ADVERTISEMENT

ಚುರುಮುರಿ | ಬಾರೋ ಹೋಗೋ ಮಳೆರಾಯ!

ಪ್ರೊ.ಎಸ್.ಬಿ.ರಂಗನಾಥ್
Published 25 ಜೂನ್ 2020, 18:45 IST
Last Updated 25 ಜೂನ್ 2020, 18:45 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನಗರದಲ್ಲಿ ವಾಸವಿದ್ದ ಅಪ್ ಟು ಡೇಟ್ ಅಮ್ಮಯ್ಯ, ಲಾಕ್‌ಡೌನ್‌ನಿಂದ ಮಕ್ಕಳ ಶಾಲೆಗೆ ರಜೆ ಇದ್ದದ್ದರಿಂದ ಹಳ್ಳಿಗೆ ಬಂದಿದ್ದಳು. ತಾತ ಮಣ್ಣೆತ್ತಿನ ಅಮಾವಾಸ್ಯೆ ಪೂಜೆಗೆ ಎರೆಮಣ್ಣಿನಲ್ಲಿ ಎತ್ತುಗಳನ್ನು ಮಾಡುತ್ತಿದ್ದುದನ್ನು ಆಕೆಯ ಕಾನ್ವೆಂಟ್ ಕಂದ ಕುತೂಹಲದಿಂದ ನೋಡುತ್ತಿದ್ದ. ಅವು ಚೋಟಾ ಭೀಮ್‌, ಮಿಕ್ಕಿ ಮೌಸ್ ಥರ ಇಲ್ಲವೆಂದು ಅವನಿಗೆ ಅಚ್ಚರಿ.

‘ತಾತಾ, ನಾನೂ ಒಂದು ಮಾಡ್ತೀನಿ’ ಎನ್ನುತ್ತಾ ಮಣ್ಣಿಗೆ ಕೈಹಾಕಿದಾಗ ಅಮ್ಮ ಗದರಿದಳು ‘ನೋ, ನೋ ಅದು ಡರ್ಟಿ ಮಣ್ಣು, ಮುಟ್ಟಬೇಡ’.

ಆಗ ಅಜ್ಜಿ ಬಂದು ‘ಬಾರೋ ಕಂದ, ಎಣ್ಣೆಗಾಯಿ, ರಾಗಿ ರೊಟ್ಟಿ ಮಾಡಿದೀನಿ ತಿನ್ನು’ ಎಂದಳು.

ADVERTISEMENT

ಮಗಳು, ‘ಅವನಿಗೆ ಅದೆಲ್ಲ ಅಭ್ಯಾಸವಿಲ್ಲಮ್ಮ. ಮ್ಯಾಗಿ ನೂಡಲ್ಸ್ ತಂದಿದೀನಿ, ಮಾಡ್ಕೊಡ್ತೀನಿ’ ಎಂದಳು.

ಸ್ವಲ್ಪ ಹೊತ್ತಿನಲ್ಲಿ ಮಳೆ ಶುರುವಾದಾಗ ಬೀದಿಯಲ್ಲಿ ಹುಡುಗರು ‘ಬಾರೋ ಬಾರೋ ಮಳೆರಾಯ, ಬಾಳೆಯ ತೋಟಕೆ ನೀರಿಲ್ಲ’ ಎಂದು ಹಾಡುತ್ತಾ ಕುಣಿಯತೊಡಗಿದರು. ಅದಕ್ಕೆ ಕಂದನೂ ದನಿಗೂಡಿಸಿದ- ‘ರೈನ್ ರೈನ್ ಗೋ ಅವೇ, ಕಮ್ ಎಗೆಯ್ನ್ ಅನದರ್ ಡೇ...’ (ಹೋಗೋ ಹೋಗೋ ಮಳೆರಾಯ, ಇನ್ನೊಂದು ದಿನ ಬಾರಯ್ಯ).

ಹೊರಬಂದ ತಾತ ಮೊಮ್ಮಗನ ಇಂಗ್ಲಿಷ್ ಹಾಡು ಕೇಳಿ ಖುಷಿಯಿಂದ ‘ಏನಮ್ಮಾ ಆ ಹಾಡಿನ ಅರ್ಥ?’ ಎಂದು ಮಗಳನ್ನು ಕೇಳಿದರು. ಅರ್ಥ ಕೇಳಿ ಕುಸಿದುಹೋದ ಆತ ‘ಮಗನನ್ನು ಒಳಗೆ ಕರೆಯಮ್ಮ, ಅವನಿಗೆ ಶೀತವಾದೀತು’ ಎಂದರು.

‘ಈ ಹಾಳು ಮಳೆಯಿಂದ ನಮ್ಮ ಆಟವೆಲ್ಲ ಕೆಟ್ಟೋಯ್ತು’ ಎನ್ನುತ್ತಾ ಕಂದ ಒಳಬಂದ.

‘ನಮ್ಗೆ, ನಿಂಗೆ ಊಟ ಸಿಗೋದು ಈ ಮಳೆಯಿಂದ್ಲೇ ಕಣಪ್ಪ. ನಿನ್ನ ಪಾ‍ಪ್‌ಕಾರ್ನ್, ಗೋಬಿ ಮಂಚೂರಿ ಎಲ್ಲಿಂದ ಬರುತ್ತೆ ಗೊತ್ತಾ?’ ಅಂದರು ತಾತ.

‘ನಂಗೆ ಅಷ್ಟೂ ಗೊತ್ತಿಲ್ವೇ? ಅವೆಲ್ಲ ಬರೋದು ಬಿಗ್ ಬಜಾರಿಂದ. ಬೇಕಾದ್ರೆ, ನಿಮ್ಗೆ ರೊಟ್ಟಿ ಪಲ್ಯ, ಚಟ್ನಿಪುಡೀನೂ ಬರುತ್ತೆ!’ ಹಳ್ಳಿತಾತ ಸುಸ್ತಾದರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.