‘ನಿಮ್ಮ ಉರಗ ಸಂಶೋಧನೆ ಹೇಗೆ ನಡೆಯುತ್ತಿದೆ’ ಎನ್ನುವ ಪ್ರಶ್ನೆಗೆ ಬಂಗಾಳದ ಉರಗ ತಜ್ಞ ವಿಶಾಲ್ ಸಾಂತ್ರ, ‘ಅಧ್ಯಯನಕ್ಕೆ ಅನುಮತಿ ಸಿಕ್ಕರೆ ತಾನೇ ಮುಂದಿನ ವಿಚಾರ’ ಎಂದು ನೋವಿನಿಂದ ಹೇಳಿದರು.
ವನ್ಯಜೀವಿ ಸಂಶೋಧನೆಗೆ ಸಂಬಂಧಿಸಿದಂತೆ ವಿಶಾಲ್ ಒಬ್ಬರೇ ತೊಂದರೆ ಅನುಭವಿಸುತ್ತಿಲ್ಲ; ‘ವನ್ಯಜೀವಿ ಸಂರಕ್ಷಣಾ ತಿದ್ದುಪಡಿ ಕಾಯ್ದೆ–2022’ ವನ್ಯಜೀವಿ ಸಂಶೋಧನೆಯನ್ನು ನಿರುತ್ಸಾಹಗೊಳಿಸುತ್ತಿದೆ ಎಂದು ಬಹಳಷ್ಟು ವನ್ಯಜೀವಿ ತಜ್ಞರು ದೂರುತ್ತಿದ್ದಾರೆ. ಅವರ ಪ್ರಕಾರ, ಷೆಡ್ಯೂಲ್–1ರಲ್ಲಿನ ಹುಲಿ, ಆನೆ, ಚಿರತೆ ಮತ್ತು ಷೆಡ್ಯೂಲ್–2ರಲ್ಲಿನ ತೋಳ, ನರಿ ಮತ್ತು ಕಿರುಬಗಳ ಅಧ್ಯಯನಕ್ಕೆ ಪರವಾನಗಿ ಪಡೆಯಲು ಎರಡರಿಂದ ಮೂರು ವರ್ಷಗಳ ಸಮಯ ತೆಗೆದುಕೊಳ್ಳುತ್ತಿದೆ. ಅನುಮತಿ ಸಿಗುವಷ್ಟರಲ್ಲಿ ಕೆಲವು ಪ್ರಾಣಿಗಳ ಸಂತತಿಯೇ ಮರೆಯಾಗಬಹುದು ಎಂಬ ಆತಂಕ ಅವರದ್ದು. ‘ಸಂತತಿ ನಾಶದ ಭೀತಿಯಲ್ಲಿರುವ ದೊರವಾಯನ ಹಕ್ಕಿ (ಗ್ರೇಟ್ ಇಂಡಿಯನ್ ಬಸ್ಟರ್ಡ್) ಜೊತೆಗೆ ರೈತರ ಬೆಳೆ ಹಾನಿ ಮಾಡುವ ನವಿಲುಗಳನ್ನೂ, ಹುಲಿ, ಘೇಂಡಾಮೃಗಗಳ ಜೊತೆಗೆ ಎಲ್ಲೆಲ್ಲೂ ಇರುವ ಕೇರೆ ಹಾವು, ನೀರು ಹಾವು ಮತ್ತು ಅಪಾರ ಸಂಖ್ಯೆಯಲ್ಲಿರುವ ಕೆಂಪು ಕೋತಿಗಳನ್ನೂ ಷೆಡ್ಯೂಲ್–1ಕ್ಕೆ ಸೇರಿಸಿರುವುದು ಸರಿಯಲ್ಲ’ ಎನ್ನುತ್ತಾರೆ.
