ADVERTISEMENT

ವಿಶ್ಲೇಷಣೆ | ‘ಹೈಕಮಾಂಡ್‌ ಮಾದರಿ’ ಪ್ರಜಾತಂತ್ರ!

ಚಂದ್ರಕಾಂತ ವಡ್ಡು
Published 4 ಜುಲೈ 2025, 23:36 IST
Last Updated 4 ಜುಲೈ 2025, 23:36 IST
   

ಜಗತ್ತಿನಾದ್ಯಂತ ತನ್ನದೇ ಆದ ಮಾನದಂಡ ಬಳಸಿ ಪ್ರತೀ ವರ್ಷ ಪ್ರಜಾಪ್ರಭುತ್ವವನ್ನು ಅಳೆಯುವ ವ್ಯವಸ್ಥಿತ ಕಾರ್ಯವನ್ನು ಸ್ವೀಡನ್ ದೇಶದ ‘ವಿ–ಡೆಮ್’ (ವೆರೈಟೀಸ್ ಆಫ್ ಡೆಮಾಕ್ರಸೀಸ್) ಸಂಸ್ಥೆ ಮಾಡುತ್ತಿದೆ. ಗೋಥೆನ್‌ಬರ್ಗ್ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಭಾಗವಾಗಿರುವ ಈ ಸಂಸ್ಥೆ ಇದೀಗ ತನ್ನ 2025ನೇ ಸಾಲಿನ ‘ಡೆಮಾಕ್ರಸಿ ರಿಪೋರ್ಟ್’ ಅನ್ನು ಬಿಡುಗಡೆ ಮಾಡಿದೆ. ‘25 ವರ್ಷ
ಗಳ ನಿರಂಕುಶೀಕರಣ: ಪ್ರಜಾಪ್ರಭುತ್ವದ ಸೋಲು?’ ಶೀರ್ಷಿಕೆಯ ಈ ವರದಿ ಹೊರಗೆಡವಿರುವ ಮಾಹಿತಿ ಹಾಗೂ ವಸ್ತುನಿಷ್ಠ ವಿಶ್ಲೇಷಣೆಯು ಪ್ರಜಾಪ್ರಭುತ್ವ ಪ್ರೇಮಿಗಳನ್ನು ಹಲವು ಆಯಾಮಗಳ ಚಿಂತನೆಗೆ ಹಚ್ಚುತ್ತದೆ.

ಈ ವರದಿಯ ಇಂಗ್ಲಿಷ್ ಶೀರ್ಷಿಕೆಯಲ್ಲಿ ಬಳಸಿರುವ ‘Trumped’ ಪದವಂತೂ ಜಾಗತಿಕ ವಿದ್ಯ
ಮಾನಗಳ ಹಿನ್ನೆಲೆಯಲ್ಲಿ ವಿಶೇಷ ಅರ್ಥ ಹೊಳೆಯಿಸುತ್ತದೆ. ‘ಟ್ರಂಪ್ ಆಡಳಿತವು ದೇಶೀಯವಾಗಿ ತೆಗೆದು
ಕೊಳ್ಳುತ್ತಿರುವ ಕ್ರಮಗಳು ಸತತ ಕುಸಿತದತ್ತ ಸಾಗುತ್ತಿರುವ ಪ್ರಜಾಪ್ರಭುತ್ವವನ್ನು ಇನ್ನಷ್ಟು ಆಳಕ್ಕೆ ಸೆಳೆಯು
ವುದು ಸ್ಪಷ್ಟವಾಗಿದೆ’ ಎಂಬುದನ್ನು ವರದಿಯ ಮುನ್ನುಡಿಯಲ್ಲಿಯೇ ಉಲ್ಲೇಖಿಸಲಾಗಿದೆ. ಯಾವ ಮಾನದಂಡದಿಂದ ಅಳೆದರೂ ವರ್ಷಗಳು ಉರುಳಿದಂತೆ ಪ್ರಜಾಪ್ರಭುತ್ವ ಹಾನಿ ಅನುಭವಿಸು
ತ್ತಿರುವುದು ಹಾಗೂ ಹೆಚ್ಚಿನ ದೇಶಗಳು ನಿರಂಕುಶ ಪ್ರಭುತ್ವದತ್ತ ದಾಪುಗಾಲು ಇಡುತ್ತಿರುವುದನ್ನು ಗಮನಿಸಬಹುದು. ಇದು ಆತಂಕಕಾರಿ ಬೆಳವಣಿಗೆ.

