ADVERTISEMENT

ಚುರುಮುರಿ | ಷೇರ್– ಶೇರ್‌!

ತುರುವೇಕೆರೆ ಪ್ರಸಾದ್
Published 15 ಜೂನ್ 2022, 20:52 IST
Last Updated 15 ಜೂನ್ 2022, 20:52 IST
   

ಪರ್ಮೇಶಿ ಮುಖಕ್ಕೆ ಪೇಪರ್ ಮುಚ್ಕೊಂಡು ಕೂತಿದ್ದ. ಪದ್ದಮ್ಮ ಒಳಗಿನಿಂದ ಗುರ್ ಎನ್ನುತ್ತಲೇ ಬಂದ್ರು: ‘ನಿಮ್ ಅವಸ್ಥೆ ನೋಡುದ್ರೆ ಇವತ್ತೂ ನಿಮ್ ಷೇರೆಲ್ಲಾ ಢಮಾರೇ ಅನ್ಸುತ್ತೆ. ಒಂದು ಸೀರೆನೋ ಸರನೋ ಕೊಡ್ಸಿ ಅಂದ್ರೆ ಕೈಯ್ಯೇ ಬರಲ್ಲ ನಿಮಗೆ. ಈ ಷೇರು, ಸ್ಟಾಕು ಅಂತ ಲಕ್ಷ ಲಕ್ಷ ಸುರಿದು ಪಂಗನಾಮ ಹಾಕಿಸ್ಕೊಂಡು ಮುಖ ಮುಚ್ಕೊಂಡ್ ಕೂತ್ಕೊತೀರಿ’.

‘ಕೆಳಗ್ ಬಿದ್ದೋರ್ ಮೇಲೆ ಆಳಿಗೊಂದು ಕಲ್ಲು ಅಂತ ನೀನೂ ನನ್‌ ಮೇಲೆ ಸವಾರಿ ಮಾಡ್ತೀಯಾ? ‘ಕರಡಿಗೊಂದು ಕಾಲ, ಗೂಳಿ ಗೊಂದು ಕಾಲ’! ನನ್ ಟೈಮೂ ಬಂದೇ ಬರುತ್ತೆ’.

‘ಹ್ಞೂಂ ಬರುತ್ತೆ ಬರುತ್ತೆ. ಅದೇನೋ ಹೇಳ್ತಾರಲ್ಲ, ಅಯ್ಯನವರು ಪಟ್ಟಕ್ಕೆ ಬರೋ ಹೊತ್ಗೆ ಅಮ್ಮನವರು ಚಟ್ಟಕ್ಕೆ ಹೊರಟ್ರು ಅಂತ, ಹಾಗೆ! ನಿಮ್ ಷೇರ್ ದುಡ್ಡಲ್ಲಿ ನಾನ್ ಸುಖ ಪಟ್ಟ ಹಾಗೇ ಇದೆ ಬಿಡಿ. ಹೌದು! ಹೀಗೆ ದಬ ದಬ ಷೇರ್ ಬೆಲೆ ಬಿದ್ ಹೋಗಕ್ಕೆ ಏನ್ ಕಾರಣ?

ADVERTISEMENT

‘ನೂರೆಂಟು ಕಾರಣ ಇದೆ. ಅಮೆರಿಕ ಮಾರ್ಕೆಟ್ಟು, ರಷ್ಯಾ- ಉಕ್ರೇನ್ ಯುದ್ಧ, ನಂ ರಾಜ ಕೀಯದವರ ನಾಲಿಗೆ ಉದ್ದ ಹೀಗೆ ಪ್ರಪಂಚದಲ್ಲಿ ಎಲ್ಲಿ ಬುಸ್ ಅಂದ್ರೂ ನಮ್ ಷೇರ್‌ಪೇಟೆ ಠುಸ್ ಅನ್ನುತ್ತೆ! ನೀನು ಹಾಕಿರೋ ಚಿನ್ನದ ಚೀಟಿಯಿಂದನೂ ಮಾರ್ಕೆಟ್ ಬೀಳಬಹುದು’.

‘ಅಯ್ಯೋ, ನಾನು ಚಿನ್ನದ ಚೀಟಿ ಹಾಕಕ್ಕೂ ಷೇರ್ ಬೆಲೆ ಕೆಳಗ್ ಬರಕ್ಕೂ ಏನ್ ಸಂಬಂಧ?’

‘ಸಂಬಂಧ ಇರುತ್ತೆ ಕಣೆ. ಉದಾಹರಣೆಗೆ, ನೀನು ಚಿನ್ನದ ಸ್ಕೀಮ್ ಹಾಕಿರೋ ಜ್ಯೂಯಲರಿ ಕಂಪನಿಯೋನು ರಾತ್ರೋ ರಾತ್ರಿ ಉಂಡೆನಾಮ ತಿಕ್ಕಿ ಹೋದ ಅನ್ನು. ಅವನನ್ನ ಪೊಲೀಸ್ನೋರು ಹುಡುಕ್ತಾರೆ. ಆ ದೊಡ್ ಮನುಷ್ಯನ್ ಜೊತೆ ಯಾರೋ ರಾಜಕೀಯದೋರು ನಿಂತಿರೋ ಫೋಟೊ ಪೇಪರ್‌ನಲ್ಲಿ ಬರುತ್ತೆ. ರಾಜಕೀಯ ಅಸ್ಥಿರತೆ ಅಂತಾರೆ. ಫಾರಿನ್ ಕಂಪನಿಗಳು ಬಂಡವಾಳ ವಾಪಸ್ ತೆಗೆಯುತ್ವೆ. ಷೇರುಗಳು ಪಲ್ಟಿ ಹೊಡೆಯುತ್ವೆ’.

‘ಹಾಗಿದ್ರೆ ಏನ್ ಮಾಡು ಅಂತೀರಿ?’

‘ಚಿನ್ನದ ಸ್ಕೀಮ್‌ಗೆ ದುಡ್ಡು ಹಾಕೋ ಬದ್ಲು ಷೇರಲ್ಲಿ ಹಾಕು, ಲಕ್ಷ ಲಕ್ಷ ಬರುತ್ತೆ’.

‘ಲಕ್ಷ ಬರಲ್ಲ ಅಮಾಸೆ ಪಕ್ಷ ಬರುತ್ತೆ. ಇಬ್ರದೂ ಫೋಟೊ ಇಟ್ಟು ಎಡೆ ಹಾಕ್ತಾರೆ. ಅಯ್ಯೋ ನಿಮ್ ಮುಖಕ್ಕೆ’ ಪದ್ದಮ್ಮ ಪೇಪರ್ ಉಂಡೆ ಮಾಡಿ ಪರ್ಮೇಶಿ ಮುಖಕ್ಕೆ ಎಸೆದು ಹೋದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.