನ್ನುವ ಲೆಕ್ಕಾಚಾರ ಅವರದಾಗಿರುತ್ತದೆ. ಉದ್ದೇಶ ಏನಾದರೂ ಇರಲಿ, ಕಲಿತು ಹೋಗಬೇಕೆನ್ನುವ ಕನಿಷ್ಠ ಆಸೆಯಾದರೂ ಇದೆಯಲ್ಲ ಎಂದು ಸಮಾಧಾನ ಪಡಬೇಕಾದ ಸ್ಥಿತಿ ನನ್ನಂತಹವರದ್ದು.

ರಂಗಭೂಮಿ ಶಿಕ್ಷಣಕ್ಕೆಂದು ನನ್ನ ಬಳಿಗೆ ಬರುವ ನೂರಕ್ಕೆ ತೊಂಬತ್ತರಷ್ಟು ವಿದ್ಯಾರ್ಥಿಗಳು ಸಿನಿಮಾ ನಟ– ನಟಿ ಆಗಬೇಕು ಎನ್ನುವ ಆಸೆ ಹೊಂದಿದವರೇ ಆಗಿರುತ್ತಾರೆ. ‘ನಮ್ ಹುಡುಗನಿಗೆ ಅಭಿನಯಿಸುವ ಆಸೆ ಇದೆ, ನಿಮ್ಮ ಬಳಿ ಕಳಿಸ್ತೇನೆ’ ಎಂದು ಪೋಷಕರು ಹೇಳುತ್ತಾರೆ. ಹಾಗೆ ಬರುವ ಹುಡುಗನನ್ನು ‘ನಟನೆ ಮಾಡಬೇಕು ಅಂತ ಯಾಕನ್ನಿಸುತ್ತೆ’ ಎಂದು ಸರಳ ಪ್ರಶ್ನೆ ಕೇಳಿದರೂ, ಉತ್ತರ ದೊರೆಯುವುದಿಲ್ಲ. ಈ ನಿರುತ್ತರಕ್ಕೆ ರಂಗಭೂಮಿಯ ಬಗೆಗಿನ ಅಸ್ಪಷ್ಟತೆಯಷ್ಟೇ
ಕಾರಣವಲ್ಲ; ಕೆಲವರಿಗೆ ಕನ್ನಡ ಮಾತನಾಡಿ ಅಭ್ಯಾಸವಿಲ್ಲ. ಕನ್ನಡ ಅವರಿಗೆ ಹೆಚ್ಚು ಬಳಕೆಯಿಲ್ಲದ ಭಾಷೆ! ಹೋಗಲಿ, ಅವರು ಕಲಿತಿರುವ ಇಂಗ್ಲಿಷ್‌ ಮಾಧ್ಯಮದ ಶೈಕ್ಷಣಿಕ ಪರಿಸರದ ಅನುಭವಗಳನ್ನಾದರೂ ಪೂರ್ಣ ಮನಸ್ಸಿನಿಂದ ದಾಖಲಿಸುತ್ತಾರಾ ಎಂದು ನಿರೀಕ್ಷಿಸುವಂತೆಯೂ ಇಲ್ಲ. ಏಕೆಂದರೆ, ನಮ್ಮ ಶಿಕ್ಷಣ ಕ್ರಮದಲ್ಲಿ ರಂಗಭೂಮಿಯನ್ನು ಗಂಭೀರವಾದ ‘ಮಾನವ ವಿಜ್ಞಾನ’ ಎಂದು ಪರಿಗಣಿಸದೆ, ‘ರಂಜನೆ’ ಎಂದಷ್ಟೇ ನೋಡಲಾಗಿದೆ.

