ADVERTISEMENT

ಚುರುಮುರಿ: ಗಳಗೆ ಸಿದ್ಧರು

ಲಿಂಗರಾಜು ಡಿ.ಎಸ್
Published 15 ಫೆಬ್ರುವರಿ 2021, 19:31 IST
Last Updated 15 ಫೆಬ್ರುವರಿ 2021, 19:31 IST
   

ನೆನ್ನೆ ಬೆಳಕರಿತಿದ್ದಂಗೆ ಕರ್ನಾಟಕ ಸರ್ಕಾರದ ಜೀಪು, ಬಿಡಿಎ, ಬಿಬಿಎಂಪಿ ಅಂತ ಬರೆದಿದ್ದ ಜೆಸಿಬಿ, ಕ್ರೇನು ಬಂದು ಕಾರ್ನರ್ ಮನೆ ತಾವು ನಿಂತುಕಂಡೊ. ಒಬ್ಬ ರೋಡಿಂದ ಕಾಂಪೌಂಡು ಅಳತೆ ಮಾಡಿ ‘ಬಿಲ್ಡಿಂಗು, ಪುಟ್ಟಪಾತು ಒತ್ತು ವಾರಿ ಆಗ್ಯದೆ. ಪಾರ್ಕಿಂಗ್ ಪರ್ಮಿಸನ್ನಿಲ್ಲ’ ಅಂತ ಆಪೀಸರಿಗೇಳಿದ. ಜೆಸಿಬಿ ಮುಂದೆ ಬಂದು ಕಾಂಪೋಂಡಿಗೆ ಬಾಯಿ ಹಾಕಿತು. ಮನೆ, ಓನರ‍್ರು, ಆಪೀಸರು ಒಳಿಕ್ಕೋಗಿ ಕಾಲುಗಂಟೆ ಆದಮ್ಯಾಲೆ ಹುಸಿನಗತಾ ಈಚೆ ಬಂದರು.

ಆಪೀಸರ‍್ರು ನಮ್ಮೂರ ಗೂನನ ಮಗನಂಗೆ ಕಂಡ! ನಾನು ಹತ್ರುಕ್ಕೋಗಿ ‘ನಮಸ್ಕಾರ ಕಣ್ರಿ ಸಾ?’ ಅಂದುದ್ದ ನೋಡಿ ಸೈಡಿಗೆ ಕರಕೋದ.

‘ಅಣೈ ಚನ್ನಗದೀಯಾ? ಸೆವೆಂತು ಪೇಲಾದೋನು ನಾನ್ಯಾವ ಆಪೀಸರಣ್ಣಾ? ಬೆಂಗಳೂರಿಗೆ ಬಂದು ಬಿಡಿಎ, ಬಿಬಿಎಂಪಿ ಅಂತ ನನ್ನವೇ ಎರಡು ಪ್ರವೀಟ್ ಕಂಪನಿ ಮಾಡಿವ್ನಿ’ ಅಂತ ವಿವರಿಸಿದ.

ADVERTISEMENT

‘ಅದೆಂಗ್ಲಾ ಅವು ನಿನ್ನ ಕಂಪನಿಯಾದಾವು?’ ಅಂದೆ. ‘ಯಣ್ಣಾ, ಬಿಡಿಎ ಅಂದ್ರೆ ಬೆಂಗಳೂರು ಡೆಮಾಲಿಶನ್ ಏಜೆನ್ಸಿ ಅಂತ. ಬಿಬಿಎಂಪಿ ಅಂದ್ರೆ ಬೆಂಗಳೂರು ಬ್ರೇಕಿಂಗ್ ಅಂಡ್ ಮೇಕಿಂಗ್ ಆಫ್‌ ಪ್ರಾಪರ್ಟಿ ಕನಣ್ಣಾ’.

‘ಕರ್ನಾಟಕ ಸರ್ಕಾರದ ಜೀಪೆಲ್ಲಿ ಸಿಕ್ತೋ ನಿನಗೆ?’

‘ಬೋರ್ಡು ಸರಿಯಾಗಿ ನೋಡಣ್ಣ!’ ಅಂದ. ಬೋರ್ಡಲ್ಲಿ ಕರ್ನಾಟಕ ಸರ್ದಾರ ಅಂತಿತ್ತು. ‘ಹಿಂಗಿಯೇ ದಿನಕ್ಕೊಂದೆರಡು ಡೆಮಾಲಿಸನ್ ನಾಟಕಾಡಿ ಕಾಸು ಮಾಡಿಕತಿನಿ. ಯಾರಿಗೂ ಅನುಮಾನ ಬಂದುಲ್ಲ’.

‘ಸರ್ಕಾರದ ಏಜೆನ್ಸಿಗಳೊಳಗೆ ಮೇದು ಗಳಗೆ ಸಿದ್ಧರಾಗಿರೋರು ಭಾಳ ಜನವ್ರೆ ಕನೋ. ಅಕ್ರಮಾದಿತ್ಯರ ಬಲಿ ಹಾಕಕೆ ನೀನು ಕೊಡ್ತಿರಾ ಒಳಶುಂಟಿ ಚೆನ್ನಾಗದೆ’.

‘ಯಣ್ಣಾ, ನೀನಂದಂಗೆ ಗಳಗೆ ಸಿದ್ಧರ ಬಲಿ ಹಾಕಕೆ ಎಸಿಬಿ ಅಂತ ಇನ್ನೊಂದು ಕಂಪನಿ ಮಾಡುಮಾ. ನೀನು ಬಂದು, ರೈಡು ಮಾಡೋ ದೊಡ್ಡಾಪೀಸರ್ ಪಾಲ್ಟು ಮಾಡು. ತಿಂಗಳಿಗೆ ಲಕ್ಸ, ಕಾರು ಕೊಡ್ತೀನಿ. ಏನಂತೀಯ?’ ಅಂದ.

ಬೆರಕೆಗಳ ಬಲಿ ಹಾಕಕೆ ಇವನ ಐಡಿಯಾ ಚನ್ನಾಗದೆ ಅಲ್ಲುವರಾ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.