ಇದುವರೆಗೂ ಅಧ್ಯಯನ, ಗಣತಿ, ಪ್ರಯೋಗ, ವಿಶೇಷ ಸಂರಕ್ಷಣಾ ವಿಧಾನಗಳ ಅನುಷ್ಠಾನಕ್ಕೆ ರಾಜ್ಯ ಅರಣ್ಯ ಇಲಾಖೆಗಳೇ ಪರವಾನಗಿ ನೀಡುತ್ತಿದ್ದವು. ಇಲ್ಲಿಯವರೆಗೆ ಯಾರೇ ಅರ್ಜಿ ಸಲ್ಲಿಸಿದರೂ, ರಾಜ್ಯ ವನ್ಯಜೀವಿ ಮಂಡಳಿ ಮತ್ತು ಸಂಶೋಧನಾ ಸಲಹಾ ಸಮಿತಿಯು ಅರ್ಜಿಗಳನ್ನು ಪರಿಶೀಲಿಸಿ, ಸಂದರ್ಶನ ನಡೆಸಿದ ನಂತರ ಅನುಮೋದನೆ ನೀಡುತ್ತಿದ್ದವು. ಇನ್ನು ಮುಂದೆ, ಪ್ರತಿ ಅನುಮತಿಯೂ ಕೇಂದ್ರ ಸರ್ಕಾರದಿಂದಲೇ ಬರಬೇಕಿದೆ.
ರಾಷ್ಟ್ರೀಯ ಉದ್ಯಾನಗಳು, ಅಭಯಾರಣ್ಯಗಳು ಮತ್ತು ಅರಣ್ಯ ಪ್ರದೇಶಗಳಲ್ಲಿ ಸಂಶೋಧನೆ ನಡೆಸಲು ಅನುಮತಿ ಅತ್ಯಗತ್ಯ. ಆದರೆ, ಸಂಶೋಧಕರು ಅನುಮತಿಗಾಗಿ ವರ್ಷಗಟ್ಟಲೆ ಕಾಯುವಂತಾದರೆ ಅಧ್ಯಯನಕ್ಕೆ ನಿಗದಿಪಡಿಸಿದ ಸಮಯ ಮತ್ತು ಹಣ ಎರಡೂ ವ್ಯರ್ಥವಾಗುತ್ತವೆ. ಉದಾಹರಣೆಗೆ, ಮಳೆಗಾಲದಲ್ಲಿ ಅಧ್ಯಯನ ಮಾಡಬೇಕಿದ್ದರೆ, ಅನುಮತಿ ವಿಳಂಬದಿಂದಾಗಿ ಇಡೀ ವರ್ಷ ವ್ಯರ್ಥವಾಗುತ್ತದೆ.
ವನ್ಯಜೀವಿ ಸಂಶೋಧನೆಗಳಿಗೆ ಅನುಮತಿ ಪಡೆಯಲು ಎರಡು ಮುಖ್ಯ ಹಂತಗಳಿವೆ. ಮೊದಲಿಗೆ, ಕೇಂದ್ರ ಸರ್ಕಾರದ ಪರಿಸರ ಸಚಿವಾಲಯದಿಂದ ಅನುಮತಿ ಪಡೆಯಬೇಕು. ನಂತರ, ನಿರ್ದಿಷ್ಟ ಸಂಶೋಧನಾ ಕ್ಷೇತ್ರವು ಇರುವ ರಾಜ್ಯ ಅರಣ್ಯ ಇಲಾಖೆ ಅಥವಾ ಸಂಬಂಧಿತ ಇಲಾಖೆಗಳಿಂದ ಪ್ರತ್ಯೇಕ ಅನುಮತಿ ಪಡೆಯಬೇಕು. ಉದಾಹರಣೆಗೆ, ಹುಲಿ ಸಂರಕ್ಷಿತ ಪ್ರದೇಶ, ರಾಷ್ಟ್ರೀಯ ಉದ್ಯಾನ ಅಥವಾ ವನ್ಯಜೀವಿ ಅಭಯಾರಣ್ಯದಲ್ಲಿ ಅಧ್ಯಯನ ನಡೆಸಲು ಆಯಾ ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯ ಅನುಮತಿ ಅಗತ್ಯ. ಕೈಗೊಳ್ಳುವ ಸಂಶೋಧನೆಯು ಪರಿಸರ ವ್ಯವಸ್ಥೆಗಳಿಗೆ, ಪ್ರಾಣಿ ಮತ್ತು ಸಸ್ಯ ಪ್ರಭೇದಗಳಿಗೆ ಯಾವುದೇ ಹಾನಿ ಮಾಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವುದು, ಅನಿಯಂತ್ರಿತ ಸಂಶೋಧನೆಗಳನ್ನು ತಡೆಗಟ್ಟುವುದು, ಅಂತರರಾಷ್ಟ್ರೀಯ ಸಹಭಾಗಿತ್ವದ ಸಂಶೋಧನೆ ಗಳಲ್ಲಿ ಭಾರತದ ಜೈವಿಕ ಸಂಪನ್ಮೂಲಗಳ ದುರುಪಯೋಗವಾಗದಂತೆ ನೋಡಿಕೊಳ್ಳುವುದು ಮತ್ತು ಸಂಶೋಧನೆಯು ನಿಗದಿತ ನಿಯಮಗಳಂತೆ ನಡೆಯುತ್ತಿದೆಯೇ ಎಂದು ಮೇಲ್ವಿಚಾರಣೆ ಮಾಡುವುದು ಈ ತಿದ್ದುಪಡಿಯ ಉದ್ದೇಶವಾಗಿದೆ.
ಸಂರಕ್ಷಿತ ಅರಣ್ಯದೊಳಗಿನ ಮತ್ತು ಹೊರಗಿನ ವನ್ಯಜೀವಿಗಳ ಕುರಿತು ಮತ್ತು ಅವುಗಳ ಸಂಖ್ಯೆಯನ್ನು ಆರೋಗ್ಯಕರ ಮಟ್ಟದಲ್ಲಿ ಕಾಪಾಡಲು ಕೆಲವು ವಿಶೇಷ ಅಧ್ಯಯನಗಳು ನಡೆಯುತ್ತವೆ. ವನ್ಯಜೀವಿ ಸಂರಕ್ಷಣಾ ತಿದ್ದುಪಡಿ ಕಾಯ್ದೆಯ ಷೆಡ್ಯೂಲ್‌ಗಳಲ್ಲಿ ಸ್ಥಾನ ಪಡೆದಿರುವ ಪ್ರಾಣಿಗಳಿಗೆ ಕಿಂಚಿತ್ ಅಪಾಯವಾದರೂ, ಸರ್ಕಾರ ಮತ್ತು ಅರಣ್ಯ ಇಲಾಖೆ ಅದನ್ನು ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಸಂರಕ್ಷಣೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ.
ರಾಜ್ಯ ಅರಣ್ಯ ಇಲಾಖೆಯ ಮಾಹಿತಿಯಂತೆ, ಉರಗ ಹಾಗೂ ಬ್ಯಾಕ್ಟೀರಿಯಾ ತಜ್ಞರು ಸಲ್ಲಿಸಿದ ಅರ್ಜಿಗಳು ಕಳೆದ ಎರಡು ವರ್ಷಗಳಿಂದ ಕೇಂದ್ರ ಸರ್ಕಾರದ ಬಳಿ ಇವೆ. ಇದುವರೆಗೂ ಅನುಮೋದನೆ ದೊರೆತಿಲ್ಲ. ಪ್ರಸ್ತಾವವನ್ನು ನಿರಾಕರಿಸಲಾಗಿದೆ ಎಂಬ ಬಗ್ಗೆಯೂ ಮಾಹಿತಿ ನೀಡಿಲ್ಲ. ಏಕಿಷ್ಟು ವಿಳಂಬ ಎಂಬುದರ ಬಗ್ಗೆ ಯಾವ ವಿವರಣೆಯೂ ಇಲ್ಲ. ಪೂರ್ವ ಭಾರತದ ಉರಗಗಳ ಕುರಿತು ಅಧ್ಯಯನ ಮಾಡುತ್ತಿರುವ ಕರ್ನಾಟಕದ ಉರಗ ತಜ್ಞರೊಬ್ಬರು, ‘ನಮ್ಮಲ್ಲಿ ಜೀವ ವೈವಿಧ್ಯವಿರುವುದು ಗೊತ್ತೇ ಇದೆ. ಆದರೆ, ಅದರ ನಿಖರ ಮಾಹಿತಿ ಇಲ್ಲ’ ಎನ್ನುತ್ತಾರೆ.