ರಂಗಭೂಮಿಯನ್ನು ಪ್ರಮುಖ ವಿಷಯವನ್ನಾಗಿಸಿ,ಅದರ ಸಂವಹನ ಸಾಧ್ಯತೆಗಳನ್ನು ಹಾಗೂ ಮಾನವೀಯ ಅಂಶಗಳನ್ನು ಮಕ್ಕಳಿಗೆ ತಲುಪಿಸುವ ಪ್ರಯತ್ನಗಳೇ ನಮ್ಮಲ್ಲಿ ಸರಿಯಾಗಿ ಆಗಿಲ್ಲ. ಅದು ಸಾಧ್ಯವಾದಾಗ, ಯುವಜನರಿಗೆ ವಿದ್ಯಾರ್ಥಿ ದಿಸೆಯಲ್ಲೇ ರಂಗಸಂಸ್ಕಾರ ದೊರೆತು, ಸರಳ ಬದುಕನ್ನು ಆಸ್ವಾದಿಸಲು ಅವರಿಗೆ ಸಿದ್ಧತೆ ದೊರೆತಂತಾಗುತ್ತದೆ. ಬರಿಯ ನಾಟಕ ಕಲಿತರೆ ಉಪಯೋಗವಿಲ್ಲ; ರಂಗ ಇತಿಹಾಸ, ನಟನೆಯ ಶಕ್ತಿ ಮತ್ತು ಸಾಧ್ಯತೆ, ಬೆಳಕಿನ ವಿನ್ಯಾಸ, ಪರಿಕರ ಪ್ರಯೋಜನ, ರಂಗ ಸಿದ್ಧಾಂತ, ಪೌರಾತ್ಯ ಮತ್ತು ಪಾಶ್ಚಾತ್ಯ ರಂಗಭೂಮಿಯ ತೌಲನಿಕ ಅಧ್ಯಯನ, ರಂಗ ಸಂಗೀತದ ವೈಶಿಷ್ಟ್ಯ, ಸಾಹಿತ್ಯ ಕೃತಿಗೂ ರಂಗಕೃತಿಗೂ ಇರುವ ವ್ಯತ್ಯಾಸಗಳು, ನಾಟಕ ಕಲಿಕಾ ವಿಧಾನಗಳು, ಪ್ರಚಾರದ ಬಗೆ... ಹೀಗೆ, ಎಲ್ಲವನ್ನೂ ವಿಜ್ಞಾನದ ರೀತಿಯಲ್ಲಿ, ವಾಣಿಜ್ಯ ದೃಷ್ಟಿಕೋನದಿಂದ ಹಾಗೂ ಸೃಜನಶೀಲವಾಗಿ ಗ್ರಹಿಸಲು ಸಾಧ್ಯವಾಗುವ ಕಲಿಕೆ ಮತ್ತು ಅದಕ್ಕೆ ಅಗತ್ಯವಾದ ಪಠ್ಯ ಸಿದ್ಧಗೊಳ್ಳಬೇಕು. ಯುವಕ, ಯುವತಿಯರ ಗುಂಪೊಂದು ಇಡೀ ತಿಂಗಳು ಕಷ್ಟಪಟ್ಟು ರಂಗ ಪ್ರಯೋಗವೊಂದನ್ನು ಕಲಿತು  ಕಾಲೇಜಿನಲ್ಲೋ ಊರಿನಲ್ಲೋ ಪ್ರದರ್ಶಿಸಿದರೆ, ಅದಕ್ಕೆ ಬರುವ ಪ್ರತಿಕ್ರಿಯೆ ಇತ್ತೀಚಿನ ದಿನಗಳಲ್ಲಿ ತೀರಾ ನಿರಾಶಾದಾಯಕವಾಗಿದೆ. ನೀರಸ ಪ್ರತಿಕ್ರಿಯೆ ಯುವಜನರ ಉತ್ಸಾಹ ಕುಗ್ಗಿಸುತ್ತದೆ. ಪೋಷಕರಿಂದ, ಗುರುಗಳಿಂದ, ಗೆಳೆಯರಿಂದ, ಮಾಧ್ಯಮಗಳಿಂದ, ಎಲ್ಲಿಂದಲೂ ಸೂಕ್ತ ಬೆಂಬಲ ದೊರೆಯದೆ ಹೋದಾಗ ಉತ್ಸಾಹ ಉಳಿಯುವುದಾದರೂ ಹೇಗೆ?

