ADVERTISEMENT

ಉದ್ಯೋಗದಲ್ಲಿ ವಂಚನೆ ಖಾತರಿ!

ಉದ್ಯೋಗ ಖಾತರಿಯಲ್ಲಿ ಸರ್ಕಾರವೇ ಕಾನೂನು ಉಲ್ಲಂಘಿಸಿ ಜನರನ್ನು ವಂಚಿಸುತ್ತಿದೆ

ಶಾರದಾ ಗೋಪಾಲ, ಧಾರವಾಡ
Published 18 ಫೆಬ್ರುವರಿ 2019, 20:34 IST
Last Updated 18 ಫೆಬ್ರುವರಿ 2019, 20:34 IST
   

ಕೇಂದ್ರದಲ್ಲಿ ಸರ್ಕಾರ ರಚನೆಗಾಗಿ ಆಗುವ ಮತದಾನವಾಗಲೀ, ರಾಜ್ಯದಲ್ಲಿ ಸರ್ಕಾರ ರಚನೆಗಾಗಿ ಆಗುವ ಮತದಾನವಾಗಲೀ, ಅತಿಹೆಚ್ಚು ಮತಗಳು ಬರುವುದು ಗ್ರಾಮೀಣ ಭಾಗದ ಅಕ್ಷರವಂಚಿತ, ಸೌಲಭ್ಯವಂಚಿತ ಸಮುದಾಯಗಳಿಂದಲೇ. ಪ್ರತಿ ಬಾರಿಯೂ ‘ಅವನ್ನು ನಿಮಗೆ ಕೊಡುತ್ತೇವೆ, ಕೊಟ್ಟೇ ಕೊಡುತ್ತೇವೆ, ನೋಡಿ ಕೊಟ್ಟುಬಿಟ್ಟಿದ್ದೇವೆ’ ಎಂಬ ಭರವಸೆಗಳನ್ನು ಅವರ ಮುಂದಿಟ್ಟು ಮತ್ತೆ ಮತ ಯಾಚಿಸುವುದು ನಡೆದೇ ಇದೆ. ಮತ್ತೆ ಅವರ ಮತಗಳ ಆಧಾರದಿಂದಲೇ ಸರ್ಕಾರಗಳ ರಚನೆ ಆಗುತ್ತದೆ. ಮತ್ತೆ ವಂಚನೆ, ಮತ್ತೆ ಭರವಸೆ. 71 ವರ್ಷಗಳು ಉರುಳಿದ್ದೂ ಹೀಗೆಯೇ.

ಚುನಾವಣೆಗೆ ಪೂರ್ವದ ಬಜೆಟ್ಟನ್ನು ನೋಡಿದರೆ ಯಾರಿಗಾದರೂ ಈ ವಿಚಾರ ಆರ್ಥವಾಗುತ್ತದೆ. ಪ್ರತಿವರ್ಷದಂತೆ ಈ ವರ್ಷವೂ ಕೇಂದ್ರ ಸರ್ಕಾರ ತನ್ನ ಬಜೆಟ್ಟಿನಲ್ಲಿ ಗ್ರಾಮೀಣ ಭಾಗದ ಜನರ ಉದ್ಯೋಗಕ್ಕೆ ಆಧಾರವಾದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಹಿಂದಿನ ವರ್ಷಕ್ಕಿಂತಲೂ ಮಿಗಿಲಾದ, ಇಷ್ಟು ವರ್ಷಗಳಲ್ಲೇ ಅತಿಹೆಚ್ಚಿನ ಹಣವನ್ನು ಇಟ್ಟಿರುವುದರ ಬಗ್ಗೆ ಪ್ರಸ್ತಾಪಿಸಿದೆ. ಅದೆಷ್ಟೆಂದರೆ ₹ 60,000 ಕೋಟಿ. ಹಣದ ಮೊತ್ತ ನೋಡಿದರೆ ಮೂಗಿನ ಮೇಲೆ ಬೆರಳಿಟ್ಟುಕೊಳ್ಳಬೇಕು, ಅಷ್ಟು ದೊಡ್ಡ ಮೊತ್ತ. ವಾಸ್ತವದಲ್ಲಿ ಬೇಡಿಕೆಯನ್ನು ಗಮನಿಸಿದರೆ ‘ಅಯ್ಯೋ ಇಷ್ಟೆಯೇ?’ ಎಂದು ಬಾಯಿಯ ಮೇಲೆ ಕೈಯಿಟ್ಟುಕೊಳ್ಳಬೇಕು.

