
ಹುಚ್ಚಾಟ ಈಗ ವ್ಯವಸ್ಥಿತವಾಗಿದೆ. ರಾಷ್ಟ್ರವ್ಯಾಪಿಯಾಗಿ ನಡೆಸುತ್ತಿರುವ ಮತದಾರರ ಪಟ್ಟಿಯ ಎರಡನೇ ವಿಶೇಷ ಸಮಗ್ರ ಪರಿಷ್ಕರಣೆಯು (ಎಸ್‌ಐಆರ್) ಬೇಕಾಬಿಟ್ಟಿ ಪರಿಹಾರವೊಂದಕ್ಕೆ ಸಮಸ್ಯೆಯ ಹುಡುಕಾಟವಲ್ಲ. ಈಗ ಇದಕ್ಕೆ ತರ್ಕವೊಂದರ ಹುಡುಕಾಟ ನಡೆದಿದೆ ಮತ್ತು ನಿರಂತರವಾಗಿ ಮನುಷ್ಯನೇ ಸೃಷ್ಟಿಸಿರುವ ಈ ಪ್ರಮಾದವನ್ನು ಮುಚ್ಚಿ ಹಾಕಬೇಕಿದೆ. ಎಸ್‌ಐಆರ್ ಈಗ ಸುಧಾರಣೆಗಳನ್ನು ಕಂಡಿದೆ. ಸಾಮೂಹಿಕವಾಗಿ ಗೊತ್ತುಗುರಿ ಇಲ್ಲದೆ ಮತಾವಕಾಶವನ್ನು ಕಸಿದುಕೊಳ್ಳುವ ಕಾರ್ಯಾ
ಚರಣೆಯು ಈಗ ಉದ್ದೇಶಪೂರ್ವಕವಾಗಿ ಮತದಾರರನ್ನು ಹೊರಕ್ಕೆ ತಳ್ಳುವ ನಿಖರ ಮತ್ತು ಪರಿಷ್ಕೃತ ಸಾಧನವಾಗಿದೆ. ಇತ್ತೀಚೆಗೆ ಮಾಡಲಾದ ಘೋಷಣೆಯು ಚುನಾವಣಾ ಆಯೋಗದ ಅಸಮರ್ಥತೆಯನ್ನು ತೋರಿಸುತ್ತದೆ; ಅಥವಾ ಬಿಹಾರದಲ್ಲಿ ನಡೆಸಿದ ಪ್ರಯೋಗದಿಂದ ಯಾವುದೇ ಪಾಠ ಕಲಿಯಲು ಆಯೋಗಕ್ಕೆ ಇಚ್ಛೆ ಇಲ್ಲ ಎಂಬುದನ್ನು ತೋರಿಸುತ್ತದೆ.
ಪರಿಷ್ಕರಣೆಯಿಂದ ಮತದಾರರ ಪಟ್ಟಿಯ ಗುಣಮಟ್ಟದಲ್ಲಿ ಭಾರಿ ನೆಗೆತದ ಬದಲಿಗೆ ಎಲ್ಲ ಆಯಾಮಗಳಲ್ಲಿಯೂ ಅದು ಕೆಟ್ಟುಹೋಗಿದೆ: ವಯಸ್ಕರು–ಮತದಾರರ ಅನುಪಾತದಲ್ಲಿ ಗಮನಾರ್ಹ
ಇಳಿಕೆ ಆಗಿದೆ; ಮಹಿಳೆಯರು ಮತ್ತು ಮುಸ್ಲಿಮರ ಹೆಸರು ತೆಗೆದುಹಾಕಿರುವುದು ಜನಸಂಖ್ಯೆಗೆ ಅನುಗುಣವಾಗಿ ಇಲ್ಲ; ಮತದಾರರ ಪಟ್ಟಿಯಲ್ಲಿರುವ ಲೋಪಗಳು (ನಕಲಿ ಹೆಸರುಗಳು, ಅಸಂಬದ್ಧ ಉಲ್ಲೇಖ
