ADVERTISEMENT

ಚುರುಮುರಿ: ಐದು ವರ್ಷದ ನಂತರ...

ಸುಮಂಗಲಾ
Published 10 ಜುಲೈ 2022, 19:30 IST
Last Updated 10 ಜುಲೈ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

‘ಇನ್ ಐದು ವರ್ಸದ ನಂತರ ನಂ ದೇಶದಿಂದ ಪೆಟ್ರೋಲ್ ಮಾಯವಾಗತೈತಿ ಅಂತ ಗಡ್ಕರಿ ಮಾಮಾ ಹೇಳ್ಯಾನ ನೋಡಿಲ್ಲಿ’ ಬೆಕ್ಕಣ್ಣ ಪೇಪರು ನೋಡುತ್ತ ಹುರುಪಿನಿಂದ ಚೀರಿತು.

‘ಐದು ವರ್ಸ ಅಲ್ಲ, ಹಿಂಗೇ ರೇಟು ಏರತಿದ್ದರೆ ವರ್ಸದಾಗೆ ಬಂಕಿನಿಂದಲೇ ಪೆಟ್ರೋಲು ಮಾಯವಾಗತೈತಿ’ ಎಂದೆ.

‘ಏನರ ಅಡ್ಡಮಾತು ಹೇಳಬ್ಯಾಡ. ಹೈಡ್ರೋ ಜೆನ್, ಎಥೆನಾಲ್ ಹೀಂಗ ನಾಕೈದು ಹಸಿರು ಇಂಧನ ಬಳಕೆ ಜಾಸ್ತಿ ಮಾಡತೀವಿ, ಆವಾಗ ಪೆಟ್ರೋಲ್ ಮಾಯವಾಗತೈತಿ ಅಂತ ಗಡ್ಕರಿ ಮಾಮಾ ಹೇಳಿದ್ದು. ಹಂಗಾದರ ವಾಯು ಮಾಲಿನ್ಯ ಕಡಿಮೆಯಾಗತೈತಿ, ಮಂದಿ ಆರೋಗ್ಯ ಮಸ್ತ್ ಆಗತೈತಿ...’ ಬೆಕ್ಕಣ್ಣ ಹಗಲುಗನಸಿನಲ್ಲಿ ತೇಲುತ್ತಿತ್ತು.

ADVERTISEMENT

‘ಐದ್ ವರ್ಸದಾಗೆ ಪೆಟ್ರೋಲ್ ಅಷ್ಟೇ ಅಲ್ಲಲೇ, ಅಡುಗೆ ಮನಿಯಿಂದ ಗ್ಯಾಸ್ ಸಿಲಿಂಡರ್ ಮಾಯವಾಗತೈತಿ. ಈಗಲೇ ಸಾವಿರದ ಐವತ್ತೈದಾಗೈತಿ... ಹಿಂಗೇ ಏರಿಕೋತ ಹೋದರೆ ಶ್ರೀಸಾಮಾನ್ಯರ ಹತ್ರ ಸಿಲಿಂಡರಿಗೆ ರೊಕ್ಕ ಎಲ್ಲಿರತೈತಿ? ಐದು ವರ್ಸದ ನಂತರ ಇನ್ನೂ ಏನೇನು ಮಾಯವಾಗತೈತೋ...’ ಎಂದೆ.

‘ಸರಿ, ಪಟ್ಟಿ ಮಾಡೂಣು ಬಾ. ಹೆಂಗಿದ್ರೂ ಪ್ರಧಾನಿ ಕುರ್ಚಿವಳಗ ಮೋದಿಮಾಮಾ ಇರತಾನ, ಭ್ರಷ್ಟಾಚಾರ ಈಗ ಚೂರುಪಾರು ಉಳಕೊಂಡಿರಾದು ಐದು ವರ್ಸದಾಗೆ ಪೂರ್ಣ ಮಂಗಮಾಯವಾಗತೈತಿ’ ಎಂದು ಉಲಿಯಿತು.

‘ಕರುನಾಡಿನಾಗೆ ನಲ್ವತ್ತು ಪರ್ಸೆಂಟ್ ಕಮಿಷನ್ ಹಿಂಗೇ ಏರಿಕೋತ ಹೋದ್ರೆ ಐದು ವರ್ಸದಾಗೆ ನೂರು ಪರ್ಸೆಂಟೇ ಆಗಬೌದು’ ನಾನು ಕುಟುಕಿದರೆ ಬೆಕ್ಕಣ್ಣ ‘ಆದ್ರೂ ನಲ್ವತ್ತು ಪರ್ಸೆಂಟ್ ಮಾಯವಾದಂಗೆ ಆತಿಲ್ಲೋ’ ಎಂದು ವಿತಂಡವಾದ ಹೂಡಿತು.

‘ಐದು ವರ್ಸದ ನಂತರ ವಿರೋಧ ಪಕ್ಷ, ಪ್ರಾದೇಶಿಕ ಪಕ್ಷಗಳು, ಭಿನ್ನ ಧ್ವನಿ, ಭಿನ್ನಾಭಿ ಪ್ರಾಯ ಇವೆಲ್ಲಾ ಮಾಯವಾಗಿ ಏಕಪಕ್ಷ, ಏಕಧ್ವನಿ ಇರತೈತೇನೋ’ ನಾನು ಚಿಂತೆಯಿಂದ ಹೇಳಿದೆ.

‘ಒಂದಂತೂ ಖರೇ... ಇನ್ನೈದು ವರ್ಸದ ನಂತರ ಉದ್ಯಮದ ವರ್ಣಮಾಲೆಯೊಳಗೆ ಅ-ಅಂ ಎರಡೇ ಅಕ್ಷರ ಇರತಾವು. ಅಂದರೆ ಅದಾನಿ-ಅಂಬಾನಿ ಇಬ್ಬರೇ ಇರತಾರ’ ಎನ್ನುತ್ತ ಖೊಳ್ಳನೆ ನಕ್ಕಿತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.