ADVERTISEMENT

ಕೆರೆತಲಾಮಲಕ

ಲಿಂಗರಾಜು ಡಿ.ಎಸ್
Published 6 ಜನವರಿ 2020, 20:00 IST
Last Updated 6 ಜನವರಿ 2020, 20:00 IST
ಚುರುಮುರಿ
ಚುರುಮುರಿ   

‘ಇದೇನ್ಸಾರ್ ಕಜ್ಜಿ ಬಂದೋರ ಥರಾ ಹಿಂಗೆ ಕೆರಕತ್ತಿದ್ದೀರಿ. ನಿಮ್ಮೆಸರು ಕೆರಿಯಮಣೆ ಅಂತ ಬದಲಾಯಿಸಕ್ಯಂಡ್ರೆ ಚೆನ್ನಾಗಿರತದೆ’ ಅಂದೆ ಮೈ ಪರಚಿಕೊಳ್ಳುತ್ತಾ ಕೂತಿದ್ದ ತುರೇಮಣೆಗೆ.

‘ಹ್ಞೂಂಕಲಾ, ನೀನೇಳಿದಂಗೆ ಯಸರು ಬದಲಾಯಿಸಿಕಳ್ಳಕೆ ನಾನೇನು ಶಿವಮೊಗ್ಗವೇ? ಹಂಗೆ ನೋಡಿದರೆ ಕೆಪಿಎಸ್‍ಸಿ ಹೆಸರ ಲೋಪಸೇವಾ ಆಯೋಗ ಅಂತ ಬದಲಾಯಿಸಬೇಕಾಯ್ತದಪ್ಪಾ!’ ಅಂದ್ರು.

‘ಕೆಪಿಎಸ್‍ಸಿ ಬುಡಿ, ಅದು ಆಗಲೇ ಡಿಜಿಟಲ್ಲಲ್ಲೂ ಎಕ್ಕುಟ್ಟೋಗದೆ. ಹಿಂದೆ ರಾಮನಗರವ ಕ್ಲೋಸ್‍ಪೇಟೆ ಅಂತಿದ್ರಲ್ಲಾ ಅದು ಬದಲಾಗಿಲ್ಲವೇ? ಕುಮಾರಣ್ಣ ಪಾರಿನ್ನಿಗೋಗಿ ವೋಸಾ ವರ್ಷ ಮಾಡಿ ತಾಕತ್ ತಕ್ಕಬಂದು ಒಂದೇ ಸಮ ಅದುನ್ನೇ ಕೆರಿತಾವ್ರೆ’ ಅಂದೆ.

ADVERTISEMENT

‘ಉಟ್ಟು ಓರಾಟಗಾರರಲ್ಲವೇನೋ ಅವರು’ ಅಂತಂದ್ರು. ‘ಈಗ ನಿಮ್ಮ ಮೈಕೆರೆತದ ಸಮಾಚಾರ ಏನು?’ ಅಂತ ಕೇಳಿದೆ.

‘ಕೆರೆತ ಅನ್ನೋದು ಸಮೂಹಸನ್ನಿ ಕಣೋ. ಸರ್ಕಾರ ಆದಾಯ ಇಲ್ಲ ಅಂತ ಕೆರಕಂತದೆ! ಮಿನಿಸ್ಟ್ರಾಗಲಿಲ್ಲ, ಕಾರು ಕೊಡಲಿಲ್ಲ, ಡಿಸಿಎಂ ಆಗಲಿಲ್ಲ, ಅಧಿಕಾರ ತಪ್ಪೋಯ್ತು ಅಂತ ರಾಜಕಾರಣಿಗಳು ಎಲ್ಲೆಲ್ಲೋ ಕೆರಕತ್ತರೆ. ನಾವು ಜನ ಸಾಮಾನ್ಯರು ಪೆಟ್ರೋಲ್- ಡೀಸೆಲ್, ಈರುಳ್ಳಿ ರೇಟು ಜಾಸ್ತಿ, ಅಕ್ಕಿ-ರಾಗಿಗೆಲ್ಲಾ ಜಿಎಸ್‍ಟಿ ಬತ್ತ
ದಂತೆ ಅಂತ ಕೆರಕಂತೀವಿ. ಹಿಂಗೇ ಕೆರೆತದ ಸರಣಿ ಮುಂದುವರಿತದೆ’ ಅಂದ್ರು. ನಾನು ಸುಮ್ಮನಿದ್ದೆ.

‘ಅಲ್ಲಾಕಲಾ ಬೊಡ್ಡಿಹೈದ್ನೆ, ಅಳಾ ಮಕ್ಕಳ ಅಂಡು ಕೆರೆದಂಗೆ ಯಡೂರಪ್ಪಾರು ಐವತ್ತು ಸಂಸದೀಯ ಕಾರ್ಯದರ್ಶಿ ಮಾಡಮು ಅಂತಿದ್ರು! ಹೈಕೋರ್ಟು ಇಂತವೆಲ್ಲಾ ನೇಮಕ ಅಕ್ರಮ ಅಂದದೆ. ಹಾಲೀ ರಾಜಕೀಯ ಕಾರ್ಯದರ್ಶಿಗಳಿಗೆ ಮೈಕಡಿತ ಸುರುವಾಗಬಹುದು. ಅನರ್ಹರ ಬೂತು ಚೇಷ್ಟೆಯಿಂದ ಬೇಜಾರಾಗಿರೋ ರಾಮನಗರದ ಕುಮಾರಣ್ಣನ ಥರಾ ನನಗೂ ಮೈಕೆರೆತಲಾಮಲಕ ಆಗದೆ’ ಅಂದ್ರು ತುರೇಮಣೆ.

‘ಆದರೂ ರಾಮನಗರ ಅಂದೇಟಿಗೆ ನನಗೆ ಒಂದೇ ಅನುಮಾನ ಸಾ! ರಾಮನಗರದ ಮಿನಿ ವಿಧಾನಸೌಧ ಅದಲ್ಲಾ, ಅದರ ಮಗ್ಗುಲಲ್ಲೇ ಜೈಲು ಯಾಕೆ ಕಟ್ಟವುರೆ?’ ಅಂದೆ. ‘ಹ್ಞೂಂಕಯ್ಯಾ ಜೈಲಿಗೆ ಉಪಕಾರಾಗ್ರಹ ಅಂದಾರಲ್ಲುವೇ! ಸುಮ್ಮನೆ ಕೆರೆಯೋ ಗ್ರಹಗಳಿಗೆಲ್ಲಾ ಅದೇ ಕೆರೆತಲಾಮಲಕ ಕೇಂದ್ರವಂತೆ’ ಅನ್ನದಾ ಈವಯ್ಯ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.