ಗಳು, ಒಂದೇ ವಿಳಾಸದಲ್ಲಿ ನೂರಾರು ಹೆಸರುಗಳು ಇತ್ಯಾದಿ) ಈಗಲೂ ಕಣ್ಣಿಗೆ ರಾಚುವಂತಿವೆ. ಸರ್ಕಾರದ ಬೊಕ್ಕಸಕ್ಕೆ ಆಗುವ ಹಣಕಾಸಿನ ಹೊರೆಯ ಜೊತೆಗೆ ಇತರ ಸಮಸ್ಯೆಗಳೂ ಇವೆ– ಚುನಾವಣೆಗೆ ಮೊದಲು ರಾಜಕೀಯ ಅಸಮಾಧಾನ ಮತ್ತು ಬಡ ಪೌರರಿಗೆ ಆಗಿರುವ ದೈಹಿಕ ಮತ್ತು ಮಾನಸಿಕ ಹಿಂಸೆಗಳನ್ನು ಗಮನಿಸಿದರೆ ಮತದಾರರ ಪಟ್ಟಿಯನ್ನು ಯಾವ ರೀತಿ ಪರಿಷ್ಕರಣೆ ಮಾಡಬಾರದು ಎಂಬುದಕ್ಕೆ ಬಿಹಾರದ ಪ್ರಯೋಗವು ಉದಾಹರಣೆಯಂತಿದೆ.
ಪಾಠಗಳು ಎಲ್ಲರಿಗೂ ಕಾಣುವಂತೆ ಸ್ಪಷ್ಟವಾಗಿವೆ.ಒಂದು, ನಮ್ಮ ಮತದಾರರ ಪಟ್ಟಿಗಳು ಗಂಭೀರವಾದ
ದೋಷಗಳಿಂದ ಕೂಡಿವೆ. ಎರಡು, ಮೃತರಾದವರು ಮತ್ತು ಸ್ಥಳದಲ್ಲಿ ಇಲ್ಲದವರು ಸಾಮಾನ್ಯ ಪರಿಷ್ಕರಣೆಯಲ್ಲಿ ಬಹುಸಂಖ್ಯೆಯಲ್ಲಿ ಪಟ್ಟಿಯಲ್ಲಿ ಉಳಿದುಕೊಂಡರೆ ಅರ್ಹ ಹೊಸ ಮತದಾರರು ದೊಡ್ಡ ಸಂಖ್ಯೆಯಲ್ಲಿ ಹೊರಗೆ ಉಳಿಯುತ್ತಾರೆ. ಮೂರು, ಮನೆ ಮನೆಗೆ ಭೇಟಿ ಕೊಟ್ಟು ದೃಢೀಕರಿಸುವ ಕೆಲಸ ಬಹುಕಾಲದಿಂದ ಬಾಕಿ ಉಳಿದಿದೆ. ನಾಲ್ಕು, ಪ್ರತಿಯೊಬ್ಬರೂ ಒಂದು ತಿಂಗಳೊಳಗೆ ಗಣತಿ ನಮೂನೆಯನ್ನು ಭರ್ತಿ ಮಾಡಿ ಕೊಡಬೇಕು ಎಂಬುದು ಅನಗತ್ಯ ಮತ್ತು ಅದರಿಂದಾಗಿ ಬಹಳ ಮಂದಿ ಅವಕಾಶ ವಂಚಿತರಾಗುತ್ತಾರೆ. ಐದು, 2003ರಲ್ಲಿ ತಯಾರಾದ ‘ಶುದ್ಧ’ ಎಂದು ಹೇಳಲಾಗುವ ಮತದಾರರ ಪಟ್ಟಿಯ ಜೊತೆ ಮತದಾರರನ್ನು ಹೋಲಿಸಿ ನೋಡುವುದಕ್ಕೂ ಮತದಾರರ ಪಟ್ಟಿಯ ಗುಣಮಟ್ಟ ಹೆಚ್ಚಳಕ್ಕೂ ಯಾವ ಸಂಬಂಧವೂ ಇಲ್ಲ. ಆರು, ಅರ್ಹತೆಗೆ ನೀಡಬೇಕಾದ ದಾಖಲಾತಿಗಳ ಪಟ್ಟಿಯು ಸೇರ್ಪಡೆಗಿಂತ ಹೊರಗಿಡುವುದಕ್ಕೆ ಮಹತ್ವ ನೀಡುವಂತಿದೆ ಮತ್ತು ಮತದಾರರು ದಾಖಲಾತಿ ಸಲ್ಲಿಸಲು ಅಸಾಧ್ಯ ಎನ್ನುವಂತಿದೆ. ಮತ್ತು ಏಳು, ಈ ಹಿಂದೆ ಇದ್ದ ಮತದಾರರ ಪಟ್ಟಿಯಲ್ಲಿ ವಿದೇಶಿಯರ ಹೆಸರು ಸೇರ್ಪಡೆಯಾಗಿದೆ ಎಂಬುದಕ್ಕೆ ಯಾವ ಆಧಾರವೂ ಇಲ್ಲ.