‘ಡೆಮಾಕ್ರಸಿ ರಿಪೋರ್ಟ್’ನಲ್ಲಿ ‘ಚುನಾವಣಾ ನಿರಂಕುಶಾಧಿಕಾರ’ದ ವರ್ಗೀಕರಣದಲ್ಲಿ ಭಾರತವನ್ನು ಗುರ್ತಿಸಲಾಗಿದ್ದು, ಈ ಬಗೆಯ ರಾಜಕೀಯ ವ್ಯವಸ್ಥೆಯಲ್ಲಿ ನಡೆಯುವ ಚುನಾವಣೆಗಳು ಮುಕ್ತ ಮತ್ತು ನ್ಯಾಯಸಮ್ಮತ ಆಗಿರುವುದಿಲ್ಲ ಎಂದು ಹೇಳಲಾಗಿದೆ. ಸಮೀಕ್ಷೆಯ ಮುಖ್ಯಾಂಶಗಳನ್ನು ಹೀಗೆ ಗುರ್ತಿಸ
ಬಹುದು: ಕೇಂದ್ರದ ಆಡಳಿತಾರೂಢ ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರು ಪ್ರಜಾಪ್ರಭುತ್ವ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಹಾಳುಗೆಡವಿದ ಕಾರಣ 2017ರಲ್ಲಿ ಭಾರತ ಈ ಸ್ಥಿತಿಗೆ ಪರಿವರ್ತನೆಯಾಯಿತು. ವಿವಿಧ ಪ್ರಜಾಪ್ರಭುತ್ವ ಸೂಚ್ಯಂಕಗಳಲ್ಲಿ ಭಾರತದ ಶ್ರೇಯಾಂಕಗಳು ಗಮನಾರ್ಹ ಕುಸಿತಗಳನ್ನು ಪ್ರತಿಬಿಂಬಿಸುತ್ತವೆ: ‘ಲಿಬರಲ್ ಡೆಮಾಕ್ರಸಿ’ ಸೂಚ್ಯಂಕದಲ್ಲಿ 0.29 ಅಂಕಗಳೊಂದಿಗೆ 100ನೇ ಸ್ಥಾನ, ‘ಚುನಾವಣಾ ಡೆಮಾಕ್ರಸಿ’ ಸೂಚ್ಯಂಕದಲ್ಲಿ 0.40 ಅಂಕಗಳೊಂದಿಗೆ 105ನೇ ಸ್ಥಾನ. ಈ ಅಂಕಗಳು, ಕಳೆದ ದಶಕದಲ್ಲಿನ ದೇಶದ ಪ್ರಜಾಪ್ರಭುತ್ವ ಸಂಸ್ಥೆಗಳು ಮತ್ತು ಆಚರಣೆಗಳ ಅವನತಿಯನ್ನು ಎತ್ತಿ ತೋರಿಸುತ್ತವೆ.

