ADVERTISEMENT

ಚುರುಮುರಿ: ಡಬಲ್ ಎಂಜಿನ್ ಮಹಿಮೆ

ಸುಮಂಗಲಾ
Published 9 ಫೆಬ್ರುವರಿ 2025, 19:51 IST
Last Updated 9 ಫೆಬ್ರುವರಿ 2025, 19:51 IST
   

‘ದೇಶದ ರಾಜಧಾನಿ ದಿಲ್ಲಿವಳಗೆ ಇನ್ನುಮ್ಯಾಗೆ ಬಡವರೇ ಇರಂಗಿಲ್ಲ. ಎಲ್ಲಾರೂ ಮಧ್ಯಮ ವರ್ಗಕ್ಕೆ ಅಪ್‌ಗ್ರೇಡ್‌ ಆಗತಾರೆ’ ಎಂದು ಬೆಕ್ಕಣ್ಣ ಖುಷಿಯಿಂದ ಉಲಿಯಿತು.

‘ಅದೇನು ಕಂಪ್ಯೂಟರ್‌ ಸಾಫ್ಟ್‌ವೇರ್‌ ಅಪ್‌ಗ್ರೇಡ್‌ ಮಾಡಿದಷ್ಟು ಸುಲಭವೇನು?’ ಎಂದೆ.

‘ಅದಕ್ಕಿಂತ ಸುಲಭ. ದಿಲ್ಲಿ ರಸ್ತೆವಳಗೆ ಈಗ ಡಬಲ್‌ ಎಂಜಿನ್‌ ಕಾರು ಓಡತೈತಿ. ಅಲ್ಲೀಗ ಮಹಿಳೆಯರಿಗೆ ತಿಂಗಳಿಗೆ 2500 ರೂಪಾಯಿ, 500 ರೂಪಾಯಿ ಸಿಲಿಂಡರ್‌ ಸಬ್ಸಿಡಿ, ಇನ್ಷುರೆನ್ಸು, ಆರೋಗ್ಯ ಸೌಲಭ್ಯ ಇನ್ನೂ ಏನೇನೋ ಕೊಡ್ತೀವಂತ ಕಮಲಕ್ಕನ ಕಡೇವ್ರು ಹೇಳ್ಯಾರೆ’ ಬೆಕ್ಕಣ್ಣ ಬಲುಹುರುಪಿನಿಂದ ವದರಿತು.

ADVERTISEMENT

‘ಕರ್ನಾಟಕದೊಳಗೆ ಮಹಿಳೆಯರಿಗೆ
2000 ರೂಪಾಯಿ ಕೊಡದ್ರಿಂದ ಎಲ್ಲಾರೂ ಸೋಮಾರಿ ಆಗ್ಯಾರೆ, ಖಜಾನೆ ಖಾಲಿ ಆಗೈತಿ ಅಂತೆಲ್ಲ ಇಲ್ಲಿ ಕಮಲಕ್ಕನ ಮನಿಯವ್ರು ಬೈದಾಡತಾರೆ. ಅಲ್ಲಿ ಇಷ್ಟೆಲ್ಲ ಪುಗಸಟ್ಟೆ ಕೊಟ್ಟರೆ ಖಜಾನೆ ಖಾಲಿ ಆಗಂಗಿಲ್ಲೇನು?’

‘ಅದು ರಾಜಧಾನಿ. ವಿದೇಶದಿಂದ ಬಂದವರು ಮೊದಲು ಅಲ್ಲಿಗೆ ಬರತಾರಲ್ಲ... ನಮ್‌ ಮಹಿಳೆಯರು ಎಷ್ಟು ಸಬಲ ಆಗ್ಯಾರೆ ಅಂತ ನೋಡತಾರೆ. ಹಿಂಗಾಗಿ, ಅಲ್ಲಿ ಬಡವರನ್ನ ಮಧ್ಯಮವರ್ಗಕ್ಕೆ, ತೆರಿಗೆ ವಿನಾಯಿತಿ ನೀಡಿ ಮಧ್ಯಮವರ್ಗದವರನ್ನ ಇನ್ನೂ ಮೇಲೆ ಅಪ್‌ಗ್ರೇಡ್‌ ಮಾಡೂದು ಅವಶ್ಯ’ ಬೆಕ್ಕಣ್ಣ ವಿತಂಡವಾದ ಮಂಡಿಸಿತು.

‘ಹರಿಯಾಣದೊಳಗೂ ಡಬಲ್‌ ಎಂಜಿನ್‌ ಐತಿ. ಹಂಗಾರೆ‌ ಅಲ್ಲಿ ಕೃಷಿ ತ್ಯಾಜ್ಯ ಸುಡೂದು ನಿಲ್ಲಿಸಿ, ದಿಲ್ಲಿ ಮಾಲಿನ್ಯ ಕಡಿಮೆ ಮಾಡಬೌದು’.

‘ದಿಲ್ಲಿಗೆ ಮಾಲಿನ್ಯದ ಗಾಳಿ ಪಂಜಾಬಿನಿಂದ ಬರತೈತಿ. ಪಂಜಾಬಿನೊಳಗೂ ಡಬಲ್‌ ಎಂಜಿನ್‌ ತಂದರೆ ಮಾತ್ರ ದಿಲ್ಲಿಗೆ ಸ್ವಚ್ಛ ಗಾಳಿ ಬರತೈತಿ’ ಬೆಕ್ಕಣ್ಣನ ವಾದ.

‘ಸರಿಯಪ್ಪ, ಉತ್ತರಪ್ರದೇಶದೊಳಗೂ ಡಬಲ್‌ ಎಂಜಿನ್‌ ಐತಿ. ಪ್ರಯಾಗ್‌ರಾಜ್‌ನಲ್ಲಿ ವಿಪರೀತ ಜನ ಸೇರಿರುವುದರಿಂದ ಪ್ರತಿದಿನ ಸುಮಾರು 13 ಕೋಟಿ ಲೀಟರ್‌ ಚರಂಡಿ ನೀರು ನೇರವಾಗಿ ಗಂಗೆಗೆ ಸೇರತೈತೆ. ಅದನ್ನು ಕ್ಲೀನ್‌ ಮಾಡೋರು ಯಾರು?’

ಬೆಕ್ಕಣ್ಣ ಉಸಿರೆತ್ತಲಿಲ್ಲ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.