ADVERTISEMENT

ಚುರುಮುರಿ: ಹೊಸ ವರ್ಣಮಾಲೆ

ಸುಮಂಗಲಾ
Published 25 ಸೆಪ್ಟೆಂಬರ್ 2022, 19:30 IST
Last Updated 25 ಸೆಪ್ಟೆಂಬರ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ದೇಶದೊಳಗೆ ‘ಅ’, ದೇಶದ ಹೊರಗೂ ‘ಎ’, ಹೊಸಾ ವರ್ಣಮಾಲೆಯಿದು, ಇರುವುದೆರಡೇ ಅಕ್ಷರ...’

ಬೆಕ್ಕಣ್ಣ ಭಾರೀ ರಾಗವಾಗಿ ಪದ್ಯ ಕಟ್ಟಿ ಹಾಡುತ್ತಿತ್ತು.

‘ಏನಲೇ... ಅ ಮತ್ತು ಎ, ಎರಡೇ ಅಕ್ಷರ ಅಂದ್ರ ಉಳಿದ ಅಕ್ಷರಗಳು ಬ್ಯಾಡೇನು?’ ಇದ್ಯಾವ ಹೊಸ ವರ್ಣಮಾಲೆ ಎಂದು ಅಚ್ಚರಿಗೊಂಡೆ.

ADVERTISEMENT

‘ನೀ ಸುದ್ದಿ ಓದಂಗಿಲ್ಲೇನು... ಅದಾನಿಮಾಮನ ಒಟ್ಟು ಆಸ್ತಿ ಅಂಬಾನಿನೂ ಹಿಂದೆ ಹಾಕಿ ಆಕಾಶಕ್ಕೆ ಏರೈತಿ. ಅವರಣ್ಣ ವಿನೋದ್ ಅದಾನಿ ವಿಶ್ವದಾಗೆ ಅತ್ಯಂತ ಶ್ರೀಮಂತ ಎನ್ಆರ್‌ಐ. ದೇಶದೊಳಗೆ ಅ, ದೇಶದ ಹೊರಗೆ ಎ...’ ತಾನೇ ಆ ಅಷ್ಟೈಶ್ವರ್ಯದ ಒಡೆಯನೋ ಎಂಬಂತೆ ಸಂಭ್ರಮದಿಂದ ವದರಿತು.

‘ಮಂಗ್ಯಾನಂಥವ್ನೆ... ಹಾಲಿನವನಿಗೆ ರೊಕ್ಕ ಕೊಡಾಕ ಗೂಗಲ್ ಪೇ ಮಾಡಿದರ ಹೋಗವಲ್ದು, ನೆಟ್‌ವರ್ಕ್ ಸರಿಯಿಲ್ಲೇನೋ ಅಂತ ನಾ ತೆಲಿ ಕೆಡಿಸ್ಕಂಡಿದ್ರ ನೀ ಹಾಡಾಕ್ ಹತ್ತಿ’ ಎಂದು ಬೈಯ್ದೆ.

‘ಆ ಗೂಗಲ್ಪೇ, ಫೋನ್ಪೇ ಅದ್ನೆಲ್ಲ ಬಿಟ್‌ಹಾಕು, ಪೇಸಿಎಂ ಆ್ಯಪ್ ಹಾಕ್ಕೋ... ಪೇಮೆಂಟ್ ಭಾರೀ ಫಾಸ್ಟ್ ಆಗತೈತೆ ಅಂತಾರ ಮಂದಿ’ ಎನ್ನುವುದೇ.

‘ಅದ್ ಪೇಸಿಎಂ ಆ್ಯಪ್ ಅಲ್ಲಲೇ... ಕೈಪಕ್ಷದವ್ರ ಡರ್ಟಿ ಪಾಲಿಟಿಕ್ಸ್ ಅಂತ ಬೊಮ್ಮಾಯಿ ಅಂಕಲ್ ಹೇಳ್ಯಾರ. ಜೋರಾಗಿ ವದರಬ್ಯಾಡ. ನಿನ್ ಜೋಡಿ ಆಮ್ಯಾಗೆ ನನ್ನೂ ಜೈಲಿಗೆ ಹಾಕತಾರ’ ನಾನು ಬೆದರಿ ಬೆಕ್ಕಣ್ಣನ ಬಾಯಿ ಮುಚ್ಚಿದೆ.

‘ಹಂಗಾರೆ ಅದ್ ಖರೇಖರೇ ಆ್ಯಪ್ ಅಲ್ಲೇನು? ವಿರೋಧ ಪಕ್ಷದವ್ರ ಚಿತಾವಣೆ ಏನು?’

‘ಆ್ಯಪ್ ಖರೇ ಅಲ್ಲ, ಆದ್ರೆ ಪರ್ಸೆಂಟೇಜ್ ಇರೂದಂತೂ ಖರೇ. ಕಾರ್ಮಿಕರಿಗೆ ಅವರ ಸೌಲಭ್ಯ ಸಿಗಬೇಕಂದ್ರೂ ಮಧ್ಯವರ್ತಿ
ಗಳಿಗೆ ಇಪ್ಪತ್ತೈದು–ಮೂವತ್ತು ಪರ್ಸೆಂಟು ಕೊಡಬೇಕಂತ’.

‘ಅದ್ರಾಗೆ ತಪ್ಪೇನೈತಿ? ದೇಶ ಪ್ರಗತಿ ಯಾದಂಗೆ, ಎಲ್ಲಾನೂ ಆಕಾಶಕ್ಕೆ ಜಿಗಿತೈತಿ. ಮೊದ್ಲು ಹತ್ತು–ಹದಿನೈದು ಪರ್ಸೆಂಟ್ ಇದ್ದಿದ್ದು ಮೂವತ್ತು– ನಲ್ವತ್ತಕ್ಕೇರೈತಿ. ಆದ್ರ ಕೆಲಸ ಫಾಸ್ಟ್ ಅನ್ನೂ ಖಾತ್ರಿಯಂತೂ ಇರತೈತಿ’ ಬೆಕ್ಕಣ್ಣ ಉಲ್ಟಾ ವಾದಿಸಿ, ನನ್ನ ಬಾಯಿ ಮುಚ್ಚಿಸಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.