ADVERTISEMENT

ವಿಶ್ಲೇಷಣೆ: ತ್ರಿಭಾಷಾ ಸೂತ್ರದ ರಾಜಕಾರಣ

ಯೋಗೇಂದ್ರ ಯಾದವ್
Published 28 ಫೆಬ್ರುವರಿ 2025, 0:32 IST
Last Updated 28 ಫೆಬ್ರುವರಿ 2025, 0:32 IST
   

ತ್ರಿಭಾಷಾ ಸೂತ್ರಕ್ಕೆ ಸಂಬಂಧಿಸಿ ಇನ್ನೊಂದು ಸುತ್ತಿನ ರಾಜಕೀಯ ಚರ್ಚೆಗೆ ವೇದಿಕೆ ಸಜ್ಜಾಗಿದೆ. ವಿಚಿತ್ರವೆಂದರೆ, ನಮ್ಮ ನೀತಿ ನಿರೂಪಕರು ಎರಡು ಭಾಷೆ ಮತ್ತು ಮೂರು ಭಾಷೆ ಸೂತ್ರದ ಅನುಕೂಲಗಳ ಕುರಿತು ಚರ್ಚೆ ನಡೆಸುತ್ತಿರಬೇಕಾದರೆ, ದೇಶವು ಒಂದೇ ಭಾಷೆ ನೀತಿಯತ್ತ ಸದ್ದಿಲ್ಲದೆ ಸಾಗುತ್ತಿದೆ. ಸಾಮಾನ್ಯ ಜ್ಞಾನ ಮತ್ತು ಶಿಕ್ಷಣದ ಕುರಿತು ಪರಿಣತರ ಅಭಿಮತಗಳೆಲ್ಲವಕ್ಕೆ ತದ್ವಿರುದ್ಧವಾಗಿ ಇಂಗ್ಲಿಷ್‌ ಏಕೈಕ ಭಾಷೆ ನೀತಿಯತ್ತ ದೇಶವು ಜಾರುತ್ತಿದೆ. ಇನ್ನೂ ವಿಷಾದನೀಯವೆಂದರೆ ಜ್ಞಾನ, ಸಂಸ್ಕೃತಿ, ನಾಗರಿಕತೆಯನ್ನು ಬಹುಭಾಷಿಕತೆಯಿಂದ ಏಕಭಾಷೆಯತ್ತ ಹಿಂದಕ್ಕೆ ದಬ್ಬುವಿಕೆಯನ್ನು ಆಧುನಿಕತೆ ಎಂದು ಸಂಭ್ರಮಿ ಸಲಾಗುತ್ತಿದೆ. ಇದು ಸರ್ಕಾರಿ ಪ್ರಾಯೋಜಿತವೂ ಹೌದು.

