ADVERTISEMENT

ಚುರುಮುರಿ: ಕತ್ತಲಲ್ಲಿ ಕರಿಬೆಕ್ಕು!

ಬಿ.ಎನ್.ಮಲ್ಲೇಶ್
Published 27 ಜನವರಿ 2022, 19:31 IST
Last Updated 27 ಜನವರಿ 2022, 19:31 IST
ಚುರುಮುರಿ
ಚುರುಮುರಿ   

‘ಲೇ ತೆಪರ, ಈ ಕತ್ತಲಲ್ಲಿ ಕರಿಬೆಕ್ಕು ಹುಡುಕೋದು ಅಂದ್ರೆ ಏನಲೆ?’ ಗುಡ್ಡೆಕೇಳಿದ.

‘ಅಂದ್ರೆ ಗಾಳೀಲಿ ಗುಂಡು ಹಾರಿಸೋದು ಅಂತ ಅರ್ಥ...’

‘ಗಾಳೀಲಿ ಗುಂಡು ಹಾರಿಸೋದು ಅಂದ್ರೆ?’ ದುಬ್ಬೀರನಿಗೆ ಅರ್ಥವಾಗಲಿಲ್ಲ.

ADVERTISEMENT

‘ನಿಮಗೆ ಎಲ್ಲ ಬಿಡಿಸಿ ಹೇಳೋಕಾಗಲ್ಲ ಕಣ್ರಲೆ... ಅಂದ್ರೇ ಅದರಿಂದ ಏನೂ ಪ್ರಯೋಜನ ಇಲ್ಲ ಅಂತ. ಕತ್ತಲಲ್ಲಿ ಕರಿಬೆಕ್ಕು ಸಿಗಲ್ಲ, ಗಾಳೀಲಿ ಗುಂಡು ಹಾರಿಸಿದ್ರೆ ಯಾರೂ ಸಾಯಲ್ಲ ಅಂತ... ಅರ್ಥ ಆತಾ?’

‘ಏನೋ ನೀನು ಪತ್ರಕರ್ತ ಅಂತ ಕೇಳ್ತೀವಪ್ಪ. ಈಗ ಬಿಜೆಪಿ ಶಾಸಕರು ನಮ್ಮ ಸಂಪರ್ಕದಲ್ಲಿದಾರೆ ಅಂತ ಕಾಂಗ್ರೆಸ್‌ನೋರು ಹೇಳ್ತಾರೆ. ಕಾಂಗ್ರೆಸ್ ಶಾಸಕರು ನಮ್ಮಸಂಪರ್ಕದಲ್ಲಿದಾರೆ ಅಂತ ಬಿಜೆಪಿಯೋರು ಹೇಳ್ತಾರೆ, ಅವರಿಬ್ರೂ ನಮ್ಮ ಸಂಪರ್ಕ
ದಾಗದಾರೆ ಅಂತ ಜೆಡಿಎಸ್‌ನೋರು ಹೇಳ್ತಾರೆ, ಇದ್ರಲ್ಲಿ ಯಾವುದು ನಿಜ?’

‘ಎಲ್ರೂ ನೀರೊಳಕ್ಕೆ ಮೀನಿನ ಗಾಳ ಬಿಟ್ಕಂಡು ಕುಂತಿದಾರೆ ಅನ್ನೋದು ನಿಜ. ಗಾಳಕ್ಕೆ ಕಟ್ಟಿರೋ ಎರೆಹುಳದ ಮೇಲೆ ಯಾರು ಯಾರ ಗಾಳಕ್ಕೆ ಬೀಳ್ತಾರೆ ಅನ್ನೋದು ಗೊತ್ತಾಗ್ತತಿ’ ತೆಪರೇಸಿ ವಿವರಿಸಿದ.

‘ಹೌದಾ? ಹಂಗಾದ್ರೆ ನಮ್ ಕಡೇಮನಿ ಕೊಟ್ರೇಶಿ ಮನಸ್ಸು ಮಾಡಿದ್ರೆ ಎಲ್ಲ ಶಾಸಕರನ್ನ ಹೋಲ್‌ಸೇಲಾಗಿ ಹಿಡೀಬಹುದು’ ದುಬ್ಬೀರ ನಕ್ಕ.

‘ಅಂದ್ರೆ? ಏನರ್ಥ?’

‘ನಮ್ ಕೊಟ್ರೇಶಿ ಎರೆಹುಳ ಗೊಬ್ಬರ ಮಾಡ್ತದಾನೆ ಕಣ್ರಲೆ, ದೊಡ್ಡ ದೊಡ್ಡ ಎರೆಹುಳ ಸಾಕಿದಾನೆ...’

‘ಹೌದಾ? ನಿನ್ತಲೇಲಿ ಆ ಗೊಬ್ಬರನೇ ಇರೋದು ಅಂತ ಈಗ ಗೊತ್ತಾತು ಬಿಡು’.

ತೆಪರೇಸಿ ಮಾತಿಗೆ ಎಲ್ಲರೂ ಗೊಳ್ಳಂತನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.