ಹಾಗಾಗಿ, ಬಿಹಾರದ ಎಸ್‌ಐಆರ್ ಪ್ರಾಯೋಗಿಕ ಪ್ರಕರಣ ಎಂದಾಗಿದ್ದರೆ, ಇಡೀ ಪ್ರಯೋಗದ ಹಿಂದಿನ ವಿವೇಚನೆಯ ಕುರಿತು ಗಂಭೀರ ಮರುಚಿಂತನೆ ನಡೆಸಬೇಕಾಗಿತ್ತು. ಎಸ್‌ಐಆರ್ ಬದಲಿಗೆ ಹಳೆಯ ಶೈಲಿಯ ಸಮಗ್ರ ಮರುಪರಿಶೀಲನೆ– ಅಂದರೆ ಮನೆ ಮನೆ ಭೇಟಿ ಮೂಲಕ ದೃಢೀಕರಣ– ನಡೆಸಬೇಕಿತ್ತು ಮತ್ತು ಇದಕ್ಕೆ ಆಧುನಿಕ ಮಾಹಿತಿ ತಂತ್ರಜ್ಞಾನ ಬಳಸಿಕೊಂಡು ದೋಷಗಳನ್ನು ಸರಿಪಡಿಸಬಹುದಿತ್ತು.
ಹೀಗೆ ಮಾಡಿದ್ದರೆ, ಗಣತಿ ನಮೂನೆ ಭರ್ತಿ, ಅರ್ಹತಾದಾಖಲಾತಿಗಳ ಸಲ್ಲಿಕೆ ಮತ್ತು 2003ರ ಪಟ್ಟಿಯಲ್ಲಿ
ಇರುವವರ ಜೊತೆಗಿನ ಸಂಬಂಧ ಸಾಬೀತುಪಡಿಸುವಂತಹ ತ್ರಾಸದಾಯಕ ಪ್ರಕ್ರಿಯೆಯನ್ನು ತಪ್ಪಿಸ
ಬಹುದಿತ್ತು. ಆದರೆ, ಸುಸಂಬದ್ಧ ಮತ್ತು ಸರಳವಾದ ಮಾರ್ಗವನ್ನು ಆಯೋಗವು ಅನುಸರಿಸಲಿಲ್ಲ. ಕಾನ್ಪುರ ಐಐಟಿಯ ಹಳೆ ವಿದ್ಯಾರ್ಥಿಯಾಗಿರುವ ಮುಖ್ಯ ಚುನಾವಣಾ ಆಯುಕ್ತರು, ಒಂದಕ್ಕಿಂತ ಹೆಚ್ಚಿನ ಹೆಸರುಗಳನ್ನು ಅಳಿಸಲು ಸಾಫ್ಟ್‌ವೇರ್ ಅಗತ್ಯವೇ ಇಲ್ಲ ಎಂದಿದ್ದಾರೆ. ಮತದಾರರ ಪಟ್ಟಿಯ ‘ಶುದ್ಧೀಕರಣ’ ಚುನಾವಣಾ ಆಯೋಗಕ್ಕೆ ಅಗತ್ಯ ಇಲ್ಲ ಎಂಬ ಅನುಮಾನಕ್ಕೆ ಇದು ಪುಷ್ಟಿ ಕೊಡುತ್ತದೆ.