ಉದ್ಯೋಗ ಖಾತರಿಯ ಮುಂಗಡ ಪತ್ರದ ಚೀಲವು ತೂತುಗಳಿಂದ ತುಂಬಿದೆ. ಹಿಂದಿನ ವರ್ಷ ₹55,000 ಕೋಟಿ ಇಟ್ಟಿತ್ತು ಕೇಂದ್ರ ಸರ್ಕಾರ. ಆದರೆ ವರ್ಷದ ಕೊನೆಯೊಳಗೇ ಅದಷ್ಟೂ ದುಡ್ಡು ವ್ಯಯವಾಗಿ, ಕೂಲಿ ಬಾಕಿ ಉಳಿದಾಗ ಜನವರಿಯ ಆರಂಭದಲ್ಲಿ ₹6,084 ಕೋಟಿ ಬಿಡುಗಡೆ ಮಾಡಬೇಕಾಯಿತು. ಇನ್ನೂ ವರ್ಷ ಮುಗಿದಿಲ್ಲ. ಏಪ್ರಿಲ್ ಮೊದಲ ವಾರದಲ್ಲಿಯೇ ಬಜೆಟ್ ಮೊತ್ತದ ಶೇ 10ರಷ್ಟು ಹಣ ಹಳೆ ಬಾಕಿ ತೀರಿಸಲಿಕ್ಕೆ ಹೋಗಿಬಿಡುತ್ತದೆ. ಹಳೆ ಬಾಕಿ ತೀರಿಸಲು ಮತ್ತು ಮತ್ತೆ ಕೊರತೆಯಾಗದಂತೆ ನೋಡಿಕೊಳ್ಳುವುದಕ್ಕೆ ಸೇರಿ ಉದ್ಯೋಗ ಖಾತರಿಗೆ ಈ ವರ್ಷ ಬಜೆಟ್ಟಿನಲ್ಲಿ ಕನಿಷ್ಠ ₹88,000 ಕೋಟಿ ಮೀಸಲಿರಿಸಬೇಕಿತ್ತು ಎನ್ನುತ್ತಾರೆ ಉದ್ಯೋಗ ಖಾತರಿ ಯೋಜನೆಯ ರೂವಾರಿ, ರಾಜಸ್ಥಾನದ ಎಂ.ಕೆ.ಎಸ್.ಎಸ್.ನ ಸಂಘಟಕಿ ಅರುಣಾ ರಾಯ್.