ತ್ರಿಭಾಷಾ ಸೂತ್ರ ಎಂಬುದು ಶಾಲೆಯಲ್ಲಿ ಮಕ್ಕಳಿಗೆ ಮೂರು ಭಾಷೆಗಳನ್ನು ಕಲಿಸುವ ನೀತಿಗೆ ಇರುವ ಅಧಿಕೃತ ಹೆಸರು. 1968ರಲ್ಲಿ ಮಾಡಿಕೊಳ್ಳಲಾದ ರಾಜಿ ಸಂಧಾನವು ಹೀಗೆ ಹೇಳುತ್ತದೆ: ‘ಹಿಂದಿ ಭಾಷಿಕ ರಾಜ್ಯಗಳಲ್ಲಿ ಹಿಂದಿ, ಇಂಗ್ಲಿಷ್‌ ಮತ್ತು ಆಧುನಿಕ ಭಾರತೀಯ ಭಾಷೆ (ದಕ್ಷಿಣದ ಭಾಷೆಯೊಂದನ್ನು ಕಲಿಸುವುದು ಉತ್ತಮ) ಕಲಿಸುವುದು ಮತ್ತು ಹಿಂದಿ ಭಾಷಿಕವಲ್ಲದ ರಾಜ್ಯಗಳಲ್ಲಿ ಹಿಂದಿ, ಇಂಗ್ಲಿಷ್‌ ಮತ್ತು ಆಯಾ ರಾಜ್ಯದ ಭಾಷೆಯನ್ನು ಕಲಿಸುವುದು’. ದಕ್ಷಿಣದ ರಾಜ್ಯಗಳಲ್ಲಿ ಹಿಂದಿಯ ವಿರುದ್ಧ ಪ್ರತಿಭಟನೆ ನಡೆದ ಕಾರಣ ಮುಖ್ಯಮಂತ್ರಿಗಳು ಒಟ್ಟಾಗಿ ಭಾಷಾ ನೀತಿ ರೂಪಿಸಲು ನಡೆಸಿದ ಸಭೆಯಲ್ಲಿ ಈ ರಾಜಿ ಸಂಧಾನಕ್ಕೆ ಬರಲಾಯಿತು. ರಾಧಾಕೃಷ್ಣನ್‌ ಆಯೋಗವು 1948–49ರಲ್ಲಿ ಮುಂದಿಟ್ಟ ಸೂತ್ರವನ್ನು ಮೊದಲ ಶಿಕ್ಷಣ ಆಯೋಗವಾಗಿದ್ದ ಕೊಠಾರಿ ಆಯೋಗ ಅನುಮೋದಿಸಿತು. 1960 ಮತ್ತು 1980ರ ದಶಕಗಳಲ್ಲಿ ಇದ್ದ ಕಾಂಗ್ರೆಸ್‌ ನೇತೃತ್ವದ ಸರ್ಕಾರಗಳು ಒಂದು ಮತ್ತು ಎರಡನೇ ಶಿಕ್ಷಣ ನೀತಿಯಲ್ಲಿ ಈ ಸೂತ್ರ ಅಳವಡಿಸಿಕೊಂಡವು. 

ತ್ರಿಭಾಷಾ ಸೂತ್ರದ ಮೂಲ ತರ್ಕ ಹೀಗಿದೆ: ಭಾರತವನ್ನು ಬಹುಭಾಷಿಕವೆಂದರಷ್ಟೇ ಸಾಲದು. ಭಾರತದ ಹೆಚ್ಚಿನ ಸಮುದಾಯಗಳು ಮತ್ತು ವ್ಯಕ್ತಿಗಳು ಒಂದಕ್ಕಿಂತ ಹೆಚ್ಚಿನ ಭಾಷೆ ಮಾತನಾಡುತ್ತಾರೆ. ಆದುದರಿಂದಲೇ, ಭಾರತೀಯ ಅಸ್ಮಿತೆಯನ್ನು ರೂಪುಗೊಳಿಸಿರುವ ಬಹುಭಾಷಿಕತೆಯನ್ನು ಉಳಿಸಲು ಮತ್ತು ಪೋಷಿಸಲು ಬೇಕಾದ ರೀತಿಯಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಯು ಇರಬೇಕು. ತ್ರಿಭಾಷಾ ಸೂತ್ರವು ಬಹುಭಾಷಿಕತೆಯನ್ನು ಉಳಿಸಿಕೊಳ್ಳುವ ಒಂದು ಅನುಕೂಲಕರ ವಿಧಾನವಾಗಿದೆ. ಡಿ.ಪಿ.ಪ‍ಟ್ಟನಾಯಕ್‌ ಮತ್ತು ರಮಾಕಾಂತ್‌ ಅಗ್ನಿಹೋತ್ರಿ ಅವರೂ ಇದ್ದ ಭಾಷಾಶಾಸ್ತ್ರಜ್ಞರು ಮತ್ತು ಶಿಕ್ಷಣ ತಜ್ಞರ ಸಮಿತಿಯು ಹೀಗೆ ಹೇಳಿದೆ: ‘ತ್ರಿಭಾಷಾ ಸೂತ್ರವೇ ಅಂತಿಮ ಗುರಿ ಅಲ್ಲ ಅಥವಾ ಭಾಷಾ ಕಲಿಕೆಗೆ ಇದೊಂದು ಮಿತಿ ಹೇರಿಕೆಯೂ ಅಲ್ಲ. ಬದಲಿಗೆ, ಜ್ಞಾನದ ದಿಗಂತವನ್ನು ವಿಸ್ತರಿಸು ವುದಕ್ಕೆ ಮತ್ತು ರಾಷ್ಟ್ರದ ಭಾವನಾತ್ಮಕ ಸಮಗ್ರತೆ ಸಾಧಿಸುವುದಕ್ಕೆ ಇರುವ ಅನುಕೂಲಕರ ಆರಂಭಿಕ ಬಿಂದುವಾಗಿದೆ’ (ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು–2005, ಎನ್‌ಸಿಇಆರ್‌ಟಿ). ಮಕ್ಕಳು ಹಂತ ಹಂತವಾಗಿ ಮೂರಕ್ಕಿಂತ ಹೆಚ್ಚು ಭಾಷೆಗಳನ್ನು ಕಲಿಯಬಹುದು; ಹೆಚ್ಚುವರಿ ಭಾಷೆಗಳನ್ನು ಕಲಿಯುವುದು ಒಂದು ಮತ್ತು ಎರಡನೇ ಭಾಷೆಯ ಕಲಿಕೆಗೂ ನೆರವಾಗುತ್ತದೆ ಎಂದು ಈ ಸಮಿತಿಯು ಹೇಳಿತ್ತು. 