ಕೆಡುಕಿನ ಉದ್ದೇಶವನ್ನೇ ಅಂತರಂಗದಲ್ಲಿ ಇರಿಸಿಕೊಂಡಿರುವ ಎಸ್‌ಐಆರ್ ಯೋಜನೆಯ ಹೊಸ ಆವೃತ್ತಿಯ ಸುಧಾರಣೆಯಲ್ಲಿ ಆಡಳಿತವನ್ನು ಹೆಚ್ಚು ದಕ್ಷಗೊಳಿಸುವುದಕ್ಕೆ ಮಹತ್ವ ನೀಡಲಾಗಿದೆ. ಬಿಹಾರದ ಪ್ರಯೋಗಕ್ಕೆ ಹೋಲಿಸಿದರೆ ಈಗ ಆಯೋಗವು ಹೆಚ್ಚು ಸನ್ನದ್ಧ ಆಗಿರಬಹುದು. ಪ್ರಕ್ರಿಯೆಯಲ್ಲಿ ಭಾಗಿಯಾಗುವ ಅಧಿಕಾರಿಗಳಿಗೆ ಸಕಾಲದಲ್ಲಿ ತರಬೇತಿ ನೀಡಿಕೆ ಮತ್ತು ಹಳೆಯ ಪಟ್ಟಿಯೊಂದಿಗೆ ಹೆಸರುಗಳನ್ನು ಹೋಲಿಸಿ ನೋಡುವುದರಿಂದ ಗೊಂದಲವನ್ನು ಕಡಿಮೆ ಮಾಡಿಕೊಳ್ಳಬಹುದು. ಪಕ್ಷಗಳ ಮತಗಟ್ಟೆ ಮಟ್ಟದ ಏಜೆಂಟರಿಗೆ (ಬಿಎಲ್‌ಎ) ನಮೂನೆ ಸಲ್ಲಿಕೆಗೆ ಅವಕಾಶ ಕೊಟ್ಟರೆ ಮತಗಟ್ಟೆ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಹೊರೆ ಕಡಿಮೆಯಾಗುತ್ತದೆ. ಪ್ರಕ್ರಿಯೆ ಆರಂಭವಾದ ಬಳಿಕ ಮತ್ತು ರಹಸ್ಯವಾಗಿ ಬಿಹಾರದಲ್ಲಿ ವಿನಾಯಿತಿ ನೀಡಿದ ಪ್ರವೃತ್ತಿಯನ್ನು ಆಯೋಗವು ಈಗ ಅಧಿಕೃತಗೊಳಿಸಿದೆ. ಮತದಾರರು ಗಣತಿ ನಮೂನೆಯ ಜೊತೆಗೆ ಯಾವುದೇ ದಾಖಲಾತಿಯನ್ನು ನೀಡಬೇಕಾಗಿಲ್ಲ. 2002–04ರ ಮತದಾರರ ಪಟ್ಟಿಯಲ್ಲಿ ಹೆಸರು ಇದ್ದವರ ಮಕ್ಕಳಿಗೆ ಮಾತ್ರ ಈ ವಿನಾಯಿತಿಯನ್ನು ಆರಂಭದಲ್ಲಿ ನೀಡಲಾಗಿತ್ತು. ಈಗ, ಈ ಪಟ್ಟಿಯಲ್ಲಿ ಇರುವವರ ಸಂಬಂಧಿಕರಾಗಿದ್ದರೆ (ಈತನಕ ಯಾರು ಯಾರು ಎಂಬುದನ್ನು ವಿವರಿಸಲಾಗಿಲ್ಲ) ಸಾಕು