ನಟನೆಯಿಂದ ಮಕ್ಕಳು ಹಾಳಾಗುತ್ತಾರೆ ಎಂದು ಕೆಲವರು ಭಾವಿಸಿದ್ದಾರೆ. ನಟನೆಯಿಂದ ಮಾತ್ರ ಹಾಳಾಗುತ್ತಾರೆಯೇ? ಜೀವಮಾನದಲ್ಲಿ ರಂಗಭೂಮಿಯ ಕಡೆಗೆ ಮುಖವನ್ನೇ ಮಾಡದ ಅದೆಷ್ಟು ಯುವಕ, ಯುವತಿಯರು ತಪ್ಪುದಾರಿಯಲ್ಲಿ ನಡೆದಿಲ್ಲವೇ? ಹಾಗೆ ನೋಡಿದರೆ, ಮನುಷ್ಯನೊಂದಿಗೆ ಮನುಷ್ಯ ನಡೆದುಕೊಳ್ಳುವ ಸೌಜನ್ಯವನ್ನು ರಂಗಭೂಮಿ ಅಚ್ಚುಕಟ್ಟಾಗಿ ಕಲಿಸಿಕೊಡುತ್ತದೆ. ಯುವಜನರಿಗೆ ವಿಶ್ವದಲ್ಲಿ ಅತ್ಯಂತ ಧರ್ಮ ನಿರಪೇಕ್ಷವಾದ ಸ್ಥಳವೆಂದರೆ, ಅದು ರಂಗಭೂಮಿ. ಮುಕ್ತ ಆಲೋಚನಾ ಕ್ರಮ, ಸರಳ ಜೀವನಶೈಲಿ ಹಾಗೂ ಕ್ರಿಯಾಶೀಲ ವ್ಯಕ್ತಿತ್ವವನ್ನು ರಂಗಭೂಮಿ ಕರುಣಿಸುತ್ತದೆ. ಕಲಿಯುವ ತಾಳ್ಮೆ ಬೇಕಷ್ಟೇ.

ಯುವ ಮನೋಧರ್ಮಕ್ಕೆ ತೀರಾ ಅಗತ್ಯವಾದುದು ತಾಳ್ಮೆ. ಎಲ್ಲವನ್ನೂ ‘ಧಾವಂತ’ ಆವರಿಸಿಕೊಂಡಿದೆ. ಅಜ್ಜಿಯರ ಕಥೆ ಕೇಳಲು ಟೈಮಿಲ್ಲ! ತಾತನನ್ನು ವಾಕಿಂಗ್‌ಗೆ ಕರೆದೊಯ್ಯಲು ಸಮಯವಿಲ್ಲ. ಅಪ್ಪ– ಅಮ್ಮನೊಂದಿಗೆ ಮಾತನಾಡಲು ವ್ಯವಧಾನವಿಲ್ಲ.ನಾಟಕದ ತಾಲೀಮಿಗೆ ಬಿಡುವಿಲ್ಲ.ನಾಟಕದ ಕಲಿಕೆ ಎನ್ನುವುದು ಸಂಶೋಧನೆ ಹಾಗೂ ಜನಾಂಗೀಯ ಅಧ್ಯಯನವೂ ಹೌದು. ತಾನು ನಿರ್ವಹಿಸುವ ಪಾತ್ರದ ವ್ಯಕ್ತಿತ್ವ ಹಾಗೂ ಹಿನ್ನೆಲೆಯನ್ನೆಲ್ಲಪಾತ್ರಧಾರಿಯೊಬ್ಬ ಅರ್ಥ ಮಾಡಿಕೊಳ್ಳುವುದು ಅಗತ್ಯ. ಈ ಪೂರ್ವ ಸಿದ್ಧತೆಗೆ ಇಂದಿನ ಯುವ ಕಲಾವಿದರ ಮನೋಭೂಮಿಕೆ ಸಿದ್ಧವಾಗಿದೆಯೆ? ಇಲ್ಲ ಎನ್ನುವುದು ಬಹುತೇಕರ ಉತ್ತರ.

