ADVERTISEMENT

ಯಶೋದಕ್ಕನ ಹಿಂದಿ ಕಲಿಕೆ!

ಸುಮಂಗಲಾ
Published 16 ಸೆಪ್ಟೆಂಬರ್ 2019, 3:09 IST
Last Updated 16 ಸೆಪ್ಟೆಂಬರ್ 2019, 3:09 IST
..
..   

ಯಶೋದಕ್ಕ ಪಿಂಚಣಿ ಹಣ ಯಾತಕ್ಕೂ ಸಾಲುವುದಿಲ್ಲವೆಂದು ಮಕ್ಕಳಿಗೆ ಟ್ಯೂಶನ್ ಹೇಳುತ್ತಿದ್ದರು. ಉಳಿದ ವಿಷಯ ಹೋಗಲಿ, ಥತ್, ಈ ನನ್ ಮಕ್ಳು ಮಾತೃಭಾಷೆ ಗುಜರಾತಿಯಲ್ಲೇ ಇಷ್ಟು ಕಡಿಮೆ ತೆಗೆದಿದ್ದಾರಲ್ಲ... ‘ಯಾಕ್ರೋ ಹಿಂಗೆ’ ಅಂದ್ರೆ ‘ಹಿಂದಿ ಕಲೀತಿದ್ದೀವಿ. ಗುಜರಾತಿ ಓದಕ್ಕೆ ಟೈಮಿಲ್ಲ’ ಅಂದ್ವು.

‘ಮತ್ತೆ ಹಿಂದಿಯಲ್ಲೂ ಯಾಕಿಷ್ಟು ಕಡಿಮೆ ಅಂಕ?’ ಅಂತ ಕೇಳಿದ್ರೆ ‘ಹೊಸ ಭಾಷೆ, ತುಂಬಾ ಕಷ್ಟ. ನಿರ್ಜೀವ ವಸ್ತುಗಳೂ ಪುಲ್ಲಿಂಗ ಅಥವಾ ಸ್ತ್ರೀಲಿಂಗ ಆಗುತ್ತಂತೆ. ಕುರ್ಚಿ, ಚಹಾ ಸ್ತ್ರೀಲಿಂಗ; ಕಂಪ್ಯೂಟರ್, ಪೆನ್ನು ಪುಲ್ಲಿಂಗ... ಗ್ರಾಮರ್‍ರೇ ಅರ್ಥವಾಗಲ್ಲ’ ಪಾಪದ ಗುಜ್ಜು ಮಕ್ಕಳು ತಲೆ ಚಚ್ಚಿಕೊಂಡವು. ನಾಲ್ಕಾರು ತಿಂಗಳಿಂದ ಪಾಸ್‍ಬುಕ್ ಎಂಟ್ರಿಯಾಗಿಲ್ಲ, ಮಾಡಿಸೋಣ ಎಂದು ಯಶೋದಕ್ಕ ಬ್ಯಾಂಕಿಗೆ ಹೋದರು. ಕೌಂಟರಿನಲ್ಲಿ ‘ಶುಂ ಜೋಯೆಚೆ’ ಎಂದು ಗುಜರಾತಿ ಉಲಿಯುತ್ತಿದ್ದ ಹಳೆಯ ಮುಖಗಳಾವುವೂ ಕಾಣದೆ ‘ಕ್ಯಾ ಚಾಹಿಯೇ’ ಎಂದು ಹಿಂದಿ ಗುರಾಣಿ ಹಿಡಿದ ಯುವ ಮುಖಗಳು ಗುರಾಯಿಸಿದವು. ಅರೆ, ತಪ್ಪಿ ಎಲ್ಲೋ ಉತ್ತರ ಭಾರತಕ್ಕೆ ಬಂದುಬಿಟ್ಟಿದ್ದೀನಾ ಎಂದು ಯಶೋದಕ್ಕನಿಗೆ ಗಾಬರಿ. ಅಂತೂ ಕೆಲಸ ಮಾಡಿಸಿಕೊಳ್ಳುವಷ್ಟರಲ್ಲಿ ಸುಸ್ತು!

ಮನೆಗೆ ಬಂದು ಟಿ.ವಿ ಹಾಕಿದರು. ಕಳೆದ ಲೋಕಸಭಾ ಅವಧಿಯ ‘ಅಚ್ಛೇ ದಿನ್’ ಸಿನಿಮಾ ಹಳೆಯದಾಗಿ, ಈ ಲೋಕಸಭೆಯ ನೂರು ದಿನಗಳ ‘ಕಚ್ಚೇ ದಿನ್’ ಟ್ರೇಲರ್‌ ತೋರಿಸಿ, ಇದೀಗ ಭಾರಿ ಭವಿಷ್ಯದ ಭಯಂಕರ ಕನಸು ‘2024ರ ಲೋಕಸಭೆ ಹೊಸ ಸಂಸತ್ ಭವನದಲ್ಲಿ’ ಅನ್ನೋ ಸುದ್ದಿಸಿನಿಮಾ ತೋರಿಸ್ತಿದ್ದರು. ಅಷ್ಟೊತ್ತಿಗೆ ರಾಜ್ಯ, ಪ್ರಾದೇಶಿಕ ಭಾಷೆಗಳೆಲ್ಲ ಮಟಾಮಾಯವಾಗಿ, ಏಕದೇಶ, ಏಕಭಾಷೆ, ಏಕಪ್ರಧಾನಿ, ಏಕಗೃಹಮಂತ್ರಿಯಡಿ, ಭೂಮಂಡಲವಷ್ಟೇ ಅಲ್ಲ, ಇಡೀ ಸೌರಗೆಲಾಕ್ಸಿಯ ಗುರುವಾಗಿ ‘ಭಾರತ’ ಮಿಂಚುತ್ತದೆಯಂತೆ. ತಾನೂ ಹಿಂದಿ ಚೆನ್ನಾಗಿ ಕಲಿತರೆ ಹೊಸ ಸಂಸತ್ ಭವನದಲ್ಲಾದರೂ ಏಕಪ್ರಧಾನಿಯ ಪಕ್ಕದಲ್ಲಿ ಚೂಪಗೆ ಕೂಡುವ ಸೌಭಾಗ್ಯ ಸಿಗಬಹುದೇನೋ ಎಂಬ ಎಂದೂ ನನಸಾಗದ ಕನಸು ಕಾಣುತ್ತ ಯಶೋದಕ್ಕ ‘ಮೂರೇ ದಿನದಲ್ಲಿ ಹಿಂದಿ ಕಲಿಯಿರಿ’ ಪುಸ್ತಕ ತೆರೆದರು!

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.