
ಚುರುಮುರಿ: ದೀರ್ಘಾವಧಿ ಡಿಸಿಎಂ!
‘ಕಂಗ್ರಾಟ್ಸ್ ಸರ್...’ ಹಾರ–ತುರಾಯಿಗಳೊಂದಿಗೆ ಮುಗುಳ್ನಗುತ್ತಾ ಒಳಬಂದರು ಡಿಸಿಎಂ.
‘ಓಹ್, ಬಾರಯ್ಯ, ಬಾ... ಥ್ಯಾಂಕ್ಯೂ’ ಹಾರ ಹಾಕಿಸಿಕೊಂಡು ಮುಗುಳ್ನಕ್ಕರು ಸಿಎಂ.
‘ರಾಜ್ಯದಲ್ಲಿ ದೀರ್ಘಾವಧಿ ಮುಖ್ಯಮಂತ್ರಿ ಆಗಿ ಕೆಲಸ ಮಾಡಿದವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದೀರಿ’.
‘ಎಲ್ಲಾ ಜನರ ಆಶೀರ್ವಾದ’ ಎನ್ನುತ್ತಾ ಕೂರುವಂತೆ ಸನ್ನೆ ಮಾಡಿ ತಾವೂ ಕುಳಿತರು.
‘ಮತ್ತೆ ಸರ್, ಮುಂದೇನು?’
‘ಏನಿಲ್ಲ, ಸಂಜೆ ಕಾರ್ಯಕ್ರಮ ಇದೆ ಹೋಗಬೇಕು’.
‘ಅದಾಯ್ತು ಸಾರ್, ಆಮೇಲೇನು?’
‘ಆಮೇಲೆ ಅಂದ್ರೆ, ನಾಳೆ ಮೈಸೂರಿಗೆ ಹೋಗಬೇಕು’.
‘ಅದಲ್ಲ ಸಾರ್... ಹೋಗ್ಲಿ ಬಿಡಿ. ನನ್ನ ಬಗ್ಗೆ ನಿಮಗೇನನಿಸುತ್ತೆ ಸಾರ್?’
‘ಒಳ್ಳೆ ನಾಯಕ, ಚೆನ್ನಾಗಿ ಇಂಗ್ಲಿಷ್ ಮಾತನಾಡ್ತೀಯ, ಮಹಾನ್ ದೈವಭಕ್ತ ಬೇರೆ’ ಹೊಗಳತೊಡಗಿದರು.
‘ನನ್ನನ್ನ ಮತ್ತಷ್ಟು ಬೆಳೆಸಬೇಕು ಅಂತ ನಿಮಗನ್ನಿಸ್ತಿಲ್ವ ಸಾರ್’.
‘ನನಗಿಂತ ಒಂದಿಂಚು ಎತ್ತರಾನೇ ಇದ್ದೀಯಲ್ಲಯ್ಯ, ಮತ್ತೆಷ್ಟು ಬೆಳೆಯಬೇಕು’ ನಗೆಚಟಾಕಿ ಹಾರಿಸಿದರು ಸಿಎಂ.
‘ಸಾರ್, ಅದಲ್ಲ. ಈಗ ನೀವು ರಾಜ್ಯದಲ್ಲಿ ದೀರ್ಘಾವಧಿಯವರೆಗೆ ಸಿಎಂ ಕುರ್ಚಿಯಲ್ಲಿದ್ದ ಸಾಧನೆ ಮಾಡಿದ್ದೀರಿ...’ ತಲೆ ಕೆರೆದುಕೊಂಡರು ಡಿಸಿಎಂ.
‘ಓಹ್, ಹಾಗಾ..! ಗೊತ್ತಾಯ್ತು. ನನ್ನ ರೀತಿಯೇ ನೀನೂ ಸಾಧನೆ ಮಾಡಬೇಕು ಅಂತ ಕೇಳ್ತಿದ್ದೀಯ ಅಲ್ಲವಾ?’
ಸ್ವರ್ಗಕ್ಕೆ ಮೂರೇ ಗೇಣು ಅನ್ನುವ ಉತ್ಸಾಹದಲ್ಲಿ ‘ಹೂಂ, ಹೂಂ’ ತಲೆ ಅಲ್ಲಾಡಿಸಿದರು ಡಿಸಿಎಂ.
‘ನೋಡು, ಈವರೆಗೂ ರಾಜ್ಯದಲ್ಲಿ ಯಾರೂ ಮಾಡದ ಸಾಧನೆ ಮಾಡುವ ಅವಕಾಶ ನಿನ್ನ ಕೈಯಲ್ಲೇ ಇದೆ’ ಪ್ರೋತ್ಸಾಹದ ಧ್ವನಿಯಲ್ಲಿ ಹೇಳಿದರು ಸಿಎಂ.
‘ಹೇಳಿ ಸಾರ್, ನಿಮ್ಮಂಗೆ ನನ್ನದೂ ದಾಖಲೆ ಆಗುತ್ತೆ ಅನ್ನೋದಾದರೆ ಖಂಡಿತ ಮಾಡುತ್ತೇನೆ’.
‘ನೋಡಯ್ಯ, ಈ ರಾಜ್ಯದಲ್ಲಿ ಯಾರೂ 5 ವರ್ಷ ಸತತವಾಗಿ ಉಪಮುಖ್ಯಮಂತ್ರಿಯಾಗಿದ್ದ ಸಾಧನೆ ಮಾಡಿಲ್ಲ. ಇನ್ನೂ ಎರಡೂವರೆ ವರ್ಷ ನೀನು ಇದೇ ಹುದ್ದೆಯಲ್ಲಿದ್ದರೆ, ರಾಜ್ಯದಲ್ಲಿಯೇ ದೀರ್ಘಾವಧಿ ಉಪಮುಖ್ಯಮಂತ್ರಿ ಅನ್ನೋ ಹಿರಿಮೆ ನಿನ್ನದಾಗುತ್ತೆ’ ಎಂದು ಕೈ ಕುಲುಕುತ್ತಾ ನಕ್ಕರು.
ಮರುಕ್ಷಣದಲ್ಲೇ ಡಿಸಿಎಂ ಕಾರು ಹೊರಟಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.