‘ಮಾನ್ಯ ಬ್ರೇಕಿಂಗ್ ನ್ಯೂಸ್ ಟಿ.ವಿ ಪತ್ರಕರ್ತ ತೆಪರೇಸಿಯವರೇ ನಿನ್ನೆ ಹರಟೆಕಟ್ಟೆಗೆ ಯಾಕೆ ಬರಲಿಲ್ಲ? ಕ್ಸಿಪಿಂಗ್ ಇಂಟ್ರೂ ಮಾಡಾಕೆ ಚೀನಾಕ್ಕೇನಾದ್ರು ಹೋಗಿದ್ರಾ?’ ಹರಟೆಕಟ್ಟೆಯಲ್ಲಿ ಗುಡ್ಡೆ ನಾಟಕೀಯವಾಗಿ ಕೇಳಿದ.
‘ನಿನ್ತೆಲಿ, ನಿನ್ನೆ ನಮ್ ಟಿ.ವಿ ಆಫೀಸಲ್ಲಿ ಬ್ರೈನ್ ಮ್ಯಾಪಿಂಗ್ ಇತ್ತು ಕಣಲೆ, ಅದ್ಕೆ ಬರ್ಲಿಲ್ಲ’ ಎಂದ ತೆಪರೇಸಿ.
‘ಏನು? ಬ್ರೈನ್ ಮ್ಯಾಪಿಂಗಾ? ಯಾರಿಗೆ?’
‘ಎಲ್ಲ ಪಕ್ಷದ ರಾಜಕಾರಣಿಗಳಿಗೂ ಬ್ರೈನ್ ಮ್ಯಾಪಿಂಗ್ ಇಟ್ಕಂಡಿದ್ವಿ ಕಣಲೆ, ಸ್ಪೆಷಲ್ ಎಪಿಸೋಡು, ‘ನಮ್ಮಲ್ಲೇ ಮೊದಲು’ ಅಂತ...’
‘ಹೌದಾ? ಎಲ್ರು ಬಂದಿದ್ರಾ? ಡಾಕ್ಟ್ರುನು ಕರೆಸಿದ್ರಾ?’
‘ಎಲ್ಲ ಪಕ್ಷದೋರೂ ಬಂದಿದ್ರು. ಡಾಕ್ಟ್ರು ಎಲ್ರಿಗೂ ಬ್ರೈನ್ ಮ್ಯಾಪಿಂಗ್ ಮಾಡಾಕೆ ಅವರ ತೆಲಿ ಸ್ಕ್ಯಾನ್ ಮಾಡ್ತಿದ್ದಂಗೆ ಶಾಕ್ ಆಗೋದ್ರು...’
‘ಶಾಕ್ ಆಗೋದ್ರಾ? ಯಾಕೆ? ಯಾರಿಗೂ ಒಳಗೆ ಮಿದುಳು ಇರಲಿಲ್ವಂತಾ?’
‘ಹಂಗಲ್ಲ, ಎಲ್ಲಾ ಪಕ್ಷದವರ ಮಿದುಳೂ ಒಂದೇ ತರ ಕಂಡವಂತೆ. ಒಂದೇ ಮ್ಯಾಪು, ಒಂದೇ ಸ್ಕೆಚ್ಚು!’
‘ಸ್ಕೆಚ್ಚಾ? ಏನದು?’
‘ವಿರೋಧಿಗಳನ್ನ ಹೆಂಗೆ ಮಟ್ಟ ಹಾಕಬೇಕು, ತಾನು ಹೆಂಗೆ ಕುರ್ಚಿ ಹಿಡೀಬೇಕು ಅನ್ನೋ ಸ್ಕೆಚ್ಚು...’
‘ವಿರೋಧಿಗಳು ಅಂದ್ರೆ ವಿರೋಧ ಪಕ್ಷದೋರಾ?’ ಮಂಜಮ್ಮ ಕೇಳಿದಳು.
‘ಅಲ್ಲ, ಅವರ ಪಕ್ಷದಲ್ಲೇ ಇರೋ ಅವರ ವಿರೋಧಿಗಳು...’
‘ರಾಜಕಾರಣದಲ್ಲಿ ಈಗ ನಡೀತಿರೋದೂ ಅದೇ ಬಿಡು.. ಅದಿರ್ಲಿ, ರಾಜಕಾರಣಿಗಳ ಬ್ರೈನ್ ಒಳಗೆ ಬೇರೇನೂ ಕಾಣಿಸ್ಲಿಲ್ವಂತಾ?’
‘ಎಲ್ಲರ ಬ್ರೈನ್‌ನಲ್ಲೂ ಅವರ ಒಂದೊಂದೇ ಕಾಲು ಕಂಡವಂತೆ..’
‘ಒಂದೊಂದೇ ಕಾಲಾ? ಮತ್ತೆ ಇನ್ನೊಂದು?’
‘ಅದನ್ನ ಅವರು ಗುಟ್ಟಾಗಿ ಬೇರೆ ಬೇರೆ ಪಕ್ಷಗಳಲ್ಲಿ ಇಟ್ಟಿರಬೇಕು, ಡಾಕ್ಟರಿಗೆ ಕಾಣಿಸ್ಲಿಲ್ಲಂತೆ..’
‘ಯಪ್ಪಾ, ಹೀಗೂ ಉಂಟೆ?’ ಎಂದ ಕೊಟ್ರ. ಎಲ್ಲರೂ ಗೊಳ್ಳಂತ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.