ADVERTISEMENT

ಚುರುಮುರಿ: ಗಾಳಿಸುದ್ದಿ

ಲಿಂಗರಾಜು ಡಿ.ಎಸ್
Published 14 ಅಕ್ಟೋಬರ್ 2025, 0:47 IST
Last Updated 14 ಅಕ್ಟೋಬರ್ 2025, 0:47 IST
   

ನಾನು, ತುರೇಮಣೆ ಡಿಸಿಎಂ ಮನೆಗಂಟಾ ಬಂದಿದ್ದೋ. ಅಲ್ಲೊಂದಷ್ಟು ಜನ ಡಿಕಾವಾಗಿ ಬಟ್ಟೆ ಇಕ್ಕ್ಯಂದೋರು ನಿಂತು ಚರ್ಚೆ ಮಾಡತಿದ್ರು. ‘ನಮ್ಮ ಜಿಲ್ಲೆಗೆ ಇನ್ನಷ್ಟು ಕ್ಯಾಬಿನೆಟ್ ಪೋಸ್ಟ್ ಕೇಳಮು’ ಅಂತ ಒಂದು ಗುಂಪು ಮಾತಾಡಿಕ್ಯತಿದ್ರೆ ಇನ್ನೊಂದು, ‘ನಮ್ಮ ಜಾತಿಗೆ ಸರಿಯಾದ ಪ್ರಾತಿನಿಧ್ಯ ಕೊಡದೆ ಅನ್ನೇಯ ಮಾಡ್ಯವುರೆ’ ಅಂದ್ಕತಿದ್ರು.

‘ಸಾ ಎಲ್ಲಾ ಜಿಲ್ಲೆಗಳಲ್ಲೂ ಏಡೇಡು ಗುಂಪವೆ. ಅವರವರ ಕಾಲು ಅವರೇ ಎಳಿದು ಬೀಳಿಸ್ಕತಾವ್ರೆ. ಇವರೆಲ್ಲಾ ಜನಗಳ ಕೆಲಸ ಮಾಡದು ಯಾವಾಗ?’ ಅಂತಂದೆ.

‘ಮಗಾ, ವಯಸ್ಸಲ್ಲಿ ಚಿಕ್ಕೋನಾದ್ರೂ ಪರಿಶ್ರಮ ಬಿದ್ದು ಜನದ ಬಡ್ಡೆಗೇ ಆಡಳಿತ ತಕ್ಕೋಗಿದ್ದೆ. ನನ್ನ ಮಂತ್ರಿ ಮಾಡಬಕು’ ಅಂತ ಗಬರಾಡ್ತಾ ಒಬ್ಬರು ಬಂದರು. ಕೂತ್ಕನಾರದೆ ಮನಗಿದ್ದ ಎಂಬತ್ತೈದು ವರ್ಸಾದೋರೆಲ್ಲಾ ‘ನಮಗಿನ್ನೂ ಚಿಕ್ಕ ವಯಸ್ಸು ಕನ್ರೀ’ ಅಂದ್ಕಂದು ನಾಕು–ನಾಕು ಜನದ ಹೆಗಲ ಮೇಲೆ ಕೂಕಂದು ಒಳಿಕೋದ್ರು.

ADVERTISEMENT

ಇನ್ನೊಬ್ಬರು ಲಾರಿಯಲ್ಲಿ ಎರಡು ದೊಡ್ಡ ಗಾತ್ರದ ರೋಣುಗಲ್ಲು ತಕ್ಕಬಂದು ‘ಸಿಎಂ–ಡಿಸಿಎಂ ಮ್ಯಾಲೆ ಚೆನ್ನಾಗಿ ಭಾರ ಹಾಕಬೇಕು ಅಂತ ಈ ರೋಣುಗಲ್ಲು ತಂದಿವ್ನಿ. ಕೆಲಸಾಗಗಂಟಾ ಮನೆ ಬಾಗಿಲು ಬುಟ್ಟು ಕದಲಕುಲ್ಲ’ ಅಂದರು.

‘ಸಿಎಂ ಬಾಡು–ಹಿಟ್ಟು ಡಿನ್ನರ್ ಮೀಟಿಂಗಿಗೆ ಹೋಗ್ಯವರೆ. ಬರದು ಲೇಟಾತದೆ, ಹೋಗ್ರಿ’ ಅಂದರು ಸಿಎಂ ಮನೆ ಜನ.

ಅಷ್ಟರಲ್ಲಿ ಡಿಸಿಎಂ ಬಂದ್ರು ಅಂತ ಗುಲ್ಲೆದ್ದು ಗುಂಪು ಆಕಡೆಗೆ ಓಡಿತು. ಇವರನ್ನ ನೋಡಿದ ಡಿಸಿಎಂ, ‘ಲೇ ಯಾವನ್ಲಾ ಕ್ಯಾಬಿನೆಟ್ ವಿಸ್ತರಣೆ ಅಂದುದ್ದು. ನನಗೇ ಪ್ರಾತಿನಿಧ್ಯ ಸಿಕ್ಕಿಲ್ಲಾ. ಎಲ್ಲಾ ಗಾಳಿಸುದ್ದಿ. ಸುಮ್ಮನೆ ಅಮೀಕಂದು ಕೆಲಸ ಮಾಡೋಗಿ. ನಾನು ಪ್ರಾರ್ಥನೆ ಮಾಡಕ್ಕೋಯ್ತಿದ್ದೀನಿ’ ಅಂತ ಮಕ್ಕುಗಿದು ಒಳಿಕ್ಕೋದರು. ಎದುರಾದ ಪಿಎಗೆ ‘ಲೇ ಪೀಯೆ, ಸಿಎಂ ಡಿನ್ನರ್ ಮೀಟಿಂಗಿಂದು ಏನಾದ್ರೂ ಸೀಕ್ರೇಟ್ ಗೊತ್ತಾತೇನ್ಲಾ? ಯಾರ‍್ಯಾರು ಬಂದು ಏನೇನಂದರಂತೋ?’ ಅಂದಿದ್ರಿಂದ ಗಾಳಿಸುದ್ದಿ ಬಿಸಿಯಾಗ್ಯದೆ ಅಂತ ಗೊತ್ತಾತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.