ADVERTISEMENT

ಚುರುಮುರಿ: ಬೇತಾಳ ಗೀತೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2022, 19:44 IST
Last Updated 22 ಆಗಸ್ಟ್ 2022, 19:44 IST
   

ಎಂದಿನಂತೆ ಬೇತಾಳನನ್ನು ಹುಡುಕುತ್ತಾ ರಾಜಾವಿಕ್ರಮಾದಿತ್ಯ ಹೊರಟಿದ್ದ. ವಿಧಾನಸೌಧದ ಬಳಿ ಬೇತಾಳ ‘ಆಶ್ವಾಸನೆ ನಾನೂರ ಹತ್ತೊಂಬತ್ತು, ಆಶ್ವಾಸನೆ ನಾನೂರಾ ಇಪ್ಪತ್ತು’ ಅಂತ ಬರೆಯುತ್ತ ಎಣಿಸಿಕೊಳ್ಳುತ್ತಿತ್ತು.

‘ರಾಜನ್, ಈಗ ನನಗೆ ಟೈಮಿಲ್ಲ, ನಿನಗೀವತ್ತು ಒಂದೇ ಪ್ರಶ್ನೆ’ ಅಂತು ರಾಜನ ಮುಖ ನೋಡಿದ ಬೇತಾಳ. ವಿಕ್ರಮಾದಿತ್ಯ ಸುಮ್ಮನಿದ್ದ.

‘ನೋಡು ರಾಜನ್, ದೇಶದಲ್ಲಿ ನ್ಯಾಯ-ನೀತಿ ನಾಪತ್ತೆಯಾಗಿದೆ. ಸ್ವಾತಂತ್ರ್ಯಕ್ಕೆ ಹೋರಾಡಿ ಸತ್ತೋರು ಈಗ ಕ್ಯಾರೆಕ್ಟರ್ ಸರ್ಟಿಫಿಕೇಟ್ ತಂದು ತೋರಿಸೋ ಸ್ಥಿತಿ ಬಂದಿದೆ. ಕಚೇರಿಗಳಲ್ಲಿ ಭ್ರಷ್ಟಾಚಾರ, ಪರೀಕ್ಷೆಗಳಲ್ಲಿ ಅಕ್ರಮ, ಸಮಿತಿ ಅಧ್ಯಕ್ಷನಾಗಕ್ಕೆ ಲಾಬಿ, ಉತ್ಸವ ಮಾಡಕ್ಕೆ ಪೈಪೋಟಿ... ಇದಕ್ಕೆಲ್ಲಾ ಕಾರಣ ಏನು? ಉತ್ತರ ಗೊತ್ತಿದ್ದರೂ ಹೇಳದಿದ್ದಲ್ಲಿ ನಿನ್ನ ತಲೆ ಒಡೆದ ಮೊಟ್ಟೆಯಂತೆ ಸಾವಿರ ಹೋಳಾಗುತ್ತದೆ ಜಾಗ್ರತೆ’ ಅಂತು ಬೇತಾಳ. ವಿಕ್ರಮಾದಿತ್ಯನು ಬಾಯಿ ಬಿಡಲೇಬೇಕಾಯಿತು.

ADVERTISEMENT

‘ಎಲೈ ಬೇತಾಳವೇ, ರಾಜಕಾರಣಿಗಳು ಪದವಿ ಕನಸಲ್ಲಿ ಹಬ್ಬಿಸಿದ ಧರ್ಮದ ಕಿಚ್ಚು, ಏರಿಯಾ ರೊಚ್ಚು ಜನರನ್ನು ಸುಡುತ್ತಿದ್ದರೆ, ಅವಕಾಶವಾದಿಗಳು ಅದರ ಬೆಂಕಿಯಲ್ಲಿ ತಮಟೆ ಕಾಯಿಸಿಕೊಳ್ಳುತ್ತಿದ್ದಾರೆ. ಅಂದು ಸತ್ಯಕ್ಕಾಗಿ ಹುಲಿ ಪ್ರಾಣ ಕಳಕೊಂಡಿತ್ತು, ಇಂದು ಸತ್ಯದ ಅವನತಿ ನೋಡಲಾಗದೆ ಪುಣ್ಯಕೋಟಿಗಳೇ ಪ್ರಾಣ ಕಳೆದುಕೊಳ್ಳುತ್ತಿವೆ. ಜನ ಕೈಯ್ಯಲ್ಲಿ ಕೆರ ಹಿಡಿದು ಬೀದಿಗೆ ಬಂದು ಭಯಸ್ಕರ ಶಿಕ್ಷಣ ಶುರು ಮಾಡಿದರೆ ಮಾತ್ರ ನ್ಯಾಯ, ನೀತಿ, ಧರ್ಮ ಉಳಿಯಲು ಸಾಧ್ಯ’ ಅಂದ ವಿಕ್ರಮಾದಿತ್ಯ.

‘ರಾಜನ್, ನಿನ್ನ ಮಾತು ಸದ್ಯಕ್ಕೆ ನಿಜವಾಗುವಂತೆ ಕಾಣುತ್ತಿಲ್ಲ. ಈಗ ಬಿಬಿಎಂಪಿ ಎಲೆಕ್ಷನ್, ಅದರ ಜೊತೆಗೇ ವಿಧಾನಸಭೆ ಎಲೆಕ್ಷನ್ ಬರುತ್ತಿವೆ. ರಾಜಕಾರಣಿಗಳು ಹುಚ್ಚಾಪಟ್ಟೆ ರೇವಡಿ ಆಶ್ವಾಸನೆ ಕೊಡೋ ಟೈಮು ಶುರು. ಅವುರ ಮ್ಯಾಲೆಲ್ಲಾ ನಾವು ಅಮರಿಕೊಂಡು ಬುದ್ಧಿ ಕೆಡಿಸಿ ಬಾಯಿಂದ ಬೈಗುಳ ಹೊರಡಿಸಿ ಪರಸ್ಪರ ಜಗಳ ಆಡಿಸಬಕು. ಈಗ ನಿನ್ನ ಮೌನ ಭಂಗವಾಗಿದ್ರಿಂದ ನಾನು ಹೊರಟೆ’ ಅಂದ ಬೇತಾಳ ಹಾರಿಹೋಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.