ಡೊನಾಲ್ಡ್ ಟ್ರಂಪ್
– ರಾಯಿಟರ್ಸ್ ಚಿತ್ರ
ಏಪ್ರಿಲ್ 7, 2025ರ ಬೆಳಗ್ಗೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೂತನ ಸುಂಕ ನೀತಿ ಜಗತ್ತನ್ನು ಗಿರಕಿ ಹೊಡೆಯುವಂತೆ ಮಾಡಿತು. ಉದ್ಯಮಗಳಿಗೆ 'ಸುವರ್ಣ ಕಾಲ' ಎಂದು ಡೊನಾಲ್ಡ್ ಟ್ರಂಪ್ ಕರೆಯುತ್ತಿರುವ ಈ ಸುಂಕಗಳು, ಭಾರತವೂ ಸೇರಿದಂತೆ ಜಗತ್ತಿನ ವಿವಿಧ ದೇಶಗಳು ನಲುಗುವಂತೆ ಮಾಡಿವೆ. ಭಾರತೀಯ ಷೇರು ಮಾರುಕಟ್ಟೆ ಕಳೆದ ಹತ್ತು ತಿಂಗಳ ಅವಧಿಯಲ್ಲಿನ ಅತಿದೊಡ್ಡ ಕುಸಿತವನ್ನು ಅನುಭವಿಸಿದ್ದು, ಕೆಲವೇ ಸೆಕೆಂಡುಗಳಲ್ಲಿ ಹೂಡಿಕೆದಾರರ 20 ಲಕ್ಷ ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತ ಅಳಿಸಿಹೋಯಿತು. ಭಾರತದ ಅಗ್ರ ಮೂವತ್ತು ಸಂಸ್ಥೆಗಳನ್ನು ಒಳಗೊಂಡಿರುವ ಸೆನ್ಸೆಕ್ಸ್ ಬಹುತೇಕ 4,000 ಅಂಕಗಳ ಕುಸಿತ ಅನುಭವಿಸಿ, ದಿನದ ವಹಿವಾಟಿನ ಒಂದು ಹಂತದಲ್ಲಿ 21,743.65ಗೆ ತಲುಪಿತ್ತು. ಈ ಮಾರುಕಟ್ಟೆ ಕೋಲಾಹಲ ಬೃಹತ್ ಹೂಡಿಕೆದಾರರಿಂದ ಸಣ್ಣ ಹೂಡಿಕೆದಾರರ ತನಕ ಎಲ್ಲರೂ ಭಾರತದ ಮಾರುಕಟ್ಟೆ ಪರಿಸ್ಥಿತಿ ಇನ್ನೇನಾಗಲಿದೆ ಎಂದು ಚಿಂತಿಸುವಂತೆ ಮಾಡಿದೆ.
ಮಾರುಕಟ್ಟೆ ಪತನಕ್ಕೆ ಕಾರಣವೇನು?