ಎಂದು ಬದಲಾಯಿಸಲಾಗಿದೆ. ಮನೆಯ ವಯಸ್ಕ ಸದಸ್ಯರೊಬ್ಬರು ಕುಟುಂಬದಲ್ಲಿರುವ ಎಲ್ಲರ ಗಣತಿ ನಮೂನೆಯನ್ನು ಸಲ್ಲಿಸಬಹುದು ಮತ್ತು ಇದು ವಲಸಿಗರಿಗೆ ಅನುಕೂಲ ಮಾಡಿಕೊಡಬಹುದು. ಪ್ರತಿಯೊಬ್ಬ ಬಿಎಲ್‌ಒ ಮತದಾರರ ಪಟ್ಟಿಗೆ ಹೊಸ ಹೆಸರು ಸೇರಿಸುವ ನಮೂನೆಯನ್ನು ತಮ್ಮೊಂದಿಗೆ ಒಯ್ಯಲು ಸೂಚಿಸಿದರೆ, ಮನೆ ಮನೆ ಭೇಟಿ ಸಂದರ್ಭದಲ್ಲಿ ಅಳಿಸುವಿಕೆ ಮಾತ್ರವಲ್ಲದೆ, ಹೊಸ ಮತದಾರರ ಸೇರ್ಪಡೆಯೂ ಗಣನೀಯವಾಗಿ ಆಗಬಹುದು. ಈ ಎಲ್ಲವೂ ಮತದಾರರ ತೊಂದರೆಯನ್ನು ಕಡಿಮೆ ಮಾಡಬಹುದು ಮತ್ತು ಅಧಿಕಾರಿಗಳ ದುಃಸ್ವಪ್ನಕ್ಕೆ ಕಡಿವಾಣ ಹಾಕಬಹುದು.
ಹಾಗಿದ್ದರೂ ಈ ವಿನಾಯಿತಿಗಳು ಮತ್ತು ಸುಧಾರಣೆಗಳು ಎಸ್‌ಐಆರ್‌ನ ಮೂಲದಲ್ಲಿಯೇ ಇರುವ ಹೊರಗಿಡುವಿಕೆಯ ಸ್ವರೂಪವನ್ನು ಬದಲಿಸುವುದಿಲ್ಲ. ಈ ಹಿಂದೆ ಎಂಟು ಬಾರಿ ನಡೆಸಲಾಗಿರುವ ಸಮಗ್ರ ಪರಿಷ್ಕರಣೆಯ ಪುನರಾವರ್ತನೆಯೇ ಈಗಿನ ಈ ಪ್ರಯೋಗ ಎಂಬ ಸುಳ್ಳನ್ನು ಕೈಬಿಡದಿರಲು ಚುನಾವಣಾ ಆಯೋಗವು ನಿರ್ಧರಿಸಿದೆ. ಈ ಹಿಂದಿನ ಮಾರ್ಗಸೂಚಿಗಳು ಈಗ ಸಾರ್ವಜನಿಕವಾಗಿ ಲಭ್ಯ ಇವೆ. ಈಗ ನಡೆಸುತ್ತಿರುವ ಎಸ್‌ಐಆರ್ ಈ ಹಿಂದೆ ನಡೆಸಿದ ಸಮಗ್ರ ಪರಿಷ್ಕರಣೆಯರೀತಿಯಲ್ಲಿ ಇರುವ ಸಾಧ್ಯತೆ ಇಲ್ಲ. ಹಳೆಯ ಮಾರ್ಗಸೂಚಿಯನ್ನು ಮುಚ್ಚಿಡಲು ಆಯೋಗವು ಎಷ್ಟೇ ಪ್ರಯತ್ನ ಮಾಡಿದ್ದರೂ ಸಾಧ್ಯವಾಗಿಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ, ಮತದಾರರ ಪಟ್ಟಿಯಲ್ಲಿ ಸ್ಥಾನ ಪಡೆಯುವ ಹೊಣೆಗಾರಿಕೆಯನ್ನು ಮತದಾರರ ಮೇಲೆಯೇ ಹೊರಿಸಿರುವುದನ್ನು ಹೊಸ ಎಸ್‌ಐಆರ್ ಕೂಡ ಹಾಗೆಯೇ ಉಳಿಸಿಕೊಂಡಿದೆ. ಇದು ನಮ್ಮ ದೇಶದಲ್ಲಿ ಅನುಸರಿಸುವ ಸಾರ್ವತ್ರಿಕ ವಯಸ್ಕ ಮತದಾನದ ಹಕ್ಕು ಚಿಂತನೆಗೆ ವ್ಯತಿರಿಕ್ತವಾದುದು. ಒಂದು ತಿಂಗಳೊಳಗೆ ದಾಖಲಾತಿಗಳನ್ನು ಸಲ್ಲಿಸಲು ಮತದಾರರು ವಿಫಲರಾದರೆ, ಅವರ ಹೆಸರನ್ನು ಮತದಾರರ ಪಟ್ಟಿಯಿಂದ ಯಾವುದೇ ನೋಟಿಸ್, ವಿಚಾರಣೆ ಅಥವಾ ಮೇಲ್ಮನವಿಗೆ ಅವಕಾಶ ಇಲ್ಲದಂತೆ ಅಳಿಸಿ ಹಾಕಲಾಗುವುದು ಎಂಬ ಕ್ರೂರ ನಿಯಮವನ್ನೂ ಉಳಿಸಿಕೊಳ್ಳಲಾಗಿದೆ. ಮತದಾರರ ನೋಂದಣಿಯ ಹೊಣೆಗಾರಿಕೆಯನ್ನು ಸರ್ಕಾರವು ಕೈಬಿಟ್ಟು ಮತದಾರರಿಗೆ ಅದರ ಹೊಣೆ ವಹಿಸಿದಾಗ ಮತದಾರರ ಪಟ್ಟಿಯಲ್ಲಿ ಮತದಾರರ ಸಂಖ್ಯೆಯಲ್ಲಿ ಭಾರಿ ಕುಸಿತವಾಗಿದೆ ಎಂಬುದು ಜಾಗತಿಕವಾಗಿ ಇರುವ ಅನುಭವವಾಗಿದೆ. ಈ ತೊಡಕಿನಿಂದಾಗಿ ಶೇ 5ರಿಂದ ಶೇ 10ರಷ್ಟು ಮತದಾರರು ಮತದಾರರ ಪಟ್ಟಿಯಿಂದ ಹೊರಗೆ ಉಳಿಯಬಹುದು. ಬಿಹಾರದಲ್ಲಿ ಆಗಿರುವಂತೆ ಮಹಿಳೆಯರ ಸಂಖ್ಯೆಯು ಮತದಾರರ ಸಂಖ್ಯೆಯ ಅನುಪಾತಕ್ಕೆ ಅನುಗುಣವಾಗಿ ಇಲ್ಲದಿರಬಹುದು. ಈ ನೈಜ ಅಪಾಯದ ಕಡೆಗೆ ಗಮನ ಹರಿಸಬೇಕು ಎಂಬ ವಿಷಯದಲ್ಲಿ ಆಯೋಗವು ತಲೆಯೇ ಕೆಡಿಸಿಕೊಂಡಿಲ್ಲ.