ADVERTISEMENT

ಬಾಕಿ ಕೂಲಿ ಇನ್ನೂ ಪಾವತಿಯೇ ಆಗಿಲ್ಲ ಎಂದು ಛತ್ತೀಸಗಡ, ಆಂಧ್ರಪ್ರದೇಶ, ಜಾರ್ಖಂಡ್, ಕರ್ನಾಟಕ ಎಲ್ಲಾ ರಾಜ್ಯಗಳು ಬೊಬ್ಬಿಡುತ್ತಿರುವುದನ್ನು ನೋಡಿದರೆ, ಈಗ ಮತ್ತೆ ಬಿಡುಗಡೆ ಮಾಡಿರುವ ₹6,084 ಕೋಟಿ ಹೆಚ್ಚುವರಿ ಹಣ ಉಪ್ಪು, ಮೆಣಸಿನಕಾಯಿಗೂ ಸಾಲದು. ಕರ್ನಾಟಕದ್ದೇ ₹1,146 ಕೋಟಿ ಬಾಕಿ ಇದೆ. ಅಷ್ಟರಲ್ಲಿ ಹೊಸ ಬಜೆಟ್ ಮಂಡನೆಯಾಗಿದೆ. ಹಿಂದೆಂದಿಗಿಂತಲೂ ಹೆಚ್ಚು ಎಂದು ಪೀಯೂಷ್ ಗೋಯಲ್ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಇದೆ. ಕರ್ನಾಟಕದಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಇದೆ. ರಾಜ್ಯ ಸರ್ಕಾರದ್ದಂತೂ ಕೂಲಿ ಪಾವತಿ ಬಾಕಿಯದ್ದೇ ದೂರು. ಕಳೆದ ವರ್ಷವೂ ರಾಜ್ಯ ಸರ್ಕಾರ ಕಾದು ಕಾದು ಕಡೆಗೆ ಮಧ್ಯಪ್ರವೇಶಿಸಿ, ಕೇಂದ್ರ ಕೊಡಬೇಕಾಗಿದ್ದ ಹಣವನ್ನು ತಾನೇ ಪಾವತಿ ಮಾಡಿತ್ತು. ಈ ವರ್ಷವೂ ಅದೇ ಕತೆ ಪುನರಾವರ್ತನೆ ಆಗುತ್ತಿದೆ. 2017-18ರಲ್ಲಿ ಕೂಲಿಕಾರರ ಶೇ 85ರಷ್ಟು ಕೂಲಿಯನ್ನು ಪಾವತಿಸಲಾಗಿದೆ ಎಂದು ಕೇಂದ್ರ ಹೇಳಿಕೊಂಡಿತ್ತಾದರೂ ವಾಸ್ತವವಾಗಿ ಅದು ಪಾವತಿಸಿದ್ದು ಕೇವಲ ಶೇ 32ರಷ್ಟು ಹಣ ಎಂದು ಮಜದೂರ್ ಕಿಸಾನ್ ಶಕ್ತಿ ಸಂಘಟನೆಯು ಲೆಕ್ಕ ಹಾಕಿ ತೋರಿಸುತ್ತಿದೆ. ಶೇ 85ರಷ್ಟು ಪಾವತಿಯಾಗಿ ಶೇ 15 ಮಾತ್ರ ಉಳಿಸಿಕೊಂಡಿದ್ದರೂ ತಪ್ಪೇ. ಯಾಕೆಂದರೆ ಉದ್ಯೋಗ ಖಾತರಿ ಕಾನೂನಿನ ಪ್ರಕಾರ, ಕೆಲಸ ಮಾಡಿದ 15 ದಿನಗಳೊಳಗಾಗಿ ಕೆಲಸಗಾರರಿಗೆ ಕೂಲಿ ಹಣ ಪಾವತಿಯಾಗಬೇಕು. ತಾನೇ ಮಾಡಿದ ಕಾನೂನನ್ನು ಸರ್ಕಾರ ತಾನೇ ಉಲ್ಲಂಘಿಸುತ್ತಿದೆ.

ಕೂಲಿ ಪಾವತಿ ತಡವಾದರೆ ಸರ್ಕಾರವು ಅದರ ಜವಾಬ್ದಾರಿ ಹೊತ್ತು ಮೊದಲ ಹದಿನೈದು ದಿನ ಅರ್ಧದಷ್ಟು ಹಣ, ನಂತರದ ದಿನಗಳಲ್ಲಿ ದಿನಗೂಲಿಯ ಕಾಲುಭಾಗದಷ್ಟು ಹಣವನ್ನು ದುಡಿದವರಿಗೆ ದಂಡವಾಗಿ ಕೊಡಬೇಕು. ಈಗಿನ ಸರ್ಕಾರವು ಅದನ್ನು ಕೂಲಿಯ
ಶೇ 0.05ಕ್ಕೆ ಇಳಿಸಿಟ್ಟಿದೆ. ಕಂಪ್ಯೂಟರಿನಲ್ಲಿ ಅದೇನೇನೋ ಬದಲಾವಣೆ ಮಾಡಿ, ತಾನು ತಡ ಮಾಡುತ್ತಿರುವುದನ್ನು ‘ತಡ’ ಎಂದು ಬಿಂಬಿಸದೇ, ದಂಡದಿಂದ ತಪ್ಪಿಸಿಕೊಳ್ಳುತ್ತಿದೆ. ಇದರಿಂದಾಗಿ ಕೂಲಿಕಾರರು ದಂಡ ಪಾವತಿಗೆ ಬರೆಯುವಂತೆಯೂ ಇಲ್ಲ, ಅಕಸ್ಮಾತ್ ಬರೆದರೂ ಬರುವ ಹಣ ಐದು ರೂಪಾಯಿಯೋ, 21 ರೂಪಾಯಿಯೋ ಆಗಿರುವುದರಿಂದ ಸಾಕಾಗಿ ಕೈಬಿಟ್ಟಿದ್ದಾರೆ. ಮಜದೂರ್ ಕಿಸಾನ್ ಶಕ್ತಿ ಸಂಘಟನೆಯ ಪ್ರಕಾರ, ಇಡೀ ದೇಶದ ಕೂಲಿಕಾರರಿಗೆ ಕೇಂದ್ರ ಸರ್ಕಾರವು ಕೊಡಬೇಕಾದ ತಪ್ಪು ದಂಡವೇ ಬಹಳಷ್ಟು ಬಾಕಿ ಇದೆ.