ಟ್ರಂಪ್ ವಿಧಿಸಿರುವ ಸುಂಕಗಳು ಅಮೆರಿಕದ ಉದ್ಯಮಗಳನ್ನು ರಕ್ಷಿಸುವ ಉದ್ದೇಶ ಹೊಂದಿದ್ದು, ಅಮೆರಿಕಕ್ಕೆ ಬರುವ ಎಲ್ಲ ವಿದೇಶೀ ಉತ್ಪನ್ನಗಳ ಮೇಲೆ ಸುಂಕ ವಿಧಿಸುತ್ತದೆ. ಇತರ ದೇಶಗಳು ಅಮೆರಿಕದೊಡನೆ ಇಲ್ಲಿಯ ತನಕ ನ್ಯಾಯಯುತವಾಗಿ ವ್ಯವಹರಿಸಿಲ್ಲ. ಈಗ ಅದನ್ನು ಸರಿಪಡಿಸುವ ಸಮಯ ಬಂದಿದೆ ಎಂದು ಟ್ರಂಪ್ ಹೇಳಿದ್ದಾರೆ. ಎಲ್ಲ ದೇಶವೂ ಕನಿಷ್ಠ 10% ಸುಂಕ ಎದುರಿಸುತ್ತಿದ್ದು, ಭಾರತದ ಮೇಲೆ 26%, ಮತ್ತು ಇತರ ದೇಶಗಳ ಮೇಲೆ ವಿವಿಧ ಪ್ರಮಾಣದ ಸುಂಕಗಳನ್ನು ವಿಧಿಸಲಾಗಿದೆ. ಈ ಸುದ್ದಿ ಹೂಡಿಕೆದಾರರಲ್ಲಿ ಭಯ ಮೂಡಿಸಿದ್ದು, ಅವರು ಇದ್ದಕ್ಕಿದ್ದಂತೆ ತಮ್ಮ ಷೇರುಗಳನ್ನು ಮಾರಾಟ ಮಾಡತೊಡಗಿದರು. ಇದರ ಪರಿಣಾಮವಾಗಿ, ಮಾರುಕಟ್ಟೆಯಲ್ಲಿ ಅನಿರೀಕ್ಷಿತವಾಗಿ ಭಾರೀ ಕುಸಿತ ಕಂಡುಬಂತು. ಆದರೆ, ಈ ಬೆಳವಣಿಗೆಗಳಿಂದ ಟ್ರಂಪ್ ಆತಂಕಗೊಂಡಂತೆ ತೋರುತ್ತಿಲ್ಲ. ಅವರು ತಾನು ವಿಧಿಸಿರುವ ಸುಂಕ ಒಂದು ರೀತಿಯಲ್ಲಿ ಕಹಿ ಗುಳಿಗೆಯಂತಿದ್ದು, ಅಮೆರಿಕನ್ ಆರ್ಥಿಕತೆಯ ಚೇತರಿಕೆಗೆ ಇದು ಅನಿವಾರ್ಯ ಎಂದಿದ್ದಾರೆ. ಅಮೆರಿಕದ ಆರ್ಥಿಕತೆಗೆ ಇದು ಔಷಧವಾದರೂ, ವಿದೇಶಗಳಿಗೆ ಇದು ಹೊಡೆತದಂತಾಗಿದೆ.
ಭಾರತದಲ್ಲಿ, ಸೆನ್ಸೆಕ್ಸ್ ಮಧ್ಯಾಹ್ನದ ವೇಳೆಗೆ (07 ಏಪ್ರಿಲ್ 2025) 3,000 ಅಂಕಗಳಿಗೂ ಹೆಚ್ಚಿನ ಕುಸಿತ ಕಂಡಿದ್ದು, ನಿಫ್ಟಿ 22,000ಕ್ಕೂ ಕೆಳಗಿಳಿದಿತ್ತು. ಭಾರತೀಯ ರೂಪಾಯಿಯೂ ದುರ್ಬಲಗೊಂಡಿದ್ದು, 30 ಪೈಸೆ ಕುಸಿತ ಕಂಡು ಅಮೆರಿಕನ್ ಡಾಲರ್ ಎದುರು 85.74 ಮೌಲ್ಯ ಹೊಂದಿದೆ. ತಜ್ಞರು ಇದು ಕೇವಲ ಭಾರತದ ಸಮಸ್ಯೆಯಾಗಿರದೆ, ಜಾಗತಿಕ ಸಮಸ್ಯೆಯಾಗಿದೆ ಎಂದು ಬಣ್ಣಿಸಿದ್ದಾರೆ. ಚೀನಾ, ಜಪಾನ್ ಮತ್ತು ಹಾಂಕಾಂಗ್ ಸೇರಿದಂತೆ, ಏಷ್ಯನ್ ಮಾರುಕಟ್ಟೆಗಳು ಭಾರತಕ್ಕಿಂತಲೂ ಹೆಚ್ಚಿನ ಕುಸಿತ ಕಂಡಿವೆ. ಚೀನಾದ ಷೇರುಗಳು 4%ಕ್ಕೂ ಹೆಚ್ಚಿನ ಕುಸಿತ ಕಂಡರೆ, ಹಾಂಕಾಂಗಿನ ಹ್ಯಾಂಗ್ ಸೆಂಗ್ 10%ಕ್ಕೂ ಹೆಚ್ಚಿನ ಕುಸಿತ ಕಂಡಿತು. ಜಪಾನಿನ ನಿಕ್ಕೀ 6.5% ಕುಸಿದರೆ, ತೈವಾನಿನ ಮಾರುಕಟ್ಟೆ ಬಹುತೇಕ 10% ಇಳಿಕೆ ಕಂಡಿತು. ಒಟ್ಟಾರೆಯಾಗಿ ಸಂಪೂರ್ಣ ಜಗತ್ತೇ ಟ್ರಂಪ್ ನೀತಿಯ ಬಿಸಿಗೆ ತುತ್ತಾಗಿದೆ.
