
ವರ್ತಮಾನದ ಭಾರತದಲ್ಲಿ ಚಾಲ್ತಿಯಲ್ಲಿರುವ ರಂಗುರಂಗಿನ ಕನಸುಗಳಲ್ಲಿ ‘ವಿಶ್ವಗುರು’ ಪರಿಕಲ್ಪನೆಯೂ ಒಂದು. ಗುರಿ ಚೆನ್ನಾಗಿಯೇ ಇದೆ. ಸಮಸ್ಯೆ ಇರುವುದು, ವಿಶ್ವಗುರು ಆಗುವುದಕ್ಕೆ ಅಗತ್ಯವಾದ ಇಂಧನವನ್ನು ಭೂತಕಾಲದಲ್ಲಿ ಹುಡುಕುತ್ತಿರುವುದರಲ್ಲಿ ಹಾಗೂ ಸನಾತನ ಧರ್ಮದ ವ್ಯಾಖ್ಯಾನಗಳನ್ನು ರಾಜಕೀಯ ಗೊಳಿಸಿರುವುದರಲ್ಲಿ.
‘ಭಾರತವನ್ನು ವಿಶ್ವಗುರುವನ್ನಾಗಿ ಮಾಡುವುದು ನಮ್ಮ ಗುರಿ’ ಎಂದು ಬಿಜೆಪಿ–ಆರ್‌ಎಸ್‌ಎಸ್ ಒಕ್ಕೂಟವು ಬಹಳ ಕಾಲದಿಂದಲೂ ಹೇಳುತ್ತಲೇ ಬಂದಿದೆ. ಆಕರ್ಷಕವಾದ ಈ ಮಾತಿಗೆ ದೊಡ್ಡ ಸಂಖ್ಯೆಯ ಭಾರತೀಯರು ಮಾರುಹೋಗಿದ್ದಾರೆ. ಬಹಳ ಜನರು ಈಗಾಗಲೇ ಭಾರತವು ವಿಶ್ವಗುರು ಆಗಿಬಿಟ್ಟಿದೆ ಎಂದು ನಂಬಿದ್ದಾರೆ. ನಮ್ಮ ದೇಶವು ಇಡೀ ಜಗತ್ತನ್ನು ಸುಧಾರಿಸುವ ಗುರು ಆಗುವುದಾದರೆ, ಅದು ಬೇಡ ಎಂದು ಹೇಳುವ ಯಾವ ಭಾರತೀಯನೂ ಇರಲಾರ.
ಭಾರತವನ್ನು ವಿಶ್ವಗುರುವನ್ನಾಗಿ ಪರಿವರ್ತಿಸುವ ತನ್ನ ಕನಸಿನ ಬಗ್ಗೆ ಬಿಜೆಪಿಯು 2014ರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಕೆಲವು ಮಾತುಗಳನ್ನು ಹೇಳಿದೆ. ಅದರಲ್ಲಿ ಬಹಳ ಮುಖ್ಯವಾದದ್ದೆಂದರೆ, ‘ಭಾರತದ ಶಕ್ತಿ ಅದರ ಪ್ರಾಚೀನ ಬುದ್ಧಿವಂತಿಕೆ ಮತ್ತು ಪರಂಪರೆಯಲ್ಲಿದೆ’ ಎಂಬ ಮಾತು. ಪ್ರಧಾನಿ ಮೋದಿಯವರು ತಮ್ಮ ಮೊದಲ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ (2014) ‘ನನ್ನ ತಾಯಿ ಭಾರತವನ್ನು ವಿಶ್ವಗುರುವಾಗಿ ಕೂರಿಸಲಾಗುವುದು’ ಎಂದು ಹೇಳಿದ್ದರು. ‘ಭಾರತವನ್ನು ವಿಶ್ವಗುರುವನ್ನಾಗಿ ಮಾಡುವುದು ನಮ್ಮ ಗುರಿ’ ಎಂದು ಮೋಹನ ಭಾಗವತರು ಹೇಳುತ್ತಲೇ ಇದ್ದಾರೆ. ಈ ಕನಸಿಗೆ ಪೂರಕವಾಗಿ ಹಲವು ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. 