ADVERTISEMENT

ಉಳಿತಾಯದ ಸದ್ಬಳಕೆ

ಕೆ.ವಿ.ರಾಜಲಕ್ಷ್ಮಿ
Published 29 ಏಪ್ರಿಲ್ 2020, 20:00 IST
Last Updated 29 ಏಪ್ರಿಲ್ 2020, 20:00 IST
   

‘ಮನೆಯಲ್ಲಿ ಮಕ್ಕಳ ಕೂಟದ ಕಾಟ ವಿಪರೀತ ಭಯಾನಕವಂತೆ. ತನ್ನನ್ನು ಯಾರೂ ಕ್ಯಾರೇ ಅಂತಿಲ್ಲ... ಹಾಕಿದ್ದನ್ನು ತಿಂದ್ಕೊಂಡು ಬಿದ್ಕೊಂಡಿದ್ದೀನಿ ಅಂತ ಕಂಠಿ ವಿಡಿಯೊ ಕಾಲ್‌ನಲ್ಲಿ ನೊಂದುಕೊಂಡ’ ಪಾಪ, ಗೆಳೆಯನನ್ನು ವಹಿಸಿಕೊಂಡೆ.

‘ನಾನೂನೋಡಿದೆ, ಅವ್ರ ಮನೆ ನಾಯೀನ. ದುಂಡುದುಂಡಗೆ ಮುದ್ದಾಗಿದೆ. ಮನೆಗೆ ಯಾರೂ ಬರೋವ್ರಿಲ್ಲ, ಬೌ ಬೌ ಅನ್ನೋ ಕಷ್ಟವೂ ಇಲ್ಲ. ಈ ಒಂದು ತಿಂಗಳ ಲಾಕ್‌ಡೌನ್ ಅದಕ್ಕೆ ಲಕ್‌ ತಂದಿದೆ’ ಪುಟ್ಟಿಯ ಪ್ರತಿಕ್ರಿಯೆ.

‘ನಿಮ್ಮ ಅಮ್ಮನ ಮುಖ ಮಾತ್ರ ಬಂಗಾರದಂತೆ ಹೊಳೀತಿದೆ!’ ಕಾಫಿಯನ್ನು ನೆನಪಿಸಲು ಸುಮ್ಮನೆ ನಾಲಗೆ ಹರಿಬಿಟ್ಟೆ. ಮಾತು ಮುಗಿಯುವ ಮುನ್ನ ಬಿಸಿಬಿಸಿ ಕಾಫಿ ನನ್ನ ಕೈಯಲ್ಲಿತ್ತು.

ADVERTISEMENT

‘ಸಮಾಜದ ಪ್ರೆಸಿಡೆಂಟ್ಸರೋಜಾ ಆಂಟಿ ಮನೇಲಿ ಇವತ್ತಿಂದ ಮನೆಗೆಲಸ ಅವರೇ ಮಾಡಬೇಕು, ಅಂಕಲ್‌ಗೆ ವರ್ಕ್ ಫ್ರಮ್ ಹೋಮ್‌ನಿಂದ ರಿಲೀಫ್ ಸಿಕ್ತಂತೆ’ ಪುಟ್ಟಿ ಗುಟ್ಟು ಬಿಟ್ಟಳು. ನನ್ನವಳ ಮಹಿಳಾ ಸಮಾಜದ ಗುಸುಗುಸು ಕೇಳೋಕ್ಕೆ ಒಮ್ಮೊಮ್ಮೆ ಮಜವಾಗಿರುತ್ತೆ.

‘ನಾವು ಒಂದು ತಿಂಗಳಿಂದ ಎಷ್ಟು ಕಷ್ಟ
ಪಡ್ತಿದ್ದೀವಿ. ಕೆಲಸದವಳಿಲ್ಲ, ಮೊದಲ ನಾಲ್ಕೈದು ದಿನ ಸರಿಯಾಗಿ ಹಾಲು ಸಿಗಲಿಲ್ಲ, ಒಂದಷ್ಟು ದಿನ ಕಾಯಿಪಲ್ಲೆ ಇರದ ಕಷ್ಟ. ಹಾಗಿದ್ರೂ ಇದ್ದದ್ದರಲ್ಲೇ ಅನುಸರಿಸಿಕೊಂಡು,ಬೇಳೆಕಾಳುಗಳಲ್ಲೇ ಉಸಲಿ, ತೊವ್ವೆ ಅಂತೆಲ್ಲ ಮ್ಯಾನೇಜ್ ಮಾಡಿದ್ದೀವಿ’ ನನ್ನವಳು ಶುರುವಿಟ್ಟಳು.

ಅರ್ಧಸತ್ಯ! ಕೆಲಸದವಳ ಜಾಗದಲ್ಲಿ ನನ್ನ ಕೊಡುಗೆ ಕಾಣದಾಯಿತೇ?

‘ಆನ್‌ಲೈನ್‌ ಖರೀದಿ ಇಲ್ಲ, ಆಫ್‌ಲೈನ್ ಮಾಡೋಕ್ಕಾಗೊಲ್ಲ... ಸಂಪೂರ್ಣ ಅಡ್ಜಸ್ಟ್‌ಮೆಂಟ್‌ ನಮ್ಮ ಕಡೆಯಿಂದ, ದೇರ್ ಬೈ ಹಣದ ಉಳಿತಾಯ’ ಪುಟ್ಟಿ ಮುಂದುವರಿಸಿ, ಅಮ್ಮನ ಮೆಚ್ಚುಗೆ ನೋಟಕ್ಕೆ ಭಾಜನಳಾದಳು.

‘ಈಗ ಅದಕ್ಕೊಂದು ಸದವಕಾಶ, ಅಕ್ಷಯ ತೃತೀಯಕ್ಕೆ ಚಿನ್ನ ಕೊಂಡರೆ, ಅದೂಮನೆಯಲ್ಲೇ ಕುಳಿತು...ಉಳಿತಾಯದ ಸದ್ಬಳಕೆ ಆಗೋಲ್ವೇ?
ನೀವು ಏನೇ ಹೇಳಿ ಚಿನ್ನ ಚಿನ್ನಾನೇ. ಇದರಲ್ಲಿ ಹೂಡಿಕೆ, ಆರೋಹಣವೇ ಹೊರತು ಅವರೋಹಣವಿಲ್ಲ, ಏನಂತೀರಿ?’

‘ಕಾಫಿ ಸ್ಟ್ರಾಂಗ್ ಆಗಿತ್ತು’ ಅಂದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.