ಭಾರತಕ್ಕೆ ಹೇಗೆ ಸಮಸ್ಯೆಯಾಗುತ್ತದೆ?
ಭಾರತವು ಬಟ್ಟೆ, ಔಷಧ, ವಾಹನ ಬಿಡಿಭಾಗಗಳು ಸೇರಿದಂತೆ ವಿವಿಧ ಉತ್ಪನ್ನಗಳನ್ನು ಅಮೆರಿಕಕ್ಕೆ ರಫ್ತು ಮಾಡುತ್ತದೆ. ಈಗ ಟ್ರಂಪ್ 26% ಸುಂಕ ವಿಧಿಸಿದ್ದು, ಇವುಗಳ ಬೆಲೆ ಅಮೆರಿಕದಲ್ಲಿ ಇನ್ನಷ್ಟು ಹೆಚ್ಚಾಗಲಿದೆ. ಆದ್ದರಿಂದ ಅಮೆರಿಕದ ಗ್ರಾಹಕರು ಬೇರೆ ಕಡೆಗಳಿಂದ ಪರ್ಯಾಯ ಆಯ್ಕೆಗಳಿಗೆ ಹುಡುಕಾಡಬಹುದು. ಈಗ ರಫ್ತುದಾರರು ಮತ್ತು ವ್ಯಾಪಾರಿಗಳು ನಷ್ಟ ಅನುಭವಿಸುವ ಭೀತಿಯಲ್ಲಿದ್ದಾರೆ. "ಭಾರತವು ತನ್ನ ತಪ್ಪುಗಳಿಂದಾಗಿ ತೊಂದರೆ ಎದುರಿಸುತ್ತಿಲ್ಲ. ಬದಲಿಗೆ, ಜಾಗತಿಕ ಆರ್ಥಿಕತೆಯ ಭಾಗವಾಗಿರುವುದರಿಂದ ಅದು ಈ ಸಮಸ್ಯೆಗೆ ಸಿಲುಕಿದೆ" ಎಂದು ಮಾರುಕಟ್ಟೆ ತಜ್ಞ ಅಜಯ್ ಬಗ್ಗಾ ಒಂದೆಡೆ ಅಭಿಪ್ರಾಯಪಟ್ಟಿದ್ದಾರೆ. ಭಾರತ ಈಗ ಕ್ಷಿಪ್ರವಾಗಿ ಸೂಕ್ತ ಹಣಕಾಸು ನಿಯಮಗಳು ಮತ್ತು ಸುಧಾರಣೆಗಳಂತಹ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಆ ಮೂಲಕ ಭಾರತ ಜಾಗತಿಕ ಆರ್ಥಿಕ ಸುಳಿಯಿಂದ ಪಾರಾಗಲು ಸಾಧ್ಯ.