ADVERTISEMENT

‘ಪ್ರಜಾಪ್ರಭುತ್ವ ಎಂದರೆ ಪ್ರಜೆಗಳ, ಪ್ರಜೆಗಳಿಂದ, ಪ್ರಜೆಗಳಿಗಾಗಿ ಇರುವ ಆಡಳಿತ ವ್ಯವಸ್ಥೆ’ ಎಂಬ ಅಬ್ರಹಾಂ ಲಿಂಕನ್ ಅವರ ಪ್ರಸಿದ್ಧ ವ್ಯಾಖ್ಯಾನವು ಕಾಲದ ನಡಿಗೆಯಲ್ಲಿ ಸವಕಲಾದ ಸಂದರ್ಭವಿದು. ‘ಬಂಡವಾಳಶಾಹಿಗಳ, ಬಂಡವಾಳಶಾಹಿಗಳಿಂದ, ಬಂಡವಾಳಶಾಹಿಗಳಿಗಾಗಿ’ ರೂಪುಗೊಂಡ ವ್ಯವಸ್ಥೆ
ಯಲ್ಲಿ ನಾವಿದ್ದೇವೆ. ಮತ್ತೊಂದೆಡೆ, ವಿಶ್ವಮಾನವ ಪರಿಕಲ್ಪನೆ ಪ್ರತಿಪಾದಿಸಿದ ಕುವೆಂಪು ಅವರು ‘ನಿರಂಕುಶಮತಿಗಳಾಗಿ’ ಎಂದು ಕರೆ ಕೊಟ್ಟರು. ಆದರೆ, ತಮ್ಮ ಮತಿಗೆ ಅಂಕುಶ ಕೊಟ್ಟುಕೊಂಡ ಮತ
ದಾರರು ನಿರಂಕುಶ ಪ್ರಭುತ್ವದ ಹುಟ್ಟಿಗೆ, ಬೆಳವಣಿಗೆಗೆ ಕಾರಣರಾಗುತ್ತಿರುವುದು ದಾರುಣ ವಾಸ್ತವ.

ನಿರಂಕುಶ ಪ್ರಜಾಪ್ರಭುತ್ವದ ಉಪ–ಉತ್ಪನ್ನ ಎಂದು ಅನುಮಾನವಿಲ್ಲದೇ ಪರಿಗಣಿಸಬಹುದಾದ ಹೈಕಮಾಂಡ್ ಹಸ್ತಕ್ಷೇಪವು ಭಾರತದಲ್ಲಿ ಮತ್ತು ಕರ್ನಾಟಕದಲ್ಲಿ ಬಹುಕಾಲದಿಂದ ಜಾರಿಯಲ್ಲಿದೆ. ಹೊಚ್ಚ ಹೊಸ ಬೆಳವಣಿಗೆ ಎಂದರೆ, ಈ ವ್ಯವಸ್ಥೆಯು ‘ಹೈಕಮಾಂಡ್ ಮಾದರಿ ಪ್ರಜಾತಂತ್ರ’ ಎಂದು
ಧಾರಾಳವಾಗಿ ಹೆಸರಿಸಬಹುದಾದ ಅವಸ್ಥೆಗೆ ತಲುಪಿರುವುದು!

ಎಚ್. ಕಾಂತರಾಜು ನೇತೃತ್ವದ ರಾಜ್ಯ ಹಿಂದುಳಿದ ವರ್ಗಗಳ ಶಾಶ್ವತ ಆಯೋಗವು ಸಿದ್ಧಪಡಿಸಿದ್ದ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ ವರದಿಯು ಒಂದು ದಶಕದಿಂದ ಆಡಳಿತಗಾರರ ಅಂಗಳದಲ್ಲಿ ನನೆಗುದಿಗೆ ಬಿದ್ದಿತ್ತು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದ ಮೊದಲ ಅವಧಿಯಲ್ಲಿಯೇ ಸಿದ್ಧವಾಗಿದ್ದ ಈ ವರದಿಯನ್ನು ಯಾವುದೋ ಕಾರಣಕ್ಕೆ ಬಾಕಿ ಉಳಿಸಿದ್ದರು. ನಂತರ, ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಮತ್ತು ಮೀಸಲಾತಿ ವರ್ಗೀಕರಣ ವಿಷಯವನ್ನು ಚುನಾವಣಾ ರಾಜಕೀಯಕ್ಕೆ ಬಳಸಿಕೊಂಡು ಗೊಂದಲ ಹುಟ್ಟಿಸಿದ್ದೂ ಆಯ್ತು. ಸಿದ್ದರಾಮಯ್ಯನವರು ತಮ್ಮ ಅಧಿಕಾರದ ಎರಡನೇ ಅವಧಿಯಲ್ಲಿ ಈ ವರದಿ ಕುರಿತು ವಿಶೇಷ ಮುತುವರ್ಜಿ ವಹಿಸಿ ವ್ಯಾಪಕ ಚರ್ಚೆಗೆ, ವಿವಾದಕ್ಕೆ ಆಸ್ಪದ ಒದಗಿಸಿದರು.

