ADVERTISEMENT

ಚುರುಮುರಿ | ಕತ್ತೆ ಕಾಯೋರು!

ಲಿಂಗರಾಜು ಡಿ.ಎಸ್
Published 13 ಜೂನ್ 2022, 20:30 IST
Last Updated 13 ಜೂನ್ 2022, 20:30 IST
   

‘ನಮ್ಮತಾವ ಪಕ್ಸ ಕಟ್ಟಕ್ಕೂ ಕಾಸಿಲ್ಲ. ಹೋಗೋರೆಲ್ಲ ಹೋಗ್ರಿ. ನಿಮಿಗೆ ಕೈಸಾಲ ಸಮಾರೋದನೆ ಮಾಡ್ತಿವೇ ಹೊರತು ಹೊಂದಾಣಿಕೆಗೆ ಬಿಲ್ಕುಲ್ ಬರಕ್ಕುಲ್ಲ’ ಅಂದೋರೆ ದಳದೋರು! ಕೊನೆಗೆ ಮೂರೇ ಜನ ಉಳಿದಾರ ಅಂತ!’ ಅಂತು ಯಂಟಪ್ಪಣ್ಣ.

‘ಹಂಗೇನಿಲ್ಲ ಕನಣೈ. ಪಕ್ಸದ ಟಿಕೆಟ್ನೆಲ್ಲವ ನಮ್ಮನೇರಿಗೆ ಕೊಟ್ಟು ಸಾಸಕರಾಗಿ ಮಾಡ್ಕತೀವಿ ಅಂದವ್ರೆ’ ಅಂತಂದೆ.

‘ಹೌದೇಳಪ್ಪ, ಪಕ್ಕದ ರಾಜ್ಯಗಳಲ್ಲಿ ನೋಡು ಲೋಕಲ್ ಪಕ್ಸಗಳು ಹ್ಯಂಗೆ ದಾಸತ್ತಲ್ಲಿ ಎಲೆಕ್ಸನ್ ಗೆದ್ದು ರಾಜ್ಯಭಾರ ಮಾಡ್ತಾ ರಾಷ್ಟ್ರೀಯ ಪಕ್ಸಗಳಿಗೆ ಜುಲಾಬು ಕೊಡ್ತಾವೆ. ಕಣ್ಣಿಗೆ ಬಣ್ಣದ ಗಾಜು ಇಕ್ಕ್ಯಂಡು ಬಂದಿರೋ ಇಬ್ರಾಯಿಮಣ್ಣ ಅದೇನು ನಾಟಿ ಔಸದ ಕೊಡ್ತದೋ ನೋಡಬಕು’ ತುರೇಮಣೆ ವಿಶ್ಲೇಷಿಸಿದರು.

ADVERTISEMENT

‘ಪಕ್ಸಗಳು ಕಾಸಿನ ಕುಳಗಳ ಕರಕಬಂದು, ಆತ್ಮಸಾಕ್ಷಿ ಖರೀದಿ ಮಾಡಿ ರಾಜ್ಯಸಭೆಗೆ ನೆಂಬ್ರು ಮಾಡಿ ಡೆಲ್ಲಿಗೆ ಕಳಿಸ್ತಾವ್ರೆ. ಇದು ಕಾರ್ಯಕರ್ತರಿಗೆ ಮಾಡ್ತಿರೋ ಅನ್ನೇಯ ಅಲ್ಲುವರಾ? ಅದ್ನೇ ಕುಮಾರಣ್ಣ ಅಂದಿರದು’ ಅಂದೆ.

‘ಪಕ್ಸಗಳು ಬದುಕಬೇಕಲ್ಲುಡಾ! ಪಕ್ಸದ ಕಾಪಿ ಖರ್ಚಿನ ಬಿಲ್ಲು, ರೆಸಾರ್ಟ್ ಉಂಡಾಟದ ಬಿಲ್ಲು ಎತ್ತಕೆ ಸಕ್ತಿವಂತರು ಬೇಕಲ್ಲೋ’ ಯಂಟಪ್ಪಣ್ಣ ವಿಶ್ಲೇಷಿಸಿತು.

‘ಅಣೈ, ಪಕ್ಷಗಳು ಎಲೆಕ್ಷನ್ ಬಾಂಡು ಹೆಸರಲ್ಲಿ ತೆರಿಗೆ ಇಲ್ಲದೇ ಕೋಟಿ ದೇಣಿಗೆ ತಕ್ಕೋದಿಲ್ವೆ? ಅಷ್ಟು ಸಾಲದು ಅಂತ ನಮ್ಮ ಪಿಂಚಣಿ ಚಿಲ್ಲರೆ ಕಾಸಿಗೂ ತೆರಿಗೆ ಇಸುಗತರೆ. ‘ಪಿಂಚಣಿ ಆದಾಯ ಅಲ್ಲ, ಇದಕ್ಕೆ ತೆರಿಗೆ ವಿನಾಯಿತಿ ಕೊಡಿ’ ಅಂತ ನೀವು ವಾಟ್ಸಪ್ಪಲ್ಲಿ ಗ್ವಾಮಾಳೆ ಹರಕಂಡುದ್ದೇ ಬಂತು’ ತುರೇಮಣೆ ಒಳನೋಟ ಕೊಟ್ಟರು.

‘ಯಂಟಪ್ಪಣ್ಣ ಈ ಪುಲಾರ ಬಗೆಹರಿಯಕುಲ್ಲ. ಸುಮ್ಮನೆ ಬಂಟ್ವಾಳಕ್ಕೆ ಕತ್ತೆ ಮೇಯಿಸಕ್ಕೋಗಮು ನಡೀರಿ. ಅದೇ ಮರ್ಯಾದಸ್ಥರ ಬದುಕು ಈಗ!’ ಅಂತಂದೆ.

‘ಅಭಿವೃದ್ಧಿ ಹೆಸರಲ್ಲಿ ನಮ್ಮಂತೇ ಕತ್ತೆಗಳ ಮೇಯ್ಸಿ ಹಾಲು ಕರಕೊಳೋದೇ ರಾಜಕೀಯ ಅಲ್ಲವೇನೋ? ಕೈ ತೋರಿಸಿ ಬಾಯಲ್ಲಿ ಕೇಸರಿ ಅಂದ್ರಾಯ್ತು’ ಅಂದು ಕತ್ತೆ ಕಾಲದ ರಾಜಕೀಯ ಬಿಡಿಸಿಟ್ಟರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.