ADVERTISEMENT

ಬೂಸಾ ಧಾರಣೆ

ಲಿಂಗರಾಜು ಡಿ.ಎಸ್
Published 15 ಜೂನ್ 2020, 19:38 IST
Last Updated 15 ಜೂನ್ 2020, 19:38 IST
ವ್ಯಂಗ್ಯಚಿತ್ರ
ವ್ಯಂಗ್ಯಚಿತ್ರ   

‘ಸಾ, ತಮಗೆ ನಿಧಾನಪರಿಷತ್ ಟಿಕೆಟ್ ಕೊಡಲೇ ಬೇಕು ಅಂತ ಮೂರೂ ಪಕ್ಷದ ಹೆಣ್ಣುಮಕ್ಕಳು, ನಿಷ್ಠಾವಂತರು, ನೆಲದೋರು, ವಲಸಿಗರು, ತ್ಯಾಗಜೀವಿಗಳು, ಮುಂದುಳಿದವರು, ಸ್ವಲ್ಪ ಸಂಖ್ಯಾತರು ಕಸರತ್ತು ಮಾಡ್ತಾವರಂತೆ!’ ಅಂತ ಸುದ್ದಿಯನ್ನು ವದರಿದೆ.

‘ತರಗು ಗುಡಿಸಿ ಮನೆ ಕಟ್ಟಿದೋರಲ್ಲವೇನಪ್ಪಾ ಅವರು. ಕೇಳದು ನ್ಯಾಯ! ನಾಲಿಗೆ ಮೇಲೆ ನಡೆಯುವ ನಾಯಕರು ನಮಗಂತೂ ಟಿಕೆಟ್ಟು ಕೊಟ್ಟೇ ಕೊಡ್ತರೆ ಅಂತ ಹಕ್ಕಿ ಶಕುನ ಹೇಳ್ಯದೆ’ ಅಂದ್ರು ಗುಮ್ಮಗೆ.

‘ಇಲ್ಕೇಳಿ ಸಾ, ರೈತರ ಜಮೀನ ಯಾರು ಬೇಕಾದರೂ ತಗಬೋದಂತೆ. ಜಮೀನು ಆರ್ಥಿಕ ಸರಕಂತೆ! ಅಂದ್ರೆ ಉಳ್ಳವನೇ ಹೊಲದೊಡೆಯ ಅಂತೀರಾ!’ ಅಂತ ಕೇಳಿದೆ.

ADVERTISEMENT

‘ನೋಡ್ಲಾ, ರೈತರ ಜಮೀನು ಮಾತ್ರ ಆರ್ಥಿಕ ಉದ್ಯಮವಲ್ಲ ತಿಳಕೋ. ರಾಜಕೀಯ ಕ್ಷೇತ್ರದ ಸ್ಥಾನ-ಮಾನ, ಸರ್ಕಾರಿ ಕಾಮಗಾರಿ, ಇ-ಖರೀದಿಗಳೂ ಆರ್ಥಿಕ ಸರಕುಗಳೇ ಕನೋ. ಇವು ಹಿಡುವಳಿಯಾಗೋ ಸರ್ಕಾರದ ಪಟ್ಟಾ ಭೂಮಿಗಳು. ಉಳ್ಳೋರು ಇವುಕ್ಕೆ ಬಂಡವಾಳ ಹಾಕಿ ಪಾಲು-ಪಾರೀಕತ್ತು, ಖಾತೆ-ಕಂದಾಯ ಮಾಡಿಕ್ಯಂಡು ಉತ್ತು, ಬಿತ್ತಿ, ಹರಗಿ ಬೆಳೆ ತಗಂತರೆ! ಆಮೇಲೆ ಉಳುವ ಆಸಕ್ತರಿಗೆ ಸರ್ಕಾರಿ ಗೋಮಾಳ, ಖರಾಬು ಜಮೀನು, ಒತ್ತುವರಿ, ಅಕ್ರಮ-ಸಕ್ರಮ ಎಲ್ಲಾ ಆಯ್ತದೆ’ ಅಂದ್ರು ತುರೇಮಣೆ.

‘ಸಾ, ಹಂಗಾದ್ರೆ ಅದುಕ್ಕೇ ಅನ್ನಿ ಮೊನ್ನೆ ಹಳೇ ಪಂಟ್ರುಗಳೆಲ್ಲಾ ಮೆರೆದೇವರಾಗಿ ನಿಂತುದ್ದು. ಈ ಬೂಸಾ ಧಾರಣೆಯಲ್ಲಿ ಜನಸಾಮಾನ್ಯರ ಪಾತ್ರ ಏನು?’ ಅಂತ ವಿವರಣೆ ಕೇಳಿದೆ.

‘ಜನಸಾಮಾನ್ಯರು ಜಾನುವಾರುಗಳಿದ್ದಂಗೆ ಕನೋ. ಹಸ ಹಾಲು ಕೊಡಕ್ಕೆ, ಎತ್ತು ಗದ್ದೇಲಿ ಉಳಕ್ಕೆ, ಕಣದಲ್ಲಿ ಕಾಳು ತುಳಿಯಕೆ ಬೇಕು, ಹೊಲಕ್ಕೆ ಗೊಬ್ಬರ ಮಾಡಕ್ಕೆ ಬೇಕು. ಸಾಗುವಳಿಯಲ್ಲಿ ನೀನು ಪಾಲು ಕೇಳಂಗಿಲ್ಲ’ ಅಂತಂದ್ರು.

‘ಮತ್ತೆ ನಮಗೇನು ಸಿಕ್ಕತದೆ ಸಾರ್’ ಅಂದು ದ್ದಕ್ಕೆ ಸಿಟ್ಟುಗಂಡ ತುರೇಮಣೆ ‘ನಿನ್ನಯ್ಯನ್, ಬಾವಿ ಒಳಗಿನ ಕಪ್ಪೆ ಥರಾ ಆಡಬ್ಯಾಡ. ನೀನ್ಯಾವ ಗೊಂಜಾಯಿ ಅಂತ ಕ್ಯಾರೆ ಅಂದಾರ‍್ಲಾ. ನೀನಿದ್ರೆ ಗೆಲ್ಲು ಮಂಕರಿ ತುಂಬಾ ಸಗಣಿ. ಸತ್ರೆ ಕಾಲಿಗೆ ಜೋಡು! ಅಷ್ಟೀಯೆ!’ ಅಂದ್ರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.