ADVERTISEMENT

ಕದ್ದಾಲಿಕೆ ಗುಮಾನಿ...

ಕೆ.ವಿ.ರಾಜಲಕ್ಷ್ಮಿ
Published 28 ಆಗಸ್ಟ್ 2019, 20:15 IST
Last Updated 28 ಆಗಸ್ಟ್ 2019, 20:15 IST
   

ಎರಡು ದಿನಗಳಿಂದ ಕಾಣದ ಕಂಠಿ, ಪಾರ್ಕಿನಲ್ಲಿ ದಿಢೀರ್ ಪ್ರತ್ಯಕ್ಷ. ಮಳೆ ಜಿನುಗುತ್ತಿದ್ದರೂ ಮಂಗನಟೋಪಿ ಇಲ್ಲದೆ ಬೆಳಗಿನ ವಾಯುವಿಹಾರಕ್ಕೆ ಬಂದಿದ್ದು ಏಕಕಾಲದಲ್ಲಿ ಸಂತೋಷ ಮತ್ತು ಆಶ್ಚರ್ಯಕ್ಕೆ ಕಾರಣವಾಯಿತು. ‘ವಿಶೇಷವೇನಿಲ್ಲ, ಕಿವಿಗಳು ಹೆಚ್ಚು ಆ್ಯಕ್ಟಿವ್‌ ಆಗಿರ್‍ಲಿ ಅಂತ. ಇತ್ತೀಚೆಗೆ ಯಾಕೋ ಸರಿಯಾಗಿ ಕೇಳ್ತಿಲ್ಲ ಅಂತ ಶ್ರೀಮತಿ ಖಾರವಾಗಿದ್ದಾಳೆ, ಪನ್ನೀರು ಕಾಲು ಕೆ.ಜಿ, ಮೆಣಸಿನಕಾಯಿ 50 ಗ್ರಾಂ ಅಂದ್ರೆ ನಾನು ಉಲ್ಟಾ ತಂದಿದ್ದೆ’ ಎಂದ. ‘ಓಹ್ ಹೀಗಿದ್ರೆ ಕದ್ದಾಲಿಕೆ ಸರಾಗ ಅಲ್ವೇ?’ ಎಂದು ಕಿವಿ ಕಚ್ಚಿದೆ. ‘ಹ್ಞಾಂ, ಕದ್ದಾಲಿಕೆ ಅಂದ ಕೂಡಲೇ ನೆನಪಾಯ್ತು, ಇವತ್ತು ಲಂಚ್‌ಗೆ ನಮ್ಮ ಆಫೀಸಿಗೆ ಬಂದ್ಬಿಡು’ ಎಂದ.

‘ನೀನು ಕೊಡಿಸ್ತಿದ್ದೀಯ?’ ರಾಗವೆಳೆದೆ. ‘ಛೆ,ಛೆ, ನಮ್ಮದೇನಿದ್ರೂ ಕೇಟರಿಂಗ್ ಅರೇಂಜ್ಮೆಂಟ್ ಅಷ್ಟೆ, ನನ್ನ ಬುದ್ಧಿವಂತಿಕೆಗೆ ಮೆಚ್ಚಿ ಈ ಪಾರ್ಟಿ’ ಎಂದ. ಮತ್ತೆ ನನ್ನ ಹುಬ್ಬುಗಳು ‘ಹೌ’ ಎಂದವು. ‘ಅದೇನಿಲ್ಲ, ನಮ್ಮ ಸ್ಟೆನೊ ಸ್ಟೆಲ್ಲಾಗೆ ತನ್ನ ಫೋನ್‌ ಸೈಲೆಂಟಾಗಿ ಮನೇಲಿ ಕದ್ದಾಲಿಕೆಗೆ ಒಳಗಾಗುತ್ತಿದೆ ಅನ್ನುವ ಗುಮಾನಿ. ಅದು ಹೇಗೆ ಕನ್ಫರ್ಮ್ ಆಗೋದು ಅಂತ ಕೇಳಿದಳು. ಮನೇಲಿರೋದು ಅವಳ ಗಂಡ ಮಾತ್ರ ಅಂತ ಗೊತ್ತಿತ್ತಲ್ಲ. ಓದುತ್ತಿದ್ದ ಪೇಪರ್ ಕೆಳಗಿಟ್ಟು ತಲೆ ಎತ್ತಿದರೆ, ಓಡುತ್ತಿರುವ ಟಿ.ವಿ ಆಫ್ ಮಾಡಿದರೆ, ಏನೋ ಹೇಳುವವನಂತೆ ಹೆಂಡತಿಯ ಕಡೆಗೆ ನಡೆದು ಬಂದರೆ... ಹೀಗೆ ಯಾವುದೇ ಅನುಮಾನಾಸ್ಪದ ನಡವಳಿಕೆಗಳು ಕಂಡಲ್ಲಿ ಕದ್ದಾಲಿಕೆ ಆಗುವ ಸಾಧ್ಯತೆ ಗ್ಯಾರಂಟಿ’ ಎಂದೆ.

ಸ್ಟೆಲ್ಲಾ ಫುಲ್ ಖುಷ್! ಇದನ್ನು ಕದ್ದಾಲಿಸಿದ ನನ್ನ ಬಾಸ್ ತನಗೂ ಸಲಹೆ ಕೊಡೆಂದ. ಅವನಿಗೂ ನನಗೆ ತಿಳಿದದ್ದು ಹೇಳಿದೆ. ‘ಅಡುಗೆ ಮನೆಯಲ್ಲಿ ಒಂದು ವಿಸಿಲ್ ಕೂಗಿದ ಕುಕ್ಕರ್ ಮುಂದೆ ಕೂಗದೇ ನಿಂತಾಗ, ‘ಬರ್‍ರೋ’ ಎಂದು ಕಿರುಚುವ ವಾಷಿಂಗ್ ಮಷೀನ್ ಸ್ತಬ್ಧವಾದಾಗ, ಸ್ನಾನಕ್ಕಾಗಿ ಬಕೆಟ್‌ಗೆ ಬಿಟ್ಟ ನೀರಿನ ಸದ್ದು ಸರಕ್ಕನೇ ಕೇಳದಾದಾಗ, ಫೋನ್‌ನಲ್ಲಿ ನೀವು ಮಾತನಾಡ್ತಿರೋದು ಮನೆಯಾಕೆಯಿಂದ ಕದ್ದಾಲಿಕೆ ಆಗ್ತಿದೆ ಎಂದು ಅರ್ಥೈಸಬಹುದು’ ಎಂದೆ. ಬಾಸೂ ಫಿದಾ.

ADVERTISEMENT

ನಾನು ಕೂಡಲೇ ಅತ್ತಿತ್ತ ನೋಡಿದೆ, ಈ ಅಮೂಲ್ಯ ಸಲಹೆಗಳನ್ನು ಮತ್ಯಾರಾದರೂ ಕದ್ದಾಲಿಕೆ ಮಾಡಿಬಿಟ್ಟರೇ ಎಂಬ ದಿಗಿಲಿನಿಂದ. ಸದ್ಯ ಯಾರೂ ಕಾಣಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.