ADVERTISEMENT

ಚುರುಮುರಿ | ಹಾಯ್, ಹಲೋ ಗ್ರಾಕ್! 

ಗುರು ಪಿ.ಎಸ್‌
Published 27 ಮಾರ್ಚ್ 2025, 0:30 IST
Last Updated 27 ಮಾರ್ಚ್ 2025, 0:30 IST
   

‘ಹಾಯ್ ಗ್ರಾಕ್, ಹೆಂಡತಿಯನ್ನು ಕಂಟ್ರೋಲ್‌ ಮಾಡುವುದು ಹೇಗೆ?’ ಗ್ರಾಕ್ ಆ್ಯಪ್ ಓಪನ್ ಮಾಡಿ ಮೊಬೈಲ್‌ನಲ್ಲಿ ಟೈಪ್ ಮಾಡಿದೆ. 

‘ಲಭ್ಯವಿರುವ ಮಾಹಿತಿ ಆಧರಿಸಿ ಹೇಳುವುದಾದರೆ, ಈವರೆಗೆ ಯಾರೂ ಅಂತಹ ಪ್ರಯತ್ನವನ್ನೇ ಮಾಡಿಲ್ಲ ಎಂಬುದು ಕಂಡುಬರುತ್ತಿದೆ’ ಗ್ರಾಕ್ ಉತ್ತರ ಓದಿ ಪೆಚ್ಚಾದೆ. 

‘ಏನ್ರೀ, ಬೆಳಿಗ್ಗೆಯೇ ಮೊಬೈಲ್ ಫೋನ್ ಹಿಡ್ಕೊಂಡು ಸಂಶೋಧನೆ ಮಾಡ್ತಿದ್ದೀರಿ’ ಬಂದಳು ಹೆಂಡತಿ.

ADVERTISEMENT

‘ಏನಿಲ್ಲ, ಏನಿಲ್ಲ. ಇದು ಗ್ರಾಕ್ ಅಂತ. ನೀನು ಯಾವುದರ ಬಗ್ಗೆಯಾದರೂ ಇಲ್ಲಿ ಕೇಳಬಹುದು, ಕ್ಷಣಾರ್ಧದಲ್ಲಿ ಮಾಹಿತಿ ಕೊಡುತ್ತೆ’ ಕಣ್ಣರಳಿಸಿದೆ. 

‘ಹೌದಾ! ಸೀರೆ, ಮೇಕಪ್ ಕಿಟ್ ಬಗ್ಗೆಯೂ ಹೇಳುತ್ತಾ?’ ಕುತೂಹಲದಿಂದ ಕೇಳಿದಳು. 

‘ಬರೀ ಇದೇ ಆಯ್ತು, ದೊಡ್ಡ ವಿಷಯ ಏನಾದರೂ ಕೇಳು’.

‘ನೀವೇ ಕೇಳ್ಕೊಳ್ಳಿ’ ಮುಖ ತಿರುಗಿಸಿದಳು. 

ನಾನು ಶುರು ಮಾಡಿದೆ, ‘ಗ್ರಾಕ್, ಈ ದೇಶದಲ್ಲಿ ಕಾಮಿಡಿ ಮಾಡೋದು ತಪ್ಪಾ?’ 

‘ನಮ್ಮ ದೇಶದಲ್ಲಿ ಹಾಸ್ಯ ತಪ್ಪಲ್ಲ. ಆದರೆ ಯಾವ ಪಾರ್ಟಿ ಅಧಿಕಾರದಲ್ಲಿದ್ದಾಗ ಯಾರ ಬಗ್ಗೆ ಕಾಮಿಡಿ ಮಾಡಬೇಕು, ಯಾರ ಬಗ್ಗೆ ಮಾಡಬಾರದು ಎಂದು ತಿಳಿದುಕೊಂಡಿರ ಬೇಕು. ಅಧಿಕಾರದಲ್ಲಿ ಇದ್ದವರ ಬಗ್ಗೆ ಕಾಮಿಡಿ ಮಾಡಿದರೆ ಗಲಾಟೆಗಳಾಗುವ ಸಂಭವಗಳುಂಟು’. 

‘ರೀಲ್ಸ್ ಮಾಡಿದರೆ ಅರೆಸ್ಟ್ ಮಾಡ್ತಾರಾ?’ 

‘ಬರೀ ರೀಲ್ಸ್ ಮಾಡಿದರೆ ಬಂಧಿಸಲ್ಲ. ಮಚ್ಚು ಹಿಡ್ಕೊಂಡು ಹುಚ್ಚುಚ್ಚಾಗಿ ರೀಲ್ಸ್ ಮಾಡಿದರೆ ಅರೆಸ್ಟ್ ಮಾಡ್ತಾರೆ’. 

ಪತ್ನಿ ಅತ್ತ ತಿರುಗಿದಾಗ ಸದ್ದಿಲ್ಲದೆ ಟೈಪ್ ಮಾಡುತ್ತಿದ್ದೆ, ‘ಈವರೆಗೂ ನನ್ನನ್ನ ಯಾರೂ ಯಾಕೆ ಹನಿಟ್ರ್ಯಾಪ್ ಮಾಡಿಲ್ಲ?’ 

ತಕ್ಷಣ ನೋಡಿ ಕಿಸಕ್ಕನೆ ನಕ್ಕ ಹೆಂಡತಿ, ‘ನೀವೇನ್‌ ದೊಡ್ಡ ಸೆಲಬ್ರಿಟಿ ಅಥವಾ ಪೊಲಿಟಿಷಿಯನ್ ಅಂದ್ಕೊಂಡ್ರಾ, ನಿಮ್ ಮುಖ ನೋಡ್ಕೊಳ್ಳಿ’ ತಿವಿದಳು. 

‘ಅಯ್ಯೋ ನೋಡಿಬಿಟ್ಯಾ, ಸುಮ್ನಿರು ಬೇರೆ ರೀತಿ ಪ್ರಶ್ನೆ ಕೇಳ್ತೀನಿ... ಗ್ರಾಕ್, ಹನಿಟ್ರ್ಯಾಪ್ ಅಂದರೇನು?’

ಗ್ರಾಕ್ ಉತ್ತರಿಸಿತು, ‘ಹಾಯ್, ಹಲೋ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.