2023ರಲ್ಲಿ ದೆಹಲಿಯಲ್ಲಿ ನಡೆದ ಜಿ–20 ಶೃಂಗಸಭೆಯಲ್ಲಿ ಅಂತರರಾಷ್ಟ್ರೀಯ ನಾಯಕರಿಗೆ ‘ಇಂಡಿಯಾ’ ಎಂಬ ಪದದ ಬದಲು ‘ಭಾರತ’ ಎಂಬ ಹಳೆಯ ಹೆಸರನ್ನು ಪರಿಚಯಿಸ ಲಾಯಿತು. ಋಷಿವಾಕ್ಯಗಳನ್ನು ಉಲ್ಲೇಖಿಸುವ ಮೂಲಕ ಪ್ರಧಾನಮಂತ್ರಿ ಅವರು ಭಾರತದ ಹಳೆಯ ನಾಗರಿಕತೆ ಎಷ್ಟು ಭವ್ಯವಾಗಿದೆ ಎಂಬುದನ್ನು ಜಗತ್ತಿಗೆ ತಿಳಿಸಲು ಪ್ರಯತ್ನಿಸುತ್ತಲೇ ಇದ್ದಾರೆ. ಮೆಕಾಲೆಯನ್ನು ಖಳನಾಯಕನನ್ನಾಗಿ ಮಾಡಲಾಗಿದೆ. ಭಾರತದ ಪ್ರಾಚೀನ ಬುದ್ಧಿವಂತಿಕೆಯು ವೈಜ್ಞಾನಿಕವೂ ಆಗಿದೆ ಎಂಬ ನಂಬಿಕೆಯಲ್ಲಿ ಅದನ್ನು ವರ್ತಮಾನಕ್ಕೆ ಪರಿಚಯಿಸಲು ಭಾರತೀಯ ವಿಜ್ಞಾನ ಸಮ್ಮೇಳನವನ್ನು ಶಂಖ ಊದಿ ಆರಂಭಿಸಲಾಯಿತು. ಅಲ್ಲಿ ಸೇರಿದ್ದ ವಿಜ್ಞಾನಿಗಳಿಗೆ ‘ಗಣಪತಿಗೆ ತಲೆ ಜೋಡಿಸಿದ್ದು ನಮ್ಮಲ್ಲಿದ್ದ ಪ್ಲಾಸ್ಟಿಕ್ ಸರ್ಜರಿಗೆ ಉದಾಹರಣೆ’ ಎಂದು
ಹೇಳಲಾಯಿತು. ರಾಮಾಯಣ ಕಾಲದಲ್ಲಿ ವಿಮಾನಇತ್ತು, ಹಸುವಿನ ಸಗಣಿ, ಮೂತ್ರ, ಹಾಲು ಇತ್ಯಾದಿ ಬಳಸಿ ಮಾಡಿದ ಪಂಚಗವ್ಯದಿಂದ ಕ್ಯಾನ್ಸರ್ ಗುಣ ಪಡಿಸಬಹುದು, ಎಂದೆಲ್ಲಾ ಪ್ರಚಾರ ಮಾಡಲಾಯಿತು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ವಾರಾಣಸಿಯಲ್ಲಿ ಪ್ರಧಾನಿಗಳ ಗಂಗಾರತಿ, ಕೇದಾರನಾಥದಲ್ಲಿ ಪ್ರಧಾನಿಗಳ ಗುಹಾಧ್ಯಾನ, ಸೋಮನಾಥಪುರದಲ್ಲಿನ ಡಮರು ಯಾತ್ರೆ – ಇತ್ಯಾದಿ ಗಳನ್ನು ಸನಾತನ ಧರ್ಮದ ಮೇಲಣ ನಂಬಿಕೆಯನ್ನು ಗಟ್ಟಿಗೊಳಿಸಲು ಸಹಕಾರಿಯಾಗುವಂತೆ ಪ್ರಸ್ತುತಪಡಿಸ ಲಾಯಿತು. ಇಂಥ ಪ್ರಕ್ರಿಯೆಗಳನ್ನು ಬಲಪಡಿಸಲು ಅನಿವಾಸಿ ಭಾರತೀಯರೂ ಪ್ರಯತ್ನಿಸುತ್ತಿದ್ದಾರೆ.