ದೇಶದ ಎಲ್ಲ ಬಗೆಯ ಕಾಡುಗಳ ಬಗೆಗಿನ ನಿಖರ ವಾದ ಮಾಹಿತಿ ಮತ್ತು ದತ್ತಾಂಶಗಳು ಲಭ್ಯವಿದ್ದರೆ, ಸಂರಕ್ಷಣಾ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದು ಸುಲಭವಾಗುತ್ತದೆ. ಪರವಾನಗಿ ಪಡೆಯಲು ವರ್ಷಗಟ್ಟಲೆ ಕಾಯುವುದರಿಂದ ಸಂರಕ್ಷಣೆಯ ಕೆಲಸಗಳಿಗೆ ದೊಡ್ಡ ಅಡ್ಡಿಯಾಗುತ್ತದೆ.
ಅಧ್ಯಯನ ಅಥವಾ ಸಂಶೋಧನೆಯ ಹೆಸರಿನಲ್ಲಿ ಮೂರನೆಯ ಅಥವಾ ಇಲಾಖೆಗೆ ಸಂಬಂಧಪಡದ ವ್ಯಕ್ತಿಯು ಕಾಡನ್ನು ಪ್ರವೇಶಿಸುವುದು ಅರಣ್ಯ ಇಲಾಖೆಗೆ ಇಷ್ಟವಾಗುವುದಿಲ್ಲ. ಅಲ್ಲದೆ, ಅಧ್ಯಯನ ಕ್ಕಾಗಿ ಅರ್ಜಿ ಸಲ್ಲಿಸುವವರು ಒಂದಲ್ಲಾ ಒಂದು ಬಗೆಯ ಪ್ರಭಾವ ಬೀರುತ್ತಾರೆ ಎಂಬ ಭಾವನೆ ಅರಣ್ಯ ಇಲಾಖೆಯಲ್ಲಿ ಬಲವಾಗಿ ಬೇರೂರಿದೆ. ಕೇಂದ್ರದವರೆಗೂ ಹೋಗಿ ಪ್ರಭಾವ ಬೀರಿ ಕೆಲಸ ಮಾಡಿಸಿಕೊಳ್ಳುವುದು ಸುಲಭವಲ್ಲ ಎಂಬುದನ್ನು ಚೆನ್ನಾಗಿ ಅರಿತಿರುವ ರಾಜ್ಯಗಳ ಅರಣ್ಯ ಇಲಾಖೆಗಳು, ಅದನ್ನೇ ಬಂಡವಾಳ ಮಾಡಿಕೊಂಡು ಸಂರಕ್ಷಣೆಯ ಕೆಲಸಗಳಿಗೆ ಸಮರ್ಪಕ ಬೆಂಬಲ ನೀಡುತ್ತಿಲ್ಲ ಎಂದು ಅಧ್ಯಯನಕಾರರು ಆಪಾದಿಸುತ್ತಿದ್ದಾರೆ. ಸ್ವಿಟ್ಜರ್ಲೆಂಡ್ ನಲ್ಲಿ ಉನ್ನತ ಸಂಶೋಧನೆ ನಡೆಸುತ್ತಿರುವ ಭಾರತ ಮೂಲದ ಅಶ್ವಿನಿ ಮೋಹನ್, ‘ಅಧ್ಯಯನಕ್ಕೆ ಬೇಕಾದ ಪರವಾನಗಿ ಪಡೆಯಲು ಎರಡು ವರ್ಷ ಕಾಯುವುದು ಪ್ರಾಯೋಗಿಕವಲ್ಲ. ವಿದ್ಯಾರ್ಥಿಗಳು ಅನಿವಾರ್ಯವಾಗಿ ತಮ್ಮ ಸಂಶೋಧನೆಯ ವಿಷಯ ಬದಲಾಯಿಸಬೇಕಾಗುತ್ತದೆ ಇಲ್ಲವೇ ಸಂಶೋಧನೆಯ ವಿಧಾನಗಳನ್ನು ಬದಲಿಸಿಕೊಳ್ಳಬೇಕಾಗುತ್ತದೆ’ ಎನ್ನುತ್ತಾರೆ.