ಇದೀಗ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಬದಿಗೆ ಸರಿಸಿ
ರುವ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ, ಹೊಸದಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡಲು ನಿರ್ಧರಿಸಿದೆ. ಈ ನಿರ್ಧಾರ ತೆಗೆದುಕೊಂಡಿದ್ದು ರಾಜ್ಯ ಸಚಿವ ಸಂಪುಟ ಅಲ್ಲ; ಕಾಂಗ್ರೆಸ್ ಪಕ್ಷದ ಹೈಕಮಾಂಡ್! ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಇನ್ನೇನು ಜಾರಿಗೊಳಿಸುವ ಹಂತ
ದಲ್ಲಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ‘ತಡೆ’ ನೀಡಿದೆ. ಈ ವರದಿಯ ವಿಚಾರವಾಗಿ ಗಟ್ಟಿ ನಿಲುವು ತಳೆದಿದ್ದ ಸಿದ್ದರಾಮಯ್ಯ, ಇದೀಗ ಹೈಕಮಾಂಡ್ ಸೂಚನೆಗೆ ಮಣಿದು ಮರು ಸಮೀಕ್ಷೆಗೆ ಮುಂದಾಗಿದ್ದಾರೆ. ಇದು ‘ಹೈಕಮಾಂಡ್ ಮಾದರಿ’ ಪ್ರಜಾತಂತ್ರಕ್ಕೆ ತಾಜಾ ನಿದರ್ಶನ.

ಇತ್ತೀಚೆಗೆ ನಂದಿ ಗಿರಿಧಾಮದಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಹೊರಡುವ ಮೊದಲು ಸಿದ್ದರಾಮಯ್ಯ ಅವರಿಗೆ ಮಾಧ್ಯಮದವರು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಬದಲಾಗುತ್ತಾರೆ ಅಂತ ಬಿಜೆಪಿ
ಯವರು, ಜೆಡಿಎಸ್‌ನವರು ಹೇಳ್ತಿದ್ದಾರೆ...’ ಎಂಬ ಪ್ರಶ್ನೆ ಮುಂದಿಟ್ಟರು. ‘ಅವರು ನಮ್ಮ ಹೈಕಮಾಂಡಾ...? ಬಿಜೆಪಿಯ ಆರ್. ಅಶೋಕ, ಬಿ.ವೈ. ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ ನಮ್ಮ ಹೈಕಮಾಂಡ್ ಅಲ್ಲ. ನಾನೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ’– ಇದು ಮಾಧ್ಯಮದವರ ಪ್ರಶ್ನೆಗೆ ಸಿದ್ದರಾಮಯ್ಯ ಅವರ ಖಚಿತ ನುಡಿ.

‘ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನಾನು ಏನನ್ನೂ ಚರ್ಚೆ ಮಾಡಲು ಹೋಗುವುದಿಲ್ಲ. ಹೈಕಮಾಂಡ್ ಏನನ್ನು ಅಪೇಕ್ಷಿಸುತ್ತದೆಯೋ ಅದು ಅಂತಿಮ ಮತ್ತು ಅದನ್ನು ಈಡೇರಿಸಲಾಗುವುದು’– ಇದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೇಳಿಕೆ.

ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಸಚಿವ ಸತೀಶ ಜಾರಕಿಹೊಳಿ ಅವರಿಗೆ, ‘ನವೆಂಬರ್, ಡಿಸೆಂಬರ್‌ನಲ್ಲಿ ಸಿಎಂ ಬದಲಾವಣೆ ಆಗ್ತದಂತೆ... ನಿಜಾನಾ...?’ ಎಂಬ ಪ್ರಶ್ನೆ
ಎದುರಾದಾಗ, ಅವರು ನೀಡಿದ ವಿವರಣೆ: ‘ಅದನ್ನು ವರಿಷ್ಠರಿಗೆ ಕೇಳಬೇಕು. ನಾವು ಹೇಳಲಿಕ್ಕಾಗಲ್ಲ. ಅದು ಹೈಕಮಾಂಡ್ ಮಟ್ಟದಲ್ಲಿ ಇರುವಂಥ ವಿಷಯ, ನಮ್ಮ ಮಟ್ಟದಲ್ಲಿ ಇಲ್ಲ. ಅದರ ಬಗ್ಗೆ ಹೇಳುವಂಥ ಅಧಿಕಾರ, ಅದನ್ನು ಚರ್ಚೆ ಮಾಡುವಂಥ ಅಧಿಕಾರವೂ ನಮಗೆ ಇಲ್ಲ. ಅಲ್ಲಿ ಕೇಳಿದರೆ ಸರಿಯಾದ ಉತ್ತರ ಸಿಗಬಹುದು...’

‘2028ಕ್ಕೆ ಡಿಕೆ ಸರ್ಕಾರ ತನ್ನಿ’ ಎಂಬ ಡಿ.ಕೆ. ಶಿವಕುಮಾರ್ ಕರೆಗೆ ಸಹಕಾರ ಸಚಿವ ರಾಜಣ್ಣ, ‘ಎಲ್ಲ ವಿಷಯಗಳಲ್ಲೂ ಅಂತಿಮ ನಿರ್ಧಾರ ಹೈಕಮಾಂಡಿನದ್ದು’ ಎಂದು ಪುನರುಚ್ಚರಿಸಿದ್ದಾರೆ. ‘ಅಧಿಕಾರಕ್ಕೆ ಬರಬೇಕಾದರೆ ಬಹುಮತ ಬೇಕು. ಸರ್ಕಾರ ರಚಿಸಲು ಬೇಕಾದಷ್ಟು ನಂಬರುಗಳು ಸಿಕ್ಕರೆ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ’ ಎಂಬ ಜನತಂತ್ರ ವಿರೋಧಿ ನಿಲುವನ್ನು ಅವರು ಯಾವ ಮುಜುಗರವೂ ಇಲ್ಲದೆ ವ್ಯಕ್ತಪಡಿಸುತ್ತಾರೆ.

ಹೈಕಮಾಂಡ್ ಮಂತ್ರ ಜಪಿಸುವವರ ಸಾಲಿನಲ್ಲಿ ಹಿರಿಯ ರಾಜಕಾರಣಿಗಳಾದ ಎಚ್.ಕೆ. ಪಾಟೀಲ, ರಾಮಲಿಂಗಾರೆಡ್ಡಿ, ಜಿ. ಪರಮೇಶ್ವರ, ಕೆ.ಎಚ್. ಮುನಿಯಪ್ಪ, ಎಂ.ಬಿ. ಪಾಟೀಲ, ಆರ್.ಬಿ.
ತಿಮ್ಮಾಪುರ, ಎಚ್.ಸಿ. ಮಹಾದೇವಪ್ಪ ಮುಂತಾದವರೂ ಸೇರಿರುವುದು ಬೇರೇನನ್ನೋ ಸೂಚಿಸುತ್ತದೆ. ಪ್ರಜಾಸತ್ತಾತ್ಮಕ ವ್ಯವಸ್ಥೆ, ಸಂವಿಧಾನದ ಚೌಕಟ್ಟು ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಆಶಯ ಕುರಿತು ಸಾಕಷ್ಟು ಗಟ್ಟಿದನಿಯಲ್ಲಿ ಮಾತನಾಡುವ ಸಚಿವರಾದ ಸಂತೋಷ್ ಲಾಡ್ ಮತ್ತು ಪ್ರಿಯಾಂಕ್ ಖರ್ಗೆ ಅವರು ಹೈಕಮಾಂಡಿನ ಸಂವಿಧಾನ ಬಾಹಿರ ಮಧ್ಯಪ್ರವೇಶವನ್ನು ಯಾವ ತಾತ್ವಿಕತೆಯ ಸಂಕಥನಕ್ಕೆ ಜೋಡಿಸುತ್ತಾರೆ ಎಂಬುದು ಮತ್ತೊಂದು ಕುತೂಹಲಕಾರಿ ಸಂಗತಿ.

