ADVERTISEMENT

ಚುರುಮುರಿ | ಎಣ್ಣೆ ಮತ್ತು ನೀರು

ಬಿ.ಎನ್.ಮಲ್ಲೇಶ್
Published 28 ಸೆಪ್ಟೆಂಬರ್ 2023, 23:57 IST
Last Updated 28 ಸೆಪ್ಟೆಂಬರ್ 2023, 23:57 IST
   

‘ಲೇ ತೆಪರ, ಏನಲೆ ಇವತ್ತಿನ ಸುದ್ದಿ?’ ಹರಟೆ ಕಟ್ಟೆಯಲ್ಲಿ ದುಬ್ಬೀರ ಚಾ ಕುಡಿಯುತ್ತ ಕೇಳಿದ.

‘ಇವತ್ತಿಂದಾ? ಒಂದು ಎಣ್ಣೇದು, ಇನ್ನೊಂದು ನೀರಿಂದು... ಯಾವುದು ಬೇಕು?’

‘ಎರಡೂ ಬೇಕು ಕಣಲೆ, ಎರಡೂ ಮಿಕ್ಸ್ ಆದ್ರೆ ಚಂದ’ ದುಬ್ಬೀರ ಕಣ್ಣು ಮಿಟುಕಿಸಿದ.

ADVERTISEMENT

‘ಆಹಾ... ಆಸೆ ನೋಡು. ನಾನೇಳಿದ್ದು ಮದ್ಯದಂಗಡಿ ಜಾಸ್ತಿ ಮಾಡ್ತಿರೋದಕ್ಕೆ ವಿರೋಧದ ಸುದ್ದಿ, ಆಮೇಲೆ ಕಾವೇರಿ ನೀರಿನ ಗಲಾಟೆ ಸುದ್ದಿ’ ತೆಪರೇಸಿ ನಕ್ಕ.

‘ಗೊತ್ತು ಕಣಲೆ, ಸುಮ್ನೆ ತಮಾಷೆ ಮಾಡಿದೆ’ ಎಂದ ದುಬ್ಬೀರ.

‘ಅದಿರ್‍ಲಿ, ಈ ನೀರಿನ ಗಲಾಟೆಗೆ ಎಣ್ಣೆ ಅಂಗಡಿ ಮುಚ್ಸೋದು ಯಾವ ನ್ಯಾಯ?’ ಗುಡ್ಡೆ ಆಕ್ಷೇಪಿಸಿದ.

ಮಂಜಮ್ಮಗೆ ಸಿಟ್ಟು ಬಂತು. ‘ಆಹಾ... ಎಲ್ರಿಗೂ ಎಣ್ಣೆ ಅಂಗಡಿ ಅಂದ್ರೆ ಎಷ್ಟ್ ಪ್ರೀತಿ ನೋಡು, ಹುಟ್ಟು ಕುಡುಕರು’ ಎಂದಳು.

‘ಹೌದು ಮತ್ತೆ, ನೀರು ಜಗಳ ಹಚ್ಚುತ್ತೆ, ಎಣ್ಣೆ ಎಲ್ಲರ್‍ನೂ ಒಂದುಮಾಡುತ್ತೆ ಗೊತ್ತಾ?’ ಗುಡ್ಡೆ ವಾದಿಸಿದ.

‘ಹೌದೌದು... ಕುಡಿಯೋಕೆ ಮುಂಚೆ ಎಣ್ಣೆ ಎಲ್ಲರ್‍ನೂ ಒಂದುಮಾಡುತ್ತೆ, ಕುಡಿದ ಮೇಲೆ ಹೊಡೆದಾಟ ಮಾಡ್ಸುತ್ತೆ, ನಂಗೊತ್ತಿಲ್ವಾ?’ ಮಂಜಮ್ಮ ನಕ್ಕಳು.

‘ಅದೆಲ್ಲ ಬೇಡ, ನೀನು ನೀರಿನ ಬಂದ್‌ಗೆ ಹೋಟ್ಲು ಮುಚ್ತೀಯಾ?’ ಗುಡ್ಡೆ ಕೇಳಿದ.

‘ಹು, ಮುಚ್ತೀನಿ’.

‘ಹಂಗಾದ್ರೆ ಎಣ್ಣೆ ಅಂಗಡಿ ಪರ ನಾವೂ ಬಂದ್‌ಗೆ ಕರೆ ಕೊಡ್ತೀವಿ, ಅವತ್ತೂ ನಿನ್ ಹೋಟ್ಲು ಮುಚ್ಬೇಕು’.

‘ಆತು ಬಿಡು, ಮುಚ್ತೀನಿ. ಎಣ್ಣೆ ಅಂಗಡಿ ಊರೂರಿಗಲ್ಲ, ಗಲ್ಲಿಗೊಂದೊಂದು ಕೊಡ್ಲಿ, ಅದ್ರಲ್ಲೂ ನಿನ್ ಮನಿ ಮುಂದೇನೇ ಒಂದು ಅಂಗಡಿ ಆಗ್ಲಿ ಅಂತ ಹಾರೈಸ್ತೀನಿ’.

‘ನನ್ ಮನಿ ಮುಂದಾ? ಯಾಕೆ?’

‘ನೀನು ಕುಡಿದು ರಸ್ತೇಲಿ ಬಿದ್ರೆ ನಿನ್ ಕಾಲಿಡಿದು ದರದರ ಎಳೆದು ಪಟ್ ಅಂತ ಅಲ್ಲೇ ನಿನ್ ಮನಿ ಒಳಕ್ಕೆ ಹಾಕಬಹುದಲ್ಲ ಅಂತ’.

ಮಂಜಮ್ಮನ ಮಾತಿಗೆ ಎಲ್ಲರೂ ಗೊಳ್ಳಂತ ನಕ್ಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.