ಚುರುಮುರಿ: ಜೈಲ್ ಜುಗಲ್ಬಂದಿ!
‘ನಮ್ ಅಕಾಡೆಮಿ ಅಧ್ಯಕ್ಷ ಮುಕುಂದಣ್ಣ ಕನ್ನಡ ಸಾಹಿತ್ಯನ ಜೈಲ್‍ಗಂಟ ತಗಂಡೋಗೋ ಒಳ್ಳೇ ಪ್ರಯತ್ನ ಮಾಡವ್ರಲ್ಲಪ್ಪ’ ಎಂದ
ಗುದ್ಲಿಂಗ.
‘ಊ ಕಣ್ಲಾ, ಆದ್ರೆ ಇದ್ರ ಪರಿಣಾಮ ಯೋಚ್ನೆ ಮಾಡ್ಬೇಕಾಯ್ತದೆ’ ಎಂದ ಮಾಲಿಂಗ.
‘ಇದ್ರಾಗೆ ಯೋಚ್ನೆ ಮಾಡೋದು ಏನೈತ್ಲಾ? ಮನ್ಸುಗಳ ಪರಿವರ್ತನೆ ಮಾಡಿ ಜೈಲಿನ ಪರಿಸರ ಸಾಹಿತ್ಯಮಯವಾಗಿಸೋದು’.
‘ಜೈಲಲ್ಲಿ ಕಲ್ ಒಡೆದು ಮುದ್ದೆ ಕಟ್ಟೋ ಕೆಲಸ ಬಿಟ್ಟು ಎಲ್ಲಾ ಕವಿತೆ ಕಟ್ಟೋ ಕೆಲಸ ಶುರು ಮಾಡ್ಕಂಡ್ರೆ ಎಂಗ್ಲಾ?’
‘ಅದೂ ನಿಜನೇಯ, ‘ನಮಗೂ ಸ್ವಾತಂತ್ರ್ಯ ಬೇಕು, ಸಾಕು ಗೋಡೆ ಮಧ್ಯೆ ಬದುಕು. ಬಿಡಿಸಬೇಕು ಬಿರುಕು, ಅಕಾಡೆಮಿಗೆ ಬಹುಪರಾಕು’ ಅಂತ ಎಲ್ಲ ಕವನ ಕೊರೆದು ಓದುದ್ರೆ ಜೈಲರ್ ಕಿವಿ ಗತಿ ಏನ್ಲಾ ಆಗ್ಬೇಕು?’
‘ಅವರು ಎಂಗೋ ತಡ್ಕೊತಾರೆ ಬಿಡು. ಆದ್ರೆ ಬರೀ ಕವನ ಬರ್ಕಂಡಿದ್ರೆ ಓಕೆ. ಆದ್ರೆ ಈ ಜೈಲಲ್ ನಡ್ಯೋ ತಾರಾತಿಗಡಿನೆಲ್ಲಾ ಪತ್ತೇದಾರಿ ಅಂತ ಗೋಡೆ ಮೇಲೆ ಕೆತ್‌ಬುಟ್ರೆ ಸರ್ಕಾರದ ಬುಡಕ್ಕೆ ಬತ್ತದಲ್ಲಪ್ಪ’.
‘ಜೊತೆಗೆ ಜೈಲ್ನಾಗೆ ಸಾಹಿತಿಗಳು ಜಾಸ್ತಿ ಆಗೋದ್ರೆ ಅಲ್ಲೂ ಶ್ರೇಷ್ಠತೆಯ ವ್ಯಸನ ಕಾಡುತ್ತೆ. ಜುಗಲ್ಬಂದಿ ಶುರುವಾಗಿ ಕಾಲ್ ಎಳೆಯಕ್ ಶುರು ಮಾಡ್ಕಂಡ್ರೆ ಪರಿವರ್ತನೆ ಎಲ್ ಬಂತು?’
‘ಇಂತ ಪರಿವರ್ತನೇನ ಉಗ್ರರ ಬಂಕರ್‌ಗೂ ಓಗಿ ಮಾಡ್ಬೇಕು ಕಣ್ಲಾ’.
‘ಹೂ ಕಣ್ಲಾ! ಹೇಳಿದ್ದನ್ನೇ ಹೇಳೋ ಟಿ.ವಿ. ಆ್ಯಂಕರ್‌ಗಳ ತರ ಕವಿತೆ ಮೇಲ್ ಕವಿತೆ ಕೊರುದ್ರೆ ಒಳಗಿರಕ್ಕಾಗ್ದೆ ಉಗ್ರರು ಈಚೆ ಬತ್ತಾರೆ. ಅವಾಗ ಸುಲಭವಾಗಿ ಹೊಡೆದುಹಾಕ್ಬಹುದು’.
‘ಅಯ್ಯೋ ಅಲ್ಲಿಗಂಟ ಓದೆ ನೀನು. ಮನೆ ಮನೆನೂ ಎಷ್ಟೋ ಗಂಡಸರ ಪಾಲಿಗೆ ‘ಜಗಳ್’ಬಂದಿ ‘ಕಾರಾ’ಗೃಹಗಳಾಗಿವೆ. ನಮ್ ಹೆಂಡ್ತೀರನ್ನೂ ಹೀಗೆ ಕವನ ಬರೆಸಿ ಪರಿವರ್ತನೆ ಮಾಡ್ಬೇಕಲ್ವಾ?’
‘ಈಗ ಕೆಲವು ಹೆಂಡ್ತೀರು ಕಿವಿ ಊದೇ ಸಾಕಾಗಿದೆ, ಇನ್ನು ಕವನ ಓದಿ ಕಿವಿನೂ ಕೊರುದ್ರೆ ಇರಕ್ಕಾಗುತ್ತೇನೋ?’ ಎಂದ ಪರ್ಮೇಶಿ.
ಎಲ್ಲಾ ಗೊಳ್ಳನೆ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.