ಹೊಸ ಆವೃತ್ತಿಯಲ್ಲಿ ಉದ್ದೇಶಪೂರ್ವಕ ಅಳಿಸುವಿಕೆ ಇನ್ನೂ ಹೆಚ್ಚು ತೀವ್ರವಾಗಿದೆ. 2002–2004ರ ಮತದಾರರ ಪಟ್ಟಿಯಲ್ಲಿ ಇದ್ದವರ ಪೌರತ್ವವನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು ಎಂಬ ಮಿಥ್ಯೆಯನ್ನು ಆಯೋಗವು ಪ್ರತಿಪಾದಿಸುತ್ತಲೇ ಇದೆ. ಆದರೆ, ಅಂತಹ ಯಾವುದೇ ಪ್ರಯತ್ನ ಆಗಿರಲಿಲ್ಲ ಎಂಬುದು ಆಗಿನ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿದೆ. ಈಗ, ಪ್ರತಿಯೊಬ್ಬರೂ ತಾವು ಅಥವಾ ತಮ್ಮ ಸಂಬಂಧಿಕರು 2002–2004ರ ಮತದಾರರ ಪಟ್ಟಿಯಲ್ಲಿ ಇದ್ದೆವು ಎಂಬುದನ್ನು ಸಾಬೀತುಪಡಿಸಬೇಕಿದೆ. ಹಾಗೆ ಮಾಡದೇ ಇದ್ದರೆ ದಾಖಲೆ ಸಲ್ಲಿಸುವಂತೆ ಅವರಿಗೆ ನೋಟಿಸ್ ಬರುತ್ತದೆ; ಆಧಾರ್ ಅನ್ನು ಗೊಣಗುತ್ತಲೇ ಸೇರಿಸಿದ್ದರೂ ಅದೇ ಹಳೆಯ ನಿರ್ಬಂಧಾತ್ಮಕ ದಾಖಲಾತಿಗಳ ಪಟ್ಟಿಯೇ ಈಗಲೂ ಇದೆ. ಜೊತೆಗೆ, 2002–2004ರ ಪಟ್ಟಿಯಲ್ಲಿ ಕುಟುಂಬದ ಯಾರೊಬ್ಬರೂ ಏಕೆ ಇಲ್ಲ ಎಂಬ ಪ್ರಶ್ನೆಯನ್ನು ಎಲ್ಲರಿಗೂ ಕೇಳಲಾಗುತ್ತದೆ. ಇದು ಬಹಳ ಸ್ಪಷ್ಟವಾಗಿ ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಹೋಲುತ್ತದೆ. ದಾಖಲಾತಿಗಳನ್ನು ಹೇಗೆ ದೃಢೀಕರಿಸಬೇಕು ಎಂಬುದಕ್ಕೆ ಪಾರದರ್ಶಕವಾದ ಮಾನದಂಡವನ್ನು ಆಯೋಗವು ರೂಪಿಸಿಲ್ಲ. ಹಾಗಾಗಿ, ಸ್ವೇಚ್ಛೆಯಿಂದ ಹೆಸರು ಅಳಿಸುವಿಕೆ ಅಥವಾ ಆಡಳಿತಾರೂಢರಿಗೆ ಅಪಥ್ಯವಾದ ಸಮುದಾಯಗಳಿಗೆ ಸೇರಿದವರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಅಳಿಸಿ ಹಾಕಬಹುದು ಎಂಬ ಕಳವಳ ಮೌಲಿಕವೇ ಆಗಿದೆ. ಈ ದೃಷ್ಟಿಕೋನದಲ್ಲಿ ನೋಡಿದಾಗ ಎರಡನೇ ಹಂತದ ಎಸ್‌ಐಆರ್ ಹೆಚ್ಚು ನೇರವಾದ ಪೌರತ್ವ ದೃಢೀಕರಣದ ಪ್ರಯೋಗವೇ ಆಗಿದೆ.
ಬಿಹಾರದಲ್ಲಿ ನಡೆದದ್ದು ಪ್ರಯೋಗ. ನಮ್ಮ ಮತದಾರರ ಪಟ್ಟಿಯನ್ನು ಬಾಧಿಸಿರುವ ರೋಗಕ್ಕೆ ಎಸ್‌ಐಆರ್ ಎಷ್ಟು ಸಮಂಜಸವಾದ ಔಷಧ ಎಂಬುದನ್ನು ಪರೀಕ್ಷಿಸುವುದು ಇದರ ಉದ್ದೇಶ ಅಲ್ಲ; ಬದಲಿಗೆ ಮೊದಲೇ ನಿರ್ಧರಿಸಿದ ಸಂದೇಹಾಸ್ಪದ ಔಷಧವನ್ನು ಎಷ್ಟು ಉತ್ತಮವಾಗಿ ಬಳಸಬಹುದು ಎಂಬುದರ ಪರೀಕ್ಷೆ ಎಂಬುದು ಸ್ಪಷ್ಟ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.