
‘ಕಲಾಪದಲ್ಲಿನ ನಿಮ್ಮ ಪ್ರತಾಪವನ್ನು ಟೀವಿಯಲ್ಲಿ ನೋಡಿ ಆನಂದಪಟ್ಟೆ! ಮಹಾನ್ ನಾಯಕರಾಗಿ ಬೆಳೆಯುವ ಎಲ್ಲಾ ಲಕ್ಷಣಗಳೂ ನಿಮಗಿವೆ ಕಣ್ರೀ...’ ಮನೆಗೆ ಬಂದ ನಾಯಕರನ್ನು ಪತ್ನಿ ಅಭಿಮಾನದಿಂದ ಹೊಗಳಿದರು.
‘ಹಿಂದೆ ರಾಜಮಹಾರಾಜರು ರಾಜ್ಯದ ರಕ್ಷಣೆಗಾಗಿ ಹೋರಾಡುತ್ತಿದ್ದರಲ್ಲ, ಹಾಗೇ ನಾವೂ ಕಲಾಪದಲ್ಲಿ ಹೋರಾಟ ಮಾಡಬೇಕು. ಕಲಾಪಗಳು ರಣರಂಗ ಆಗ್ತಿವೆ. ಜಟ್ಟಿ, ಗಟ್ಟಿಗಳು ಮಾತ್ರವೇ ಗೆಲ್ಲಲು ಸಾಧ್ಯ’ ಎಂದು ನಾಯಕರು ಬೀಗಿದರು.
‘ರಾಜರು ಯುದ್ಧಭೂಮಿಯಲ್ಲಿ ಕತ್ತಿ, ಗುರಾಣಿ, ಬಿಲ್ಲು–ಬಾಣ ಹಿಡಿದು ಹೋರಾಡ್ತಿದ್ದರು, ಕಲಾಪ ಹೋರಾಟಕ್ಕೆ ಶಸ್ತ್ರಾಸ್ತ್ರವಿಲ್ಲ’.
‘ನಾಲಿಗೆಯೇ ನಮಗೆ ಅಸ್ತ್ರ! ಹರಿತ ನಾಲಿಗೆಯಿಂದ ಎದುರಾಳಿಗಳನ್ನು ಸದೆಬಡಿಯಬಹುದು!’
‘ನಾಲಿಗೆ ಹರಿಬಿಟ್ಟು ಅಸಾಂವಿಧಾನಿಕ ಪದಗಳನ್ನು ಹೆಚ್ಚಾಗಿ ಬಳಸ್ತೀರಿ ಎಂಬ ಆರೋಪ ನಿಮ್ಮ ಮೇಲಿದೆ’.
‘ಕಲಾಪದಲ್ಲಿ ಗದೆ, ಒದೆ ಬಳಕೆಗೆ ಅವಕಾಶವಿಲ್ಲ. ನಾಲಿಗೆ ಬಳಸದಿದ್ದರೆ ಶತ್ರುನಿಗ್ರಹ ಸಾಧ್ಯವಾಗುವುದಿಲ್ಲ’.
‘ಗಂಟಲು ಹರಿದುಕೊಂಡು, ಬೆವರು ಹರಿಸಿಕೊಂಡು ಕಲಾಪದಲ್ಲಿ ಪ್ರತಾಪ ತೋರಿದ ಪರಾಕ್ರಮಿ ನೀವು!’
‘ಪ್ರಜೆಗಳ ಹಿತಕ್ಕಾಗಿ ಹೋರಾಡುವಾಗ ಬೆವರೂ, ಬಟ್ಟೆಯೂ ಹರಿಯುತ್ತದೆ’.
‘ಇವತ್ತೂ ಬಟ್ಟೆ ಹರಿದುಕೊಂಡು ಬಂದ್ರಾ... ಮಕ್ಕಳು ಜಗಳವಾಡಿ ಬಟ್ಟೆ ಹರಿದುಕೊಳ್ಳುವಂತೆ ನೀವು ಪ್ರತಿ ಬಾರಿಯೂ ಬಟ್ಟೆ ಹರಿದುಕೊಳ್ತೀರಿ...’ ಪತಿಯ ಹರಿದ ಜುಬ್ಬಾ ಬಿಚ್ಚಿದರು.
‘ಪ್ರಜೆಗಳ ರಕ್ಷಣೆಗಾಗಿ ಬಟ್ಟೆ ತ್ಯಾಗಕ್ಕೂ ಸಿದ್ಧರಿರಬೇಕು’.
‘ಸರ್ಕಾರಿ ನೌಕರರು ತಿಂಗಳಿಗೊಮ್ಮೆ ಖಾದಿ ಡ್ರೆಸ್ ಧರಿಸುವುದನ್ನು ಸರ್ಕಾರ ಕಡ್ಡಾಯ ಮಾಡಲಿದೆಯಂತೆ. ನಿಮ್ಮಂತಹ ಕಲಾಪ ಕಲಿಗಳಿಗೆ ಸರ್ಕಾರ ಪ್ರತ್ಯೇಕ ಬಟ್ಟೆ ಕೊಡಬೇಕು’.
‘ಬಟ್ಟೆ ಹರಿಯೋದು, ಸರ್ಕಾರದ ಸುತ್ತೋಲೆ ಹರಿಯೋದು ಕಲಾಪದಲ್ಲಿ ಸಹಜ’.
‘ಆದರೆ, ಜನನಾಯಕರ ವರ್ತನೆಯಿಂದ ಅಸೆಂಬ್ಲಿ, ಪಾರ್ಲಿಮೆಂಟ್‌ನ ಘನತೆ, ಗೌರವಕ್ಕೆ ಧಕ್ಕೆಯಾಗುತ್ತಿದೆ. ಎಂದು ಪೇಪರ್‌ನವರು ಟೀಕೆ ಮಾಡಿ ಬರೆಯುತ್ತಿದ್ದಾರೆ ಕಣ್ರೀ...’ ಬೇಸರಗೊಂಡ ಪತ್ನಿ ನಾಯಕರಿಗೆ ಹೊಸ ಜುಬ್ಬಾ ತೊಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.