ಅಧಿಕಾರದಲ್ಲಿರುವ ಕಾರಣಕ್ಕಾಗಿ ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ನ ಹಸ್ತಕ್ಷೇಪದ ಉದಾಹರಣೆಗಳನ್ನು ಪ್ರಸ್ತಾಪಿಸಿದರೂ ‘ಜೀ ಹುಜೂರ್‌’ ವಿಷಯದಲ್ಲಿ ಕಾಂಗ್ರೆಸ್‌ಗಿಂತಲೂ ಬಿಜೆಪಿ ಭಿನ್ನವಲ್ಲ. ಹೈಕಮಾಂಡ್‌ ಸಮ್ಮುಖದಲ್ಲಿ ಇಬ್ಬರ ಬೆನ್ನುಮೂಳೆಯೂ ದುರ್ಬಲವೇ.

ಕರ್ನಾಟಕದಲ್ಲಿ ಹೈಕಮಾಂಡ್ ಹಸ್ತಕ್ಷೇಪ ಕೇವಲ ಆ ಪಕ್ಷಕ್ಕೆ ಸಂಬಂಧಿಸಿದ ವಿಷಯ ಅಥವಾ ಸಮಸ್ಯೆಯಲ್ಲ; ಅದು ಒಕ್ಕೂಟ ಪ್ರಜಾಪ್ರಭುತ್ವ ವ್ಯವಸ್ಥೆಗೇ ಮಾರಕ, ಪ್ರಾದೇಶಿಕತೆ ಮತ್ತು ಸ್ಥಳೀಯ ಆಶಯಗಳಿಗೆ ಕಂಟಕ. ಬಹುಮುಖ್ಯವಾಗಿ, ಹೈಕಮಾಂಡ್ ಸೂತ್ರಧಾರತ್ವವು ಪಕ್ಷದ ಶಿಸ್ತಿನ ಸೋಗಿನಲ್ಲಿ ಕೇಂದ್ರೀಕೃತ ಸರ್ವಾಧಿಕಾರ ಬೆಳೆಸುವ ಅಪಾಯವನ್ನು ತಂದೊಡ್ಡುತ್ತದೆ.

ಸಂದಿಗ್ಧ ಸಮಯದಲ್ಲಿ ರಾಜಕೀಯ ಜಾಣತನದ ಭಾಗವಾಗಿ ಹೈಕಮಾಂಡ್ ಕಡೆ ಕೈ ತೋರಿಸುವುದನ್ನು ಅರ್ಥ ಮಾಡಿಕೊಳ್ಳಬಹುದು. ಆಯಾ ಪಕ್ಷಗಳು ತಮ್ಮ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳುವಾಗ ಇಲ್ಲವೇ ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳನ್ನು ನಿರ್ಧರಿಸುವಾಗ ಹೈಕಮಾಂಡ್ ಅವಲಂಬಿಸಿದರೆ ಯಾರ ಅಭ್ಯಂತರವೂ ಇರಲಾರದು. ಆದರೆ, ಒಂದು ರಾಜ್ಯದ ಮುಖ್ಯಮಂತ್ರಿಯಂತಹ ಮಹತ್ವದ ಆಯ್ಕೆಯ ವಿಷಯವನ್ನು ಕೂಡ ಹೈಕಮಾಂಡ್ ಪಾದಗಳಿಗೆ ಅರ್ಪಿಸಿದರೆ ಹೇಗೆ? ಇಂತಹ ನಿಲುವು, ವರ್ತನೆಗಳು ಪ್ರಜಾಪ್ರಭುತ್ವದ ಗುಣಮಟ್ಟವನ್ನು ಯಾವ ಹಂತಕ್ಕೆ ಇಳಿಸಬಹುದು ಎಂಬ ಎಚ್ಚರಿಕೆ ಇರಬೇಡವೇ? ಇನ್ನು, ರಾಜಕೀಯ ಪಕ್ಷಗಳಂತೂ ಆಂತರಿಕ ಪ್ರಜಾಪ್ರಭುತ್ವ ಕುರಿತು ಮಾತನಾಡುವುದನ್ನೂ ನಿಲ್ಲಿಸಿವೆ.

