ADVERTISEMENT

ಚುರುಮುರಿ | ಹಾವಿನ ಹೆಸರಿನಲ್ಲಿ...

ಸುಮಂಗಲಾ
Published 25 ಮೇ 2025, 23:30 IST
Last Updated 25 ಮೇ 2025, 23:30 IST
.
.   

‘ಅಲ್ಲಾ... ಒಬ್ಬ ಮನುಷ್ಯಂಗೆ ಹಾವು ಎಷ್ಟ್‌ ಸಲ ಕಚ್ಚಬೌದು?’ ಬೆಕ್ಕಣ್ಣ ಸುದ್ದಿ ಓದುತ್ತ ಕೇಳಿತು.

‘ಭಾಳ ಅಂದ್ರೆ ಜೀವಮಾನದಾಗೆ ಮೂರ್ನಾಲ್ಕು ಸಲ ಕಚ್ಚಬೌದೇನೋ’ ಎಂದೆ.

‘ಮಧ್ಯಪ್ರದೇಶದಾಗೆ ಒಬ್ಬನೇ ವ್ಯಕ್ತಿಗೆ 38 ಸಲ ಹಾವು ಕಚ್ಚೈತಂತೆ’ ಎಂದಿತು ಬೆಕ್ಕಣ್ಣ.

ADVERTISEMENT

‘ಹಾವಿನ ದ್ವೇಷ ಹನ್ನೆರಡು ವರ್ಷ ಅಂತಾರಲ್ಲ... ಹಂಗೆ ಹಾವುಗಳು ಅವನನ್ನೇ ಹುಡುಕ್ಕೊಂಡು ಹೋಗಿ ಕಚ್ಚಿರಬಕು. ಅಷ್ಟ್‌ ಸಲ ಹಾವು ಕಚ್ಚಿದ್ರೂ ಅವಂಗೆ ಏನೂ ಆಗಿಲ್ಲೇನು?’ ಎಂದೆ ಅಚ್ಚರಿಯಿಂದ.

‘ಏನೂ ಆಗಿಲ್ಲ... ಎದಕ್ಕಂದ್ರೆ ಹಾವು ಕಚ್ಚಿದ್ದು ಕಾಗದದ ಮ್ಯಾಗೆ, ಅಂದ್ರ ನಕಲಿ ದಾಖಲೆವಳಗೆ! ಅಸಲಿಗೆ ಅವಂಗ ಹಾವೂ ಕಚ್ಚಿಲ್ಲ, ಪರಿಹಾರಧನ ಅವನ ಹೆಸರಿಗೂ ಹೋಗಿಲ್ಲ, ಬರೇ ವಂಚನೆ’ ಎನ್ನುತ್ತ ಬೆಕ್ಕಣ್ಣ ಸುದ್ದಿ ತೋರಿಸಿತು.

ಸುಮಾರು 219 ಮಂದಿಗೆ ಹೊಲದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿದೆ ಅಂತ ತೋರಿಸಿ, ಸರ್ಕಾರದಿಂದ ಪರಿಹಾರಧನ ಕೊಡಿಸಿದ್ದಾರೆ. ಅವುಗಳಲ್ಲಿ ಅರ್ಧದಷ್ಟು ಸುಳ್ಳು ಹೆಸರುಗಳು. ಪ್ರಾಕೃತಿಕ ವಿಕೋಪ ನಿರ್ವಹಣೆಯಡಿ ಸರ್ಕಾರದ ಬೊಕ್ಕಸದಿಂದ ಒಟ್ಟು 11 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ನಕಲಿ ಬ್ಯಾಂಕ್‌ ಅಕೌಂಟಿಗೆ ವರ್ಗಾಯಿಸಿಕೊಂಡಿ ದ್ದಾರೆ. ಇದೆಲ್ಲದರ ಮಾಸ್ಟರ್‌ಮೈಂಡ್‌ ಒಬ್ಬ ಕಾರಕೂನ. ಹಾವಿನ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ಲಪಟಾಯಿಸಲಾಗಿದೆ... ಎಂದೆಲ್ಲ ಇದ್ದ
ಸುದ್ದಿ ಓದಿ ನಾನು ಬೆರಗಾದೆ.

‘ನಾಕೈದು ವರ್ಷದಿಂದ ನಡೆಸಿದ್ದ ವಂಚನೆ ಪ್ರಕರಣ ಇತ್ತೀಚೆಗೆ ತನಿಖೆಯಿಂದ ಹೊರಗೆ ಬಂದೈತಂತೆ. ಎಂತೆಂಥಾ ವಂಚಕರಿರತಾರೆ’ ಎಂದು ಬೆಕ್ಕಣ್ಣ ಹಣೆ ಚಚ್ಚಿಕೊಂಡಿತು.

‘ಎಲ್ಲಾ ಥರದ ಅವ್ಯವಹಾರದ ಪ್ರಕರಣ ಕೇಳಿದ್ವಿ. ಪಾಪದ ಹಾವಿನ ಹೆಸರಲ್ಲಿ ಇಷ್ಟ್‌ ದೊಡ್ಡ ಮಟ್ಟದ ವಂಚನೆ ಇದೇ ಮೊದಲನೇ ಸಲ ಕೇಳಿದ್ದು. ಅವರಿಗೆ ಛಲೋತ್ನಾಗಿ ಶಿಕ್ಷೆ ಕೊಡಬಕು’ ಎಂದೆ ಸಿಟ್ಟಿನಿಂದ.

‘ಈಗ ಈ ಸಂಬಂಧ ಇಪ್ಪತ್ತೊಂದು ಮಂದೀನ ಹಿಡದಾರಲ್ಲ... ಅವರನ್ನು ಖರೇ ಅಂದ್ರ ಒಂದ್‌ ಸಲ ಹಾವಿನ ಬಾಯಿಗೆ ಕೊಡಬಕು...’ ಎನ್ನುತ್ತ ಬೆಕ್ಕಣ್ಣ ನಕ್ಕಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.