ತನ್ನ ಕಾನೂನನ್ನು ಸರ್ಕಾರವು ತಾನೇ ಉಲ್ಲಂಘಿಸುವ ಇನ್ನೆಷ್ಟೋ ಉದಾಹರಣೆಗಳನ್ನು ಕೊಡಬಹುದು. ಅರ್ಜಿ ಕೊಟ್ಟ 15 ದಿನದೊಳಗಾಗಿ ಕೆಲಸ ಎಂದಿದ್ದರೂ, ಆ ಅವಧಿಯಲ್ಲಿ ಕೆಲಸ ಕೊಟ್ಟ ದಾಖಲೆಯೇ ಇಲ್ಲ. ಮತ್ತೆ ಮತ್ತೆ ಪಂಚಾಯಿತಿಗಳಿಗೆ ಅಡ್ಡಾಡಿ, ಕಡೆಗೆ ಕೂಲಿಕಾರರು ಧರಣಿ ಕುಳಿತಾಗಲೇ, ಕೆಲಸ ಕೊಡುವ ಬಗ್ಗೆ ಪಂಚಾಯಿತಿಯು ವಿಚಾರ ಮಾಡುವುದು. ಗುಡ್ಡದಲ್ಲಿ ಕಲ್ಲು ಅಗೆಯುವಂಥ ಕಠಿಣ ಕೆಲಸಗಳನ್ನು ಕೊಡುವುದು, ಮಾಡಿದ ಕೆಲಸದ ಅಳತೆಯನ್ನು ತಪ್ಪಾಗಿ ನಮೂದಿಸಿ ಕನಿಷ್ಠ ಕೂಲಿ ಹಾಕುವುದು, ಆಧಾರ್‌ ಜೋಡಣೆಯಿಂದಾಗಿ ಕೂಲಿ ಪಾವತಿಯೇ ಆಗದಿರುವುದು... ಕಡೆಗೆ ಬೇಡವೇ ಬೇಡ ಎಂದು ಆ ಕೂಲಿಕಾರ ವಲಸೆ ಹೋಗಿಬಿಡುವಂತಾದಾಗ ಅಧಿಕಾರಿಗಳ ನಿಜ ಕಾರ್ಯತಂತ್ರ ಫಲಿಸುತ್ತದೆ. ಆದರೆ ಗಂಡ ಊರು ಬಿಟ್ಟರೂ ಮಕ್ಕಳ ಕಾರಣಕ್ಕೆ ಗ್ರಾಮದಲ್ಲಿಯೇ ನಿಂತು ಮಹಿಳೆ ಗಟ್ಟಿಯಾದಾಗ ಮಾತ್ರ ಖಾತರಿಯಾಗಿ ಅವಳಿಗೆ ಉದ್ಯೋಗ ಸಿಗುತ್ತದೆ. 2017-18ರಲ್ಲಿ ಶೇ 32ರಷ್ಟು ಬೇಡಿಕೆಗಳಿಗೆ ಮಾತ್ರ ಕೆಲಸ ಸಿಕ್ಕಿದ್ದು ಅಧ್ಯಯನವೊಂದರಲ್ಲಿ ಬಯಲಾಗಿದೆ. ಅರ್ಜಿ ಹಾಕಿದ ಎಲ್ಲರೂ ಪಟ್ಟು ಹಾಕಿ ಕೆಲಸ ಕೇಳಿ ಪಡೆದಿದ್ದರೆ, 2017-18ರಲ್ಲಿಯೇ ಕೂಲಿ ಪಾವತಿಯ ಮೊತ್ತ 76,000 ಕೋಟಿ ಆಗುತ್ತಿತ್ತು.