ADVERTISEMENT

ಹಾಗಿದ್ದರೆ, ಈಗಿನ ಚರ್ಚೆ ಏನು? ತಮಿಳುನಾಡು ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು (ಎನ್‌ಇಪಿ) ಒಪ್ಪಿಲ್ಲ ಎಂಬ ಕಾರಣಕ್ಕೆ ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ನೀಡಬೇಕಿದ್ದ ಗಣನೀಯ ಮೊತ್ತವನ್ನು ಕೇಂದ್ರವು ತಡೆಹಿಡಿದಿದೆ. ತಮ್ಮ ಪಕ್ಷವು ತ್ರಿಭಾಷಾ ಸೂತ್ರಕ್ಕೆ ವಿರುದ್ಧವಾಗಿದೆ, ಹಾಗಾಗಿ ಎನ್‌ಇಪಿಯನ್ನು ಒಪ್ಪಲಾಗದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಹೇಳಿದ್ದಾರೆ. ಈ ರಾಜ್ಯವು ಹಿಂದಿನಿಂದಲೂ ತಮಿಳು ಮತ್ತು ಇಂಗ್ಲಿಷ್‌ ಭಾಷೆಯನ್ನು ಮಾತ್ರ ಕಲಿಸುತ್ತಿದೆ. ಮೂರು ಭಾಷೆ ಕಲಿಸಬೇಕು ಎಂಬುದು ಹಿಂದಿ ಹೇರಿಕೆಗೆ ಇರುವ ನೆಪ ಎಂದು ಅವರು ಹೇಳುತ್ತಾರೆ. ತಮಿಳುನಾಡು ಸರ್ಕಾರವು ಸಂವಿಧಾನಕ್ಕೆ ಬದ್ಧವಾಗಿರಬೇಕು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ. ಈ ವಿಚಾರವು ಹೆಚ್ಚು ಭಾವನಾತ್ಮಕವಾದುದು. ಜೊತೆಗೆ, ತಮಿಳುನಾಡು ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆ ಇದೆ. ಹಾಗಾಗಿ, ಸಂಸತ್ತಿನ ಬಜೆಟ್‌ ಅಧಿವೇಶನವು ಪುನರಾ ರಂಭಗೊಂಡಾಗಲೂ ಈ ಸಂಘರ್ಷವು ಇನ್ನೂ ಜೋರಾಗಿ ಕಾಣಿಸಿಕೊಳ್ಳಬಹುದು. 

