ADVERTISEMENT

ಚುರುಮುರಿ | ಕಾಯಿಲೆ ಕಾಳಜಿ

ಸಿ.ಎನ್.ರಾಜು
Published 5 ಆಗಸ್ಟ್ 2022, 21:30 IST
Last Updated 5 ಆಗಸ್ಟ್ 2022, 21:30 IST
ಚುರುಮುರಿ
ಚುರುಮುರಿ   

‘ನಮ್ಮ ಕಾಯಿಲೆಗಳಿಗೆ ಒಳ್ಳೆಯ ಹೆಸರಿಲ್ಲಾ ಕಣ್ರೀ’ ಸುಮಿ ಬೇಸರ ವ್ಯಕ್ತಪಡಿಸಿದಳು.

‘ಒಳ್ಳೆ ಹೆಸರು ಗಳಿಸಲು ಕಾಯಿಲೆಗಳು ಜನ ಮೆಚ್ಚುವಂತಹ ಯಾವುದೇ ಕೆಲಸ ಮಾಡುತ್ತಿಲ್ಲ’ ಅಂದ ಶಂಕ್ರಿ.

‘ಹಾಗಲ್ಲಾರೀ, ಮಂಕಿಪಾಕ್ಸ್, ಹಂದಿ ಜ್ವರ, ಹಕ್ಕಿ ಜ್ವರ, ಪಿಕ್ಕೆ ಜ್ವರ ಛೀ, ಹೆಸರುಗಳು ಅಸಹ್ಯವಾಗಿವೆ. ಕಾಯಿಲೆಗಳಿಗೆ ಆಕರ್ಷಕ ಹೆಸರಿಡುವುದು ಬೇಡ್ವೇ?’

ADVERTISEMENT

‘ಕಾಯಿಲೆಗಳಿಗೆ ಜಾತಕ, ಪಾತಕ ನೋಡಿ ಹೆಸರಿಡೋದಿಲ್ಲ. ಕಾಯಿಲೆಗಳ ಪ್ರಭಾವ, ಪರಿಣಾಮಗಳ ಆಧಾರದಲ್ಲಿ ಹೆಸರಿಡಬಹುದು’.

‘ಮೊನ್ನೆ ಒಬ್ಬರು ನಿಮಗೆ ಮಂಕಿಪಾಕ್ಸ್ ಲಕ್ಷಣ ಇದೆಯಾ ಅಂತ ಕೇಳಿದರು, ನನಗೆ ಸಿಟ್ಟು ಬಂತು’.

‘ಕೇಳೋದ್ರಲ್ಲಿ ತಪ್ಪೇನಿದೆ?’

‘ಸಿನಿಮಾ ನಟಿಯ ಲಕ್ಷಣ ಇದೆಯಾ ಅಂತ ಕೇಳಿದ್ರೆ ಖುಷಿಪಡಬಹುದುದಿತ್ತು, ಮಂಕಿ ಲಕ್ಷಣ ಅಂತ ಅವಲಕ್ಷಣವಾಗಿ ಕೇಳಿದ್ರೆ ಸಿಟ್ಟು ಬರೋದಿಲ್ವ?’

‘ಮಂಕಿಪಾಕ್ಸ್ ಲಕ್ಷಣ ಇರುವವರ ಪತ್ತೆ ಮಾಡಲು ಸರ್ಕಾರ ಹೇಳಿದೆ, ಅವರ್‍ಯಾರೋ ಕೇಳಿರಬಹುದು’.

‘ಅಡ್ರೆಸ್, ಆಧಾರ್ ಕಾರ್ಡ್ ಇಲ್ಲದ ಕಾಯಿಲೆಗಳನ್ನು ಪತ್ತೆ ಮಾಡೊದು ಕಷ್ಟ ಅಲ್ವಾ?’

‘ತಪ್ಪಿಸಿಕೊಂಡ ಕಳ್ಳರನ್ನೇ ಪೊಲೀಸರು ಪತ್ತೆಹಚ್ಚುತ್ತಾರೆ, ಕಾಯಿಲೆ ಯಾವ ಲೆಕ್ಕ?’

‘ಕಳ್ಳರು ಪೊಲೀಸರಿಗೆ ಹೆದರುವಂತೆ ಕಾಯಿಲೆಗಳು ಯಾರಿಗಾದರೂ ಹೆದರುತ್ತವೇನ್ರೀ?’

‘ಡಾಕ್ಟರಿಗೆ ಹೆದರುತ್ತವೆ. ಅವರು ಕಿವಿಗೆ ಸ್ಟೆತಾಸ್ಕೋಪ್ ಏರಿಸಿಕೊಂಡು, ಕೈಗೆ ಸಿರೀಂಜ್ ತಗೊಂಡ್ರೆ ಎಂಥಾ ಹಠಮಾರಿ ಕಾಯಿಲೆಗಳೂ ಹೆದರಿಬಿಡುತ್ತವೆ’.

‘ಕಾಯಿಲೆಮುಕ್ತ ಬದುಕು ನಮಗೆಸಾಧ್ಯವಿಲ್ಲವೇನ್ರೀ?’

‘ಸಾಧ್ಯವಿಲ್ಲ. ಅತಿಥಿಗಳು ಬಂದು ಹೋಗುವಂತೆ ಕಾಯಿಲೆಗಳು ಬಂದುಹೋಗುತ್ತವೆ. ಬಂದಾಗ ಸೂಕ್ತ ಆರೈಕೆ, ಆತಿಥ್ಯ ನೀಡಿ ಸತ್ಕರಿಸಿ ಕಳಿಸಬೇಕು. ನಾವು ಕಾಯಿಲೆಗಳನ್ನುನಂಬಿಕೊಂಡಿಲ್ಲವಾದರೂ ಕಾಯಿಲೆಗಳು ನಮ್ಮನ್ನು ನಂಬಿಕೊಂಡಿವೆ’ ಅಂದ ಶಂಕ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.