‘ನೀವೇ ತಪ್ಪು ಮಾಡಿರೋದು’ ಬೆಳಿಗ್ಗೆಯೇ ಬೈಯ್ಯಲು ಶುರು ಮಾಡಿದಳು ಹೆಂಡತಿ.
‘ನಾನು ತಪ್ಪು ಮಾಡಿಲ್ಲ, ನೀನು ಸುಮ್‌ಸುಮ್ನೆ ಏನೇನೋ ಹೇಳಬೇಡ’ ಸಿಟ್ಟಿನಲ್ಲಿಯೇ ಉತ್ತರಿಸಿದೆ.
‘ನೀವೂ ಹೀಗೆಲ್ಲ ಮಾಡ್ತೀರಿ ಅಂತ ನಾನು ಕನಸು ಮನಸಿನಲ್ಲೂ ಅಂದುಕೊಂಡಿರಲಿಲ್ಲ’.
‘ನನ್ನದಿರಲಿ, ನೀನೇನೂ ತಪ್ಪೇ ಮಾಡಿಲ್ವ?’.
‘ನನ್ನಿಂದ ತಪ್ಪಾಗಿಲ್ಲ’.
‘ನೀನು ಸುಳ್ಳು ಹೇಳ್ತೀಯ ಅಂತ ನನಗ್ಗೊತ್ತು, ಅದಕ್ಕೇ ನಿನ್ನ ವಿರುದ್ಧದ ಪ್ರೂಫ್‌ಗಳನ್ನೆಲ್ಲ ಕಲೆಕ್ಟ್ ಮಾಡ್ತಿದ್ದೀನಿ’.
‘ನೀವು ತಪ್ಪು ಮಾಡಿದ್ದೀರೋ ಇಲ್ಲವೋ ಅಂತ ಮೊದಲು ಉತ್ತರ ಕೊಡಿ ಸಾಕು’.
‘ನಿನಗೇನ್ ಉತ್ತರ ಕೊಡೋದು, ಪ್ರತಿಭಟನಾರ್ಥವಾಗಿ ಕಾಲ್ನಡಿಗೆಯಲ್ಲೇ ಹೋಗಿ ಮೈಸೂರಿನಲ್ಲಿರೋ ನಿಮ್ಮ ಅಪ್ಪನಿಗೇ ಹೇಳಿ ಬರ್ತೀನಿ’.
‘ಓಹ್, ರಾಜಕೀಯದವರ ಥರ ಪಾದಯಾತ್ರೆ ಮಾಡ್ತೀನಿ ಅಂತ ಹೇಳಿ’.
‘ಹ್ಞೂಂ, ಅದೇ’.
‘ಹಾಗಾದ್ರೆ, ನಾನೂ ಪಾದಯಾತ್ರೆ ಮಾಡ್ತೀನಿ, ಮೈಸೂರಿಗೇ ಬಂದು ನಿಮ್ಮ ಅಮ್ಮನ ಬಳಿ ಹೋಗಿ ನಿಮ್ಮ ಘನಂದಾರಿ ಕೆಲಸಗಳ ಬಗ್ಗೆ ಎಲ್ಲ ಹೇಳಿ ಬರ್ತೀನಿ’.
‘ಅಯ್ಯೋ, ನಿಮ್ಮಿಬ್ಬರ ಜಗಳ ನಿಲ್ಲಿಸಿ, ಅದೇನ್ ತಪ್ಪು ಮಾಡಿದೀರಿ ಅಂತಾನೇ ಇಬ್ಬರೂ ಹೇಳ್ತಿಲ್ಲ’ ಮಕ್ಕಳಿಬ್ಬರೂ ಬೇಸತ್ತು ಹೇಳಿದರು.
‘ಅವೆಲ್ಲ ನಿಮಗೆ ಅರ್ಥ ಆಗಲ್ಲ ಸುಮ್ನಿರಿ’ ಎಂದೆ.
‘ಗೊತ್ತು ಬಿಡಪ್ಪ, ನಿಮ್ಮಿಬ್ಬರ ಜಗಳವನ್ನ ನಾವೂ ನೋಡಿದೀವಿ. ಪಾದಯಾತ್ರೆ ನೆಪದಲ್ಲಿ ಚನ್ನಪಟ್ಟಣದ ದೇವಮೂಲೆಯಲ್ಲಿ ನಿಂತುಕೊಂಡು ಚಹಾ ಕುಡಿದು, ಮದ್ದೂರಿನಲ್ಲಿ ವಡೆ ತಿಂದುಕೊಂಡು ಹೋಗ್ತೀರಿ. ನಿಮ್ಮಿಬ್ಬರದೂ ‘ಅಡ್ಜಸ್ಟ್‌ಮೆಂಟ್ ಜಗಳ’ ಎಂದಳು ದೊಡ್ಡ ಮಗಳು.
‘ನೀನು ವಯಸ್ಸಿಗೆ ತಕ್ಕಂತೆ ಮಾತನಾಡು’ ರೇಗಿದಳು ಪತ್ನಿ.
‘ನೀವಿಬ್ಬರೂ ಹೀಗೆ ‘ಖಾಲಿ’ ಜಗಳವಾಡೋ ದನ್ನ ನೋಡೋಕಾಗ್ತಿಲ್ಲ, ನಮಗೂ ನ್ಯಾಯ ಕೊಡಿಸಿ ಅಂತ ನಾವೂ ಪ್ರತ್ಯೇಕ ಪಾದಯಾತ್ರೆ ಮಾಡ್ತೀವಿ ಬಿಡಿ’ ಎಂದು ಎದ್ದು ನಿಂತರು ಮಕ್ಕಳು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.