ಆಕ್ರೋಶ ಮತ್ತು ಸಂದೇಹ ವ್ಯಕ್ತಪಡಿಸಲು ಡಿಎಂಕೆ ನೇತೃತ್ವದ ಸರ್ಕಾರಕ್ಕೆ ಸರಿಯಾದ ಕಾರಣಗಳೇ ಇವೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಒಕ್ಕೂಟ ವ್ಯವಸ್ಥೆಯಲ್ಲಿ ಪಾಲಿಸಬೇಕಾದ ರೀತಿ–ರಿವಾಜುಗಳನ್ನು ಹಲವು ಬಾರಿ ಉಲ್ಲಂಘಿಸಿದೆ. ಬಿಜೆಪಿ ಪರವಾಗಿ ತಮಿಳುನಾಡಿನ ರಾಜ್ಯಪಾಲರ ವರ್ತನೆ ಭಂಡತನದಿಂದಲೇ ಕೂಡಿದೆ. ಶಿಕ್ಷಣ ಕ್ಷೇತ್ರದಲ್ಲಿ ರಾಜ್ಯಗಳ ಅಧಿಕಾರವನ್ನು ಒತ್ತುವರಿ ಮಾಡುವ ಕೆಲಸವನ್ನು ಕೇಂದ್ರ ಸರ್ಕಾರವು ಪದೇ ಪದೇ ಮಾಡಿದೆ. ಕುಲಪತಿಗಳ ನೇಮಕದ ನಿಯಮ ಬದಲಾವಣೆ ಪ್ರಸ್ತಾವ ಅದಕ್ಕೆ ಇತ್ತೀಚಿನ ಉದಾಹರಣೆ. ಶಿಕ್ಷಣ ನೀತಿಗಳು, ಅದರಲ್ಲೂ ವಿಶೇಷವಾಗಿ ಭಾಷೆ ಆಯ್ಕೆಯಂತಹ ಭಾವನಾತ್ಮಕ ವಿಚಾರಗಳನ್ನು ಅಳವಡಿಸಿಕೊಳ್ಳುವಂತೆ ಕೇಂದ್ರದ ನಿಧಿಯನ್ನು ತಡೆಹಿಡಿದು ರಾಜ್ಯಗಳ ಮೇಲೆ ಒತ್ತಡ ಹೇರಬಾರದು. 