ಕಳೆದ ಅನೇಕ ವರ್ಷಗಳ ಈ ಪ್ರಯತ್ನಗಳು ಭಾರತವನ್ನು ವಿಶ್ವಗುರುವನ್ನಾಗಿಸಲು ಎಷ್ಟು ಸಹಕರಿಸಿವೆ ಎಂಬ ಪ್ರಶ್ನೆಯನ್ನು ನಾವೀಗ ಕೇಳಿಕೊಳ್ಳಬಹುದು. ಭಾರತವನ್ನು ‘ಗುರು’ ಎಂದು ಒಪ್ಪಿಕೊಳ್ಳಲು ನಮಗೆ ಕೆಲವಾದರೂ ಶಿಷ್ಯ ದೇಶಗಳು ಬೇಕು. ಆದರೆ, ವಾಸ್ತವದಲ್ಲಿ ಭಾರತದ ವಿಫಲ ವಿದೇಶಾಂಗ ನೀತಿಯಿಂದಾಗಿ ನಮಗೆ ಗೆಳೆಯರಾಗಿದ್ದ ದೇಶಗಳೇ ಈಗ ದೂರ ಸರಿದಿವೆ. ಪ್ರಧಾನಮಂತ್ರಿ ಅವರು ವಿಶ್ವದ ಅನೇಕ ದೇಶಗಳಿಗೆ ಭೇಟಿ ನೀಡಿದ್ದಾರೆ. ಆದರೆ, ಅಂಥ ದೇಶಗಳು ಭಾರತವನ್ನು ತಮ್ಮ ‘ಗುರು’ ಎಂದು ತಪ್ಪಿಯೂ ಹೇಳಿಲ್ಲ. ಆಯಕಟ್ಟಿನ ಜಾಗದಲ್ಲಿರುವ ಬಾಂಗ್ಲಾ ಮತ್ತು ನೇಪಾಳ ಇವತ್ತು ನಮ್ಮ ಜೊತೆ ಇಲ್ಲ. ಮನಮೋಹನ್ ಸಿಂಗ್ ಅವರನ್ನು ಅಮೆರಿಕದ ಆಗಿನ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಅವರು ‘ತಮ್ಮ ಗುರು’ ಎಂದು ಕರೆದಿದ್ದರು. ಅದೇ ಅಮೆರಿಕ ಇವತ್ತು ಭಾರತವನ್ನು ಅವಮಾನಿಸು ತ್ತಿದೆ. ನಮ್ಮನ್ನು ‘ಗುರು’ ಎಂದು ಬೇರೆ ದೇಶಗಳು ತಾವಾಗಿಯೇ ಒಪ್ಪಿಕೊಳ್ಳುವಂತೆ ನಾವು ಬೆಳೆಯ ಬೇಕು. ಅದರ ಬದಲು ನಾವೇ ‘ವಿಶ್ವಗುರು’ ಎಂದು ಘೋಷಿಸಿಕೊಂಡರೆ, ಅದನ್ನು ಒಂದು ಪುಟ್ಟ ದೇಶವೂ ಒಪ್ಪಿಕೊಳ್ಳಲಾರದು. ರಾಷ್ಟ್ರೀಯಭಾವ ನಮಗೆ ಮಾತ್ರವಲ್ಲ, ಎಲ್ಲ ದೇಶಗಳಿಗೂ ಇರುತ್ತದೆ.
ರಾಜಕೀಯಗೊಳಿಸಲಾದ ಸನಾತನ ಧರ್ಮದ ಅಪವ್ಯಾಖ್ಯಾನಗಳನ್ನು ವಿಶ್ವದ ವಿದ್ವತ್ ಲೋಕವೂ ಅಂಗೀಕರಿಸಿಲ್ಲ. ಬಹುಶಃ ಭಾರತವು ವಿಶ್ವಗುರು ಆಗಲು ಬೇಕಾದ ಶಕ್ತಿಯನ್ನು ಭೂತಕಾಲದಲ್ಲಿ ಹುಡುಕುತ್ತಿರುವುದೇ ಈ ದಯನೀಯ ವೈಫಲ್ಯಕ್ಕೆ ಕಾರಣವಿರಬೇಕು. ಇದ್ದುದರಲ್ಲಿ ಭಾರತದ ಯೋಗಪದ್ಧತಿ ಬಹಳ ದೇಶಗಳಲ್ಲಿ ಜನಪ್ರಿಯವಾಗಿದೆ.
