‘ನಿಜವಾದ ಯುದ್ಧನ ಸೋಲ್ಸಿ ಸುಳ್ಳಿನ ಯುದ್ಧ ಚಾಂಪಿಯನ್ ಆತಂತೆ...’ ದುಬ್ಬೀರ ಹೊಸ ಗಾದೆ ಹೊಸೆದ.
‘ಸತ್ಯಕ್ಕೆ ಎರಡು ಕಾಲಾದ್ರೆ ಸುಳ್ಳಿಗೆ ಸಾವಿರ ಕಾಲು ಕಣಲೆ, ಮತ್ತೆ ಚಾಂಪಿಯನ್ ಆಗ್ಲೇಬೇಕು. ಎಂತೆಂಥ ಸುಳ್ಳು ಸುದ್ದಿನೋ ಮಾರಾಯ. ವಿಲವಿಲ, ಪುಕಪುಕ, ಗಡಗಡ... ಪಾಕಿಸ್ತಾನ ಚಪಾಟೆದ್ದು ಹೋತು ಅಂತಿದ್ರಪ. ಏನೂ ಆಗ್ಲಿಲ್ಲ’ ಗುಡ್ಡೆ ನಕ್ಕ.
‘ನಮ್ ಟಿ.ವಿ.ಗಳು, ಮೊಬೈಲ್‌ಗಳು ಬ್ರಹ್ಮೋಸ್ ಕ್ಷಿಪಣಿಗಿಂತ ಸ್ಪೀಡು. ಸೈನಿಕರು ನೂರು ಕ್ಷಿಪಣಿ ಹಾರಿಸೋ ಅಷ್ಟರಲ್ಲಿ ಈ ಸುಳ್ ಸುದ್ದಿ ವೀರರು ಸಾವಿರ ಕ್ಷಿಪಣಿ ಹಾರಿಸಿರ್ತಾರೆ’.
‘ಲೇ ತೆಪರ, ಆ ಟ್ರುಂಪಣ್ಣ ಏನೋ
ಟ್ರೇಡ್ ನಾಟಕ ಶುರು ಮಾಡಿದಂಗಿತ್ತಲ್ಲೋ’ ಮಂಜಮ್ಮ ಕೇಳಿದಳು.
‘ಅದಾ... ಟ್ರುಂಪಣ್ಣ ಪಾಕಿಸ್ತಾನಕ್ಕೆ ಫೋನ್ ಮಾಡಿ ‘ಆ ಚೀನಾ ಪಟಾಕಿ ಇಟ್ಕಂಡ್ ಏನ್ಮಾಡ್ತೀರಿ, ನಮ್ಮವು ಮಿಸೈಲು, ಬಾಂಬು ತಗಳ್ರಿ, ಗೆಲ್ತೀರಿ’ ಅಂದ್ನಂತೆ. ಅದೇ ತರ ಭಾರತಕ್ಕೆ ಫೋನ್ ಮಾಡಿ ‘ಆ ಪಾಕಿಸ್ತಾನನ ಒಂದೇ ಸಲಕ್ಕೆ ಢುಂ ಅನ್ಸೋ ಬಾಂಬ್ ಅದಾವೆ ಬೇಕಾ’ ಅಂದ್ನಂತೆ. ಭಾರತ ಬ್ಯಾಡ ಅಂದಿದ್ಕೆ ‘ಸರಿ ಕದನ ವಿರಾಮ ಮಾಡ್ಕಳಿ’ ಅಂದ್ನಂತೆ’.
‘ಇದ್ನ ನಿಂಗ್ಯಾರು ಹೇಳಿದ್ರು?
ವಾಟ್ಸಾಪ್ ಕತಿನಾ? ನಿನ್ತೆಲಿ. ಮೊನ್ನಿ ವಾಟ್ಸಾಪ್‌ನಾಗೆ ಬೆಂಗಳೂರು ಬಂದರು ನಾಶ, ಗೊರಗುಂಟೆಪಾಳ್ಯದ ವಾಯುನೆಲೆಯಿಂದ ಕ್ಷಿಪಣಿ ಹಾರಿದ್ವು ಅಂತ ಬಂದಿತ್ತು. ಬೆಂಗಳೂರಲ್ಲಿ ಸಮುದ್ರ ಎಲ್ಲೈತಿ? ಗೊರಗುಂಟೆಪಾಳ್ಯದಾಗೆ ವಾಯುನೆಲೆ ಎಲ್ಲೈತಿ?’ ಗುಡ್ಡೆಗೆ ನಗು.
‘ಅಲ್ಲೋ ಟಿ.ವಿ ಪತ್ರಕರ್ತ ತೆಪರೇಸಿ,
ಮೊನ್ನಿ ಕಾಶ್ಮೀರದ ಗಡಿಯಿಂದ ಯುದ್ಧದ
ವರದಿ ಮಾಡ್ತಿದ್ದೀನಿ ಅಂತ ನಿಮ್ ಟೀವೀಲಿ ಪುಂಗ್ತಿದ್ಯೆಲ್ಲ, ಆಗ ನಿಜವಾಗ್ಲು ಎಲ್ಲಿದ್ದಿ ಹೇಳಲೆ’ ದುಬ್ಬೀರ ಕೇಳಿದ.
‘ಅವನಾ? ಇಲ್ಲೇ ಗೊರಗುಂಟೆಪಾಳ್ಯದ
ಪಕ್ಕ ಯಲಹಂಕದಲ್ಲಿದ್ದ’ ಕೊಟ್ರೇಶಿ ಕೀಟಲೆಗೆ ಎಲ್ಲರೂ ಗೊಳ್ಳಂತ ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.