ನಿಜ ಏನೆಂದರೆ, ಎನ್‌ಇಪಿಯಲ್ಲಿ ತ್ರಿಭಾಷಾ ಸೂತ್ರವನ್ನೇ ಪುನರುಚ್ಚರಿಸಲಾಗಿದೆ. ಮೊದಲ ಮತ್ತು ಎರಡನೇ ಶಿಕ್ಷಣ ನೀತಿಗಳಲ್ಲಿಯೂ ಈ ಅಂಶ ಇತ್ತು. ಹಾಗೆ ನೋಡಿದರೆ, ಎನ್‌ಇಪಿ–2020 ಭಾಷೆಗಳ ಆಯ್ಕೆಯನ್ನು ಇನ್ನಷ್ಟು ಸುಲಭಗೊಳಿಸಿದೆ. ಹಿಂದಿಯ ಉಲ್ಲೇಖ ಎಲ್ಲಿಯೂ ಇಲ್ಲ. ರಾಜ್ಯವು ಆಯ್ಕೆ ಮಾಡಿದ ಮೂರು ಭಾಷೆಗಳನ್ನು ಮಕ್ಕಳಿಗೆ ಕಲಿಸಬೇಕು. ಅವುಗಳಲ್ಲಿ ಎರಡು ಭಾರತದ ಭಾಷೆಗಳಾಗಿರಬೇಕು ಎಂದು ಹೇಳಲಾಗಿದೆ. ಶಾಸ್ತ್ರೀಯ ಭಾಷೆಗಳಾದ ಸಂಸ್ಕೃತ ಮತ್ತು ತಮಿಳು ಭಾರತೀಯ ಭಾಷೆಗಳ ಪಟ್ಟಿಯಲ್ಲಿ ಇವೆ. ಹಾಗಾಗಿ, ತಮಿಳುನಾಡಿಗೆ ಬೇಕಿದ್ದರೆ, ತಮಿಳು ಮತ್ತು ಮಲಯಾಳ ಅಥವಾ ತೆಲುಗು ಅಥವಾ ಕನ್ನಡ ಹಾಗೂ ಇಂಗ್ಲಿಷ್‌ ಕಲಿಸಬಹುದು. ತಮಿಳು, ಶಾಸ್ತ್ರೀಯ ತಮಿಳು ಮತ್ತು ಇಂಗ್ಲಿಷ್‌ ಕಲಿಸುವ ಮೂಲಕ ತ್ರಿಭಾಷಾ ಸೂತ್ರದ ನಿಯಮ ಪಾಲಿಸಬಹುದು. ಈಗ, ಹಿಂದಿ ಹೇರಿಕೆಯ ಯಾವುದೇ ಭಯ ಇಲ್ಲದೆಯೇ ತ್ರಿಭಾಷಾ ಸೂತ್ರ ಅಳವಡಿಕೆಯ ಕುರಿತು ತಮಿಳುನಾಡು ಯೋಚಿಸಬಹುದು. ಹೀಗಾಗಿ, ತ್ರಿಭಾಷಾ ಸೂತ್ರವನ್ನು ವಿರೋಧಿಸುವ ಬದಲಿಗೆ, ಎಲ್ಲ ರಾಜ್ಯಗಳಲ್ಲಿಯೂ ಏಕರೂಪದಲ್ಲಿ ಜಾರಿ ಆಗುವುದಿದ್ದರೆ ತಾವು ಕೂಡ ಅದನ್ನು ಸ್ವೀಕರಿಸಲು ಸಿದ್ಧ ಎಂದು ಸ್ಟಾಲಿನ್‌ ಹೇಳಬಹುದಿತ್ತು. ಎಲ್ಲ ಹಿಂದಿ ಭಾಷಿಕ ರಾಜ್ಯಗಳಲ್ಲಿ ತಮಿಳು ಅಥವಾ ದಕ್ಷಿಣದ ಯಾವುದಾದರೂ ಒಂದು ಭಾಷೆಯನ್ನು ತೃತೀಯ ಭಾಷೆಯಾಗಿ ಕಲಿಸುವುದಿದ್ದರೆ ನಮ್ಮ ಶಾಲೆಗಳಲ್ಲಿ ಹಿಂದಿ ಕಲಿಸಲು ಸಿದ್ಧ ಎನ್ನಬಹುದಿತ್ತು. 

ಇಂತಹ ನಡೆಯಿಂದ, ತ್ರಿಭಾಷಾ ಸೂತ್ರವನ್ನು ಹಾಳು ಮಾಡಿದ್ದು ತಮಿಳುನಾಡು ಅಲ್ಲ, ಬದಲಿಗೆ ಹಿಂದಿ ಭಾಷಿಕ ರಾಜ್ಯಗಳು ಎಂಬ ಸರಳ ಸತ್ಯವು ಬಹಿರಂಗ ಆಗುತ್ತಿತ್ತು. ಆರಂಭದಲ್ಲಿ, ಉತ್ತರಪ್ರದೇಶದಲ್ಲಿ ತಮಿಳು, ಹರಿಯಾಣದಲ್ಲಿ ತೆಲುಗು ಭಾಷೆ ಕಲಿಸುವುದು ಎಂಬಂತಹ ಯೋಜನೆ ಇತ್ತು. ಆದರೆ, ಕೆಲ ಕಾಲದ ಬಳಿಕ ಅವರು ಅಡ್ಡದಾರಿಯೊಂದನ್ನು ಹುಡುಕಿಕೊಂಡರು. ತೃತೀಯ ಭಾಷೆಯಾಗಿ ಸಂಸ್ಕೃತವನ್ನು ಆಯ್ದುಕೊಂಡರು. ಇಲ್ಲವೇ ತೃತೀಯ ಭಾಷೆಯಾಗಿ ಆಯ್ಕೆ ಮಾಡಿದ ಭಾಷೆಯಲ್ಲಿ ಒಂದಷ್ಟನ್ನು ಕಂಠಪಾಠ ಮಾಡಿಸತೊಡಗಿದರು. ಹೀಗೆ, ಭಾಷೆ ಕಲಿಕೆ ಅಥವಾ ಕೃತಿ ಓದುವಿಕೆಯಿಂದ ತಪ್ಪಿಸಿಕೊಂಡರು. ಹೀಗಾಗಿ, ತ್ರಿಭಾಷಾ ಸೂತ್ರವು ದಕ್ಷಿಣ ದವರಿಗೆ ಮಾತ್ರ ಎಂಬಂತಾಯಿತು. ಹೀಗಾಗಿಯೇ ತ್ರಿಭಾಷಾ ಸೂತ್ರವು ರಾಜಕೀಯ ಅತೃಪ್ತಿಗೆ ಕಾರಣವಾಯಿತು. ಈ ಎಲ್ಲ ಅಸಂಬದ್ಧವನ್ನು ನಿಲ್ಲಿಸಲು ಇದು ಸಕಾಲ. 