ಅಭ್ಯರ್ಥಿಯೊಬ್ಬರ ಪಿಎಚ್.ಡಿ ಪದವಿ ಅಧ್ಯಯನದ ಅವಧಿ ಎರಡರಿಂದ ನಾಲ್ಕು ವರ್ಷಗಳು. ಅದರಲ್ಲಿ ಅರ್ಧದಷ್ಟು ಸಮಯ ಸಂಶೋಧನೆಗೆ ಪರವಾನಗಿ ಪಡೆಯುವಲ್ಲಿಯೇ ಕಳೆದುಹೋದರೆ ಅವರು ಕ್ಷೇತ್ರ ಕಾರ್ಯ ಮಾಡುವುದು ಯಾವಾಗ? ಮಾಹಿತಿ ಕಲೆ ಹಾಕುವುದು ಯಾವಾಗ? ಅಧ್ಯಯನದಿಂದ ತಿಳಿದುಬಂದ ಮಾಹಿತಿಯನ್ನು ಸಂಬಂಧಿಸಿದವರಿಗೆ ದಾಖಲೆ ರೂಪದಲ್ಲಿ ಸಲ್ಲಿಸುವುದು ಯಾವಾಗ? ಇದೆಲ್ಲ ರಗಳೆಯೇ ಬೇಡ ಎಂದು ಸಂಶೋಧನಾ ವಿದ್ಯಾರ್ಥಿಗಳು ಆ್ಯಕ್ಟಿವ್ ಸ್ಯಾಂಪ್ಲಿಂಗ್‌ನ ಅವಶ್ಯಕತೆ ಇಲ್ಲದಿರುವ ವಿಷಯಗಳಿಗೆ ಮೊರೆ ಹೋಗುತ್ತಾರೆ. ಈ ಪ್ರವೃತ್ತಿ, ವನ್ಯಜೀವಿ ಅಧ್ಯಯನಗಳಿಗೆ ಹಿನ್ನಡೆ ಉಂಟು ಮಾಡುತ್ತದೆ.
ಹುಲಿ, ಆನೆ, ಚಿರತೆ ಮತ್ತು ಕಾಳಿಂಗ ಸರ್ಪಗಳ ಮಾಹಿತಿಯ ಹೊರತಾಗಿ ಬೇರೆ ವನ್ಯಜೀವಿ ಪ್ರಭೇದಗಳ ಕುರಿತು ಕರಾರುವಕ್ಕಾದ ಮತ್ತು ಗುಣಮಟ್ಟದ ಮಾಹಿತಿ ಇಲ್ಲ. ಹುಲಿ ಅಥವಾ ಆನೆಗಳಂತಹ ಪ್ರಾಣಿ ಪ್ರಭೇದಗಳ ಸಂಶೋಧನೆಗೆ ಹೆಚ್ಚು ಒಲವು ಮೊದಲಿನಿಂದಲೂ ಇದೆ. ಕಡಿಮೆ ಪ್ರಾಮುಖ್ಯತೆಯ ಕೀಟಗಳು, ಉಭಯಚರಿಗಳು, ನಿರ್ದಿಷ್ಟ ಸಸ್ಯಪ್ರಭೇದಗಳ ಮೇಲಿನ ಅಧ್ಯಯನಗಳು ನಿರ್ಲಕ್ಷ್ಯಕ್ಕೊಳಗಾಗಿವೆ. ವಾಯುಗುಣ ವೈಪರೀತ್ಯದ ಈ ದಿನಗಳಲ್ಲಿ ಎಲ್ಲ ಪ್ರಭೇದಗಳ ಅಧ್ಯಯನ ಅನಿವಾರ್ಯವಾಗಿದ್ದು, ಯಾವ ಜೀವಿ ಪ್ರಭೇದವನ್ನೂ ಕಡೆಗಣಿಸುವಂತಿಲ್ಲ.
