ADVERTISEMENT

ಚುರುಮುರಿ: ಬೀಳುತ್ತಾ, ಬೀಳಲ್ವ...?!

ಬಿ.ಎನ್.ಮಲ್ಲೇಶ್
Published 10 ಡಿಸೆಂಬರ್ 2020, 19:31 IST
Last Updated 10 ಡಿಸೆಂಬರ್ 2020, 19:31 IST
ಚುರುಮುರಿ
ಚುರುಮುರಿ   

ಹರಟೆಕಟ್ಟೆಯಲ್ಲಿ ತೆಪರೇಸಿ ಮಂಕು ಕವಿದವನಂತೆ ಕೂತಿದ್ದ. ಮಾತಿಲ್ಲ ಕತೆಯಿಲ್ಲ. ಯಾರು ಮಾತಾಡಿಸಿದರೂ ‘ಆಗುತ್ತೆ-ಆಗಲ್ಲ, ಆಗುತ್ತೆ-ಆಗಲ್ಲ’ ಎನ್ನುತ್ತಿದ್ದ.

ಗುಡ್ಡೆಗೆ ಸಿಟ್ಟು ಬಂತು, ‘ಏನು ಆಗುತ್ತೆ ಆಗಲ್ಲ? ನಿನ್ತೆಲಿ, ಏನದು ಬಾಯಿಬಿಟ್ಟು ಬೊಗಳಲೇ’ ಎಂದ.

‘ಸಂಪುಟ ವಿಸ್ತರಣೆ ಆಗುತ್ತೆ, ಆಗಲ್ಲ.. ಆಗುತ್ತೆ, ಆಗಲ್ಲ...’ ತೆಪರೇಸಿ ಬಾಯಿ ಬಿಟ್ಟ.

ADVERTISEMENT

‘ಥೂ ನಿನ್ನ, ಅದು ಆದ್ರೆಷ್ಟು ಬಿಟ್ರೆಷ್ಟು. ನೀನ್ಯಾಕೆ ಮೆಂಟ್ಲು ತರ ಆಡ್ತಿದೀಯ?’ ದುಬ್ಬೀರನಿಗೂ ಸಿಟ್ಟು ಬಂತು.

ಮರುಕ್ಷಣ ತೆಪರೇಸಿ ‘ಬರುತ್ತಾ, ಬರಲ್ವ... ಬರುತ್ತಾ, ಬರಲ್ವ’ ಎನ್ನತೊಡಗಿದ.

‘ಥೋತ್ತೇರಿ, ಏನಲೆ ಅದು ಬರುತ್ತಾ, ಬರಲ್ವ?’ ಪರ್ಮೇಶಿಗೆ ನಗು.

ತೆಪರೇಸಿ ರೋಬೊಟ್‌ ಥರ ‘ಲಸಿಕೆ ಬರುತ್ತಾ, ಬರಲ್ವ... ಬರುತ್ತಾ ಬರಲ್ವ’ ಎಂದ.

‘ಅದು ಬರುವಾಗ ಬಂದೇ ಬರ್ತತಿ, ನೀನ್ಯಾಕೆ ಮೆಂಟ್ಲಾಗಿದೀಯ?’ ಗುಡ್ಡೆ, ತೆಪರೇಸಿ ತಲೆಗೆ ತಿವಿದ.

ಮರುಕ್ಷಣ ತೆಪರೇಸಿ ‘ಬಿಡುತ್ತ, ಬಿಡಲ್ವ... ಬಿಡುತ್ತ, ಬಿಡಲ್ವ’ ಎನ್ನಲಾರಂಭಿಸಿದ.

‘ಏನದು ಬಿಡುತ್ತ ಬಿಡಲ್ವ?’

‘ತೆನೇಲಿ ಹೂ ಬಿಡುತ್ತ, ಬಿಡಲ್ವ...’ ತೆಪರೇಸಿ ಹೊಸ ರಾಗ ಎಳೆದಾಗ ದುಬ್ಬೀರ ಥಟ್ ಅಂತ ತನ್ನ ಪರಿಚಯದ ಮನೋವೈದ್ಯರಿಗೆ ಫೋನ್ ಮಾಡಿದ. ಅವರು ಫಟ್ ಅಂತ ಹರಟೆಕಟ್ಟೆಗೆ ಹಾಜರಾದರು.

ತೆಪರೇಸಿಯನ್ನು ಪರೀಕ್ಷಿಸಿದ ಡಾಕ್ಟರು ‘ಇವರು ನ್ಯೂಸ್ ಚಾನೆಲ್ ನೋಡಿ ನೋಡಿ ಹಿಂಗಾಗಿದಾರೆ ಅನ್ಸುತ್ತೆ’ ಅಂದರು.

ತಕ್ಷಣ ದುಬ್ಬೀರ ‘ಬೀಳುತ್ತ, ಬೀಳಲ್ವ... ಬೀಳುತ್ತ, ಬೀಳಲ್ವ, ಇದೇನು ನೀನು ಹೇಳಲೆ ತೆಪರೇಸಿ’ ಎಂದ.

‘ಏನು ಸರ್ಕಾರನ?’

‘ಅಲ್ಲ, ಈಗ ಇಲ್ಲಿಗೆ ನಿನ್ ಹೆಂಡ್ತಿ ಕರೆಸ್ತೀನಿ. ನಿಂಗೆ ಒದೆ ಬೀಳುತ್ತ ಬೀಳಲ್ವ... ಅಂತ’.

ತಕ್ಷಣ ಎಚ್ಚೆತ್ತ ತೆಪರೇಸಿ ‘ಏನ್ರಲೆ, ಎಲ್ಲ ಪಾಡದೀರ? ಯಾವಾಗ ಬಂದ್ರಿ?’ ಎಂದು ಎದ್ದು ನಿಂತ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.