ಸನಾತನ ಧರ್ಮದಲ್ಲಿ ಇತ್ತು ಎನ್ನಲಾದ ಅಂಶಗಳನ್ನು ವರ್ತಮಾನಕ್ಕೆ ಒಗ್ಗಿಸಿ, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಭಾರತ ಇದುವರೆಗೆ ಯಶಸ್ವಿಯಾಗಿಲ್ಲ. ಅದರ ಬದಲು, ಸರ್ಕಾರ ಹೇರಿದ ಅಪಕಲ್ಪನೆಗಳಿಗೆ ಬಲಿಯಾಗಿರುವ ನಮ್ಮ ಶಿಕ್ಷಣ ಸಂಸ್ಥೆಗಳು ಹಾಸ್ಯಾಸ್ಪದವಾಗುತ್ತಿವೆ. ಎರಡು ಸಾವಿರ ವರ್ಷಗಳಷ್ಟು ಹಿಂದೆ, ಜಾಗತಿಕ ಶಿಕ್ಷಣ ವ್ಯವಸ್ಥೆ ಅಸ್ತಿತ್ವದಲ್ಲಿರದ ಕಾಲದಲ್ಲಿ ಚೀನಾ, ಪರ್ಷಿಯಾ, ಮತ್ತು ಆಗ್ನೇಯ ಏಷ್ಯಾಗಳಿಂದ ನಳಂದಾ, ತಕ್ಷಶಿಲೆ, ಮತ್ತು ವಲ್ಲಭಿಗೆ ಗಣಿತ, ವೈದ್ಯಕೀಯ, ಕಾನೂನು, ತತ್ತ್ವಶಾಸ್ತ್ರ ಮತ್ತಿತರ ವಿಷಯಗಳ ಅಧ್ಯಯನಕ್ಕೆ ವಿದ್ಯಾರ್ಥಿಗಳು ಬರುತ್ತಿದ್ದರು. ಆದರೆ, ಇಂದಿನ ಭಾರತವು ಅಂತರರಾಷ್ಟ್ರೀಯ ವಿದ್ಯಾರ್ಥಿಗಳನ್ನು ಆಕರ್ಷಿಸಲು ವಿಫಲವಾಗಿದೆ. ಸಂಕೀರ್ಣ ವೀಸಾ ಪ್ರಕ್ರಿಯೆಗಳು, ವಿಶ್ವವಿದ್ಯಾಲಯಗಳ ಮೇಲೆ ರಾಜಕೀಯ ನಿಯಂತ್ರಣ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಿರಂತರ ಹಲ್ಲೆ, ಸಾರ್ವಜನಿಕ ವಲಯಗಳಲ್ಲಿ ಹೆಚ್ಚುತ್ತಿರುವ ದ್ವೇಷಭಾಷಣಗಳು, ಕೋಮುವಾದ, ಇತ್ಯಾದಿ ಕಾರಣಗಳಿಂದ ವಿದ್ಯಾರ್ಥಿಗಳು ಭಾರತಕ್ಕೆ ಬರಲು ಹೆದರುತ್ತಿದ್ದಾರೆ. ಜ್ಞಾನದ ಬಗೆಗಣ ಭಾರತೀಯರ ತಿಳಿವಳಿಕೆಯು ಬಹಳ ಸೀಮಿತ ಎಂಬ ಭಾವನೆ ಅಂತರರಾಷ್ಟ್ರೀಯವಾಗಿ ಬೆಳೆಯುತ್ತಿದೆ.
ವಿವೇಕಾನಂದರು ‘ಮೈ ಮಾಸ್ಟರ್’ ಪ್ರಬಂಧದಲ್ಲಿ ಗುರುವಾಗಲು ಮೂರು ವಿಷಯಗಳು ಅವಶ್ಯಕ ಎಂದು ಹೇಳಿದ್ದಾರೆ. ಮೊದಲನೆಯದು, ಜನರ ಬಗ್ಗೆ ನೀವು ನಿಜವಾಗಿಯೂ ಅನುಕಂಪ ಮತ್ತು ಸಹಾನುಭೂತಿ ಹೊಂದಿದ್ದೀರಾ ಎಂದು ಕೇಳಿ ಕೊಳ್ಳುವುದು; ಎರಡನೆಯದು, ಹಳೆಯ ವಿಚಾರಗಳಿಂದ ಚಿನ್ನವನ್ನು ತೆಗೆಯಬಲ್ಲಿರಾ ಎಂದು ಪರಿಶೀಲಿಸಿಕೊಳ್ಳುವುದು; ಮೂರನೆಯದು, ನಿಮ್ಮ ನಿಜವಾದ ಉದ್ದೇಶವೇನು? ಅಧಿಕಾರದ ದಾಹದಿಂದ ನಿಮ್ಮ ಉದ್ದೇಶಗಳು