ADVERTISEMENT

ಚುರುಮುರಿ: ಜಟ್-ಖಾ ಪೆ-ಟ್ರೋಲ್

ಲಿಂಗರಾಜು ಡಿ.ಎಸ್
Published 4 ಏಪ್ರಿಲ್ 2022, 19:31 IST
Last Updated 4 ಏಪ್ರಿಲ್ 2022, 19:31 IST
   

‘ಪೆಟ್ರೋಲ್ ಕಂಪನಿಗಳು ದಿನದ ಲೆಕ್ಕದಲ್ಲಿ ರೇಟು ಏರಿಸ್ತಾವಲ್ಲಾ ಸಾ? ‘ಈ ತಿಂಗಳು ಕಚ್ಚಾ ತೈಲಕ್ಕೆ ಇಷ್ಟು ಜಾಸ್ತಿ ದುಡ್ಡು ಕೊಟ್ಟು ಲಾಸಾಗ್ಯದೆ’ ಅಂತ ಹೇಳಿಕೆ ಬ್ಯಾರೆ ಕೊಡ್ತಿರತವೆ. ವರ್ಷದ ಬ್ಯಾಲೆನ್ಸ್ ಶೀಟ್ ಆಡಿಟ್ ಮಾಡುವಾಗ ಲಾಸೇ ಕಾಣಕ್ಕುಲ್ಲ, ಲಾಭದಲ್ಲೇ ಇರತವೆ! ಇದ್ಯಂಗೆ?’ ಅಂತಂದೆ.

‘ಬ್ಯಾಲೆನ್ಸ್ ಶೀಟಲ್ಲಿ ಅಡವಾನ್ಸು, ಜಬಾದಾರಿ, ತೆರಿಗೆ, ಸಾಲ ಈತರಕೀತರ ಏನೇನೋ ಕಣ್ಕಟ್ಟು ಇರತವೆ ಕನುಡಾ! ಅಸೆಟ್ಟು ಮ್ಯಾಕ್ಕೆ-ಕೆಳಿಕ್ಕೆ ತಾರಾಡಿಕ್ಯಂಡು ಮೂಗಂಡುಗ ತೊಂದರೆ ಕೊಡ್ತದೆ. ಸಂಬಳ-ಸಾರಿಗೆ ಕೊಡಬಕು, ಪೆಟ್ರೋಲ್-ಡೀಜೆಲ್ಲು ಒಣಗೋಯ್ತದೆ, ಗ್ಯಾಸು ಆವಿಯಾಯ್ತದೆ, ಕಚ್ಚಾ ಎಣ್ಣೆ ಖರೀದಿ ರೇಟು ಉಚಾಯಿಸಿಕ್ಯಂದು ಮ್ಯಾಕ್ಕೆ ಹೋಯ್ತಿರತದೆ ಕಯ್ಯಾ! ಅದುಕ್ಕೆ ಬ್ಯಾಲೆನ್ಸ್ ಶೀಟಿಗೂ ಲಾಭ– ನಷ್ಟಕ್ಕೂ ಹೊಂದಕುಲ್ಲ!’ ಅಂದ್ರು ತುರೇಮಣೆ.

‘ಆ ಕಚ್ಚೋ ತೈಲದ ದೊರೆಗಳು ನಮ್ಮ ಕಾಸಲ್ಲಿ ದುಂಡಗಾದ್ರು ಆಟೇಯ!’ ಯಂಟಪ್ಪಣ್ಣ ಉಸೂರಂತು.

ADVERTISEMENT

‘ತುರೇಮಣೆ ಸಾ, ಈಗ ಜಟ್-ಖಾ, ಹ-ಲಾಲ್, ಪೆ-ಟ್ರೋಲ್, ಡೀ-ಸೇಲ್ ಅಂತ ನೆರೆ ಹೊಂಟದೆ! ನಾವು ಗೆಟನ್ ಆಗದು ಯಂಗೆ?’ ಅಂದ ಚಂದ್ರು.

‘ಹಗಲು ಸತ್ತರೆ ಅಕ್ಕಿಗೆ ಗತಿ ಇಲ್ಲ, ಇಳ್ಳು ಸತ್ತರೆ ಎಣ್ಣೆಗೆ ಗತಿ ಇಲ್ಲ ಅನ್ನಂಗದೆ ನಮ್ಮ ಬದುಕು! ಹಲಾಲು, ಜಟ್ಕಾ ಅಂದೋರು ಗ್ವಾಮಾಳೆ ಹಿಡಕತ್ತರೆ, ಕತ್ತು ಕುಯ್ಯಿಸಿಕ್ಯಂಡೋರು ಉಸುರುಬುಡ್ತರೆ!’ ಅಂದೆ.

‘ಲೋ ಕಕವಾ, ಮಟನ್ನೋ, ಎಣ್ಣೇನೋ ಎಲ್ಲಾ ಯವಾರದಲ್ಲೂ ಏನೋ ದರ್ದು ಇದ್ದೇ ಇರತದೆ. ಈಗ ಎಲೆಕ್ಸನ್ನು, 150 ಮಿಸನ್ನು ಅಂತ ಎಲ್ಲಾ ಪಕ್ಸಗಳೂ ನಮ್ಮಂತಾ ಕುರಿಗಳ ಕತ್ತು ಕೂದು ಲಾಲ್ ತರಕಾರಿ ಮಾಡಕ್ಕೆ ರೆಡಿಯಾಗಿಲ್ಲವಾ? ನಮ್ಮ ಯೇಗ್ತೇನೆ ಅಷ್ಟು! ಈಗ ಗುಡ್ಡೆ ಬಾಡಲ್ಲಿ ನಲ್ಲಿ ಮೂಳೆ ಇದ್ರೆ ಜಟ್ ಅಂತ ತಿನ್ನನ ನಡಿ’ ಅಂದು ಹಲ್ಲು ಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.