ADVERTISEMENT

ಚುರುಮುರಿ: ಬೆಕ್ಕಣ್ಣನ ಕ್ವಿಜ್

ಸುಮಂಗಲಾ
Published 27 ಡಿಸೆಂಬರ್ 2020, 19:31 IST
Last Updated 27 ಡಿಸೆಂಬರ್ 2020, 19:31 IST
   

‘ಕೌನ್ ಬನೇಗಾ ಕರೋಡ್ಪತಿ ಶೋವಳಗ ಬರೀ ಜನರಲ್ ನಾಲೆಜ್ ಪ್ರಶ್ನೆ ಕೇಳ್ತಾರ. ಕರೆಂಟ್ ಅಫೇರ್ಸ್ ಬಗ್ಗೆ ಪ್ರಶ್ನೆ ಕೇಳಿದ್ರ ಹಾಟ್ ಸೀಟಿನಾಗೆ ಕುಂತವ್ರು ಎಷ್ಟು ಅಪ್ಡೇಟ್ ಆಗ್ಯಾರಂತ ಗೊತ್ತಾಗತೈತಿ’ ಎಂದಿತು ಬೆಕ್ಕಣ್ಣ.

‘ಏನರ ಕೇಳಲಿ ಬಿಡಲೇ.. ನನಗ, ನಿನಗ ಏನ್ ಆಗೂದೈತಿ’ ಎಂದು ನಾನು ಸಮಾಧಾನಿಸಿದೆ.

‘ಈಗ ನಾ ಅಮಿತಾಭ್‌ ಬಚ್ಚನ್, ನೀ ಹಾಟ್ಸೀಟಿನಾಗ ಕುಂಡ್ರು. ಸರಿ ಉತ್ತರ ಹೇಳಿದ್ರ ಇಲಿ ಗಿಫ್ಟ್ ಕೊಡ್ತೀನಿ’ ಎಂದು ಬಚ್ಚನ್ ದನಿಯಲ್ಲಿ ಹೇಳಿತು.

ADVERTISEMENT

‘ಬ್ರಿಟನ್ನಿನಾಗೆ ಕೊರೊನಾ ವೈರಸ್ಸಿಗೆ ವೇಷ ಬದಲಿಸಿಕೊಳ್ಳಾಕ ಯಾರು ಸ್ಫೂರ್ತಿ? ಎ. ಗೋಸುಂಬೆ; ಬಿ. ಭಾರತದ ರಾಜಕಾರಣಿಗಳು.

‘ಹೊತ್ತಿಗೊಂದು ವೇಷ ಹಾಕ್ಕೊಳ್ಳೊ ಭಾರತದ ರಾಜಕಾರಣಿಗಳೇ ಸ್ಫೂರ್ತಿ. ಗೋಸುಂಬೆಗಳೂ ರಾಜಕಾರಣಿಗಳೇ ನಮಗೆ ಸ್ಫೂರ್ತಿ ಅಂದಾವಂತ’ ಎಂದೆ.

‘ರಾತ್ರಿ ಕಂಡ ಬಾವಿಗೆ ಹಗಲು ಹೋಗಿ ಬಿದ್ದರಂತ. ಇದಕ್ಕೆ ಅತ್ಯುತ್ತಮ ಉದಾಹರಣೆ: ಎ. ಬಿಹಾರಿಬಾಬು ನಿತೀಶಣ್ಣ, ಬಿ. ಕರುನಾಡಿನ ಕುಮಾರಣ್ಣ.

ನಾನು ಫಜೀತಿಗೆ ಬಿದ್ದೆ. ಇಬ್ಬರೂ ಎಂದು ಉತ್ತರ ಹೇಳುವಂತಿಲ್ಲ. ‘ಬಿಹಾರಿಬಾಬು ಬಿದ್ದೇ ಭಾಳ ವರ್ಸಾತು. ಕುಮಾರಣ್ಣನಿಗೆ ರಾಗಿ ತೆನಿ, ಕಮಲದ ಹೂ ಎರಡೂ ಹಿಡ್ಕಂಡು ಯಾವ ಬಾವಿಗೆ ಬೀಳಬಕು ಅಂತ ಗೊಂದಲ. ಅಸಲು ನಿನ್ ಪ್ರಶ್ನಿನೇ ತಪ್ಪೈತಿ, ಈ ಇಬ್ಬರೇ ಅಲ್ಲ. ಕರುನಾಡಿನ ಹದಿನೇಳು ಶಾಸಕರು, ಬ್ಯಾರೆ ರಾಜ್ಯಗೋಳ ಶಾಸಕರು, ಹೀಂಗ ಬಾವಿಗೆ ಬಿದ್ದೋರು ಭಾಳ ಮಂದಿ ಅದಾರ’ ಎಂದೆ.

‘ಬಿಜೆಪಿ ಜೊತಿಗೆ ಜೆಡಿಎಸ್ ರಾಜಿಯಾದರೆ ನಾ ನಿವೃತ್ತಿ ಅಂತ ರೇವಣ್ಣಾರು ಹೇಳ್ಯಾರಲ್ಲ, ಇದ್ರ ಗೂಢಾರ್ಥವೇನು?’

‘ಹೊಸ ವರ್ಷದಿಂದ ಕುಮಾರಣ್ಣನೇ ನಮ್ಮ ಸಾರಥಿ ಅಂತ ದೇಗೌಡಜ್ಜಾರು ಹೇಳಿದ್ದು, ರೈತ್ರು ಮೋದಿಮಾಮ ಹೇಳಿದ್ದನ್ನೂ ಯೋಚನೆ ಮಾಡಬಕು ಅಂತ ಕುಮಾರಣ್ಣ ಟ್ವೀಟ್ ಮಾಡಿದ್ದು, ಅವುಗಳ ಜತಿಗಿ ಇದನ್ನು ಸೇರಿಸಿ ನೀನೇ ಓದ್ಕ, ಎಲ್ಲಾ ಹೊಳಿತೈತಿ’ ಎಂದೆ.

‘ಎಲಾ ಬೆರಿಕಿ’ ಎಂದ ಬೆಕ್ಕಣ್ಣ, ಇಲಿ ಹಿಡಿಯಲು ಓಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.