ADVERTISEMENT

ಚುರುಮುರಿ: ಧೈರ್ಯದ ಪ್ರಶ್ನೆಗಳು!

ಚುರುಮುರಿ: ಧೈರ್ಯದ ಪ್ರಶ್ನೆಗಳು!

ತುರುವೇಕೆರೆ ಪ್ರಸಾದ್
Published 23 ಫೆಬ್ರುವರಿ 2024, 19:29 IST
Last Updated 23 ಫೆಬ್ರುವರಿ 2024, 19:29 IST
<div class="paragraphs"><p>Churumuri&nbsp;</p></div>

Churumuri 

   

‘ಅಂತೂ ಧೈರ್ಯವಾಗಿ ಪ್ರಶ್ನಿಸಿ ಅನ್ನೋದನ್ನ ಉಳಿಸ್ಕಳಕ್ಕೇ ಧೈರ್ಯ ಇಲ್ದಂಗಾಗೋಯ್ತು’ ಹರಟೆಕಟ್ಟೇಲಿ ಈರಭದ್ರ ಮಾತು ತೆಗೆದ.

‘ಒಂದ್‌ವೇಳೆ ಅದು ಅಂಗೇ ಇದ್ದಿದ್ರೆ ಏನೆಲ್ಲಾ ಆಯ್ತಿತ್ತು ಅಂತ ನೆನೆಸ್ಕೊಂಡ್ರೇ ಫಜೀತಿ ಅನುಸ್ತದೆ. ಧೈರ್ಯವಾಗಿ ಪ್ರಶ್ನಿಸಿ ಅಂದ್ರೆ ಔಟ್ ಆಫ್ ಸಿಲಬಸ್ ಕೊಶ್ಚನ್ನೂ ಮಕ್ಕಳು ಕ್ಯೋಳ್ತಿದ್ವು ಅಲ್ವಾ?’ ಎಂದ ತಮ್ಮಣ್ಣ.

ADVERTISEMENT

‘ಮತ್ತೆ ಬಿಟ್ಟಾವಾ? ಉತ್ರ ಕೊಡಕ್ಕೆ ಸರ್ಕಸ್ ಮಾಡ್ಬೇಕು, ಅಂಥ ಪ್ರಚಂಡ ಪಶ್ನೆಗಳನ್ನ ಎಸೀತಿದ್ವು. ರಾಕೆಟ್ ಬುಟ್ರೂ ಪರವಾಗಿಲ್ಲ, ಈ ಥರ ಪ್ರಶ್ನೆ ಕ್ಷಿಪಣಿ ಯಾಕಾರಾ ಬಿಡ್ತಾವೋ ಬಡ್ಡೆತ್ತೋವು ಅಂತ ಮೇಷ್ಟ್ರು, ಮೇಡಮ್ಗಳು
ಪದರಗುಟ್ಟೋಯ್ತಿದ್ರು’ ಎಂದ ಚಿಕ್ಕೀರ.

‘ಊ ಮತ್ತೆ, ನಿಮ್ಗೆ ಪಿಯುಸಿಲಿ ಕಡಿಮೆ ಮಾರ್ಕ್ಸು ಬಂದಿರ್ಬೇಕು, ಇಲ್ಲ ಅಂದಿದ್ರೆ ಎಂಜಿನಿಯರ‍್ರೋ ಡಾಕ್ಟರ‍್ರೋ ಆಗೋದ್ ಬಿಟ್ಟು ನಮ್ ತಲೆ ತಿನ್ನಕ್ಕೆ ಯಾಕ್ ಬತ್ತಿದ್ರಿ ಅಂತ ಕೇಳ್ತಿದ್ರು’.

‘ಹೆಣ್ಣುಮಕ್ಕಳು, ನಿಮ್ಮ ವಯಸ್ಸು ಅಲ್ಲೇ ನಿಂತಿರೋದ್ರ ಗುಟ್ಟೇನು ಮೇಡಂ? ಯಾವ ಸೋಪು, ಶಾಂಪು ಹಾಕ್ತೀರಿ? ನಿಮ್ಮನೇಲಿ ಟಿ.ವಿ ರಿಮೋಟ್ ಯಾರ ಕೈಲಿರುತ್ತೆ? ಯಾವ ಸೀರಿಯಲ್ ನೋಡ್ತೀರಿ? ಅಂತ ಕೇಳ್ತಿದ್ರು’.

‘ಆಮೇಲೆ ಮೇಷ್ಟ್ರುಗಳಿಗೆ, ಹೊಸ್ದಾಗ್ ರಿಲೀಸ್ ಆದ ಪಿಕ್ಚರ್ ‘ಅಯ್ಯಯ್ಯಪ್ಪಾ’ ಎಂಗೈತೆ? ದಿನಾ ಯಾಕ್ ಮನೆಗೆ ಲೇಟಾಗ್ ಓಯ್ತೀರ? ಮಕ್ಕಳ ಹೋಂವರ್ಕ್, ಹೆಂಡ್ರ ಹೋಂವರ್ಕ್ ಯಾವುದು ಮೊದ್ಲು ಮಾಡ್ತೀರ? ನೀವು ಮಾಡೋದೆಲ್ಲಾ ನಮಗ್ಯಾಕ್ ಮಾಡಬ್ಯಾಡಿ ಅಂತ ಯೋಳ್ತೀರಿ? ಕೊನೆಗೆ, ಕೊಶ್ಚನ್ ಪೇಪರ್ ಯಾವ ಪ್ರೆಸ್ಸಲ್ಲಿ ಪ್ರಿಂಟಾಗೈತೆ ಅಂತ ಕೇಳ್ತಿದ್ರೋ ಎಂಗೋ?’

‘ಅದಿರ್ಲಪ್ಪ, ನಮಗ್ಯಾಕ್ ದನದ್ ಬೂಸಾ ತರ ಊಟ ಹಾಕ್ತೀರ? ಸರ್ಕಾರ ಕೊಡೋ ಅಕ್ಕಿ ಎಲ್ ಓಯ್ತದೆ ಅಂತ ಕೇಳಿದ್ರೆ, ನ್ಯೂಕ್ಲಿಯರ್ ಚೈನ್ ತರ ಮೇಷ್ಟ್ರು ಕಮಿಶನ್ ಚೈನೇ ಯೋಳ್ಬೇಕಾಯ್ತಿತ್ತಲ್ಲ’.

‘ಸದ್ಯ ಮೇಷ್ಟ್ರುಗಳು ಬಚಾವಾದ್ರು! ಇಲ್ಲ ಅಂದ್ರೆ ಇಸ್ಕೂಲಾಗೆ ಮಕ್ಕಳ ಪ್ರಶ್ನೆಗೂ ಉತ್ರ ಯೋಳಿ, ಮನೆಗೋದ್ಮೇಲೆ ಎಂಡ್ರು ಪ್ರಶ್ನೆಗೂ ಉತ್ರ ಯೋಳಿ ಅವರ ಲೈಫೇ ಕೊಶ್ಚನ್ ಮಾರ್ಕ್ ಆಗೋಯ್ತಿತ್ತು’ ಎಂದ ಈರಭದ್ರ.

ಎಲ್ಲ ‘ಅಯ್ಯೋ ಪಾಪ’ ಎಂದು ಲೊಚಗುಟ್ಟಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.