ADVERTISEMENT

ಚುರುಮುರಿ: ಬಜೆಟ್ ನೋಡಿದ್ರಾ?

ಬಿ.ಎನ್.ಮಲ್ಲೇಶ್
Published 2 ಫೆಬ್ರುವರಿ 2023, 19:31 IST
Last Updated 2 ಫೆಬ್ರುವರಿ 2023, 19:31 IST
   

‘ರೀ... ಬಜೆಟ್ ನೋಡಿದ್ರಾ?’ ಮಡದಿ ರಾಗವಾಗಿ ಕೇಳಿದಾಗ, ಇವಳಿಗ್ಯಾವಾಗ ಬಜೆಟ್ ಮೇಲೆ ಆಸಕ್ತಿ ಬಂತು ಅಂತ ಆಶ್ಚರ್ಯವಾಯಿತು.

‘ಯಾಕೆ? ನೋಡಿದ್ನಲ್ಲ, ಅದೇ ಭದ್ರಾ ಮೇಲ್ದಂಡೆಗೆ ದುಡ್ಡು ಕೊಟ್ಟಿರೋದು ತಾನೆ?’ ಕೇಳಿದೆ.

‘ಅಯ್ಯೋ ಅದಲ್ಲರೀ...’

ADVERTISEMENT

‘ಮತ್ತೇನು? ಸಿಗರೇಟು, ಡ್ರಿಂಕ್ಸ್ ರೇಟು ಜಾಸ್ತಿ ಮಾಡಿರೋದಾ? ನನ್ನ ಜೇಬಿಗೆ ಕತ್ತರಿ ಬಿತ್ತು ಅಂತ ಖುಷಿನಾ?’

‘ಥೋ... ಅದಲ್ಲರಿ, ರೇಟು ಎಷ್ಟಾದ್ರೂ ನೀವೇನು ಅದನ್ನ ಬಿಡ್ತೀರಾ?’

‘ಏನೋ ವೀಕೆಂಡ್ ಅಂತ ಹೋಗ್ತೀವಪ್ಪ, ಈ ಸರ್ಕಾರದೋರಿಗೆ ನಮ್ಮ ಮೇಲೇ ಕಣ್ಣು. ಸರಿ, ಬೇರೆ ಏನು? ಮೊಬೈಲ್ ರೇಟು ಕಮ್ಮಿ ಆಯ್ತು ಅಂತ ಹೊಸ ಮೊಬೈಲ್‌ಗೆ ಪ್ಲೇಟ್ ಹಾಕ್ತಿದೀಯಾ?’

‘ಇರೋ ಮೊಬೈಲ್‌ನೇ ಸರಿಯಾಗಿ ನೋಡಲ್ಲ ನಾನು, ನಂಗ್ಯಾಕೆ ಹೊಸ ಮೊಬೈಲು?’

‘ಇನ್ನೇನು? ಚಿನ್ನ ದುಬಾರಿ, ವಜ್ರದ ರೇಟು ಇಳಿಕೆ ಅಂತಿದೆ. ಆದ್ರೆ ನನ್ನ ಜೇಬು ಅಷ್ಟು ದೊಡ್ಡದಿಲ್ಲ’.

‘ನಂಗೆ ಚಿನ್ನಾನೂ ಬೇಡ, ವಜ್ರಾನೂ ಬೇಡ, ನೀವು ಬಜೆಟ್ ಸರಿಯಾಗಿ ನೋಡಿದ್ರಾ?’

‘ನೋಡಿದ್ನಲ್ಲೇ... ಏನಿದೆ ಅದ್ರಲ್ಲಿ ಅಂಥದ್ದು?’

‘ನಮ್ಮ ನಿರ್ಮಲಕ್ಕನ್ನ ನೋಡಿದ್ರಾ?’

‘ನೋಡಿದ್ನಲ್ಲ, ಅವರೇ ಬಜೆಟ್ ಮಂಡಿಸಿದ್ದು. ಇದು ಐದನೇ ಬಾರಿಯಂತೆ, ಗ್ರೇಟ್ ಅಲ್ವ?’

‘ಅದಿರ್‍ಲಿ, ನಿರ್ಮಲಕ್ಕ ಉಟ್ಟಿದ್ದ ಸೀರೆ ನೋಡಿದ್ರಾ?’

‘ಓ...ಇದಾ ವಿಷ್ಯಾ? ನಿನ್ನ ಕಣ್ಣು ಬಜೆಟ್‌ನಲ್ಲ, ಅವರು ಉಟ್ಟಿದ್ದ ಸೀರೆ ನೋಡ್ತಿತ್ತು ಅನ್ನು’.

‘ಹ್ಞೂಂರೀ... ಎಷ್ಟ್ ಚೆನ್ನಾಗಿದೆ ಆ ಸೀರೆ, ಧಾರವಾಡದ್ದಂತೆ, ಕೈಮಗ್ಗದಲ್ಲಿ ನೇಯ್ದಿದ್ದಂತೆ, ಕಸೂತಿ ಎಷ್ಟ್ ಚೆನ್ನಾಗಿ ಹಾಕಿದಾರೆ ಅಂತೀರಿ, ಆ ಕಲರ್ ನಂಗೆ ತುಂಬಾ ಇಷ್ಟ ಆಯ್ತು, ನಂಗೂ ಒಂದು ಕೊಡಿಸ್ತೀರಾ?’

ತಲೆ ಕೆರೆದುಕೊಂಡೆ. ‘ಕೊಡ್ಸೋಣ ಬಿಡು, ನಿಂಗಿಲ್ಲಾಂತೀನಾ? ಆದ್ರೆ ಈ ತಿಂಗಳ ಬಜೆಟ್ ಖೋತಾ. ಮುಂದಿನ ತಿಂಗಳು ಓಕೆನಾ?’ ಮೆಲ್ಲಗೆ ಜಾರಿಕೊಂಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.