ಪುರಾಣ– ಇತಿಹಾಸ ಓದಿಕೊಳ್ಳದೆ, ಭಾಷೆಯ ಸೊಗಡನ್ನು ತಿಳಿಯದೆ, ಪರಂಪರೆಯ ಒಳತಿರುಳನ್ನು ಗ್ರಹಿಸದೆ, ಸಂಗೀತ– ನಾಟ್ಯಗಳಲ್ಲಿ ತೊಡಗಿಕೊಳ್ಳದೆ, ವರ್ತಮಾನಕ್ಕೆ ಸ್ಪಂದಿಸದೆ, ಬದುಕಿನ ತವಕ ತಲ್ಲಣಗಳಿಗೆ ಒಡ್ಡಿಕೊಳ್ಳದೆ, ಸಂಬಂಧಗಳ ಸೂಕ್ಷ್ಮಗಳನ್ನು ಗೌರವಿಸದೆ ಹೋದರೆ, ರಂಗಭೂಮಿಯ ಮೇಲೆ ಜೀವಗೊಳ್ಳುವ ಪಾತ್ರ ರಕ್ತಮಾಂಸವಿಲ್ಲದೆ ಸೊರಗುತ್ತದೆ. ಬದುಕಿನ ವಿವಿಧ ಸಂದರ್ಭಗಳ ಭಾವೋದ್ರೇಕದ ಮನಃಸ್ಥಿತಿ ತನ್ನದಾಗಿಸಿಕೊಂಡು, ಮೈಮನಗಳ ಮೇಲೆ ಸಂಪೂರ್ಣ ಹತೋಟಿ ಸಾಧಿಸಿ, ಪುನರ್‌ಸೃಷ್ಟಿಸುವ ಶಕ್ತಿ ರೂಪುಗೊಳ್ಳದಿದ್ದರೆ ‘ಗುಬ್ಬಿ’ ಮರುಕ್ಷಣವೇ ‘ಬೆಟ್ಟ’ವಾಗಿ ಬದಲಾಗುವುದಿಲ್ಲ; ಸಮರ್ಥ ನಟನ ಸೃಷ್ಟಿ ಸಾಧ್ಯವಿಲ್ಲ. ಎಲ್ಲವನ್ನೂ ಆಲಿಸುವ, ನೋಡುವ, ಕಲ್ಪಿಸಿ ಕೊಳ್ಳುವ ಗುಣ ರಂಗಕರ್ಮಿಗೆ ಅಗತ್ಯ. ಈ ಗುಣ ಸಮಾಜದಲ್ಲೇ ಕಡಿಮೆ ಆಗಿದೆ. ರಂಗಾಸಕ್ತ ಯುವಜನರಲ್ಲಿ ಅನೇಕರಿಗೆ, ರಂಗಭೂಮಿ ಚಿಕಿತ್ಸಕ ಕೇಂದ್ರ ಎನ್ನುವುದೂ ತಿಳಿಯದು. ಹೌದು, ರಂಗಭೂಮಿ ಒಂದು ಮನೋವೈಜ್ಞಾನಿಕ ಅಧ್ಯಯನ ಶಿಬಿರ. ಈ ಕಲಿಕೆಯಲ್ಲಿ, ಸಹಮನುಷ್ಯ ನೊಂದಿಗೆ ಬೆರೆಯಲು ಹಿಂಜರಿಯುತ್ತಿದ್ದವರು ಶಿಬಿರ ಮುಗಿಯುವ ಹೊತ್ತಿಗೆ ಎಲ್ಲರೊಟ್ಟಿಗೆ ಬೆರೆತು ಮಾತನಾಡುವುದನ್ನು ಕಂಡಿದ್ದೇನೆ. ತೊದಲುತ್ತಿದ್ದ
