ADVERTISEMENT

ಚುರುಮುರಿ | ಪ್ರೀತಿ ಇಲ್ಲದ ಮೇಲೆ...

ಬಿ.ಎನ್.ಮಲ್ಲೇಶ್
Published 16 ಫೆಬ್ರುವರಿ 2024, 0:30 IST
Last Updated 16 ಫೆಬ್ರುವರಿ 2024, 0:30 IST
   

‘ಪ್ರೀತಿ ಇಲ್ಲದ ಮೇಲೆ ಮಂಡಕ್ಕಿ ಅರಳೀತು ಹೇಗೆ, ಚಾ ‘ಘಂ’ ಅಂದೀತು ಹೇಗೆ... ಮಂಜಮ್ಮ ಒಳ್ಳೆ ಖಡಕ್ ಚಾ ಹಾಕು’ ಎಂದ ಗುಡ್ಡೆ.

‘ಉದ್ರಿ ಮಾನಭಂಗ, ನಗದು ಪ್ರೇಮಸಂಗ...’ ಎಂದಳು ಮಂಜಮ್ಮ.

‘ಏನು, ಪ್ರೇಮಸಂಗನಾ? ಇದ್ಯಾವಾಗಿಂದ?’

ADVERTISEMENT

‘ರೊಕ್ಕ ಕೊಟ್ಟು ಪ್ರೀತಿಯಿಂದ ಚಾ ಕುಡುದು ನೋಡು, ಆಗ ಅದರ ರುಚಿನೇ ಬೇರೆ’.

‘ಹೌದಾ? ನನ್ನತ್ರ ರೊಕ್ಕಿಲ್ಲ. ಅಲ್ಲ, ನಮ್ ಸರ್ಕಾರದ ಗ್ಯಾರಂಟಿ ಎಲ್ಲ ತಗಂಡು ನಮಗೇ ಚಾ ಇಲ್ಲ ಅಂದ್ರೆ ಹೆಂಗೆ? ಇವತ್ತು ಸಿದ್ರಾಮಣ್ಣಂಗೇಳಿ ಬಜೆಟ್‌ನಾಗೆ ಚಾಪುಡಿ, ಸಕ್ಕರಿ ಇದಕ್ಕೆಲ್ಲ ಸಬ್ಸಿಡಿ ಕೊಡಿಸ್ತೀನಿ, ಎಲ್ರಿಗೂ ಚಾ ಕೊಡು’ ಗುಡ್ಡೆ ನಕ್ಕ.

‘ಚಾಕ್ಕೆ ಸಬ್ಸಿಡಿ ಕೊಟ್ರೂ ಕೊಡಬೋದು. ಆದ್ರೆ ಗುಂಡುಪ್ರಿಯರಿಗೆ ಬರೆ ಹಾಕೋದು ಗ್ಯಾರಂಟಿ’ ಎಂದ ದುಬ್ಬೀರ.

‘ಸರ್ಕಾರದ ಆರನೇ ಗ್ಯಾರಂಟಿ ಅದು, ರೇಟ್ ಏರಿಸ್ತಾನೇ ಇರೋದು. ನಮ್ ರೊಕ್ಕ ಎತ್ತಿ ಈ ಮಂಜಮ್ಮನಂತೋರಿಗೆ ಕೊಡೋದು. ನಾವು ಗುಂಡು ಹಾಕಿದ್ರೇನೇ ನಿನ್ ಹೋಟ್ಲು ನಡೆಯೋದು ತಿಳ್ಕಾ’ ಗುಡ್ಡೆಗೆ ಕೋಪ.

‘ಹೌದೌದು, ಪುಕ್ಸೆಟ್ಟಿ ಚಾ ಕುಡಿದು ಕವಿತಾ ಹೇಳಿದಂಗಲ್ಲ ಹೋಟ್ಲು ನಡ್ಸೋದು’ ಮಂಜಮ್ಮಗೂ ಸಿಟ್ಟು ಬಂತು.

‘ನಮ್ಗೂ ಟೈಂ ಬರ್ತತಿ, ನೋಡ್ಕಂತೀವಿ’ ಗುಡ್ಡೆ ಬೆದರಿಕೆ.

‘ಆ ಟೈಂನಿಂದಾನೇ ಅಲ್ವಾ ನಿನ್ ಮದ್ವಿ ಆಗಿದ್ದು. ಎರಡು ವರ್ಷದ ಹಿಂದೆ ವ್ಯಾಲೆಂಟೈನ್ಸ್ ಡೇ ದಿನ ಬಸ್‌ಸ್ಟ್ಯಾಂಡಿನಾಗೆ ಯಾವುದೋ ಹುಡುಗೀನ, ಅದೇ ಪಮ್ಮಕ್ಕನ್ನ ಟೈಂ ಕೇಳೋಕೋದಾಗ ಅದ್ಯಾರೋ ಸೇನೆ ಸಂಘಟನೆಯೋರು ನಿಮ್ಮನ್ನ ಪ್ರೇಮಿಗಳು ಅಂತ ಹಿಡಿದು ಡುಂ ಟಕ ಅಂತ ಅಲ್ಲೇ ನಿಮ್ಮ ಮದುವಿ ಮಾಡ್ಸಿದ್ದು?’ ತೆಪರೇಸಿ ಕಿಸಕ್ಕೆಂದ.

‘ಅದನ್ಯಾಕೆ ನೆನಸ್ತೀರಿ ಸುಮ್ಕಿರ‍್ರಲೆ...’ ಎಂದ ಗುಡ್ಡೆ.

‘ಹೋಗ್ಲಿ, ನಿನ್ನಿ ರಾತ್ರಿ ಗುಂಡು ಹಾಕಿ ಮನೆಗೆ ಹೋದಾಗ ಪಮ್ಮಕ್ಕ ಬಾಗಿಲು ತೆಗೆದ್ಲಾ? ಪ್ರೀತಿ ಇಲ್ಲದ ಮೇಲೆ ಚಾಪಿ ಹಾಸೀತು ಹೇಗೆ, ದಿಂಬು ಸಿಕ್ಕೀತು ಹೇಗೆ...’ ಎಂದಳು ಮಂಜಮ್ಮ ರಾಗವಾಗಿ. ಎಲ್ಲರೂ ಗೊಳ್ಳಂತ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.