‘ವಿ–ಡೆಮ್’ ಸಂಸ್ಥೆಯ ವರದಿಯಲ್ಲಿ ಉಲ್ಲೇಖಿಸಿದಂತೆ, ಭಾರತ ಈಗಾಗಲೇ ‘ಚುನಾವಣಾ ನಿರಂಕುಶಾಧಿಕಾರ’ ಇರುವ ದೇಶವಾಗಿ ವರ್ಗೀಕರಣ ಹೊಂದಿದೆ. ಅಂದರೆ, ಇಲ್ಲಿ ಮುಕ್ತ ಮತ್ತು ನ್ಯಾಯಯುತ ಮಾರ್ಗದಲ್ಲಿ ಚುನಾವಣೆಗಳು ನಡೆಯುತ್ತಿಲ್ಲ. ಹಾಗಾಗಿ ಶಾಸನಸಭೆಗೆ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪ್ರಾಥಮಿಕ ಹಂತದಲ್ಲೇ ಪ್ರಜಾತಂತ್ರದ ಮೌಲ್ಯಗಳು ಪೆಟ್ಟು ತಿನ್ನುತ್ತಿವೆ. ಹೀಗೆ ಆಯ್ಕೆಯಾದ ಶಾಸಕರು ನಿರ್ಧರಿಸಬೇಕಾದ ಶಾಸಕಾಂಗ ಪಕ್ಷದ ನಾಯಕನನ್ನು ಹೈಕಮಾಂಡ್ ಹೇರಿಕೆಗೆ ಬಿಡುವುದು ಪ್ರಜಾಸತ್ತಾತ್ಮಕ ನಡಾವಳಿ ಅನುಭವಿಸುವ ಎರಡನೇ ಹಂತದ ಆಘಾತ!

ಹಾಗಾದರೆ ಹೈಕಮಾಂಡ್ ಸಂಸ್ಕೃತಿಗೆ ಪರ್ಯಾಯವೇನು?

ಸಾಮಾನ್ಯವಾಗಿ ಈ ವಿಷಯದ ಚರ್ಚೆ ಬಂದಾಗ ಹೈಕಮಾಂಡ್ ರಹಿತ ವ್ಯವಸ್ಥೆಯಾಗಿ ಪ್ರಾದೇಶಿಕ ಪಕ್ಷಗಳ ಕಡೆ ದೃಷ್ಟಿ ಬೀರಲಾಗುತ್ತದೆ. ಆದರೆ, ಪ್ರಾದೇಶಿಕ ಪಕ್ಷಗಳಲ್ಲಿನ ಕುಟುಂಬ ರಾಜಕಾರಣದಿಂದ ಪ್ರಜಾತಂತ್ರ ಮತ್ತೊಂದು ಬಗೆಯಲ್ಲಿ ಅಪಚಾರಕ್ಕೆ ಈಡಾಗುವುದನ್ನು ಕಾಣಬಹುದು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು, ‘ಪ್ರಾದೇಶಿಕ ಪಕ್ಷಗಳು ಪ್ರಜಾಪ್ರಭುತ್ವದ ಜೀವಾಳ’ ಎಂದು ಇತ್ತೀಚೆಗೆ ಪ್ರತಿಪಾದಿಸಿದ್ದಾರೆ. ಗೌಡರು ಈ ಮಾತು ಆಡುವಾಗ ಅವರ ಅಕ್ಕಪಕ್ಕದಲ್ಲಿ ಮಗ ಎಚ್.ಡಿ. ಕುಮಾರಸ್ವಾಮಿ ಮತ್ತು ಮೊಮ್ಮಗ ನಿಖಿಲ್ ಕುಮಾರಸ್ವಾಮಿ ನಿಂತಿದ್ದರು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.