ಕೇಂದ್ರ ಸರ್ಕಾರವು ತ್ರಿಭಾಷಾ ಸೂತ್ರದ ಕುರಿತು ಗಂಭೀರವಾಗಿದ್ದರೆ, ಹಿಂದಿ ಹೇರಿಕೆಯ ಉದ್ದೇಶ ಇಲ್ಲದಿದ್ದರೆ, ಅನುದಾನ ಬಿಡುಗಡೆಗೆ ತ್ರಿಭಾಷಾ ಸೂತ್ರದ ನೆಪವನ್ನು ಒಡ್ಡಬಾರದು. ಎಲ್ಲ ಮುಖ್ಯಮಂತ್ರಿಗಳ ಸಭೆ ಕರೆದು ರಾಷ್ಟ್ರೀಯ ಸಹಮತ ರೂಪಿಸಬೇಕು. ತೃತೀಯ ಭಾಷೆಗೆ ಪರ್ಯಾಯವಾಗಿ ಸಂಸ್ಕೃತ ಕಲಿಸಿ ತಪ್ಪಿಸಿಕೊಳ್ಳಲು ಹಿಂದಿ ಭಾಷಿಕ ರಾಜ್ಯಗಳಿಗೆ ಅವಕಾಶ ಕೊಡಬಾರದು. ಹೀಗೆ ಮಾಡುವುದರಿಂದ ಭಾಷೆಯ ಕುರಿತ ರಾಜಕೀಯ ಸಂಘರ್ಷ ಕೊನೆಯಾಗಿ, ಬಹುಭಾಷಿಕತೆಯತ್ತ ಗಮನ ಕೇಂದ್ರೀಕರಣಗೊಳ್ಳಬಹುದು. 

ಶಿಕ್ಷಣ ವ್ಯವಸ್ಥೆಯಲ್ಲಿನ ಇಂಗ್ಲಿಷ್‌ನ ಯಜಮಾನಿಕೆ ಕೊನೆಗೊಳಿಸುವ ಸವಾಲು ಈಗ ನಮ್ಮ ರಾಜಕೀಯ ವರ್ಗದ ಮುಂದೆ ಇದೆ. ದಮನಕಾರಿ ನಿರಂಕುಶ ಪ್ರಭುತ್ವವನ್ನು ಎದುರಿಸಿ ನಿಲ್ಲಬಹುದು; ಶಸ್ತ್ರಸನ್ನದ್ಧ ಭಾರಿ ಸೇನೆಯನ್ನು ಎದುರಿಸಬಹುದು. ಆದರೆ, ಇಂಗ್ಲಿಷ್‌ ಪ್ರಾಬಲ್ಯವನ್ನು ಮುರಿಯುವುದು ಸುಲಭವೇನಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.