ಪ್ರೇರಿತವಾಗಿಲ್ಲ ಎಂಬುದು ಖಚಿತವಾಗಿದೆಯೇ ಎಂಬ ಪ್ರಶ್ನೆಗಳಿಗೆ ಪ್ರಾಮಾಣಿಕ ಉತ್ತರ ನೀಡುವುದು. ಇವುಗಳಿಗೆ ಸರಿಯಾದ ಉತ್ತರ ಕಂಡುಕೊಂಡರೆ ನೀವು ಮನುಕುಲದ ಗುರುವಾಗ ಬಲ್ಲಿರಿ ಎಂದರು ವಿವೇಕಾನಂದರು. ಅಲ್ಪಸಂಖ್ಯಾತರ ಮೇಲೆ ವಿನಾಕಾರಣ ಆಕ್ರಮಣ ಮಾಡುವ, ಮಹಿಳೆ ಯರ ಮೇಲೆ ಅತ್ಯಾಚಾರ ನಡೆಸುವ, ದಲಿತರಿಗೆ ಬೆಂಕಿ ಹಚ್ಚುವ ಜನರು ನಮ್ಮಲ್ಲಿ ಇರುವವರೆಗೂ ವಿವೇಕಾನಂದರು ಹೇಳುವ ‘ಗುರುತ್ವ’ ನಮಗೆ ದಕ್ಕದು. ಇದರರ್ಥ, ಭಾರತಕ್ಕೆ ವಿಶೇಷವಾದ ಶಕ್ತಿಗಳಿಲ್ಲ ಎಂದರ್ಥವಲ್ಲ. ಬೇರೆ ಯಾವುದೇ ದೇಶಕ್ಕಿಲ್ಲದ ಭಾಷಾ ವೈವಿಧ್ಯ, ಧಾರ್ಮಿಕ ವೈವಿಧ್ಯ, ಆಹಾರ ವೈವಿಧ್ಯ, ಸಮುದಾಯ ವೈವಿಧ್ಯ, ಮತ್ತು ಭೌಗೋಳಿಕ ವೈವಿಧ್ಯ ಭಾರತಕ್ಕಿದೆ. ಭಾರತದ ಈ ಗುಣಗಳು ನಾಶವಾಗದಂತೆ ಬೆಳೆಯುವ ರಾಷ್ಟ್ರೀಯ ವ್ಯವಸ್ಥೆಯೊಂದು ನಿರ್ಮಾಣವಾದರೆ, ಅದು ಜಗತ್ತಿಗೊಂದು ಹಾದಿ ತೋರಿಸಬಹುದು. ಶ್ರೇಷ್ಠತೆಯ ವ್ಯಸನದ ಧಾರ್ಮಿಕ ರಾಷ್ಟ್ರೀಯತೆಯು ಇವತ್ತಿನ ಜಗತ್ತಿಗೆ ಮಾರ್ಗದರ್ಶನ ಮಾಡಲಾರದು.
ಜಗತ್ತು ನಮ್ಮ ದೇಶವನ್ನು ಗುರುವಾಗಿ ಸ್ವೀಕರಿಸಬೇಕಾದರೆ, ಸ್ಥಳೀಯ ಸಂಸ್ಕೃತಿಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡೇ ರಾಷ್ಟ್ರೀಯ ಪರಿಕಲ್ಪನೆಯನ್ನು ಸೃಜಿಸುವ ರಾಜಕೀಯ ವ್ಯವಸ್ಥೆಯನ್ನು ಆಗುಮಾಡಬೇಕು. ಅಲ್ಪಸಂಖ್ಯಾತರಿಗೆ ಅಧಿಕಾರದಲ್ಲಿ ನ್ಯಾಯಯುತ ಪಾಲನ್ನು ನೀಡುವ ಮಾರ್ಗವನ್ನು ಕಂಡುಕೊಳ್ಳಬೇಕು. ಬಂಡವಾಳಶಾಹಿ ಮತ್ತು ಸಮಾಜವಾದದ ಸಮತೋಲನವುಳ್ಳ ಮಾನವಾಭ್ಯುದಯ ಕೇಂದ್ರಿತ ಅಭಿವೃದ್ಧಿಯ ಪ್ರಯತ್ನ ವನ್ನು ಭಾರತ ಬಿಟ್ಟುಬಿಡಬಾರದು. ಜಗತ್ತಿನಾದ್ಯಂತ ಜನರು ಸರ್ವಾಧಿಕಾರಿ ಸರ್ಕಾರಗಳ ಅಡಿಯಲ್ಲಿ ಬಳಲುತ್ತಿರುವಾಗ, ‘ಭಾರತವು ಪ್ರಜಾಪ್ರಭುತ್ವದ ತಾಯಿ’ ಎಂದು ಘೋಷಿಸಿದ ಪ್ರಧಾನಿಗಳು ತಮ್ಮ ದೇಶದಲ್ಲೇ ಜನತಂತ್ರವನ್ನು ಬಿಕ್ಕಟ್ಟಿಗೆ ತಳ್ಳಬಾರದು.
