ADVERTISEMENT

ಚುರುಮುರಿ | ಹಬ್ಬದ ಹರಕೆ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2022, 21:30 IST
Last Updated 3 ಆಗಸ್ಟ್ 2022, 21:30 IST
ಚುರುಮುರಿ
ಚುರುಮುರಿ   

‘ಈ ಬಾರಿ ಸಿಂಪಲ್ಲಾಗಿ ವರಮಹಾಲಕ್ಷ್ಮಿ ಹಬ್ಬ ಆಚರಿಸಲು ತೀರ್ಮಾನಿಸಿದ್ದೇನೆ...’ ಗಂಡನಿಗೆ ಕಾಫಿ ತಂದುಕೊಟ್ಟಳು ಶ್ರೀಮತಿ.

‘ಸಿಂಪಲ್ ಅಂದ್ರೆ ಕಾಯಿ ಒಡೆದು, ಬಾಳೆಹಣ್ಣು ಮುರಿದು, ಊದುಬತ್ತಿ ಹಚ್ಚಿ ಲಕ್ಷ್ಮಿ ಪೂಜೆ ಮಾಡಿ ಮುಗಿಸ್ತೀಯಾ?’ ಕಾಫಿ ಹೀರಿ ವಿಶ್ವ ಕೇಳಿದ.

‘ಅಷ್ಟು ಸಿಂಪಲ್ಲಾದ್ರೆ ಲಕ್ಷ್ಮಿ ಒಲಿದು ವರ ಕೊಡೋದಿಲ್ಲ... ನಮ್ಮ ಕುಟುಂಬದ ಘನತೆಗೆ ತಕ್ಕಹಾಗೆ ಮಾಡಬೇಕು’.

ADVERTISEMENT

‘ಹೌದೌದು. ನೆರೆಹೊರೆಯವರ ಎದುರು ಕುಟುಂಬದ ಘನತೆ ಕಾಪಾಡಿಕೊಳ್ಳಬೇಕು’.

‘ಮನೆಗೆ ಬರುವ ಮಹಾಲಕ್ಷ್ಮಿಗೆ ಗ್ರ್ಯಾಂಡಾಗಿರುವ ರೇಷ್ಮೆ ಸೀರೆ ಉಡಿಸಬೇಕು...’

‘ಹಾಗೇ, ಮನೆಯ ಗೃಹಲಕ್ಷ್ಮಿಯಾದ ನಿನಗೂ ಹೊಸ ಸೀರೆ ಕೊಡಿಸಬೇಕು. ಎರಡು ಹೊಸ ಸೀರೆ ತರೋಣ’.

‘ಲಕ್ಷ್ಮಿಗೆ ಕಿವಿಗೆ, ಮೂಗಿಗೆ, ಕತ್ತಿಗೆ ಏನಾದ್ರೂ ಹಾಕಬೇಕಲ್ವೆ?’

‘ನಿನ್ನ ಒಡವೆಗಳನ್ನು ಹಾಕು’.

‘ಹಾಕ್ತೀನ್ರೀ, ಈ ಹಬ್ಬಕ್ಕೆ ಬಂಗಾರದ ಸರ ಮಾಡಿಸಿಕೊಡ್ತೀನಿ ಅಂತ ಲಕ್ಷ್ಮಿಗೆ ಹರಕೆ ಹೊತ್ತಿದ್ದೆ, ಸೀರೆ ಜೊತೆಗೆ ಸರವನ್ನೂ ಖರೀದಿಸಬೇಕು’.

‘ಸರಿ. ಆಗಬಹುದು’.

‘ಕುಂಕುಮಕ್ಕೆಂದು ಮನೆಗೆ ಬರುವ ನೆರೆಹೊರೆಯ ಹೆಂಗಸರು ಲಕ್ಷ್ಮಿ ಅಲಂಕಾರ ನೋಡುವಾಗ ಎದ್ದುಕಾಣುವಂತೆ ಕನಕಾಂಬರ ಕಲರ್ ನೋಟಿನ ಕಂತೆಗಳನ್ನು ಜೋಡಿಸಬೇಕು’.

‘ಯಾರನ್ನು ಬೇಕಾದ್ರೂ ಕರಿ, ಆದರೆ, ಪಕ್ಕದ ಬೀದಿಯಲ್ಲಿರುವ ಆದಾಯ ತೆರಿಗೆ ಅಧಿಕಾರಿಯ ಹೆಂಡ್ತಿಯನ್ನು ಮಾತ್ರ ಕುಂಕುಮಕ್ಕೆ ಕರೆಯಬೇಡ’.

‘ಯಾಕ್ರೀ? ಅವರು ತುಂಬಾ ಒಳ್ಳೆಯವರು, ನಮ್ಮ ಮಹಿಳಾ ಸಮಾಜಕ್ಕೆ ಬಹಳಷ್ಟು ಸಹಾಯ ಮಾಡಿದ್ದಾರೆ’.

‘ಹಾಗಲ್ಲಾ, ನಮ್ಮ ಮನೆ ದೇವರ ಅಲಂಕಾರಕ್ಕೆ ಇಟ್ಟ ಹಣ, ಒಡವೆ ಬಗ್ಗೆ ಅವರು ತಮ್ಮ ಗಂಡನಿಗೆ ವರದಿ ಮಾಡ್ತಾರೆ, ಗಂಡನ ಮೂಲಕ ಆಫೀಸ್‌ಗೆ ಸುದ್ದಿ ತಲುಪಿ ಅವರು ನಮ್ಮ ಮನೆ ಮೇಲೆ ತೆರಿಗೆ ದಾಳಿ ಮಾಡಿಬಿಟ್ಟರೆ?!...’ ವಿಶ್ವನಿಗೆ ಭಯ.

‘ಮಾಡಲಿಬಿಡ್ರೀ, ನಮ್ಮ ಹೆಸರೂ ಪೇಪರ್‌ನಲ್ಲಿ ಬರ್ತದೆ...’ ಎನ್ನುತ್ತಾ ಕಾಫಿ ಗ್ಲಾಸ್ ಎತ್ತಿಕೊಂಡು ಹೊರಟಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.