ವರು ಓತಪ್ರೋತವಾಗಿ ಕನ್ನಡ ನುಡಿಯುವುದನ್ನು ಕಂಡಿದ್ದೇನೆ.  ಇಂಗ್ಲಿಷ್‌ ಮೋಹಿತೆ ಹುಡುಗಿಯೊಬ್ಬಳು, ಸಂಸ ಕೃತಿಗಳ ಭಾಷೆಯನ್ನು, ದೇವನೂರರ ‘ಕುಸುಮಬಾಲೆ’ಯ ಜೀವಶಕ್ತಿಯನ್ನು, ಕುಂದಾಪುರ ಕಡಲ್ಗನ್ನಡವನ್ನು ತನ್ನದಾಗಿಸಿಕೊಂಡಿದ್ದನ್ನು ನೋಡಿರುವೆ. ಜೀವನ ಪ್ರೀತಿ ಕಳೆದುಕೊಂಡ ವ್ಯಕ್ತಿ ಸಾಹಿತ್ಯ ಪ್ರೇಮಿಯಾಗಿ, ಸಮಾಜಮುಖಿಯಾಗಿ ಬದಲಾಗಿರುವುದಕ್ಕೂ ರಂಗಭೂಮಿ ಕಾರಣವಾಗಿದೆ. ವ್ಯಕ್ತಿತ್ವ ನಿರ್ಮಾಣದಲ್ಲಿ ರಂಗಭೂಮಿ ಮುಖ್ಯ ಪಾತ್ರವಹಿಸುತ್ತದೆ ಎನ್ನುವುದು ಅದರೊಂದಿಗೆ ಒಡನಾಡಿದವರೆಲ್ಲರ ಅನುಭವವೂ ಆಗಿರುತ್ತದೆ.

‘ರಂಗಭೂಮಿ’ ಎನ್ನುವುದು ಎಲ್ಲರನ್ನೂ ತಲುಪುವ ಸರಳ ಹಾಗೂ ಸಮರ್ಥ ಭಾಷೆ. ಆ ಭಾಷೆಯಲ್ಲಿ ಯುವಜನರು ಕೊಂಚ ಬದ್ಧತೆಯಿಂದ ತೊಡಗಿಕೊಂಡರೆ ಅವರ ಜೀವನದಲ್ಲಿ ಮಾತ್ರವಲ್ಲದೆ, ಸಮಾಜದಲ್ಲೂ ಬದಲಾವಣೆ ಆಗಬಲ್ಲದು. ಸಾಹಿತ್ಯ ವಾಚನ, ರಂಗಭೂಗೋಳ, ರಸಸಿದ್ಧಾಂತ, ರಂಗ ವ್ಯಾಕರಣ, ಭಾಷಾಜ್ಞಾನ, ಧ್ವನಿ ಮತ್ತು ಉಸಿರಾಟದ ನಿಯಂತ್ರಣ, ದೇಹ ಭಾಷೆಯ ವಿಸ್ತಾರ, ಇತ್ಯಾದಿ ಸಾಧ್ಯತೆಗಳನ್ನು ಸತತವಾಗಿ ಅಭ್ಯಾಸ ಮಾಡುತ್ತ ರಂಗಾಂದೋಲನದಲ್ಲಿ ನಿರಂತರತೆ ಕಾಯ್ದುಕೊಂಡರೆ ಪ್ರಬುದ್ಧ ಕಲಾವಿದರು ಹಾಗೂ ಪ್ರೌಢ ರಂಗಭೂಮಿ ರೂಪಗೊಳ್ಳುವುದರಲ್ಲಿ ಸಂದೇಹವಿಲ್ಲ. ಅಂಥದೊಂದು ಆದರ್ಶದ ಸ್ಥಿತಿ ರೂಪುಗೊಳ್ಳುವು ದಕ್ಕೆ ಶಾಲಾ ಹಂತದಲ್ಲೇ ಬುನಾದಿ ಸಿದ್ಧಗೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.