ಇನ್ನೋರ್ವ ತಜ್ಞರಾದ ಸುನಿಲ್ ಗುರ್ಜರ್ ಅವರು ನಿಫ್ಟಿ ದಾಖಲೆಯ ಕುಸಿತಕ್ಕೆ ಸಜ್ಜಾಗಿದೆ ಎಂದಿದ್ದಾರೆ. ಒಂದು ವೇಳೆ ಮಾರುಕಟ್ಟೆ ಇನ್ನಷ್ಟು ಪತನಗೊಂಡರೆ, ಪರಿಸ್ಥಿತಿ ವಿಕೋಪಕ್ಕೆ ತಿರುಗಬಹುದು. ಹಾಗೇನಾದರೂ ಆದರೆ, ಹೂಡಿಕೆದಾರರಿಗೆ ಇನ್ನಷ್ಟು ನಷ್ಟ ಸಂಭವಿಸಿ, ಮುಂದಿನ ದಿನಗಳು ಕಷ್ಟಕರವಾಗಲಿವೆ.
ಜಾಗತಿಕ ಚಿತ್ರಣ
ಪ್ರಸ್ತುತ ವ್ಯಾಪಾರ ಸಮರ ಕೇವಲ ಭಾರತ ಮತ್ತು ಅಮೆರಿಕಗಳಿಗೆ ಸೀಮಿತವಲ್ಲ. ಚೀನಾ ಅಮೆರಿಕಾದ ಸುಂಕಕ್ಕೆ ತಿರುಗೇಟು ನೀಡಿ 34% ಸುಂಕ ವಿಧಿಸಿದ್ದು, ಇದು ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸಿದೆ. ವಾರಾಂತ್ಯದ ಬಳಿಕ ಮೊತ್ತ ಮೊದಲನೆಯದಾಗಿ ತೆರೆದ ಏಷ್ಯನ್ ಮಾರುಕಟ್ಟೆಗಳು ಅತಿದೊಡ್ಡ ಹೊಡೆತ ಅನುಭವಿಸಿವೆ. ಏಷ್ಯನ್ ಮಾರುಕಟ್ಟೆಗಳ ಕುಸಿತವು ತಡವಾಗಿ (ಭಾರತೀಯ ಕಾಲಮಾನ ಪ್ರಕಾರ ಇಂದು ಸಂಜೆ) ತೆರೆಯಲಿರುವ ಅಮೆರಿಕನ್ ಮಾರುಕಟ್ಟೆಗಳೂ ನಷ್ಟ ಅನುಭವಿಸುವ ಭೀತಿ ಮೂಡಿಸಿದೆ. ಟ್ರಂಪ್ ಯೋಜನೆಗಳು ಅಮೆರಿಕನ್ ಕಾರ್ಖಾನೆಗಳಿಗೆ ನೆರವಾಗಬಹುದಾದರೂ, ಇತರ ದೇಶಗಳನ್ನು ನಲುಗಿಸಿವೆ.
ಭಾರತದ ಮುಂದಿನ ನಡೆ ಏನು?
ಇಷ್ಟೆಲ್ಲ ಕೋಲಾಹಲಗಳ ನಡುವೆಯೂ ಭಾರತಕ್ಕೆ ಒಂದಷ್ಟು ಆಶಾ ಭಾವನೆಗಳಿವೆ. ಭಾರತದ ಆಂತರಿಕ ಮಾರುಕಟ್ಟೆ (ದೇಶದೊಳಗೆ ಜನರು ಕೊಳ್ಳುವುದು ಮತ್ತು ಮಾರುವುದು) ಬಲವಾಗಿದ್ದು, ಅದು ಟ್ರಂಪ್ ಸುಂಕದ ಹೊಡೆತವನ್ನು ಒಂದಷ್ಟು ಮೆತ್ತಗಾಗಿಸಬಹುದು. ಭಾರತ ಅಪಾರ ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳುತ್ತಿದ್ದು, ಕುಸಿಯುತ್ತಿರುವ ತೈಲ ಬೆಲೆಗಳು (ಬ್ರೆಂಟ್ ಕಚ್ಚಾ ತೈಲ ಈಗ ಪ್ರತಿ ಬ್ಯಾರೆಲ್‌ಗೆ 66 ಡಾಲರ್ ಆಗಿದೆ) ಭಾರತಕ್ಕೆ ಆಮದಿನಲ್ಲಿ ಹಣ ಉಳಿಸಲು ನೆರವಾಗಲಿವೆ. ಭಾರತ ಸರ್ಕಾರ ನಿರಂತರವಾಗಿ ಸ್ವದೇಶೀ ಉತ್ಪನ್ನಗಳು ಮತ್ತು 'ಮೇಕ್ ಇನ್ ಇಂಡಿಯಾ' ಯೋಜನೆ ಭಾರತಕ್ಕೆ ಅವಶ್ಯಕ ಎಂದು ಪ್ರತಿಪಾದಿಸುತ್ತಾ ಬಂದಿದೆ. ಈ ಹೆಜ್ಜೆಯೂ ಜಾಗತಿಕ ಮಾರುಕಟ್ಟೆ ಕುಸಿತದಿಂದ ತೊಂದರೆಯಾಗುವುದನ್ನು ತಪ್ಪಿಸಲು ಭಾರತಕ್ಕೆ ನೆರವಾಗಲಿದೆ. ಹಾಗೆಂದು ಭಾರತಕ್ಕೆ ಒಂದಷ್ಟು ಸವಾಲುಗಳು, ಅಪಾಯಗಳೂ ಇವೆ. ಡಾಲರ್ ದುರ್ಬಲವಾದರೆ, ತಾಮ್ರದಂತಹ ವಸ್ತುಗಳ ಬೆಲೆ ಕುಸಿತವಾದರೆ, ಅದು ಭಾರತೀಯ ರಫ್ತುದಾರರಿಗೆ ಸಮಸ್ಯೆ ತಂದೊಡ್ಡೀತು. ಅದರೊಡನೆ, ವಿದೇಶೀ ಹೂಡಿಕೆದಾರರು ವ್ಯಾಪಾರ ಸಮರಕ್ಕೆ ಹೆದರಿ ಭಾರತದಿಂದ ತಮ್ಮ ಹೂಡಿಕೆಗಳನ್ನು ಹಿಂಪಡೆಯುವ ಅಪಾಯವೂ ಇದೆ. ರಫ್ತುದಾರರೂ ಇದರಿಂದ ಆತಂಕಕ್ಕೊಳಗಾಗಿದ್ದಾರೆ.
ತಜ್ಞರು ಈಗ ಭಾರತವು ಕ್ಷಿಪ್ರವಾಗಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಭಿಪ್ರಾಯ ಪಡುತ್ತಾರೆ. ಸರ್ಕಾರಿ ವೆಚ್ಚಗಳು, ರಿಸರ್ವ್ ಬ್ಯಾಂಕ್ ಕ್ರಮಗಳು ಮತ್ತು ಸುಧಾರಣೆಗಳು ಭಾರತೀಯ ಆರ್ಥಿಕತೆಯನ್ನು ಸ್ಥಿರವಾಗಿಡಲು ನೆರವಾಗಬಹುದು ಎಂದು ಅವರು ಹೇಳಿದ್ದಾರೆ. ಭಾರತ ಸ್ಮಾರ್ಟ್ ಆಗಿ ಯೋಜನೆಗಳನ್ನು ರೂಪಿಸಿದರೆ, ಈ ಬಿರುಗಾಳಿಯನ್ನು ಎದುರಿಸಲು ಸಾಧ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಟ್ರಂಪ್ ಸುಂಕಗಳು ಇಡೀ ಜಗತ್ತನ್ನೇ ತಲೆಕೆಳಗು ಮಾಡಿವೆ. ಸದ್ಯದ ಮಟ್ಟಿಗೆ ಇದೊಂದು ಕಷ್ಟಕರ ಸವಾರಿಯಾಗಿದ್ದು, ಎಲ್ಲರ ಕಣ್ಣುಗಳೂ ಭಾರತ ಮತ್ತು ಜಗತ್ತು ಇದರಿಂದ ಹೇಗೆ ಪಾರಾಗಲಿವೆ ಎನ್ನುವುದರತ್ತಲೇ ನೆಟ್ಟಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.