ADVERTISEMENT

ಭೂಲೋಕದಲ್ಲಿ ಯಮ!

ಬಿ.ಎನ್.ಮಲ್ಲೇಶ್
Published 30 ಏಪ್ರಿಲ್ 2020, 20:00 IST
Last Updated 30 ಏಪ್ರಿಲ್ 2020, 20:00 IST
   

ಏನಿದು ವಿಚಿತ್ರ! ಎರಡು ತಿಂಗಳಿಂದ ಭೂಲೋಕದಲ್ಲಿ ಸಾಯುವವರ ಸಂಖ್ಯೆಯಲ್ಲಿ ದಿಢೀರ್ ಇಳಿಕೆಯಾಗಿದೆ. ಯಮಲೋಕದಲ್ಲಿ ವಹಿವಾಟೇ ಇಲ್ಲದಂತಾಗಿದೆಯಲ್ಲ ಎಂದು ಯಮನಿಗೆ ಚಿಂತೆಯಾಯಿತು. ವಿಧಿಲಿಖಿತದ ಪ್ರಕಾರ ಅಪಘಾತಗಳಲ್ಲಿ ಸಾಯಬೇಕಾದವರು, ಆತ್ಮಹತ್ಯೆಗೆ ಫಿಕ್ಸ್ ಆಗಿದ್ದವರು, ಹೊಡೆದಾಟದಲ್ಲಿ ಕೊಲೆಯಾಗಬೇಕಾದವರು ಯಾರೂ ಸಾಯುತ್ತಿಲ್ಲ...

ಏನ್ ನಡೀತಿದೆ ಕರ್ನಾಟಕದಲ್ಲಿ ನೋಡಿಯೇಬಿಡಬೇಕು ಎಂದು ನಿರ್ಧರಿಸಿದ ಯಮ, ಸೀದಾ ಬೆಂಗಳೂರಿನ ಮೆಜೆಸ್ಟಿಕ್‍ಗೆ ಬಂದಿಳಿದ. ನೋಡುತ್ತಾನೆ, ಬಸ್‍ಸ್ಟ್ಯಾಂಡಲ್ಲಿ ಬಸ್ಸೂ ಇಲ್ಲ, ಜನರೂ ಇಲ್ಲ. ಅತ್ತ ರೈಲುಗಳೂ ಇಲ್ಲ, ಲಾರಿಗಳೂ ಇಲ್ಲ. ಮತ್ತೆ ಅಪಘಾತಗಳಾಗಲು ಹೇಗೆ ಸಾಧ್ಯ? ಜನರೇ ಇಲ್ಲದಿದ್ದ ಮೇಲೆ ಹೊಡೆದಾಟ, ಕೊಲೆಗಳಾಗಲು ಹೇಗೆ ಸಾಧ್ಯ?

ಯಮನಿಗೆ ಆಶ್ಚರ್ಯವಾಯಿತು. ಏನಿದು ಭೂಲೋಕದ ವ್ಯವಹಾರವೇ ಬದಲಾಗಿ ಹೋಯಿತೆ? ರಸ್ತೆಗಳಲ್ಲಿ ಕಂಡವರೆಲ್ಲ ಮುಖ ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ವ್ಯಾಪಾರ, ವಹಿವಾಟೆಲ್ಲ ನಿಂತು ಹೋಗಿದೆ. ಆಂಬುಲೆನ್ಸ್, ಪೊಲೀಸ್ ವಾಹನ ಮಾತ್ರ ಓಡಾಡುತ್ತಿವೆ. ಏನಿದು ವಿಚಿತ್ರ? ಇದರ ಬಗ್ಗೆ ಯಾರನ್ನ ಕೇಳಲಿ ಎಂದು ಯೋಚಿಸುತ್ತಿದ್ದಾಗ, ಪೊಲೀಸ್ ಪೇದೆಯೊಬ್ಬ ಬಂದು ಯಮನನ್ನು ಲಾಠಿಯಿಂದ ತಿವಿದ. ‘ಯಾರ‍್ರೀ ನೀವು? ಎಲ್ಲಿಗೆ ಹೋಗ್ತಾ ಇದ್ದೀರಿ? ಪಾಸ್ ಇದೆಯಾ?’

ADVERTISEMENT

ಯಮನಿಗೆ ಗಾಬರಿಯಾಯಿತು. ‘ಪಾಸಾ? ನನ್ನ ಬಳಿ ‘ಪಾಶ’ವಿದೆ...’

‘ಏನು? ಪಾಶನಾ? ನಿನ್ ತಲೆ. ಅದಿರ‍್ಲಿ, ಮಾಸ್ಕ್ ಯಾಕೆ ಹಾಕಿಲ್ಲ? ಏನು ಆಟ ಆಡ್ತಿದೀಯಾ? ಬೇಕಾ ಏಟು? ನಿಂಗೆ ಐವತ್ತು ಬಸ್ಕಿ ಹೊಡಿಯೋ ಶಿಕ್ಷೆ ಕೊಡ್ತಿದೀನಿ...’ ಪೇದೆ ಗರಂ ಆದ.

ಯಮ ಪಿಟಿಕ್ಕೆನ್ನದೆ ಬಸ್ಕಿ ಹೊಡೆಯಲು ಆರಂಭಿಸಿ, ಮನಸ್ಸಿನಲ್ಲೇ ‘ಲೇ ನರಮಾನವ, ನೀನು ಸತ್ತು ಯಮಲೋಕಕ್ಕೆ ಬಾರಲೆ, ನಿನ್ನ ಕರಕರ ಕತ್ತರಿಸಿ, ಕೊತ ಕೊತ ಎಣ್ಣೆಗೆ ಹಾಕದಿದ್ರೆ ನಾನು ಯಮನೇ ಅಲ್ಲ’ ಎಂದು ಹಲ್ಲು ಕಡಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.