ಕೇಂದ್ರ ಮತ್ತು ರಾಜ್ಯಮಟ್ಟದ ಅನುಮತಿಗಳ ನಡುವೆ ಸಮನ್ವಯದ ಕೊರತೆ ಇದೆ. ಒಂದು ಕಡೆಯಿಂದ ಅನುಮತಿ ದೊರೆತರೂ, ಇನ್ನೊಂದು ಕಡೆಯಿಂದ ತಿರಸ್ಕೃತವಾಗಬಹುದು. ಕೆಲವು ರಾಜ್ಯಗಳು ಸಂಶೋಧಕರಿಗೆ ಸುಲಭವಾಗಿ ಅನುಮತಿ ನೀಡುತ್ತವೆ. ಕರ್ನಾಟಕ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಕಠಿಣ ನೀತಿಗಳನ್ನು ಅನುಸರಿಸುತ್ತವೆ ಎನ್ನುವ ಅಭಿಪ್ರಾಯವಿದೆ.
ಅನುಮತಿ ನೀಡುವ ಪ್ರಕ್ರಿಯೆಯಲ್ಲಿ ಸ್ಪಷ್ಟ ಮತ್ತು ಏಕರೂಪದ ಮಾನದಂಡಗಳ ಕೊರತೆ ಇದೆ. ಒಂದೇ ರೀತಿಯ ಸಂಶೋಧನಾ ಪ್ರಸ್ತಾವಗಳಿಗೆ ವಿವಿಧ ರಾಜ್ಯಗಳಲ್ಲಿ ವಿವಿಧ ಅಧಿಕಾರಿಗಳಿಂದ ಬೇರೆ ಬೇರೆ ನಿರ್ಧಾರಗಳು ಬರಬಹುದು. ಪ್ರಸ್ತಾವಗಳನ್ನು ಪರಿಶೀಲಿಸುವ ಅಧಿಕಾರಿಗಳಿಗೆ ಪರಿಸರ ವಿಜ್ಞಾನದ ಆಳವಾದ ತಿಳಿವಳಿಕೆ ಇಲ್ಲದಿದ್ದರೆ, ಪ್ರಸ್ತಾವವು ತಿರಸ್ಕೃತವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ವಿದೇಶಿ ಸಂಶೋಧಕರು ಭಾರತದಲ್ಲಿ ಸಂಶೋಧನೆ ಮಾಡಲು ಬಯಸಿದರೆ ಸಮಸ್ಯೆಗಳು ಮತ್ತಷ್ಟು ಜಟಿಲವಾಗುತ್ತವೆ. ಅವರು, ಪರಿಸರ ಸಚಿವಾಲಯದ ಜೊತೆಗೆ, ಗೃಹ ವ್ಯವಹಾರಗಳ ಸಚಿವಾಲಯ ಮತ್ತು ಸಂಬಂಧಿತ ಇಲಾಖೆಗಳಿಂದಲೂ ಅನುಮತಿ ಪಡೆಯ ಬೇಕಾಗುತ್ತದೆ. ಹಲವು ಹಂತಗಳ ಈ ಪ್ರಕ್ರಿಯೆಯು ಸಂಶೋಧನೆಗೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಸಹಯೋಗವನ್ನು ಕುಂಠಿತ ಗೊಳಿಸುತ್ತದೆ ಮತ್ತು ಜಾಗತಿಕ ಮಟ್ಟದಲ್ಲಿ ನಡೆಯಬೇಕಾದ ಪ್ರಮುಖ ಜ್ಞಾನ ವಿನಿಮಯವನ್ನು ತಡೆಗಟ್ಟುತ್ತದೆ.
ಸಂಶೋಧನೆ ಮತ್ತು ವನ್ಯಜೀವಿ ಸಂರಕ್ಷಣೆ ಪರಸ್ಪರ ಪೂರಕ. ಜಟಿಲ ನಿಯಮಗಳ ಮೂಲಕ ಸಂಶೋಧನೆಯನ್ನು ತಡೆಯುವುದಕ್ಕಿಂತ, ಸರಳ ನೀತಿಗಳ ಮೂಲಕ ಪ್ರೋತ್ಸಾಹಿಸುವುದು ದೇಶದ ವೈಜ್ಞಾನಿಕ ಮತ್ತು ಪರಿಸರ ಆರೋಗ್ಯಕ್ಕೆ ಹೆಚ್ಚು ಸಹಕಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.