ಭಾರತವು ವಿದೇಶಿ ಸಂಸ್ಥೆಗಳು ಮಾಡುವ ಟೀಕೆಗಳನ್ನು ಸ್ವೀಕರಿಸುವ ಉದಾರತೆ ತೋರಿಸಬೇಕು. ಟೀಕಿಸುವವರನ್ನು ಜೈಲಿಗೆ ತಳ್ಳುವುದನ್ನು ಕೈಬಿಬೇಕು. ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳನ್ನು ನಿರ್ಬಂಧಿಸುವುದು, ವಿದೇಶಿ ಅನುದಾನಿತ ಸಂಸ್ಥೆಗಳಿಗೆ ಕಿರುಕುಳ ನೀಡುವುದು, ಅಂತರರಾಷ್ಟ್ರೀಯ (ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಮತ್ತು ಹ್ಯೂಮನ್ ರೈಟ್ಸ್ ವಾಚ್‌ನಂತಹ) ಸಂಸ್ಥೆಗಳ ಬಗ್ಗೆ ಲಘುವಾಗಿ ಮಾತಾಡುವುದು ಇತ್ಯಾದಿ ಘಟನೆಗಳು ದೇಶದ ಘನತೆಯನ್ನು ಹೆಚ್ಚಿಸಲಾರವು. ಅಂತರರಾಷ್ಟ್ರೀಯ ಮೌಲ್ಯಮಾಪನಗಳನ್ನು ಒಪ್ಪದೆ, ‘ನಮಗೆ ನಮ್ಮದೇ ಮಾನದಂಡಗಳಿವೆ’ ಎಂದು ವಾದಿಸುವವರು ವಿಶ್ವಗುರುವಾಗುವ ಕನಸು ಕಾಣಬಾರದು.
ಕೊನೆಯದಾಗಿ, ಗಾಂಧೀಜಿ ಮತ್ತು ಅಂಬೇಡ್ಕರರ ಪ್ರಾಮಾಣಿಕತೆ, ದಾರ್ಶನಿಕತೆಯನ್ನು ಭಾರತವು ಎಲ್ಲಿಯೂ ಯಾವುದೇ ಕಾರಣಕ್ಕೂ ಬಿಟ್ಟುಕೊಡಬಾರದು. ಗಾಂಧೀಜಿಯವರ ಜಾಗತಿಕ ಮಹತ್ವವು ಅವರ ಸತ್ಯ ಮತ್ತು ಅಹಿಂಸಾತತ್ತ್ವದ ಮೇಲೆ ನಿಂತಿದೆ. ಜಗತ್ತಿನಲ್ಲಿ ಹೆಚ್ಚು ಶಾಂತಿ ಮತ್ತು ನ್ಯಾಯವನ್ನು ತುಂಬಲು ನಮಗೆ ಗಾಂಧೀಜಿ ಬೇಕು. ಅಂಬೇಡ್ಕರ್ ದೀನದಲಿತರ ಹಕ್ಕುಗಳಿಗಾಗಿ ಹೋರಾಡಿದವರು. ಸಾಮಾಜಿಕ ಸಮಾನತೆ ಮತ್ತು ನ್ಯಾಯದ ಪ್ರವರ್ತಕರಾಗಿ ಮಾನವನ ಘನತೆ ಯನ್ನು ಎತ್ತಿ ಹಿಡಿದವರು. ಬೌದ್ಧ ಧರ್ಮದ ಪುನರುಜ್ಜೀವನ ಕಾರರಾಗಿ ವಿಶ್ವಪ್ರಸಿದ್ಧರು. ಅವರ ದೂರದೃಷ್ಟಿಯ ಚಿಂತನೆಗಳು, ಮಾನವ ಹಕ್ಕುಗಳ ಹೋರಾಟಗಳು ಜಾಗತಿಕ ಸಮೂಹಕ್ಕೆ ಸ್ಫೂರ್ತಿ ನೀಡುತ್ತಿವೆ. ಗುರಿಯೇನೋ ಸರಿ ಇದೆ. ಅದನ್ನು ತಲಪಲು ಅನುಸರಿಸುವ ವಿಧಾನ ಮತ್ತು ತಂತ್ರ ಸರಿ ಇರಬೇಕು.