ADVERTISEMENT

ಬುಟ್ಟಿಯೊಳಗಿನ ಹಾವು

ಬಿ.ಎನ್.ಮಲ್ಲೇಶ್
Published 19 ನವೆಂಬರ್ 2021, 17:29 IST
Last Updated 19 ನವೆಂಬರ್ 2021, 17:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

‘ಅಲ್ರೀ... ಕೊತ್ತಮರಿ ಸೊಪ್ಪು ತರೋಕೆ ಅಂತ ಹೋದೋರು ಒಂದು ಗಂಟೆ ಲೇಟಾಗ್ ಬಂದೀರಲ್ಲ, ಎಲ್ಲಿ ಹಾಳಾಗ್ ಹೋಗಿದ್ರಿ?’ ಮಡದಿ ಪಮ್ಮಿಯ ಕೋಪಕ್ಕೆ ಥೇಟ್
ಕೊತ್ತಿಮರಿಯಂತಾದ ತೆಪರೇಸಿ ‘ಅದೂ... ದಾರೀಲಿ ಯಾರೋ ಹಾವಾಡಿಸ್ತಾ ಇದ್ರು ಕಣೆ, ನೋಡ್ತಾ ನಿಂತುಬಿಟ್ಟೆ’ ಎಂದ.

‘ಏನು? ಹಾವಾಡಿಸೋದ್ನ ನೋಡ್ತಾ ನಿಂತಿದ್ರಾ? ನಾಚ್ಕೆ ಆಗಲ್ವ?’ ಪಮ್ಮಿಗೆ ಮತ್ತಷ್ಟು ಕೋಪ.

‘ಅದೂ ಹಂಗಲ್ಲ, ಬುಟ್ಟೀಲಿ ದೊಡ್ಡ ಕಾಳಿಂಗ ಸರ್ಪ ಐತೆ, ಅದನ್ನ ಹೊರಗೆ ಬಿಡ್ತೀನಿ, ಅದನ್ನ ನೋಡದೆ ಹಾಗೇ ಹೋದ್ರೆ ಕೆಟ್ಟದಾಗುತ್ತೆ ಅಂದ ಹಾವಾಡಿಸೋನು. ಅದ್ಕೇ ನಿಂತುಬಿಟ್ಟೆ...’

ADVERTISEMENT

‘ಜೊತೆಗೆ ಹಾವು-ಮುಂಗುಸಿ ಫೈಟಿಂಗ್ ತೋರಿಸ್ತೀನಿ, ನೋಡ್ಕಂಡ್ ಹೋಗಿ ಅನ್ಲಿಲ್ವಾ?’

‘ಅಲ್ಲ, ಅದೂ ಹಾವು ಹದಿನೈದು ಅಡಿ ಉದ್ದ ಐತೆ, ಆರಡಿ ಎದ್ದು ನಿಲ್ಲುತ್ತೆ ಅಂದ, ನೋಡ್ಬೇಕು ಅನಿಸ್ತು...’

‘ಸರಿ, ಹಾವು ತೋರಿಸಿದ್ನಾ?’

‘ಮೊದ್ಲು ನಾಗರಹಾವು, ಎರಡು ತಲೆ ಹಾವು, ಕೇರೆ ಹಾವು, ಹೆಬ್ಬಾವು ಏನೇನೋ ತೋರಿಸ್ದ. ಬುಟ್ಟಿ ಒಳಗಿದ್ದ ಹಾವು ತೆಗೀಲೇ ಇಲ್ಲ...’

‘ಬೇಗ ತೋರ‍್ಸಿ, ನಾ ಹೋಗ್ಬೇಕು ಅನ್ಬೇಕಿತ್ತು?’

‘ಅಂದೆ... ಅವನು ತಾಯತ ಮಾರೋಕೆ ಶುರು ಮಾಡ್ದ... ನಾನೂ ಒಂದು ತಗಂಡೆ’.

‘ಕೊನೆಗೂ ಹಾವು ತೋರಿಸಿದ್ನೋ ಇಲ್ವೋ?’

‘ಕೊನೇಗೆ ಈಗ ಹಾವು ತೋರಿಸ್ತೀನಿ ಅಂತ ಬುಟ್ಟಿ ಮುಚ್ಚಳ ತೆಗೆದ, ಆದ್ರೆ...’

‘ಆದ್ರೆ ಏನು?’

‘ಬುಟ್ಟಿಯೊಳಗೆ ಹಾವು ಇರ‍್ಲೇ ಇಲ್ಲ! ರಾತ್ರಿ ಎಲ್ಲೋ ತಪ್ಪಿಸ್ಕಂಡಿದೆ ಬಡ್ಡಿಮಗಂದು ಅಂತ ಪೇಚಾಡಿದ ಹಾವಾಡಿಸೋನು...’

ಅಷ್ಟರಲ್ಲಿ ಟಿ.ವಿ.ಯಲ್ಲಿ ಬ್ರೇಕಿಂಗ್ ನ್ಯೂಸ್ ಸದ್ದಾಯಿತು ‘ಬಿಟ್ ಕಾಯಿನ್ ಆರೋಪಿ ನಾಪತ್ತೆ, ಪೊಲೀಸರ ಹುಡುಕಾಟ...!’

ತೆಪರೇಸಿ, ಪಮ್ಮಿ ಮುಖ ಮುಖ ನೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.