ಉದ್ಯೋಗ ಕೊಡುವುದರಲ್ಲಿ ಬೇಡಿಕೆಯ ಶೇ 32, ಕೂಲಿ ಪಾವತಿಯಲ್ಲಿ ಶೇ 35, ದಂಡ ಪಾವತಿಯಲ್ಲಿ ಶೇ 35ರಷ್ಟು ಸಾಧನೆ. ಉಳಿದೆಲ್ಲವೂ ವಂಚನೆ. ಮತ ನೀಡಿದವರಿಗೆ, ತೆರಿಗೆ ತುಂಬುವವರಿಗೆ ಚುನಾಯಿತ ಸರ್ಕಾರ ಮಾಡುವ ವಂಚನೆ. ಸುಶಿಕ್ಷಿತ ಶ್ರೀಮಂತ ವರ್ಗಕ್ಕೆ ಉದ್ಯೋಗ ಖಾತರಿಯ ಈ ಮೊತ್ತ ಜುಜುಬಿ ಎನಿಸಬಹುದು. ಆದರೆ ಬರದಿಂದ ಕಂಗೆಟ್ಟಿರುವ, ಶಿಕ್ಷಣದ ಮುಖವನ್ನೇ ನೋಡದ ಉತ್ತರ ಕರ್ನಾಟಕದ ಗ್ರಾಮೀಣ ಕೂಲಿಕಾರರಿಗೆ ಮಾತ್ರ ಜೀವತಂತು ಆಗಿದೆ ಉದ್ಯೋಗ ಖಾತರಿ. ಸುಗ್ಗಿ ಮುಗಿದಿದೆ, ಎಲ್ಲರಿಗೂ ಕೆಲಸ ಬೇಕಾಗಿರುವ ಫೆಬ್ರುವರಿ, ಮಾರ್ಚ್ ಅತಿ ಹೆಚ್ಚು ಕೆಲಸದ ಬೇಡಿಕೆಯ ತಿಂಗಳುಗಳು. ಬೇಡಿದ ಎಲ್ಲರಿಗೂ ಕೂಲಿ ಕೊಟ್ಟರೆ ಕೂಲಿ ಪಾವತಿಯ ಮೊತ್ತ ಈ ಎರಡು ತಿಂಗಳಲ್ಲೇ ₹12,000 ಕೋಟಿಗೇರುತ್ತದೆ. ಮತ್ತೆ ವಂಚನೆಯ ಮಾರ್ಗವನ್ನೇ ಸರ್ಕಾರ ಹಿಡಿಯಬೇಕು. ಉದ್ಯೋಗ ಕೊಡುವಲ್ಲಿ ವಂಚನೆ, ಕೂಲಿ ಕೊಡುವಲ್ಲಿ ವಂಚನೆ. ಅಷ್ಟರಲ್ಲಿ ಮತದಾನದ ಸಮಯ ಬರುತ್ತದೆ. ಗಂಡಂದಿರಿಗೆ ಹೆಂಡ ಕುಡಿಸಿ ಹೆಂಡತಿಯದ್ದೂ ಮತ ಕದಿಯುವ ಯೋಚನೆ. ಆದರೆ ಈ ವರ್ಷ ಕರ್ನಾಟಕದ ಗ್ರಾಮೀಣ ಕೂಲಿಕಾರ ಮಹಿಳೆಯರಿಗೆ ಮಾತ್ರ ಈ ವಂಚನೆಯ ಸ್ವರೂಪ ಅರ್ಥವಾಗಿದೆ. ಪಕ್ಷಗಳು ಕೂಡ ಅರ್ಥಮಾಡಿಕೊಂಡರೆ ಮಾತ್ರ ವೋಟು ಬಿದ್ದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.