ADVERTISEMENT

ಚುರುಮುರಿ| ಅಸಮಾನತೆಯ ಲೆಕ್ಕ

ಲಿಂಗರಾಜು ಡಿ.ಎಸ್
Published 23 ಜನವರಿ 2023, 19:30 IST
Last Updated 23 ಜನವರಿ 2023, 19:30 IST
Churumuri 24012023
Churumuri 24012023   

‘ಸಾ, ಕೋವಿಡ್ ಕಾಲದ ನಂತರ ಶ್ರೀಮಂತರು ಶ್ರೀಮಂತರಾದ್ರೆ ಬಡವರು ಬಡವರಾಯ್ತಲೇ ಅವ್ರಂತೆ? ಅಂತರ ಕಮ್ಮಿ ಮಾಡದು ಯಂಗೆ?’ ಬಾರಾನಮೂನೆ ಲೆಕ್ಕ ತಗೆದೆ.

‘ನೋಡ್ಲಾ, ನಮ್ಮ ದೇಶದ ಶೇಕಡ 98 ಜನ ಹೊಟ್ಟೆಬಟ್ಟೆಗೆ ದಿನವೆಲ್ಲಾ ಹೆಣಗಾಡೋ ಸಭ್ಯರು. ಇವರು ಉಳ್ಳೋರ ಮನೆ ತಿಜೋರಿಲಿ ಸೇಫಾಗಿರೋ ಸತ್ಯ ಯಾವಾಗ ಈಚೆಗೆ ಬಂದತ್ತು ಅಂತ ಕಾವುಗೋಳಿ ಥರ ಕಾಯ್ತಾ ಕುಕಂಡಿರ್ತರೆ’ ಅಂದರು ತುರೇಮಣೆ.

‘ಅದಕ್ಕಿದಕ್ಕೆ ತಾರಾಕಿ ತಮಾಷೆ ನೋಡದೇ ನಿಮ್ಮ ಐನಾತಿ ಬುದ್ಧಿ’ ಅಂತ ಹೀಗಳೆದೆ.

ADVERTISEMENT

‘ಸುಮ್ನೆ ಕೇಳ್ಲಾ! ಉಳಿದ ಎರಡು ಪರ್ಸೆಂಟ್ ಕುಲಸ್ಥರಲ್ಲಿ ಒಂದು ಪರ್ಸೆಂಟ್ ಇರೋ ಅತೀ ಶ್ರೀಮಂತರ ತಾವ್ಲೇ ದೇಸದ ಅರ್ಧ ಸಂಪತ್ತು ಬೇರು ಬುಟ್ಟದೆ. ಇವರು ಚೆನ್ನಾಗಿ ಬಾಳಿ ಬದುಕಲಿ ಅಂತ ಸರ್ಕಾರವೂ ಕಾರ್ಪೊರೇಟ್ ಟ್ಯಾಕ್ಸು, ಆಕಸ್ಮಿಕ ಲಾಭದ ಮೇಲೆ, ರಫ್ತಿನ ಮ್ಯಾಲೆ ತೆರಿಗೆ ಇಳಿಸಿ ಜ್ವಾಪಾನಾಗಿ ನೋಡಿಕ್ಯತಾ ಇರುತ್ತೆ’ ಅಂತಂದ್ರು.

‘ಅಸಮಾನತೆಯ ಬಿಕ್ಕಟ್ಟಿನ ಬಗ್ಗೆ ಆಕ್ಸ್‌ಫಾಮ್‌ ರಿಪೋರ್ಟ್ ಹೇಳಿದ ಇಚಾರವ ಏನು ಪಸಂದಾಗಿ ಬುಡುಸೇಳಿಬುಟ್ರಿ ನೀವು! ಬಾಕಿ ಒಂದು ಪರ್ಸೆಂಟ್ ಜನದ ಕತೆ ಯಂಗೆ ಸಾ?’ ಅಂತ ಕೇಳಿದೆ.

‘ಒಂದು ಪರ್ಸೆಂಟ್ ಜನಕ್ಕೆ ಪುಕ್ಕಟ್ಟೆ ಪ್ರಚಾರ ತಗಂಡು ನಿಗರಾಡದೇ ಕ್ಯಾಮೆ. ಬಾಯಿ ಕಡಿತ ಜಾಸ್ತಿಯಾದಾಗ ಅಪಾಪೋಲಿಗಳಂಗೆ ಮಾತಾಡ್ತರೆ. ಇವರನ್ನ ನಮ್ಮ ನಾಯಕರು ಅಂತ ಐದು ವರ್ಸಕ್ಕೆ ಒಂದು ಸಾರಿ ಆಯ್ಕೆ ಮಾಡಿಕ್ಯಬೇಕಾಗಿರದೇ ನಮ್ಮ ದುರದೃಷ್ಟ’ ಅಂತ ಕುಟುಕಿದರು ತುರೇಮಣೆ.

‘ಎರಡು ಪರ್ಸೆಂಟ್ ಕುಲಸ್ಥರಿಂದ ನಮಗೇನು ಪಾಯ್ದೆ ಸಾ?’ ಅಂತ ಆಸೆಯಿಂದ ಕೇಳಿದೆ.

‘ನೋಡ್ಲಾ, ಎರಡು ಪರ್ಸೆಂಟ್ ಜನದ ತಿಜೋರಿ ತುಂಬಬೇಕಾದ್ರೆ ಬಾಕಿ 98 ಪರ್ಸೆಂಟ್ ಜನ ವರ್ಸೊಪ್ಪತ್ತೂ ಏದುಸುರು ಬುಟ್ಕಂದು ಜಿಎಸ್‍ಟಿ, ಐಟಿ ತಿದಿ ಒತ್ತುತ್ಲೇ ಇರಬೇಕು!’ ಅಂತ ಒಳೇಟು ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.